ನೀರು ಕಡಿಮೆ ಕುಡಿದ್ರೆ ಜೀವಕ್ಕೆ ಕಂಟಕ – ಅಧ್ಯಯನದಿಂದ ಬಯಲಾಯ್ತು ಶಾಕಿಂಗ್ ವಿಚಾರ!
ನೀರನ್ನು ಜೀವಜಲ ಎನ್ನುತ್ತೇವೆ. ಗುಟುಕು ನೀರು ಸಿಗದೆ ಹೋದಾಗ ನೀರಿನ ಮಹತ್ವ ಗೊತ್ತಾಗುತ್ತೆ. ಆದರೆ ಬಾಯಾರಿಕೆ ಆಗಿಲ್ಲ, ಕೆಲಸವಿದೆ ಎನ್ನುವ ಕಾರಣಕ್ಕೆ ಪ್ರತಿ ದಿನ ಕಡಿಮೆ ನೀರು ಕುಡಿಯೋರು ನೀವಾಗಿದ್ರೆ ಇಂದೇ ಈ ಅಭ್ಯಾಸ ಬಿಡಿ. ಏಕೆಂದರೆ ನೀರು ಕಡಿಮೆ ಸೇವನೆಯಿಂದಾಗಿ ನಮ್ಮ ಜೀವಕ್ಕೆ ಕುತ್ತು ಬರಬಹುದು.
ನೀರು ನಮ್ಮ ದೇಹಕ್ಕೆ ಎಷ್ಟು ಅಗತ್ಯ ಎನ್ನುವ ಸಂಗತಿ ಎಲ್ಲರಿಗೂ ತಿಳಿದಿದೆ.. ಪ್ರತಿದಿನ ಎರಡರಿಂದ ಮೂರು ಲೀಟರ್ ನೀರು ಕುಡಿಬೇಕು ಅಂತಾ ತಜ್ಞರು ಹೇಳ್ತಾರೆ. ನೀರಿನ ಸೇವನೆಯಿಂದ ನಮ್ಮ ದೇಹ ಹೈಡ್ರೇಟ್ ಆಗುವುದಲ್ಲದೆ ದೇಹದಲ್ಲಿರುವ ಎಲ್ಲ ಕಲ್ಮಷಗಳು ಹೊರಗೆ ಹೋಗುತ್ತವೆ. ನೀರು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅತಿಯಾಗಿ ನೀರು ಸೇವನೆ ಮಾಡುವುದು ಒಳ್ಳೆಯದಲ್ಲ. ದಿನಕ್ಕೆ ನಾಲ್ಕಕ್ಕಿಂತ ಹೆಚ್ಚು ಲೀಟರ್ ನೀರು ಸೇವನೆ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅದೇ ರೀತಿ ಪ್ರತಿ ದಿನ ನೀವು ಒಂದು ಲೀಟರ್ ಗಿಂತಲೂ ಕಡಿಮೆ ನೀರು ಸೇವನೆ ಮಾಡ್ತಿದ್ದೀರಿ ಅಂದ್ರೆ ಅದು ಕೂಡ ಅಪಾಯಕಾರಿ.
ಇದನ್ನೂ ಓದಿ: ನಿಫಾ ಸೋಂಕಿತ ರೋಗಿಗಳು ಸಂಪೂರ್ಣ ಚೇತರಿಕೆ – ಕೇರಳದಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಹಿಂಪಡೆದ ಸರ್ಕಾರ
ಅತಿ ಕಡಿಮೆ ನೀರು ಸೇವನೆ ಮಾಡುವವರು ತಮ್ಮ ಸಾವನ್ನು ಬೇಗ ತಂದುಕೊಳ್ತಾರೆ ಎಂದು ಅಮೆರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ. ಕಡಿಮೆ ನೀರು ಕುಡಿಯುವ ಜನರು, ಹೈಡ್ರೇಟ್ ಆಗಿರುವ ಯುವಕರಿಗಿಂತ ಬೇಗ ವಯಸ್ಸಾದಂತೆ ಕಾಣುತ್ತಾರೆ. ಅಕಾಲಿಕ ಮರಣದ ಅಪಾಯವೂ ಅವರಿಗೆ ಹೆಚ್ಚು ಎಂದು ಅಧ್ಯಯನದಲ್ಲಿ ಪತ್ತೆಯಾಗಿದೆ. ದೇಹ ನಿರ್ಜಲೀಕರಣವಾದಲ್ಲಿ ಖಾಯಿಲೆಗಳು ಕಾಡುವುದು ಹೆಚ್ಚು ಎಂಬುದು ಇದ್ರಿಂದ ಬಹಿರಂಗವಾಗಿದೆ.
ಸಂಶೋಧನೆಯ ಪ್ರಕಾರ, ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಲು ಕಡಿಮೆ ನೀರು ಸೇವನೆಯೇ ಕಾರಣ. ರಕ್ತದಲ್ಲಿ ಹೆಚ್ಚು ಸೋಡಿಯಂ ಹೊಂದಿರುವ ಜನರು ಇತರರಿಗಿಂತ ವೇಗವಾಗಿ ವಯಸ್ಸಾದಂತೆ ಕಾಣುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಸೋಡಿಯಂ ಕಾಣಿಸಿಕೊಂಡಾಗ ಹೃದಯ ವೈಫಲ್ಯ, ಪಾರ್ಶ್ವವಾಯು, ಶ್ವಾಸಕೋಶದ ಕಾಯಿಲೆ, ಮಧುಮೇಹ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳ ಅಪಾಯ ಎದುರಾಗಬಹುದು.
ಕಡಿಮೆ ನೀರು ಸೇವನೆ ಮಾಡುವುದ್ರಿಂದ ರಕ್ತದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿ ಈ ಮೇಲಿನ ಸಮಸ್ಯೆ ಕಾಡುತ್ತೆ ಎಂದು ಸಂಶೋಧನೆ ಹೇಳಿದೆಯೇ ಹೊರತು, ಹೆಚ್ಚು ನೀರು ಕುಡಿಯೋದ್ರಿಂದ ಇದೆಲ್ಲ ಗುಣವಾಗುತ್ತೆ ಎಂಬ ವಾದವನ್ನು ಮುಂದಿಟ್ಟಿಲ್ಲ.