ರಜೆಯಲ್ಲಿ ಆಫೀಸ್ ಕೆಲಸ ಹೇಳಿದರೆ ಬೀಳುತ್ತೆ ದಂಡ..! – ಇಂಥಾ ಕಂಪನಿ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ..!
ರಜಾ ದಿನದಲ್ಲಿ ಕೆಲಸ ಮಾಡಬೇಕು ಅಂದ್ರೆ ತುಂಬಾನೇ ಕಷ್ಟ. ಅದರಲ್ಲೂ ನೀವು ನಿಮ್ಮ ಕೆಲಸವನ್ನು ಎಷ್ಟೇ ಇಷ್ಟಪಟ್ಟಿದ್ದರೂ ಕೂಡಾ ರಜಾ ದಿನಗಳಲ್ಲಿ ಫ್ರೀ ಆಗಿರಬೇಕು, ಪ್ರೀತಿ ಪಾತ್ರರ ಜೊತೆ ಸಮಯ ಕಳೆಯಬೇಕು ಎಂದು ಬಯಸುವವರೇ ಜಾಸ್ತಿ. ಈ ಸಮಯದಲ್ಲಿ ಏನಾದರೂ ಆಫೀಸಿಂದ ಮೆಸೇಜ್ ಬರುವುದು, ನೋಟಿಫಿಕೇಷನ್ ಸೌಂಡ್, ಹೀಗೆ ಏನಾದರೂ ಕಿರಿಕಿರಿಯಾದರೆ ರಜೆಯ ಖುಷಿಯೇ ಇರುವುದಿಲ್ಲ. ಆದರೆ, ಇಲ್ಲೊಂದು ಭಾರತೀಯ ಕಂಪನಿ ಈ ಸಮಸ್ಯೆಯನ್ನ ನಿಭಾಯಿಸಲು ಒಂದು ವಿಶೇಷ ನಿಯಮವನ್ನ ಜಾರಿಗೆ ತಂದಿದೆ. ತನ್ನ ಕಂಪನಿಯ ಉದ್ಯೋಗಿಗಳು ರಜಾ ದಿನಗಳಲ್ಲಿ ಕುಟುಂಬ ವರ್ಗದ ಜೊತೆ ಗುಣಮಟ್ಟದ ಸಮಯ ಕಳೆಯಲು ಅನುವು ಮಾಡಿ ಕೊಟ್ಟಿದೆ. ಒಂದು ವೇಳೆ ಕಂಪನಿಯ ಯಾವುದೇ ಉದ್ಯೋಗಿಯು ರಜಾದ ಮೇಲಿರುವ ಉದ್ಯೋಗಿಗಳಿಗೆ ಕೆಲಸದ ಸಂಬಂಧಿತ ಕಿರಿಕಿರಿ ಕೊಟ್ಟಿದ್ದೇ ಆದರೆ ದೊಡ್ಡ ಮಟ್ಟದ ದಂಡ ಪಾವತಿಸಬೇಕಾಗುತ್ತದೆ.
ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ಡ್ರೀಮ್ ಲೆವೆನ್ ನ ಅನ್ ಪ್ಲಗ್ ಪಾಲಿಸಿಯು ವಿಶೇಷವಾಗಿ ತನ್ನ ಉದ್ಯೋಗಿಗಳು ರಜಾದಿನಗಳಲ್ಲಿ ಕೆಲಸ ಸಂಬಂಧಿತ ಯಾವುದೇ ಒತ್ತಡಗಳಿಲ್ಲದೆ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯೋದಿಕ್ಕೆ ರೂಪಗೊಂಡಿದೆ. ಈ ಹೊಸ ಪಾಲಿಸಿಯ ಪ್ರಕಾರ ರಜಾ ದಿನಗಳಲ್ಲಿ ಉದ್ಯೋಗಿಗಳಿಗೆ ಕೆಲಸದ ವಿಚಾರವಾಗಿ ಇಮೇಲ್, ನೋಟಿಫಿಕೇಷನ್ಸ್ ಗಳು ಬರುವುದಿಲ್ಲ. ತನ್ನ ಲಿಂಕ್ಡಿನ್ ಅಕೌಂಟ್ ನಲ್ಲಿ ಹೊಸ ಅನ್ ಪ್ಲಗ್ ನಿಯಮದ ಬಗ್ಗೆ ಘೋಷಿಸಿಕೊಂಡ ಡ್ರೀಮ್ 11 ಕಂಪನಿ “ಡ್ರೀಮ್ 11 ನಲ್ಲಿ ನಾವು ನಿಜವಾಗಿಯೂ ಅನ್ ಪ್ಲಗ್ ಆದ ‘ಡ್ರೀಮ್ ಸ್ಟಾರ್’ ನ್ನು ಸಾಧ್ಯವಿರುವ ಪ್ರತಿಯೊಂದು ಸ್ಟೇಡಿಯಂ ಸಂವಹನ ವೇದಿಕೆ, ಇಮೇಲ್ಸ್, ವಾಟ್ಸಾಫ್ ಗ್ರೂಪ್ಸ್ ಮುಂತಾದವುಗಳಿಂದ ಲಾಗ್ ಆಫ್ ಮಾಡಲಿದ್ದೇವೆ. ಉದ್ಯೋಗಿಗಳು ತಮ್ಮ ಅರ್ಹವಾದ ವಿರಾಮದಲ್ಲಿ ಇದ್ದಾಗ ಡ್ರೀಮ್11 ಪರಿಸರ ವ್ಯವಸ್ಥೆಯಿಂದ ಯಾರೊಬ್ಬರೂ ಅವರನ್ನ ಸಂಪರ್ಕಿಸುವುದಿಲ್ಲ ಅನ್ನುವುದನ್ನ ಖಚಿತ ಪಡಿಸುತ್ತೇವೆ.” ತಮ್ಮ ಪ್ರೀತಿ ಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯೋದು, ವಿಶ್ರಾಂತಿ ಪಡೆಯುವುದು ನಮ್ಮ ಮನಸ್ಥಿತಿ, ಜೀವನದ ಗುಣಮಟ್ಟ ಮತ್ತು ಉತ್ಪಾದಕತೆಯನ್ನ ಸುಧಾರಿಸುವಲ್ಲಿ ಪ್ರಭಾವ ಬೀರುತ್ತದೆ ಎಂದೂ ನಾವು ಅರ್ಥ ಮಾಡಿಕೊಂಡಿದ್ದೇವೆ’ ಎಂದೂ ಕಂಪನಿ ಹೇಳಿಕೊಂಡಿದೆ.
CNBC ವರದಿಯ ಪ್ರಕಾರ ಡ್ರೀಮ್ 11 ಕಂಪನಿ ಸ್ಥಾಪಕರಾದ ಹರ್ಷ್ ಜೈನ್ ಮತ್ತು ಭವಿತ್ ಸೇಠ್ ಅವರು ಅನ್ ಪ್ಲಗ್ ಸಮಯದಲ್ಲಿ ಯಾವುದೇ ಉದ್ಯೋಗಿಯೂ ಇನ್ನೊಬ್ಬ ಉದ್ಯೋಗಿಯನ್ನ ಸಂಪರ್ಕಿಸಿದರೆ ಅವನು ಅಥವಾ ಅವಳು ಒಂದು ಲಕ್ಷ ಮೊತ್ತದ ದಂಡವನ್ನ ಪಾವತಿಸಬೇಕಾಗುತ್ತದೆ. ಪ್ರತಿಯೊಬ್ಬ ಉದ್ಯೋಗಿಯೂ ಯಾವುದೇ ಹುದ್ದೆ, ಸೇರಿದ ದಿನಾಂಕ ಸೇರಿದಂತೆ ಇನ್ನಿತರ ಅಂಶಗಳನ್ನ ಲೆಕ್ಕಿಸದೆ ಅನ್ ಪ್ಲಗ್ ಸಮಯಕ್ಕೆ ಅರ್ಹರಾಗಿರುತ್ತಾರೆ. ಕಂಪನಿಯೂ ಯಾವುದೇ ಉದ್ಯೋಗಿಯ ಮೇಲೆ ಅವಲಂಬಿತವಾಗಿಲ್ಲ ಎಂದು ಖಚಿತಪಡಿಸಲು ಈ ಪಾಲಿಸಿಯನ್ನ ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.