ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾದರೆ ಮೋದಿಗೆ ಹಿನ್ನಡೆಯಾಗುತ್ತಾ – ಏನಿದು ದಲಿತಾಸ್ತ್ರ ಪ್ರಯೋಗ?
ಬಿಜೆಪಿಯ ಹ್ಯಾಟ್ರಿಕ್ ಕನಸಿಗೆ ಕೊಳ್ಳಿ ಇಟ್ಟು ಪ್ರಧಾನಿ ಮೋದಿಯವರ ನಾಗಾಲೋಟಕ್ಕೆ ಬ್ರೇಕ್ ಹಾಕಬೇಕೆಂಬುದು ವಿಪಕ್ಷಗಳ ಹೆಬ್ಬಯಕೆ. ಒಂಟಿಯಾಗಿ ಹೋರಾಡಿದ್ರೆ ಗೆಲುವು ಅಸಾಧ್ಯ ಅನ್ನೋದನ್ನ ಅರಿತಿರುವ ನಾಯಕರು ಜಂಟಿಯಾಗಿ ತೊಡೆ ತಟ್ಟಿದ್ದಾರೆ. ಇದೇ ಕಾರಣಕ್ಕೆ ತಮ್ಮೊಳಗೆ ಅದೆಷ್ಟೇ ಮುನಿಸು, ಅಸಮಾಧಾನ ಇದ್ರೂ ಇಂಡಿಯಾ ಹೆಸರಲ್ಲಿ ಮೈತ್ರಿಕೂಟ ರಚಿಸಿಕೊಂಡು ರಣತಂತ್ರ ಹೆಣೆಯುತ್ತಿದ್ದಾರೆ. ಸಭೆ ಮೇಲೆ ಸಭೆ ನಡೆಸುತ್ತಾ ಅತ್ಯುತ್ಸಾಹದಲ್ಲಿದ್ದ ವಿಪಕ್ಷನಾಯಕರಿಗೆ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಬಹುದೊಡ್ಡ ಆಘಾತ ನೀಡಿದೆ. 5 ರಾಜ್ಯಗಳ ಪೈಕಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿತ್ತು. ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷ ಗೆಲುವು ಸಾಧಿಸಿತ್ತು. ಮೂರು ರಾಜ್ಯಗಳಲ್ಲಿ ಗೆಲುವಿನ ನಗಾರಿ ಬಾರಿಸಿದ್ದ ಬಿಜೆಪಿ ಲೋಕಸಭಾ ಚುನಾವಣೆಗೂ ರಣೋತ್ಸಾಹದಲ್ಲಿದೆ. ಅಲ್ಲದೆ ಇದು ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗ್ತಿದೆ. ಇದೇ ಕಾರಣಕ್ಕೆ ವಿಪಕ್ಷಗಳು ದಲಿತಾಸ್ತ್ರ ಪ್ರಯೋಗಕ್ಕೆ ಮುಂದಾದಂತಿದೆ.
ಇದನ್ನೂ ಓದಿ : ಲೋಕಸಭೆ ಕಲಾಪದಲ್ಲಿ ಮುಂದುವರಿದ ಭದ್ರತಾ ಉಲ್ಲಂಘನೆ ಪ್ರಕರಣದ ಗದ್ದಲ – ಮತ್ತೆ ವಿರೋಧ ಪಕ್ಷದ ಇಬ್ಬರು ಸದಸ್ಯರು ಅಮಾನತು!
ರಾಷ್ಟ್ರ ರಾಜಕೀಯದಲ್ಲಿ ಹೆಮ್ಮರವಾಗಿ ಬೇರೂರಿರುವ ನರೇಂದ್ರ ಮೋದಿಯವರನ್ನ ಕಿತ್ತೊಗೆಯುವುದು ಅಷ್ಟು ಸುಲಭದ ಮಾತಲ್ಲ. ವಿಪಕ್ಷಗಳಿಗೆ ಒಗ್ಗಟ್ಟಿನ ಮಂತ್ರ ಜಪಿಸದ ಹೊರತು ಬೇರೆ ದಾರಿಯೂ ಇಲ್ಲ. ಇದೇ ಕಾರಣಕ್ಕೆ ತಮ್ಮೊಳಗೆ ಅದೆಷ್ಟೇ ಬೇಸರ, ಭಿನ್ನಾಭಿಪ್ರಾಯಗಳು ಇದ್ರೂ ಅದನ್ನೆಲ್ಲಾ ಮರೆಮಾಚಿ ಕೈ ಜೋಡಿಸಿದ್ದಾರೆ. ಉತ್ತರ ಭಾರತದಲ್ಲಿ ರಾಹುಲ್ ಗಾಂಧಿ ಚಾರ್ಮ್ ವರ್ಕೌಟ್ ಆಗದ ಕಾರಣ ಪ್ರಧಾನಿ ಮೋದಿ ವಿರುದ್ಧ ದಲಿತಾಸ್ತ್ರ ಪ್ರಯೋಗಿಸುವ ಮುನ್ಸೂಚನೆ ನೀಡಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮಹಾಮೈತ್ರಿಕೂಟದ ಸಭೆಯಲ್ಲಿ ಬಹುದೊಡ್ಡ ಬೆಳವಣಿಗೆಯಾಗಿದೆ. ಡಿಸೆಂಬರ್ 19ರಂದು ದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ವಿಚಾರ ಚರ್ಚೆಯಾಗಿತ್ತು. ಈ ವೇಳೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖರ್ಗೆ ಪರ ಬ್ಯಾಟ್ ಬೀಸಿದ್ದಾರೆ. ಪ್ರಧಾನಿ ಅಭ್ಯರ್ಥಿಯನ್ನಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಮಾಡೋದು ಬೆಟರ್ ಎಂದಿದ್ದಾರೆ. ಇದಕ್ಕೆ ಇನ್ನೂ ಕೆಲ ಪಕ್ಷಗಳ ನಾಯಕರು ಓಕೆ ಅಂದಿದ್ದಾರೆ. ಸಭೆಯಲ್ಲಿ ಪಾಲ್ಗೊಂಡ 12 ಪಕ್ಷಗಳು ಈ ಪ್ರಸ್ತಾಪವನ್ನು ಶ್ಲಾಘಿಸಿವೆ ಎಂದು ಮೂಲಗಳು ತಿಳಿಸಿವೆ. ಹಾಗೇ ಮೈತ್ರಿಕೂಟದ ಸದಸ್ಯ ಪಕ್ಷಗಳ ನಡುವೆ ಸೀಟು ಹಂಚಿಕೆಯು ಆದಷ್ಟು ಬೇಗ ಆಗಬೇಕು. ಸೀಟು ಹಂಚಿಕೆಯು ಈ ತಿಂಗಳ 31ಕ್ಕೆ ಮೊದಲು ಅಂತಿಮವಾಗಬೇಕು. ಸೀಟು ಹಂಚಿಕೆ ಜನವರಿ 15ಕ್ಕೆ ಮೊದಲು ಅಂತಿಮಗೊಂಡರೆ ಆನಂತರ ಚುನಾವಣೆ ಪ್ರಚಾರಕ್ಕೂ ಸಹಕಾರಿಯಾಗಲಿದೆ. ಸೀಟು ಹಂಚಿಕೆ ಪ್ರಕ್ರಿಯೆ ರಾಜ್ಯಗಳ ಮಟ್ಟದಲ್ಲಿ ಸದ್ಯವೇ ಶುರು ಮಾಡಲಾಗುವುದು. ಅಲ್ಲಿ ಒಮ್ಮತದ ಅಭಿಪ್ರಾಯ ಮೂಡದೇ ಇದ್ದಾಗ ಕೇಂದ್ರ ನಾಯಕರ ಹಂತದಲ್ಲಿ ಬಗೆಹರಿಸಿಕೊಳ್ಳಬೇಕು. ಚುನಾವಣೆಗೆ ಪೂರ್ವಭಾವಿಯಾಗಿ ದೇಶದ ನಾನಾ ಭಾಗಗಳಲ್ಲಿ ಪ್ರತಿ ತಿಂಗಳೂ ಎಂಟರಿಂದ ಹತ್ತು ಸಾರ್ವಜನಿಕ ರ್ಯಾಲಿಗಳನ್ನು ಆಯೋಜಿಸಬೇಕು ಎಂದು ಚರ್ಚಿಸಲಾಗಿದೆ.
ಪ್ರಧಾನಿ ಅಭ್ಯರ್ಥಿ ರೇಸ್ನಲ್ಲಿ ತಮ್ಮ ಹೆಸರು ಬಂದ್ರೂ ಕೂಡ ಹಿರಿ ಹಿರಿ ಹಿಗ್ಗದ ಖರ್ಗೆ ಸಾಹೇಬರು ಮಾತ್ರ ನಮ್ಮ ಬಳಿ ಅಗತ್ಯ ಸಂಖ್ಯೆಯ ಸಂಸದರು ಇಲ್ಲದಿದ್ದರೆ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಮಾತಾಡುವುದರಲ್ಲಿ ಏನು ಅರ್ಥವಿದೆ. ನಾವು ನಮ್ಮ ಸಂಖ್ಯಾಬಲವನ್ನ ಹೆಚ್ಚಿಸಿಕೊಳ್ಳೋಣ ಅಂತೇಳಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ I.N.D.I.A ಒಕ್ಕೂಟ ರಚನೆ ಆಗಿದ್ದರೂ ಮೈತ್ರಿಕೂಟದ ಪಕ್ಷಗಳಲ್ಲೇ ಕೆಲವೊಂದು ಗೊಂದಲಗಳಿವೆ. ನರೇಂದ್ರ ಮೋದಿಯವರನ್ನು ಎದುರಿಸುವ ಪ್ರಬಲ ನಾಯಕ ಯಾರು ಅನ್ನೋ ಚರ್ಚೆ ನಡೆಯುತ್ತಲೇ ಇದೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲಾಗುತ್ತಿದೆ. ಯಾಕಂದ್ರೆ ರಾಹುಲ್ ಗಾಂಧಿ ಹೆಸರನ್ನ ತೆಗೆದುಕೊಂಡರೆ ಆಗುವ ಲಾಭಕ್ಕಿಂತ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಿದರೆ ಆಗುವ ಲಾಭವೇ ಹೆಚ್ಚಿದೆ. ಅಷ್ಟಕ್ಕೂ ಇಲ್ಲಿ ಎಲ್ಲರನ್ನೂ ಬಿಟ್ಟು ಖರ್ಗೆ ಹೆಸರನ್ನೇ ಮುಂದಿಡೋಕೆ ಕಾರಣವೂ ಇದೆ. ಇಂಡಿಯಾ ಮೈತ್ರಿಕೂಟದಲ್ಲಿ ಇರುವ ಎಲ್ಲ ಹಿರಿಯ ನಾಯಕರನ್ನ ಗಮನಿಸಿದರೆ ಖರ್ಗೆ ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. 81 ವರ್ಷ ವಯಸ್ಸಿನ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಸಕರಾಗಿ, ಸಂಸದರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೇಂದ್ರ ಸಚಿವರಾಗಿಯೂ ಹಲವು ಖಾತೆಗಳನ್ನ ನಿಭಾಯಿಸಿದ್ದಾರೆ. ಲೋಕಸಭೆ, ರಾಜ್ಯಸಭೆಯ ನಾಯಕರಾಗಿಯೂ ದುಡಿದಿರುವ ಖರ್ಗೆ, ಸದ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಎಲ್ಲಕ್ಕಿಂತಾ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಹಾಗೂ ಸೋನಿಯಾ ಗಾಂಧಿ ಅವರಿಗೆ ನಿಷ್ಠರು. ಖರ್ಗೆ ಅವರ ಹೆಸರನ್ನ ಪ್ರಸ್ತಾಪ ಮಾಡಿದರೆ ನಿತೀಶ್ ಕುಮಾರ್ ಆದಿಯಾಗಿ ಇಂಡಿಯಾ ಮೈತ್ರಿ ಕೂಟದ ಯಾವುದೇ ಪಕ್ಷದ ನಾಯಕರೂ ವಿರೋಧ ಮಾಡೋದಿಲ್ಲ ಅನ್ನೋ ಲೆಕ್ಕಾಚಾರ ಮೊದಲಿನಿಂದಲೂ ಇತ್ತು. ಅತ್ಯಂತ ಅನುಭವಿ ಸಂಸದೀಯ ಪಟುವಾದ ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರು ಅನ್ನೋದು ಮತ್ತೊಂದು ಪ್ಲಸ್ ಪಾಯಿಂಟ್. ವಿರೋಧ ಪಕ್ಷಗಳ ಸರ್ವ ಸಮ್ಮತ ಸಮನ್ವಯ ಮುಖ ಅಂತಾನೇ ಖರ್ಗೆ ಅವರನ್ನ ಬಿಂಬಿಸಲಾಗಿದೆ. ಹಿರಿಯ ನಾಯಕರಾದ ಖರ್ಗೆ, ಪ್ರಧಾನಿ ಮೋದಿ ಅವರಿಗೆ ಚುನಾವಣೆಯಲ್ಲಿ ಟಕ್ಕರ್ ಕೊಡಲು ಸಮರ್ಥರು ಅನ್ನೋ ನಂಬಿಕೆ ಇಂಡಿಯಾ ಮೈತ್ರಿ ಕೂಟಕ್ಕೆ ಇದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಗಾಂಧಿ ಕುಟುಂಬದ ರಾಜಕೀಯ ಅನ್ನೋ ಟೀಕೆಯಿಂದ ಕಾಂಗ್ರೆಸ್ ಹೊರಬರಲಿದೆ. ಖರ್ಗೆ ಪ್ರಭಾವಿ ದಲಿತ ನಾಯಕ ಆಗಿರೋದ್ರಿಂದ ಎಸ್ಸಿ-ಎಸ್ಟಿ, ಓಬಿಸಿ ಮತಗಳನ್ನ ಸೆಳೆಯುವುದಕ್ಕೆ ಅನುಕೂಲ ಆಗಲಿದೆ. ರಾಹುಲ್ ಗಾಂಧಿಯನ್ನು ಮುಖ್ಯ ಫೇಸ್ ಆಗಿ ನಿಲ್ಲಿಸಿದ್ರೆ ಕೆಲವೊಮ್ಮೆ ಶಿಸ್ತಿನಿಂದ ಮಾತನಾಡುತ್ತಾರೆ. ಮತ್ತೊಮ್ಮೆ ಶಿಸ್ತು ಮರೆತು ಮಾತನಾಡುತ್ತಾರೆ ಎನ್ನುವುದು ಒಕ್ಕೂಟದ ಇತರೆ ನಾಯಕರಿಗೆ ಇರುವ ಭಯ. ಇದೇ ಕಾರಣಕ್ಕೆ ಖರ್ಗೆ ಹೆಸರೇ ಪ್ರಧಾನಿ ಅಭ್ಯರ್ಥಿ ರೇಸ್ ನಲ್ಲಿ ಮುಂಚೂಣಿಗೆ ಬಂದಿದೆ. ಇದಿಷ್ಟೇ ಅಲ್ಲದೆ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ನೇರ ಎದುರಾಳಿ ಯಾರು ಅನ್ನೋ ಸ್ಪಷ್ಟತೆ ಮತದಾರರಿಗೆ ಸಿಗಬೇಕು. ಆಗ ಮಾತ್ರ ಮತದಾರರನ್ನು ಓಲೈಸುವುದು ಸುಲಭ ಅನ್ನೋ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಇದೀಗ ಮುನ್ನಲೆಗೆ ಬಂದಿದೆ. ಅಲ್ಲದೆ ಖರ್ಗೆ ಹೆಸರು ಅಂತಿಮವಾದರೆ ಕರ್ನಾಟಕದಲ್ಲೂ ಕಾಂಗ್ರೆಸ್ ಭರ್ಜರಿ ಜಯ ಕಾಣುವ ನಿರೀಕ್ಷೆ ಇದೆ. ಖರ್ಗೆ ಕರ್ನಾಟಕದವರೇ ಆಗಿರೋದ್ರಿಂದ ಅವರೇ ಪ್ರಧಾನಿ ಆಗಲಿ ಅನ್ನೋ ಕಾರಣಕ್ಕಾಗದರೂ ಕಾಂಗ್ರೆಸ್ ಅತೀ ಹೆಚ್ಚು ಸೀಟ್ ಗೆಲ್ಲುವು ಸಾಧ್ಯತೆ ಇದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಸೋಲುವ ಕೆಲವು ಕ್ಷೇತ್ರಗಳಲ್ಲೂ ಗೆಲುವು ಕಾಣಬಹುದು ಎಂಬುದು ಲೆಕ್ಕಾಚಾರ.