ಛತ್ತೀಸ್‌ಗಢದಲ್ಲಿ ಮತದಾನಕ್ಕೂ ಮುನ್ನ ಐಇಡಿ ಸ್ಫೋಟ – ಮಿಜೋರಾಂ ನಲ್ಲಿ ಕೈಕೊಟ್ಟ EVM

ಛತ್ತೀಸ್‌ಗಢದಲ್ಲಿ ಮತದಾನಕ್ಕೂ ಮುನ್ನ ಐಇಡಿ ಸ್ಫೋಟ – ಮಿಜೋರಾಂ ನಲ್ಲಿ ಕೈಕೊಟ್ಟ EVM

ನವದೆಹಲಿ: ಮಿಜೋರಾಂ ಹಾಗೂ ಛತ್ತೀಸ್‌ಗಢ ವಿಧಾನಸಭೆಗೆ ಇಂದು (ಮಂಗಳವಾರ) ಮೊದಲ ಹಂತದ ಮತದಾನ ಪ್ರಾರಂಭವಾಗಿದೆ. ಛತ್ತೀಸ್‌ಗಢದಲ್ಲಿ ಚುನಾವಣೆಗೂ ಮುನ್ನವೇ ಮಾವೋವಾದಿಗಳು ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಿದ್ದು, ಚುನಾವಣಾ ಕರ್ತವ್ಯದಲ್ಲಿದ್ದ ಕಮಾಂಡೋ ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 20 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಅವುಗಳಲ್ಲಿ ಹಲವು ಕ್ಷೇತ್ರಗಳು ಮಾವೋವಾದಿ ಪೀಡಿತ ಬಸ್ತಾರ್‌ನಲ್ಲಿವೆ. ಮೊದಲ ಹಂತದ ಚುನಾವಣೆಗಾಗಿ 25,000 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಸುಕ್ಮಾದ ತೊಂಡಮಾರ್ಕಾ ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ ಸಿಆರ್‌ಪಿಎಫ್ ಕೋಬ್ರಾ ಬೆಟಾಲಿಯನ್‌ನ ಒಬ್ಬ ಯೋಧ, ಚುನಾವಣಾ ಸಿಬ್ಬಂದಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಾಜಿ ಸಚಿವ, ಬಿಜೆಪಿ ನಾಯಕ ಡಿಬಿ ಚಂದ್ರೇಗೌಡ ನಿಧನ – ಬೊಮ್ಮಾಯಿ, ಬಿಎಸ್ ವೈ ಸಂತಾಪ

ಕೈಕೊಟ್ಟ EVM –ವೋಟ್ ಮಾಡಲಾಗದೇ ಮಿಜೋರಾಂ ಸಿಎಂ ವಾಪಸ್

ಇನ್ನು ಮಿಜೋರಾಂನಲ್ಲೂ ಚುನಾವಣೆ ಆರಂಭವಾದ ಕೆಲವೇ ಹೊತ್ತಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮಿಜೋರಾಂನ ಮುಖ್ಯಮಂತ್ರಿ ಮತದಾನ ಮಾಡಲು ಐಜ್ವಾಲ್‌ನ ಮತಗಟ್ಟೆಯನ್ನು ತಲುಪಿದರೂ ಮತಚಲಾಯಿಸಲಾಗದೆ ವಾಪಸಾಗಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿ ಮತ್ತು ಎಂಎನ್‌ಎಫ್ ಅಧ್ಯಕ್ಷ ಝೋರಂತಂಗ ಅವರು ಚುನಾವಣೆಗೆ ಮತಚಲಾಯಿಸಲು ತೆರಳಿದರೂ ಇವಿಎಂ ಯಂತ್ರ ಕೈಕೊಟ್ಟ ಕಾರಣ ಮತಚಲಾಯಿಸಲಾಗಲಿಲ್ಲ ಎಂದು ತಿಳಿಸಿದ್ದಾರೆ. ಮತಯಂತ್ರ ಕಾರ್ಯನಿರ್ವಹಿಸದ ಕಾರಣ ಕೆಲ ಸಮಯ ಪ್ರಯತ್ನಿಸಿದೆ. ಆದರೆ ಮತಚಲಾಯಿಸಲು ಆಗದೇ ಹೋದ ಕಾರಣ ಬೆಳಗ್ಗೆ ಸಭೆಯ ನಂತರ ನನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಮತಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Shwetha M