ಪೆನ್ ಡ್ರೈವ್ ಹೊರಗೆ ಬಂದರೆ ಹಾಲಿ ಸಚಿವ ರಾಜೀನಾಮೆ ನೀಡಬೇಕಾಗುತ್ತದೆ – ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ

ಪೆನ್ ಡ್ರೈವ್ ಹೊರಗೆ ಬಂದರೆ ಹಾಲಿ ಸಚಿವ ರಾಜೀನಾಮೆ ನೀಡಬೇಕಾಗುತ್ತದೆ – ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ

ಬೆಂಗಳೂರು: ರಾಜ್ಯದಲ್ಲೀಗ ವರ್ಗಾವಣೆ ದಂಧೆ ಭಾರಿ ಸದ್ದು ಮಾಡುತ್ತಿದೆ. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ದ ನಿರಂತರವಾಗಿ ಆರೋಪಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಾರೆ. ಹೆಚ್‌.ಡಿಕೆ ಮತ್ತೆ ರಾಜ್ಯ ಸರ್ಕಾರ ವಿರುದ್ದ ಹೊಸ ಬಾಂಬ್‌ ಸಿಡಿಸಿದ್ದಾರೆ. ನಾನು ಪೆನ್ ಡ್ರೈವ್ ರಿಲೀಸ್‌ ಮಾಡಿದ್ರೆ ಸಚಿವರೊಬ್ಬರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್‌ಡಿಕೆ, ನಾನು ಸೂಕ್ತ ಸಮಯದಲ್ಲಿ ಪೆನ್ ಡ್ರೈವ್ ನಲ್ಲಿರುವ ದಾಖಲೆ ಬಿಡುಗಡೆ ಮಾಡುತ್ತೇನೆ. ಈ ಸರ್ಕಾರ ಏನು ಮಾತನಾಡುತ್ತದೆಯೋ ಎಲ್ಲವನ್ನು ಮಾತನಾಡಲಿ. ನನ್ನನ್ನು ಹಿಟ್ ಅಂಡ್ ರನ್ ಎಂದು ಹೇಳಿಕೊಳ್ಳಲಿ. ಕಾಂಗ್ರೆಸ್ ಹೀಗೆ ಮಾತನಾಡುತ್ತಿರಲಿ. ನನಗೆ ಪೆನ್ ಡ್ರೈವ್ ಬಿಡುಗಡೆ ಮಾಡುವ ಅವಸರವಿಲ್ಲ, ಸಮಯ ಬಂದಾಗ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ. ಪೆನ್ ಡ್ರೈವ್ ಮಾಹಿತಿ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ವರ್ಗಾವಣೆ ದಂಧೆ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: ರಾಜಕೀಯ ತಿರುವು ಪಡೆದ KSRTC ಚಾಲಕನ ಆತ್ಮಹತ್ಯೆ ಕೇಸ್ – ದ್ವೇಷದ ರಾಜಕಾರಣ ಎಂದು ಹೆಚ್ ಡಿಕೆ ವಾಗ್ದಾಳಿ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಪುರಾವೆ ಇರುವ ಪೆನ್ ಡ್ರೈವ್ ನನ್ನ ಜೇಬಿನಲ್ಲಿದೆ, ಸರಿಯಾದ ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ, ಯಾವುದೇ  ಸೂಕ್ತ ಮಾಹಿತಿ ಇಲ್ಲದೇ ಬಿಡುಗಡೆ ಮಾಡುವುದಿಲ್ಲ, ಹಾಲಿ ಸಚಿವ ಸಂಪುಟದ ಹಿರಿಯ ಸಚಿವರೊಬ್ಬರು ಭಾಗಿಯಾಗಿದ್ದಾರೆ. ಇಲಾಖೆಯಲ್ಲಿನ ನೌಕರರ ವರ್ಗಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ದೊಡ್ಡ ಪ್ರಮಾಣದ ವರ್ಗಾವಣೆ  ದಂಧೆಯಲ್ಲಿ ತೊಡಗಿ ಲೂಟಿ ಮಾಡುತ್ತಿದೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಕಚೇರಿಯಲ್ಲಿ (ಸಿಎಂಒ) ಅಧಿಕಾರಿಗಳು ವರ್ಗಾವಣೆಗೆ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ಕನ್ನಡಿಗರು ಸಿಎಂಒ ಎಂದರೆ ಮುಖ್ಯಮಂತ್ರಿ ಕಚೇರಿ ಎಂದು ಭಾವಿಸಿದ್ದರು. ಇದು ಈಗ ಭ್ರಷ್ಟಾಚಾರ ನಿರ್ವಹಣಾ ಕಚೇರಿಯಾಗಿದೆ ಎಂದು ಅವರು ಈಗ ಅರ್ಥಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಮಾಡಿರುವ ವರ್ಗಾವಣೆ ದಂಧೆ ಆರೋಪ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಯಾವಗ್ಲೂ ಹಿಟ್ ಅಂಡ್ ರನ್ ಕೇಸ್. ಇದುವರೆಗೆ ಮಾಡಿರೋ ಆರೋಪಗಳಲ್ಲಿ ಯಾವುದನ್ನ ಕುಮಾರಸ್ವಾಮಿ ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗಿದ್ದಾರೆ ಹೇಳಲಿ ನೋಡೋಣ ಎಂದು ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಪಾಪ ಹತಾಶರಾಗಿದ್ದಾರೆ. ಈಗ ಹೊಸ ಸರ್ಕಾರ ಬಂದಿದೆ, ಇದು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ. ಜನರಲ್ ವರ್ಗಾವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆ ಮಾಡಲೇಬೇಕು. ಅದಕ್ಕೆ ದಂಧೆ ನಡೆದಿದೆ, ‌ಲಂಚ ನಡೆದಿದೆ ಅಂತಾ ಹೇಳ್ತಿರೋದು ಸುಳ್ಳು. ಹತಾಶೆಯಾಗಿ ದ್ವೇಷದಿಂದ ಹೀಗೆಲ್ಲ ಮಾತಾಡ್ತಾ ಇದ್ದಾರೆ ಅಂತಾ ಹೆಚ್‌ಡಿಕೆ ಆರೋಪಗಳನ್ನ ತಳ್ಳಿಹಾಕಿದ್ದಾರೆ.

ಕುಮಾರಸ್ವಾಮಿ ಕಾಲದಲ್ಲಿ ವರ್ಗಾವಣೆ ಆಗಿರಲಿಲ್ಲವಾ? ಹಾಗಾದರೆ ಅವರು ದುಡ್ಡು ತಗೊಂಡಿದ್ದರಾ? ವರ್ಗಾವಣೆ ಆದಾಗೆಲ್ಲ ದಂಧೆ ನಡೆದಿದೆ, ದುಡ್ಡು ತಗೊಂಡಿದ್ದಾರೆ ಅಂದರೆ ಹೇಗೆ? ಹಾಗಾದರೆ ಕುಮಾರಸ್ವಾಮಿನೂ ದುಡ್ಡು ತಗೊಂಡಿದ್ದಾರಾ? ಹಾಗಾದ್ರೆ ನಾವು ಅವರ ಮೇಲೂ‌ ಹೇಳ್ತೀವಿ ದುಡ್ಡು ತಗೊಂಡಿದ್ರು ಅಂತಾ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇನ್ನೂ ಕುಮಾರಸ್ವಾಮಿ ಪೆನ್ ಡ್ರೈವ್ ತೋರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ಇದುವರೆಗೆ ಮಾಡಿರೋ ಆರೋಪಗಳಲ್ಲಿ ಯಾವುದನ್ನ ಕುಮಾರಸ್ವಾಮಿ ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗಿದ್ದಾರೆ ಹೇಳಲಿ. ಅವರು ದಾಖಲೆ ಬಿಡುಗಡೆ ಮಾಡಲಿ ಅದಕ್ಕೆ ಉತ್ತರ ಕೊಡ್ತೀವಿ ಎಂದು ಸಿಎಂ ಹೇಳಿದ್ದಾರೆ.

suddiyaana