ಸಚಿವ ಸಂಪುಟದ ಸಮೇತ ಬಹಿರಂಗ ಚರ್ಚೆಗೆ ಬನ್ನಿ –  ಬಿಜೆಪಿಗೆ ಜೆಡಿಎಸ್ ಸವಾಲು

ಸಚಿವ ಸಂಪುಟದ ಸಮೇತ ಬಹಿರಂಗ ಚರ್ಚೆಗೆ ಬನ್ನಿ –  ಬಿಜೆಪಿಗೆ ಜೆಡಿಎಸ್ ಸವಾಲು

ಬೆಂಗಳೂರು: ಬಿಜೆಪಿ ವಿರುದ್ದ, ಟ್ವೀಟ್ ಸಮರ ಮುಂದುವರೆಸಿರುವ ಜೆಡಿಎಸ್, ರಾಜ್ಯ ಸಂಪುಟದ ಸಮೇತ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಜೆಪಿಗೆ ಸವಾಲು ಹಾಕಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬಂತೆ, ಬಿಜೆಪಿಯ ಕಿನ್ನರಿ ಬಾರಿಸಲು ಮಂಡ್ಯಕ್ಕೆ ಬಂದಿದ್ದ ಅಮಿತ್ ಶಾ ಅವರೆ, ಮಂಡ್ಯ ಜಿಲ್ಲೆಗೆ ನಿಮ್ಮ ಪಕ್ಷದ ಕೊಡುಗೆ ಏನು? ನಿಮ್ಮ ಮುಂದೆ ಥಕಥೈ ಕುಣಿಯುವುದು ಬಿಟ್ಟು ಬೇರೇನೂ ಬಾರದ ನಿಮ್ಮ ಸಚಿವ ಸಂಪುಟದ ಸಮೇತ ಬಹಿರಂಗ ಚರ್ಚೆಗೆ ಬನ್ನಿ. ಮಂಡ್ಯಕ್ಕೆ ನಮ್ಮ ಕೊಡುಗೆಗಳ ಕುರಿತು ದಾಖಲೆ ಜೊತೆ ಉತ್ತರ ಕೊಡುತ್ತೇವೆ ಎಂದು ಕಿಡಿಕಾರಿದೆ.

ಇದನ್ನೂ ಓದಿ:ಶಾಸಕ ಅರವಿಂದ ಲಿಂಬಾವಳಿ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ – ಪ್ರದೀಪ್ ಕುಟುಂಬಸ್ಥರಿಗೆ ಕಾಂಗ್ರೆಸ್ ಮುಖಂಡರಿಂದ ಸಾಂತ್ವನ

ನೆಟ್ಟಗೆ ಆಡಳಿತ ನಡೆಸಲು ಬಾರದ ಅಯೋಗ್ಯ ಸಚಿವ ಸಂಪುಟ, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಅಮಿತ್ ಶಾ ಅವರಿಗೆ ಜೆಡಿಎಸ್ ಚಿಂತೆಯಾಗಿದೆ. ತಮ್ಮ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಚಿಂತಿಸದ್ದರೂ, ಕನಿಷ್ಟ ಪಕ್ಷ ಜನರಿಗೆ ಉಪಯೋಗವಾಗುವ ನಾಲ್ಕು ಕೆಲಸಗಳನ್ನಾದರೂ ಮಾಡಬಹುದಿತ್ತು. ಅದು ಬಿಟ್ಟು ಮೋಸ, ಹಸಿಸುಳ್ಳುಗಳಿಂದ ಜೆಡಿಎಸ್ ಕಟ್ಟಿಹಾಕಬಹುದು ಎಂಬ ಭ್ರಮೆಯಲ್ಲಿದ್ದರೆ ಅದಕ್ಕಿಂತ ನಗೆಪಾಟಲಿನ ಸಂಗತಿ ಇನ್ನೊಂದಿಲ್ಲ ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಉತ್ತರ ಕರ್ನಾಟಕದಲ್ಲಿ ಕುಸಿಯುತ್ತಿರುವ ಬಿಜೆಪಿಯನ್ನು ಮೇಲೆತ್ತಲು, ಹಳೇ ಮೈಸೂರು ಭಾಗದಲ್ಲಿ ಹರಸಾಹಸ ಪಡುತ್ತಿರುವ ಬಿಜೆಪಿಗೆ, ಕನ್ನಡದ ಜನತೆ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ. ನಿಮ್ಮ ನೌಟಂಕಿ ‘ಸಾಹಸ’ಗಳಿಗೆ ಇತಿಶ್ರಿ ಹಾಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೆ, ನಿಮ್ಮ ಸುಳ್ಳುಗಳ ಎಕ್ಸ್​ಪೈರಿ ಮುಗಿದಿದೆ. ಬಿಜೆಪಿಯ ಸೋಲಿನ ಭಯದಿಂದ ಜೆಡಿಎಸ್ ಬಗ್ಗೆ ‘ಅಣಿಮುತ್ತುಗಳನ್ನು’ ಉದುರಿಸುವುದು ನಿಲ್ಲಿಸಿ. ಇಲ್ಲವಾದರೆ, ಜನರೇ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಜೆಡಿಎಸ್ ಕಿಡಿಕಾರಿದೆ.

suddiyaana