ಮೆಟ್ರೋ ನಿಲ್ದಾಣದಲ್ಲಿ ನಿಗದಿತ ಅವಧಿಗಿಂತ ಹೆಚ್ಚು ನಿಂತ್ರೆ ಬೀಳುತ್ತೆ ಫೈನ್‌!

ಮೆಟ್ರೋ ನಿಲ್ದಾಣದಲ್ಲಿ ನಿಗದಿತ ಅವಧಿಗಿಂತ ಹೆಚ್ಚು ನಿಂತ್ರೆ ಬೀಳುತ್ತೆ ಫೈನ್‌!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ಇನ್ನು ಮುಂದೆ ನಿಗದಿತ ಅವಧಿಗಿಂತ ಹೆಚ್ಚು ಹೊತ್ತು ಮೆಟ್ರೋ ನಿಲ್ದಾಣಗಳಲ್ಲಿ ನಿಂತ್ರೆ ಫೈನ್‌ ಹಾಕಲಾಗುತ್ತದೆ. ಈ ಬಗ್ಗೆ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಎಚ್ಚರಿಕೆ ನೀಡಿದೆ.

ಹೌದು, ಇನ್ನು ಮುಂದೆ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚು ಹೊತ್ತು ನಿಂತ್ರೆ ಬಿಎಂಆರ್‌ಸಿಎಲ್‌ ದಂಡ ವಿಧಿಸುತ್ತದೆ. ಈಗಾಗಲೇ ಪ್ರಯಾಣಿಕನೊಬ್ಬನಿಗೆ ಬಿಎಂಆರ್‌ಸಿಎಲ್‌ ಫೈನ್‌ ಹಾಕಿದೆ. ಪರ್ಪಲ್‌ ಲೈನ್‌ನಲ್ಲಿ ಬರುವ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು 20 ನಿಮಿಷಕ್ಕೂ ಹೆಚ್ಚು ಕಾಲ ನಿಲ್ದಾಣದಲ್ಲೇ ಉಳಿದುಕೊಂಡಿದ್ದರಿಂದ ಅವರಿಗೆ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಕ್ಯೂನಲ್ಲಿ ನಿಲ್ಲದೇ ಮತದಾನಕ್ಕೆ ಮುಂದಾದ ಶಾಸಕ – ಕಪಾಳ ಮೋಕ್ಷ ಮಾಡಿದ ಮತದಾರ!

ಈ ಪ್ರಯಾಣಿಕ ಮೊಬೈಲ್‌ನಲ್ಲಿ ಚಾರ್ಜ್‌ ಇಲ್ಲದ ಕಾರಣ ನಿಲ್ದಾಣದಲ್ಲೇ ಚಾರ್ಜಿಂಗ್‌ ಮಾಡಿಕೊಳ್ಳುತ್ತಿದ್ದರು. ಚಾರ್ಜಿಂಗ್‌ ಬಳಿಕ ಹೊರಡಲು ಮುಂದಾಗಿದ್ದಾರೆ. ಈ ವೇಳೆ ಅವರನ್ನು ತಡೆದ ನಮ್ಮ ಮೆಟ್ರೋ ಸಿಬ್ಬಂದಿ, ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಪ್ರಯಾಣಿಕ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆಗ, “ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೇವಲ 20 ನಿಮಿಷ ಮಾತ್ರ ಇರಲಷ್ಟೇ ಅವಕಾಶ ಇದೆ. ಅದಕ್ಕಿಂತ 1 ನಿಮಿಷ ಹೆಚ್ಚು ಕಾಲ ಇದ್ದರೂ ದಂಡ ಪಾವತಿ ಮಾಡಲೇಬೇಕು” ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ.

“ಹೊರಗೆ ಮಳೆ ಸುರಿಯುತ್ತಿದ್ದು, ಮೊಬೈಲ್‌ನಲ್ಲಿ ಚಾರ್ಜ್‌ ಇರಲಿಲ್ಲ. ಹೀಗಾಗಿ, ನಿಲ್ದಾಣದಿಂದ ಹೊರಡುವುದು ತಡವಾಗಿದೆ,” ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ. ಆದಾಗ್ಯೂ, ದಂಡ ವಸೂಲು ಮಾಡಲಾಗಿದೆ.

ಪ್ರಯಾಣಿಕರು ಟಿಕೆಟ್‌ ಪಡೆದ ನಂತರ ಒಂದು ನಿಲ್ದಾಣದಲ್ಲಿ 20 ನಿಮಿಷ ತಂಗುವುದಕ್ಕೆ ಮಾತ್ರ ಅವಕಾಶವಿದೆ. ಟಿಕೆಟ್‌ ಪಡೆದ ನಂತರ ಇತರೆ ಯಾವುದೇ ನಿಲ್ದಾಣದಿಂದ 2 ತಾಸಿನ ಒಳಗೆ ನಿರ್ಗಮಿಸಬೇಕು. ಈ ಮಿತಿಗಳನ್ನು ಮೀರಿ ತಂಗಿದ್ದರೆ ಗರಿಷ್ಠ 50 ರೂ. ಅಥವಾ ಗಂಟೆಗೆ 10 ರೂ. ದಂಡ ವಿಧಿಸಲಾಗುತ್ತದೆ.

Shwetha M