ಈ ವಯಸ್ಸಿನೊಳಗೆ ಮದುವೆಯಾದ್ರೆ ಸಿಗುತ್ತೆ ಕೈತುಂಬಾ ದುಡ್ಡು! – ಸರ್ಕಾರದಿಂದ ಹೊಸ ಯೋಜನೆ ಜಾರಿ?
ಮದುವೆಯಾಗುವ ನವಜೋಡಿಗಳಿಗೆ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಿದೆ. ವಧುವಿನ ವಯಸ್ಸು 25 ವರ್ಷದ ಕೆಳಗಿದ್ದರೆ, ಸರ್ಕಾರ ಈ ಜೋಡಿಗೆ 11,321 ರೂಪಾಯಿ ನೀಡಲಿದೆ. ಈ ಯೋಜನೆ ಜಾರಿಯಾಗಿರುವುದು ಕರ್ನಾಟಕ, ಭಾರತದಲ್ಲಿ ಅಲ್ಲ. ಇದು ಚೀನಾ ಸರ್ಕಾರದ ಘೋಷಿಸಿರುವ ಯೋಜನೆ.
ಚೀನಾದಲ್ಲಿ ಜನನ ಪ್ರಮಾಣ ದರವು ಇಳಿಕೆಯಾಗುತ್ತಿದ್ದು ಇದನ್ನು ನಿಯಂತ್ರಿಸುವ ಹಾಗೂ ಜನನ ಪ್ರಮಾಣ ದರವನ್ನು ವರ್ಧಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ವಿವಾಹ ಹಾಗೂ ಜನನ ಪ್ರಮಾಣಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಚೀನಾ ಸರ್ಕಾರ ಯುವ ಸಮೂಹವನ್ನು ಮದುವೆಯಾಗಲು ಪ್ರೇರೇಪಿಸುತ್ತಿದೆ. ಸರಿಯಾದ ವಯಸ್ಸಿಗೆ ಮದುವೆಯಾಗಿ ಹುಟ್ಟುವ ಮಗುವಿನ ಆರೋಗ್ಯ ಹಾಗೂ ಜನನ ಪ್ರಮಾಣ ಹೆಚ್ಚಿಸಲು ಚೀನಾ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಕೇವಲ 11,321 ರೂಪಾಯಿಗೆ ಮಾತ್ರ ಸೀಮಿತವಾಗಿಲ್ಲ. ಈ ಜೋಡಿ ಸರಿಯಾದ ಸಮಯಕ್ಕೆ ಮಗು ಪಡೆದರೆ ಆ ಮಗುವಿನ ಆರೈಕೆ, ಶಿಕ್ಷಣ ಸೇರಿದಂತೆ ಇತರ ಖರ್ಚು ವೆಚ್ಚಗಳಲ್ಲೂ ಸರ್ಕಾರ ಸಬ್ಸಿಡಿ ನೀಡಲಿದೆ. ಕುಟುಂಬ ಹಾಗೂ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಮೂಲಕ ಜನನ ಪ್ರಮಾಣ ಉತ್ತೇಜಿಸಲು ಚೀನಾ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ನೋಟ್ ನಲ್ಲಿ ಹೆಲ್ಪ್‌ಮೀ ಎಂದು ಬರೆದು ಕಿಟಕಿಯಿಂದ ಎಸೆದ –ಸ್ಥಳಕ್ಕೆ ಹೋದ ಪೊಲೀಸರಿಗೆ ಕಾದಿತ್ತು ಶಾಕ್!
ಕಳೆದ 6 ದಶಕಗಳಿಗೆ ಹೋಲಿಸಿದರೆ ಚೀನಾದಲ್ಲಿ ಜನನ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ. ಇದರಿಂದ ತೀವ್ರ ಅಸಮತೋಲನ ಎದುರಿಸುವಂತಾಗಿದೆ. ಈ ಅಸಮತೋಲನ ಸರಿದೂಗಿಸಲು ಹೊಸ ಯೋಜನೆ ಜಾರಿಗೆ ತಂದಿದೆ. ಚೀನಾದಲ್ಲಿ ಮದುವೆಯಾಗಲು ಗಂಡಿನ ವಯಸ್ಸು ಕನಿಷ್ಠ 22 ಹಾಗೂ ಹೆಣ್ಣಿನ ವಯಸ್ಸು ಕನಿಷ್ಠ 20. ಆದರೆ ಕನಿಷ್ಠ 25 ವರ್ಷಕ್ಕೆ ಮದುವೆಯಾಗುವ ಯುವ ಸಮೂಹ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. ಚೀನಾದಲ್ಲಿ ಸದ್ಯ ಯುವ ಸಮೂಹದ ಮದುವೆಯ ಸರಾಸರಿ ವಯಸ್ಸು 30 ತಲುಪಿದೆ. ಇದರಿಂದ ಹಲವು ದಂಪತಿಗಳಿಗೆ ಮಕ್ಕಳ ಸಮಸ್ಯೆ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಈ ಎಲ್ಲಾ ಕಾರಣದಿಂದ ಚೀನಾದಲ್ಲಿ ಜನನ ಪ್ರಮಾಣ ಗಂಭೀರವಾಗಿ ಕುಸಿದಿದೆ.
2022ರಲ್ಲಿ ಚೀನಾದಲ್ಲಿ ಮದುವೆಯಾದವರ ಸಂಖ್ಯೆ 6.8 ಮಿಲಿಯನ್. 1986ರಿಂದ ಇಲ್ಲೀವರೆಗೆ ಇದು ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. 2021ಕ್ಕೆ ಹೋಲಿಸಿದರೆ ಬರೋಬ್ಬರಿ 800,000 ಕಡಿಮೆಯಾಗಿದೆ. ಮತ್ತೊಂದೆಡೆ ಕೋವಿಡ್ ಬಳಿಕ ಚೀನಾದಲ್ಲಿನ ಆರೋಗ್ಯ ಸಮಸ್ಯೆಗಳು ಗಂಭೀರವಾಗಿದೆ. ಇತ್ತ ಉದ್ಯೋಗ ಭದ್ರತೆಗಳು ಇಲ್ಲದಾಗಿದೆ. ಆರ್ಥಿಕ ಸಮಸ್ಯೆ, ಹಲವು ಕಂಪನಿಗಳು ಚೀನಾದಿಂದ ಕಾಲ್ಕಿತ್ತು ಬೇರೆ ದೇಶಗಳಿಗೆ ಸ್ಥಳಾಂತರ ಸೇರಿದಂತೆ ಹಲವು ಕಾರಣಗಳು ಚೀನಾದಲ್ಲಿನ ಜನನ ಪ್ರಮಾಣದಲ್ಲೂ ಪರಿಣಾಮ ಬೀರಿದೆ.