ಬರಿದಾಗಿದೆ ಜೀವನದಿ ಕಾವೇರಿಯ ಒಡಲು – ಮಳೆ ಬಾರದೇ ಇದ್ದರೆ ರಾಜಧಾನಿ ಬೆಂಗಳೂರಲ್ಲೂ ಜಲಕ್ಷಾಮ..!
ಮುಂಗಾರು ಮಳೆ ವಾಡಿಕೆಯಂತೆ ಬರಲೇ ಇಲ್ಲ. ಜೂನ್ 1ಕ್ಕೆ ಬರಬೇಕಾದ ಮಳೆ ಜುಲೈ 1 ಬಂದರೂ ಪತ್ತೆಯೇ ಇಲ್ಲ. ಕಾವೇರಿಯ ಒಡಲು ಖಾಲಿ ಖಾಲಿಯಾಗಿದೆ. ಕರುನಾಡಿನ ಜೀವನದಿ ಜೀವಸೆಲೆಯಿಲ್ಲದೇ ಬತ್ತಿ ಹೋಗಿದ್ದಾಳೆ. ಇದರ ಪರಿಣಾಮ ಕೆಆರ್‌ಎಸ್ ಕೂಡಾ ಬರಿದಾಗಿದೆ. ಜಲಾಶಯ ಡೆಡ್ ಸ್ಟೋರೇಜ್ ತಲುಪಿದೆ. ಈ ತಿಂಗಳಲ್ಲಿ ಮಳೆ ಬಾರದಿದ್ದರೆ ರಾಜಧಾನಿ ಬೆಂಗಳೂರಲ್ಲಿ ಜಲಕ್ಷಾಮ ಫಿಕ್ಸ್ ಎಂಬ ಸ್ಥಿತಿ ಬಂದಿದೆ.
ಇದನ್ನೂ ಓದಿ: ಬರಗಾಲ ಘೋಷಣೆ ಮಾಡಲು ಸರ್ಕಾರದ ಸಿದ್ಧತೆ – ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ
ಕಾವೇರಿ ನದಿಯಲ್ಲಿ ನೀರಿಲ್ಲದೇ, ಬೆಂಗಳೂರಿಗೆ ಕುಡಿಯುವ ನೀರು ಎಲ್ಲಿಂದ ತರುವುದು ಎಂಬ ಆತಂಕ ಎದುರಾಗಿದೆ. ಹೀಗೆ ಪರಿಸ್ಥಿತಿ ಮುಂದುವರಿದರೆ ಬೆಂಗಳೂರು ಜನರಿಗೆ ಕುಡಿಯುವ ನೀರು ಸಿಗುವುದು ಅನುಮಾನ ಎನ್ನಲಾಗಿದೆ. ಬೆಂಗಳೂರು ಕಾವೇರಿ ನೀರನ್ನೇ ಅವಲಂಬಿಸಿದೆ. ಪ್ರತಿನಿತ್ಯ 1450 MLD ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ತಿಂಗಳಿಗೆ 1.6 ಟಿಎಂಸಿ ನೀರು ಬೆಂಗಳೂರಿಗೆ ಬೇಕು. ಸದ್ಯ ಕೆಆರ್‌ಎಸ್ ನಲ್ಲಿ 10 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಈಗ ಇರುವ ನೀರು ಕೆಲವೇ ದಿನಗಳಿಗೆ ಖಾಲಿ ಆಗಲಿದೆ. ಈ ಹಿಂದೆ 2012ರಲ್ಲಿ ಭೀಕರ ಜಲಕ್ಷಾಮ ಎದುರಾಗಿತ್ತು. ಕೆಆರ್‌ಎಸ್‌ನಲ್ಲಿ ಇರುವ ನೀರಿನಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ , ರಾಮನಗರಕ್ಕೂ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಉಳಿದ ನೀರಿನಲ್ಲಿ ಬೆಂಗಳೂರಿಗೆ ಸರಬರಾಜು ಮಾಡುವುದು ಕಷ್ಟಕರ. 2015 ರಲ್ಲೂ KRS ಬರಿದಾಗಿ ಹೇಮಾವತಿಯಿಂದ ನೀರು ಸರಬರಾಜು ಮಾಡಿಕೊಳ್ಳಲಾಗಿತ್ತು.