ಚನ್ನಪಟ್ಟಣ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ! – ಯೋಗೇಶ್ವರ್‌

ಚನ್ನಪಟ್ಟಣ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ! – ಯೋಗೇಶ್ವರ್‌

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಇದೀಗ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ಟಿಕೆಟ್‌ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡುವ ಮಾತೇ ಇಲ್ಲ. ನನಗೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಟಿಕೆಟ್ ಆಕಾಂಕ್ಷಿಯೂ ಆಗಿರುವ ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಖಡಕ್ಕಾಗಿ ಹೇಳಿದ್ದಾರೆ.

ಇದನ್ನೂ ಓದಿ: ಇಂಡಿಯಾ ಮತ್ತು ಬಾಂಗ್ಲಾ ಸರಣಿಗೆ ಬ್ರಹ್ಮಾಸ್ತ್ರ – ಶಮಿ & ಬುಮ್ರಾ ಕಮ್‌ ಬ್ಯಾಕ್‌ ಫಿಕ್ಸ್‌

ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಪಿವೈ, ಪಕ್ಷೇತರನಾಗಿ ಮತ್ತೆ ಗೆದ್ದು ಎನ್‌ಡಿಎ ಭಾಗವಾಗುತ್ತೇನೆ. ಏನೇನು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಮುಂದೆ ನೋಡೋಣ. ನನ್ನ ತಾಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ಚಿಹ್ನೆಯ ಅಡಿ ನಿಂತರೂ ಗೆಲ್ಲಿಸುತ್ತಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ ಸ್ಪರ್ಧೆಗೆ ಒತ್ತಾಯ ಇದೆ ಎಂದರು.

ನಾನು ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ. ಯಾರೂ ನನ್ನನ್ನು ಮಾತನಾಡಿಸಲಿಲ್ಲ. ಡಿಕೆಶಿ ಅವರು ಏನೇನೋ ಮಾತನಾಡುತ್ತಾರೆ. ಅದು ಅವರ ರಾಜಕೀಯ ತಂತ್ರಗಾರಿಕೆ. ಅವರಿಗೆ ಯಾವಾಗ ಏನು ಮಾತಾಡಬೇಕು ಅಂತ ಗೊತ್ತಿದೆ ಎಂದು ಹೇಳಿದರು.

ನನಗೂ ಕುಮಾರಸ್ವಾಮಿಯವರಿಗೂ ಭಿನ್ನಾಭಿಪ್ರಾಯ ಏನಿದೆ? ನಮ್ಮ ಮಧ್ಯೆ ಬಿರುಕು ಮೂಡಿಸುವ ಪ್ರಯತ್ನವನ್ನು ಡಿಕೆಶಿ ಮಾಡ್ತಿದ್ದಾರೆ. ಕುಮಾರಸ್ವಾಮಿ ಅವರು ಮನಸ್ಸು ಬದಲಾಯಿಸಬಹುದು. ಕುಮಾರಸ್ವಾಮಿ ಒಪ್ಪದಿದ್ದರೆ ಮುಂದಿನ ದಾರಿ ನೋಡೋಣ ಎಂದು ತಿಳಿಸಿದರು.

Shwetha M