ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದಲಿತರಿಗೆ ಸಿಎಂ ಪಟ್ಟ- ಕುಮಾರಸ್ವಾಮಿ ಘೋಷಣೆ
ತುಮಕೂರು: ಕರ್ನಾಟಕದಲ್ಲಿ ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದಲಿತ ಸಿಎಂ ಆಯ್ಕೆಯಾಗುವುದು ಖಂಡಿತಾ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ದಲಿತರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುತ್ತೇವೆ. ಚುನಾವಣೆಯಲ್ಲಿ ನಮಗೆ 123 ಸ್ಥಾನ ಬಂದರೆ ದಲಿತ ಮುಖ್ಯಮಂತ್ರಿಯನ್ನು ಏಕೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಇಳಿಕೆ – 8 ನೇ ಸ್ಥಾನದಿಂದ 7 ನೇ ಸ್ಥಾನಕ್ಕೆ ಬಡ್ತಿ ಪಡೆದ ಕರ್ನಾಟಕ
ಪಂಚರತ್ನ ರಥ ಯಾತ್ರೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರನ್ನು ಮುಖ್ಯಮಂತ್ರಿ ಮಾಡಲು ನಾವು ತಯಾರಿದ್ದೇವೆ. ನಾನು ಸಿಎಂ ಆಗಿದ್ದಾಗ ದಲಿತ ಮಹಿಳೆಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲಿರಿಸಿಕೊಂಡಿದ್ದೆ. ಯಾವ ಮುಖ್ಯಮಂತ್ರಿ ಈ ರೀತಿ ಮಾಡಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು. ‘ಅಸ್ಪೃಶ್ಯ’ ಹೇಳಿಕೆಗೆ ಕ್ಷಮೆಯಾಚಿಸಬೇಕೆಂಬ ಒತ್ತಾಯ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಏನೆಲ್ಲಾ ಮಾತನಾಡಿದ್ದಾರೆ ಎಂದು ದಾಖಲೆ ಕೊಡಬೇಕೆ ಎಂದು ಪ್ರಶ್ನಿಸಿದರು.
ದಲಿತರ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆ ಅನ್ನೋ ಆರೋಪಕ್ಕೆ ಉತ್ತರ ಕೊಟ್ಟ ಹೆಚ್‌ಡಿಕೆ, ನಮಗೆ ದಲಿತರ ಬಗ್ಗೆ ಅಭಿಮಾನವಿದೆ. ಸಿದ್ದರಾಮಯ್ಯ ಅಸ್ಪಶ್ಯರ ಬಗ್ಗೆ ಎಷ್ಟು ಕೀಳಾಗಿ ಮಾತಾಡಿದ್ದಾರೆ ಗೊತ್ತೆ ಎಂದು ಕೇಳಿದರು. ತಮ್ಮ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಬಗ್ಗೆ ಪ್ರತಿಭಟನೆ ಮಾಡೋರು ಯಾರು? ದೇವೆಗೌಡರು ಮೀಸಲಾತಿ ಇಲ್ಲದೇ ಇದ್ದಾಗ ದಲಿತರನ್ನ ಮುಖಂಡರನ್ನಾಗಿ ಮಾಡಿದ್ದನ್ನು ಯಾರೂ ಮರೆಯಬಾರದು. ನಮ್ಮ ಪಕ್ಷಕ್ಕೆ ದಲಿತರ ವಿಚಾರದಲ್ಲಿ ಬದ್ಧತೆಯಿದೆ ಎಂದರು.
ನಾಡಿನ ಜನತೆಗೆ ನಾನು ಕೇಳೋದು ಇಷ್ಟೇ. ಐದು ವರ್ಷ ಅಧಿಕಾರ ಮಾಡಲು ಒಂದು ಅವಕಾಶ ಕೊಡಿ. ಜನತೆಯ ಪ್ರೀತಿ, ವಿಶ್ವಾಸದ ಅಲೆಯಲ್ಲಿ ನನ್ನ ದೈಹಿಕ ಶ್ರಮವನ್ನು ಸಂಪೂರ್ಣವಾಗಿ ಮರೆಯುತ್ತೇನೆ. ದಿನದಲ್ಲಿ 14 ಗಂಟೆಗಳ ಕಾಲ ಜನಗಳ ಜೊತೆ ಸಮಯ ಕಳೆಯುತ್ತಿದ್ದೇನೆ ಎಂದರು.