ಧೋನಿ ಇದ್ದಿದ್ರೆ RCBಗೆ 3 ಕಪ್! – ಪಾಕ್ ಮಾಜಿ ಆಟಗಾರ ಹೀಗಂದಿದ್ಯಾಕೆ?
2025ರಲ್ಲಿ ಯಾರಿಗೆ ಸಿಗುತ್ತೆ ಸಾರಥ್ಯ?

ಧೋನಿ ಇದ್ದಿದ್ರೆ RCBಗೆ 3 ಕಪ್! – ಪಾಕ್ ಮಾಜಿ ಆಟಗಾರ ಹೀಗಂದಿದ್ಯಾಕೆ?2025ರಲ್ಲಿ ಯಾರಿಗೆ ಸಿಗುತ್ತೆ ಸಾರಥ್ಯ?

ಜಗತ್ತೇ ಮೆಚ್ಚಿದಂತಹ ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ. ಯುನಿವರ್ಸಲ್ ಬಾಸ್, ದೈತ್ಯ ದೇಹದ ದಾಂಡಿಗ ಅಂತಾನೇ ಕರೆಸಿಕೊಳ್ಳೋ ಕ್ರಿಸ್ ಗೇಲ್. ನೋ ಹೇಟರ್ಸ್, ಓನ್ಲಿ ಹಿಟ್ಟಿಂಗ್ ಎನ್ನೋ ಎಬಿ ಡಿವಿಲಿಯರ್ಸ್. ಹೊಡಿಬಡಿ ಸೂಪರ್ ಸ್ಟಾರ್ ಗ್ಲೆನ್ ಮ್ಯಾಕ್ಸ್​ವೆಲ್.. ಹೇಳ್ತಾ ಹೋದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ದಿಗ್ಗಜರ ಪಟ್ಟಿಯೇ ಇದೆ. ಇನ್ನು ಫ್ಯಾನ್ಸ್ ಸಪೋರ್ಟ್ ಅಂತೂ ನೆಕ್ಸ್ಟ್​​ ಲೆವೆಲ್​ನಲ್ಲೇ ಇದೆ. ಇಷ್ಟೆಲ್ಲಾ ಇದ್ರೂ ಆರ್​ಸಿಬಿ ಒಂದೇ ಒಂದು ಸಲನೂ ಕಪ್ ಗೆಲ್ಲೋಕೆ ಆಗಿಲ್ಲ. ಬಟ್ ಬೆಂಗಳೂರು ತಂಡಕ್ಕೆ ಅದೊಬ್ಬ ಆಟಗಾರ ಕ್ಯಾಪ್ಟನ್ ಆಗಿದ್ರೆ ಇಷ್ಟೊತ್ತಿಗೆ 3 ಸಲ ಬೆಂಗಳೂರು ಟೀಂ ಚಾಂಪಿಯನ್ ಆಗ್ತಿತ್ತಂತೆ. ಹೀಗಂತ ಹೇಳಿದ್ದು ಯಾರು? ಯಾರು ನಾಯಕ ಆಗ್ಬೇಕಿತ್ತು? 2025ರಲ್ಲಿ ಯಾರಿಗೆ ಸಿಗುತ್ತೆ ಸಾರಥ್ಯ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಟ್ರೋಲ್ ರಾಜ ಪ್ರದೀಪ್ ಈಶ್ವರ್ ನಾಪತ್ತೆ – ‘ಕೈ’ ಪ್ರತಿಭಟನೆಗಳಿಂದ ದೂರ ಉಳಿದಿದ್ದೇಕೆ?

ಈ ಸಲ ಕಪ್ ನಮ್ದೇ. ಆರ್​ಸಿಬಿ ಫ್ಯಾನ್ಸ್ ನಿದ್ದೆಗಣ್ಣಲ್ಲೂ ಹೇಳೋ ಮಾತಿದು. ಕನ್ನಡ ಗೊತ್ತಿಲ್ಲದೇ ಇರೋರ ಬಾಯಲ್ಲೂ ಇದನ್ನ ಕೇಳಿರ್ತೀರಾ. ಯಾರೋ ಯಾಕೆ ಬೆಂಗಳೂರು ಫ್ರಾಂಚೈಸಿಯಲ್ಲಿ ಆಡ್ತಿರೋ ವಿರಾಟ್ ಕೊಹ್ಲಿ ಸೇರಿದಂತೆ ಘಟಾನುಘಟಿ ಪ್ಲೇಯರ್ಸ್ ಕೂಡ ಈ ಸಲ ಕಪ್ ನಮ್ದೇ ಅಂತಾರೆ. ವಿಪರ್ಯಾಸ ಅಂದ್ರೆ ಬೆಂಗಳೂರು ಫ್ರಾಂಚೈಸಿ ಒಂದು ಸಲನಾದ್ರೂ ಕಪ್ ಗೆಲ್ಲಬೇಕು ಅನ್ನೋ ಕೋಟಿ ಕೋಟಿ ಅಭಿಮಾನಿಗಳ ಕನಸು ಈವರೆಗೂ ನನಸಾಗಿಲ್ಲ. ಆದ್ರೆ ಮಹೇಂದ್ರ ಸಿಂಗ್ ಧೋನಿ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿದ್ರೆ ಇಷ್ಟೊತ್ತಿಗೆ 3 ಸಲ ಕಪ್ ಗೆಲ್ಲುತ್ತಿತ್ತು ಅಂತಾ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ಧೋನಿ ಕ್ಯಾಪ್ಟನ್ ಆಗಿದ್ರೆ ಆರ್ ಸಿಬಿ 3 ಸಲ ಚಾಂಪಿಯನ್

ಸತತ 17 ವರ್ಷಗಳಿಂದಲೂ ಐಪಿಎಲ್ ಆಡ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟ್ರೋಫಿ ಎತ್ತಿ ಹಿಡಿಯೋ ಅವಕಾಶ ಸಿಕ್ಕೇ ಇಲ್ಲ. ಕಳೆದ 17 ವರ್ಷಗಳಲ್ಲಿ 3 ಬಾರಿ ಫೈನಲ್ ಪ್ರವೇಶಿಸಿದ್ದ RCB ಅಂತಿಮ ಹಂತದಲ್ಲಿ ಎಡವಿದೆ. ಇದೀಗ ಐಪಿಎಲ್ 2025 ರಲ್ಲಿ ಆರ್​ಸಿಬಿ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ ರಾಯಲ್ ಅಭಿಮಾನಿಗಳು. ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದ್ದರೆ ಕನಿಷ್ಠ 3 ಕಪ್​ಗಳನ್ನಾದರೂ ಗೆಲ್ಲುತ್ತಿತ್ತಂತೆ. ಹೀಗಂದಿದ್ದು ಮಾತ್ಯಾರೂ ಅಲ್ಲ, ಪಾಕಿಸ್ತಾನ ತಂಡದ ಮಾಜಿ ಆಟಗಾರ ವಾಸಿಂ ಅಕ್ರಮ್. ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಾಸಿಂ ಅಕ್ರಮ್, ಆರ್​ಸಿಬಿ ಪ್ರತಿ ಸೀಸನ್​ನಲ್ಲೂ ಉತ್ತಮ ತಂಡವನ್ನೇ ರೂಪಿಸಿದೆ. ಆದರೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ತಂಡವು ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಒಂದು ವೇಳೆ ಆರ್​ಸಿಬಿ ತಂಡವನ್ನು ಮಹೇಂದ್ರ ಸಿಂಗ್ ಧೋನಿ  ಮುನ್ನಡೆಸಿದ್ದರೆ, ಈಗಾಗಲೇ 3 ಕಪ್​ಗಳನ್ನಾದರೂ ಗೆದ್ದಿರುತ್ತಿತ್ತು. ಏಕೆಂದರೆ ಧೋನಿ ಅತ್ಯುತ್ತಮ ನಾಯಕ. ಅವರಿಗೆ ತಂಡವನ್ನು ಯಾವ ಪರಿಸ್ಥಿತಿಯಲ್ಲಿ ಹೇಗೆ ಮುನ್ನಡೆಸಬೇಕೆಂದು ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.

ಮೂರು ಬಾರಿ ಫೈನಲ್ ಪ್ರವೇಶ.. ಟ್ರೋಫಿ ಗೆಲ್ಲಲು ವಿಫಲ!

ಒಂದಲ್ಲ ಎರಡಲ್ಲ ಮೂರ್ಮೂರು ಸಲ ಬೆಂಗಳೂರು ಫ್ರಾಂಚೈಸಿ ಟ್ರೋಫಿಯನ್ನ ಕೂದಲೆಳೆ ಅಂತರದಲ್ಲಿ ಮಿಸ್ ಮಾಡ್ಕೊಂಡಿದೆ. 2009 ರಲ್ಲಿ ಚೊಚ್ಚಲ ಬಾರಿಗೆ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ ಪ್ರವೇಶಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 6 ರನ್​ಗಳಿಂದ ಸೋಲುವ ಮೂಲಕ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕುವ ಅವಕಾಶ ಕಳೆದುಕೊಂಡಿತು. ಇದಾದ ಬಳಿಕ 2011 ರಲ್ಲಿ ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಆರ್​ಸಿಬಿ ಮತ್ತೆ ಫೈನಲ್​​ಗೆ ಪ್ರವೇಶಿಸಿತ್ತು. ಆದ್ರೆ ಆ ಮ್ಯಾಚ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ 58 ರನ್​ಗಳಿಂದ ಸೋತು ಚಾಂಪಿಯನ್​ ಪಟ್ಟಕ್ಕೇರುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದರು. ಇನ್ನು 2016 ರಲ್ಲಿ ಕಿಂಗ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ ಮೂರನೇ ಬಾರಿಗೆ ಫೈನಲ್​ಗೆ ಎಂಟ್ರಿ ಕೊಟ್ಟಿತ್ತು. ಬಟ್ ಇಲ್ಲೂ ಕೂಡ ಫಿನಾಲೆ ಹಣಾಹಣಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ​ಕೇವಲ 8 ರನ್​ಗಳಿಂದ ಪರಾಜಯಗೊಳ್ಳುವ ಮೂಲಕ ಮೂರನೇ ಬಾರಿಗೆ ಟ್ರೋಫಿಯಿಂದ ವಂಚಿತವಾಗಿತ್ತು.

2025ಕ್ಕೆ ಕ್ಯಾಪ್ಟನ್ ಚೇಂಜ್.. ಬದಲಾಗುತ್ತಾ ಲಕ್?

ಹೌದು. ಪ್ರತಿ ವರ್ಷವೂ ಈ ಸಲ ಕಪ್ ನಮ್ದೆ ಅನ್ನೋ ಆರ್​​ಸಿಬಿ ಫೈನಲ್​ಗೆ ಹೋಗದೆ ಬರೋಬ್ಬರಿ 8 ವರ್ಷಗಳು ಕಳೆದಿವೆ. ಕಳೆದ ಸೀಸನ್​ನಲ್ಲೂ ಆರ್​ಸಿಬಿ 14 ಪಂದ್ಯಗಳಲ್ಲಿ ಕೇವಲ 7 ಮ್ಯಾಚ್ ಗೆದ್ದು ಪ್ಲೇ ಆಫ್​ ಪ್ರವೇಶಿಸಿತ್ತು. ಆದ್ರೆ ರಾಜಸ್ತಾನ ರಾಯಲ್ಸ್ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿತ್ತು. ಹೀಗಾಗಿ 2025ರ ಸೀಸನ್​ಗೆ ಶತಾಯ ಗತಾಯ ಕಪ್ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ. ಹೀಗಾಗಿ ತಂಡದ ನಾಯಕತ್ವ ಬದಲಾವಣೆಗೆ ಸಿದ್ಧತೆ ನಡೆದಿದೆ. ಆರ್​ಸಿಬಿ ತಂಡದ ಹಾಲಿ ನಾಯಕ ಫಾಫ್ ಡುಪ್ಲೆಸಿಸ್​ಗೆ ಈಗ 40 ವರ್ಷ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ಪರ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಇತ್ತ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದು, ಮತ್ತೆ ನಾಯಕತ್ವದ ಚರ್ಚೆ ಶುರುವಾಗಿದೆ. ಈ ಹಿಂದೆ ಟೀಮ್ ಇಂಡಿಯಾ ನಾಯಕತ್ವದ ಹೊರೆ ಕಾರಣಕ್ಕೆ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದ ಕೊಹ್ಲಿ ಈಗ ಸಂಪೂರ್ಣ ಫ್ರೀ ಆಗಿದ್ದಾರೆ. ಹಾಗಾಗಿ ಕೊಹ್ಲಿ ಆರ್​ಸಿಬಿ ಪರ ಸಂಪೂರ್ಣ ತೊಡಗಿಸಿಕೊಳ್ಳಬಹುದು. ಮತ್ತೆ ಆರ್​ಸಿಬಿ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಇದರ ಮಧ್ಯೆ ಆರ್​​ಸಿಬಿ ತಂಡದ ಮೆಂಟರ್​​ ಮತ್ತು ಬ್ಯಾಟಿಂಗ್​ ಕೋಚ್​​ ಆಗಿರೋ ದಿನೇಶ್​ ಕಾರ್ತಿಕ್​ ಸ್ಫೋಟಕ ಸುಳಿವು ನೀಡಿದ್ದಾರೆ.

ದಿನೇಶ್ ಕಾರ್ತಿಕ್ ಟ್ವೀಟ್.. ಕೊಹ್ಲಿ ಕ್ಯಾಪ್ಟನ್ ಟ್ರೆಂಡ್!

ಇತ್ತೀಚೆಗಷ್ಟೇ ಕಿಂಗ್ ವಿರಾಟ್ ಕೊಹ್ಲಿ ಕ್ರಿಕೆಟ್ ಕರಿಯರ್​ನಲ್ಲಿ 16 ವರ್ಷ ಪೂರೈಸಿದ್ರು. ಇದಕ್ಕೆ ಸಾಕಷ್ಟು ಕ್ರಿಕೆಟರ್ಸ್ ವಿಶ್ ಮಾಡಿದ್ರು. ಅದ್ರಲ್ಲೂ ಬೆಂಗಳೂರು ತಂಡದ ನೂತನ ಮೆಂಟರ್ ದಿನೇಶ್ ಕಾರ್ತಿಕ್ ಮಾಡಿದ್ದ ಟ್ವೀಟ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ನಿನ್ನೊಂದಿಗೆ ಕ್ರಿಕೆಟ್​​ ಆಡಿದ್ದು ಖುಷಿ ತಂದಿದೆ ಕ್ಯಾಪ್ಟನ್. 16 ವರ್ಷಗಳಾದ್ರೂ ಇನ್ನೂ ಬೆಂಕಿ ಉರಿಯುತ್ತಲೇ ಇದೆ. ಕ್ರಿಕೆಟ್​ನಲ್ಲಿ 16 ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು ಎಂದು ದಿನೇಶ್​ ಕಾರ್ತಿಕ್​​ ಟ್ವೀಟ್​ ಮಾಡಿದ್ದಾರೆ. ಡಿಕೆ ಕ್ಯಾಪ್ಟನ್ ಅಂತಾ​ ಟ್ವೀಟ್ ಮಾಡಿರೋದು​​ ಕೊಹ್ಲಿ ಮತ್ತೆ ಆರ್​​ಸಿಬಿ ಕ್ಯಾಪ್ಟನ್​ ಆಗಬಹುದು ಅನ್ನೋ ಚರ್ಚೆ ಶುರುವಾಗಿದೆ. ಹಾಗಾಗಿ ಆರ್​ಸಿಬಿ ಫ್ಯಾನ್ಸ್​ ಕೊಹ್ಲಿ ಮತ್ತೆ ಆರ್​ಸಿಬಿ ಕ್ಯಾಪ್ಟನ್​ ಎಂದು ಟ್ರೆಂಡ್​ ಮಾಡುತ್ತಿದ್ದಾರೆ. RCB ತಂಡಕ್ಕೆ 9 ವರ್ಷಗಳ ಕಾಲ ಕ್ಯಾಪ್ಟನ್ ಆಗಿದ್ದ ವಿರಾಟ್ 143 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಈ ಪೈಕಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಕೊಹ್ಲಿ ನಾಯಕತ್ವದಲ್ಲೇ ಆರ್​ಸಿಬಿ 2016 ರಲ್ಲಿ ಫೈನಲ್​ಗೆ ಪ್ರವೇಶಿಸಿತ್ತು. ನಂತರ 3 ಬಾರಿ ಪ್ಲೇ ಆಫ್ಸ್ ಆಡಿತ್ತು. ಹೀಗಾಗಿ ಕೊಹ್ಲಿಗೆ ಮತ್ತೆ ನಾಯಕನ ಪಟ್ಟ ನೀಡುವ ಸಾಧ್ಯತೆಯಿದೆ ಎಂದು ಚರ್ಚೆಯಾಗ್ತಿದೆ.

ಐಪಿಎಲ್ ನಿಂದ ಬಿಸಿಸಿಐಗೆ ಭರ್ಜರಿ ಆದಾಯ!

ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಐಪಿಎಲ್. 2023ರ ಐಪಿಎಲ್ ಆವೃತ್ತಿ ಆಯವ್ಯಯ ವರದಿ ಹೊರ ಬಿದ್ದಿದೆ. ಬಿಸಿಸಿಐ 2023ರ ಐಪಿಎಲ್ ಆವೃತ್ತಿಯಿಂದ ಸುಮಾರು 5,120 ಕೋಟಿ ರೂಪಾಯಿ ಆದಾಯ ಗಳಿಸಿದೆ. 2022 ಐಪಿಎಲ್‌ನಲ್ಲಿ ಬಿಸಿಸಿಐ 2,367 ಕೋಟಿ ರೂಪಾಯಿ ಇತ್ತು. ಆದ್ರೆ 2023ರ ಒಟ್ಟು ಆದಾಯ ವರ್ಷದಿಂದ ವರ್ಷಕ್ಕೆ 78% ರಷ್ಟು ಏರಿಕೆಯಾಗಿದೆ. ಅಂದರೆ ಬರೋಬ್ಬರಿ 11,769 ಕೋಟಿ ರೂಪಾಯಿ ಆದಾಯ ಐಪಿಎಲ್​ನಿಂದ ಬಿಸಿಸಿಐ ಗಳಿಸಿದೆ. 11,769 ಕೋಟಿ ಪೈಕಿ ಸುಮಾರು 6,648 ಕೋಟಿ ಐಪಿಎಲ್ ಆಯೋಜನೆಗೆ ಖರ್ಚಾಗಿದೆ. 5,120 ಕೋಟಿ ಆದಾಯ ಬಿಸಿಸಿಐ ಬೊಕ್ಕಸಕ್ಕೆ ಸಂದಿದೆ. ಕೇವಲ ಮಾಧ್ಯಮ ಹಕ್ಕು ಮತ್ತು ಪ್ರಾಯೋಜಕರ ವ್ಯವಹಾರಗಳಿಂದಲೇ ಇಷ್ಟು ಆದಾಯ ಬಂದಿದೆ ಎಂಬುದೇ ವಿಶೇಷ. 2023 ರಿಂದ 27ರವರೆಗಿನ ಲೈವ್​ ಪ್ರಸಾರದ ಹಕ್ಕು 48,390 ಕೋಟಿಗೆ ಸೇಲ್ ಆಗಿದೆ. 2023-27ರ ಐಪಿಎಲ್‌ನ ಟಿವಿ ಹಕ್ಕನ್ನು ಡಿಸ್ನಿ ಸ್ಟಾರ್ 23,575 ಕೋಟಿ ರೂ.ಗೆ ಖರೀದಿಸಿದ್ದು, ವಯಾಕಾಮ್ 18 ಒಡೆತನದ ಜಿಯೋ ಸಂಸ್ಥೆ ಐಪಿಎಲ್‌ ಡಿಜಿಟಲ್ ಹಕ್ಕನ್ನ 23,758 ಕೋಟಿಗೆ ಪಡೆದುಕೊಂಡಿದೆ.

ಒಟ್ನಲ್ಲಿ ಆರ್​ಸಿಬಿ ಒಂದು ಸಲನಾದ್ರೂ ಕಪ್ ಗೆಲ್ಲಲಿ ಅನ್ನೋದು ಕೋಟಿ ಕೋಟಿ ಕನ್ನಡಿಗರ ಮಹದಾಸೆ. ಅದ್ರಲ್ಲೂ ವಿರಾಟ್​ಗೋಸ್ಕರನಾದ್ರೂ ಕಪ್ ಗೆಲ್ಲಲಿ ಅಂತಾ ಫ್ಯಾನ್ಸ್ ಕೇಳಿಕೊಳ್ತಿದ್ದಾರೆ. 2025ರ ಸೀಸನ್​ಗೆ ಬಲಿಷ್ಠ ಸೇನೆ ಜೊತೆ ಕಣಕ್ಕಿಳಿಯೋಕೆ ರೆಡಿಯಾಗ್ತಿರೋ ಫ್ರಾಂಚೈಸಿ ಕಪ್ ಮೇಲೆ ಕಣ್ಣಿಟ್ಟಿದೆ.

Shwetha M