ಸುಮಲತಾ ಮುಂದೆ ಟಿಕೆಟ್ ಸವಾಲು – ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಮಾಡ್ತಾರಾ..?

ಸುಮಲತಾ ಮುಂದೆ ಟಿಕೆಟ್ ಸವಾಲು – ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಮಾಡ್ತಾರಾ..?

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಳಿಕ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಸದ್ದು ಮಾಡ್ತಿದೆ. ಸಕ್ಕರೆ ನಾಡು ಬಿಜೆಪಿಗೋ, ಜೆಡಿಎಸ್​ ಪಾಲಾಗುತ್ತೋ ಎಂಬ ಚರ್ಚೆ ನಡೆಯುತ್ತಲೇ ಇದೆ. ಆದ್ರೆ ಇದೆಲ್ಲಕ್ಕಿಂತಲೂ ಹೆಚ್ಚು ಕುತೂಹಲ ಮೂಡಿಸಿರೋದು ಸಂಸದೆ ಸುಮಲತಾ ಅಂಬರೀಶ್ ನಡೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಗೆಲುವು ಸಾಧಿಸಿದ್ದ ಸುಮಲತಾಗೆ ಈ ಸಲ ಗೆಲುವು ಅಷ್ಟು ಸುಲಭವಾಗಿಲ್ಲ. ಬಿಜೆಪಿಗೆ ಬೆಂಬಲ ಘೋಷಿಸಿ ಬಿಜೆಪಿ ಟಿಕೆಟ್ ಸಿಗುತ್ತೆ ಅಂತಾ ಕಾಯ್ತಿದ್ದ ಸುಮಲತಾಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಿಗ್ ಶಾಕ್ ಕೊಟ್ಟಿತ್ತು. ಇದೇ ಕಾರಣಕ್ಕೆ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ. ತಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡಲು ಆಪ್ತರ ಜೊತೆ ಸಭೆ ನಡೆಸಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್‌ಗೆ ಹೋದಷ್ಟೇ ಸ್ಪೀಡ್ ಆಗಿ ವಾಪಸ್ ಆದ ಜಗದೀಶ್ ಶೆಟ್ಟರ್ – ‘ಕೈ’ಗೆ ಬೈ ಬೈ ಹೇಳಲು ಕಾರಣವೇನು?

ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಸುಮಲತಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ಚಿಹ್ನೆಯಡಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡೋದು ಅವ್ರ ಪ್ಲ್ಯಾನ್ ಆಗಿತ್ತು. ಆದ್ರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅವ್ರ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿತ್ತು. ಅಲ್ಲದೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗೋದು ಬಹುತೇಕ ಪಕ್ಕಾ ಆಗಿದೆ. ಹೀಗಾಗಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋದಾ..? ಬೇರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸೋದಾ..? ಮುಂದೆ ಯಾವ ನಿರ್ಧಾರ ಕೈಗೊಳ್ಳೋದು ಅನ್ನೋ ಬಗ್ಗೆ ಆಪ್ತರ ಜೊತೆ ಸಭೆ ನಡೆಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸಕ್ಕೆ ಮಂಡ್ಯದ ತಮ್ಮ ಆಪ್ತರನ್ನ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆಯಬೇಕು ಅನ್ನೋ ಆಲೋಚನೆಯಲ್ಲಿದ್ದ ಸುಮಲತಾಗೆ ಬಿಗ್ ಶಾಕ್ ಎದುರಾಗಿದೆ. ಕಮಲ ದಳ ಮೈತ್ರಿ ಬಳಿಕ ಸುಮಲತಾ ಕಾಂಗ್ರೆಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ರು. ಆದ್ರೀಗ ಸುಮಲತಾ ಪಡೆಯಲ್ಲಿ ಎರಡು ಭಾಗವಾಗಿದೆ ಎನ್ನಲಾಗಿದೆ. ಒಂದು ಬಣ ತಮ್ಮ ನಾಯಕಿಯ ನಿರ್ಧಾರಕ್ಕೆ ನಿಂತರೆ, ಮತ್ತೊಂದು ಬಣ ಮೈತ್ರಿ ಪರ ನಿಂತಿದ್ಯಂತೆ. ಇದೇ ಕಾರಣಕ್ಕೆ ಎಲ್ಲಾ ಆಪ್ತರನ್ನ ಮನೆಗೆ ಕರೆಸಿ ಚರ್ಚೆ ಮಾಡಿದ್ದಾರೆ. ಆದ್ರೂ ಸುಮಲತಾ ಮುಂದೆ ಸಾಲು ಸಾಲು ಸವಾಲುಗಳಿವೆ.

ಲೋಕಸಭಾ ಚುನಾವಣೆ ಸುಮಲತಾ ಇಷ್ಟೊಂದು ತಲೆ ಕೆಡಿಸಿಕೊಳ್ಳೋಕೆ ಕಾರಣವೂ ಇದೆ. ಯಾಕಂದ್ರೆ  2019ರ ಲೋಕಸಭಾ ಸಮರಕ್ಕೂ 2024ರ ಸಮರಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಬದಲಾದ ರಾಜಕೀಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿಯಾಗಿದೆ. ಜನರ ಅಭಿಪ್ರಾಯಗಳೂ ಬದಲಾಗಿವೆ. ಕ್ಷೇತ್ರದ ಅಭಿವೃದ್ಧಿ, ಕ್ಷೇತ್ರದಲ್ಲಿ ಸಂಚಾರ, ಸ್ಥಳೀಯ ನಾಯಕರ ಜೊತೆ ಸಾಮರಸ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಸುಮಲತಾ ವಿರುದ್ಧ ಹಲವು ಆರೋಪಗಳಿವೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೂ ಈ ಸಲ ಮಂಡ್ಯ ಮತದಾರರು ಸುಮಲತಾ ಕೈ ಹಿಡಿಯುತ್ತಾರೆ ಅಂತಾ ಹೇಳೋಕೆ ಆಗಲ್ಲ. ಹೋಗ್ಲಿ ಕಡೇ ಪಕ್ಷ ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ನಿಂದನಾದ್ರೂ ಸ್ಪರ್ಧಿಸೋಣ ಅಂದ್ರೆ ಅದೂ ಕೂಡ ವರ್ಕೌಟ್ ಆಗುತ್ತೆ ಅಂತಾ ಹೇಳೋಕೆ ಆಗಲ್ಲ. ಜಿಲ್ಲೆಯ ಹಲವು ಕಾಂಗ್ರೆಸ್ ನಾಯಕರು ಮತ್ತು ಸುಮಲತಾ ನಡುವೆ ಭಿನ್ನಾಭಿಪ್ರಾಯವಿದೆ. ಸುಮಲತಾ ಕಾಂಗ್ರೆಸ್ ಗೆ ಸೇರೋದು ಸ್ಥಳೀಯ ನಾಯಕರಿಗೇ ಒಪ್ಪಿಗೆ ಇಲ್ಲ. ಇನ್ನು ಜೆಡಿಎಸ್ ಅಂತೂ ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಹವಣಿಸುತ್ತಿದೆ. 2019ರಲ್ಲಿ ನಿಖಿಲ್ ಕುಮಾರ್ ಸ್ವಾಮಿಯನ್ನ ಸೋಲಿಸಿದ್ದ ಸುಮಲತಾಗೂ ಸೋಲಿನ ಪಾಠ ಕಲಿಸಬೇಕು ಅಂತಾ ಕುಮಾರಸ್ವಾಮಿ ಭರ್ಜರಿ ಕಸರತ್ತು ನಡೆಸ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಸುಮಲತಾಗೆ ಕ್ಷೇತ್ರದಲ್ಲಿ ಹಲವು ಸವಾಲುಗಳು ಎದುರಾಗಿವೆ.

ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ನಡುವೆ ನೇರಾನೇರ ಕಾಳಗ ನಡೆದಿತ್ತು. ಸುಮಲತಾ ಪರ ದರ್ಶನ್ ಮತ್ತು ಯಶ್ ಜೊಡೆತ್ತುಗಳಾಗಿ ನಿಂತಿದ್ರೆ ನಿಖಿಲ್ ಪರ ಅಂದಿನ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ ಅಬ್ಬರಿಸಿದ್ರು. ಮಂಡ್ಯದ ದಶ ದಿಕ್ಕುಗಳಲ್ಲೂ ಪ್ರತಿಷ್ಠೆಯ ಕಹಳೆ ಮೊಳಗಿತ್ತು. ಇದೀಗ  ಮತ್ತೊಮ್ಮೆ ಮಂಡ್ಯ ರಣರಂಗವಾಗೋದು ಫಿಕ್ಸ್ ಆಗಿದೆ. ಸುಮಲತಾ ನಡೆ ಏನು ಎಂಬುದರ ಮೇಲೆ ಮಂಡ್ಯದ ಚುನಾವಣೆಯ ರೋಚಕತೆಯೂ ಅಡಗಿದೆ.

 

Sulekha