ಇದ್ರೆ ನೆಮ್ದಿಯಾಗ್ ಇರ್ಬೆಕು ಕದ್ದ ಮಾಲ್!? – ವಾರೆ ವಾರೆ ಟ್ಯೂನ್ ಕಾಪಿ ಮಾಡಿದ್ರಾ?
ಮತ್ತೆ ನೆಮ್ಮದಿ ಕಳಕೊಂಡ ಅಜನೀಶ್!

ಹಿಂದೆಯೆಲ್ಲಾ ಬೇರೆ ಭಾಷೆಗಳಿಂದ ಹಾಡಿನ ಸಂಗೀತವನ್ನು ಕದಿಯಲಾಗುತ್ತಿತ್ತು. ಆದರೆ ಈಗ ಟ್ರೆಂಡ್ ಬದಲಾಗಿದೆ. ಆಯಾ ಭಾಷೆಯಲ್ಲಿ ಹಿಂದೆ ಬಂದ ಚಿತ್ರಗಳ ಹಾಡನ್ನೇ ಕದಿಯುವ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಈ ಸಾಲಿಗೆ ಅಜನೀಶ್ ಲೋಕನಾಥ್ ಸದ್ಯ ಸೇರಿಕೊಂಡಿದ್ದಾರಾ ಅನ್ನೋ ಮಾತು ಕೇಳಿ ಬರ್ತಿದೆ. ಆದರೆ ಇವರ ಮೇಲೆ ಕೃತಿಚೌರ್ಯದ ಆರೋಪವನ್ನು ಸದ್ಯ ಮತ್ತೊಮ್ಮೆ ಮಾಡಲಾಗುತ್ತಿದೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಮೊನ್ನೆ ಮೊನ್ನೆಯಷ್ಟೇ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಹಾಡು ಬಿಡುಗಡೆಯಾಗಿದೆ. ಇದ್ರೆ ನೆಮ್ದಿಯಾಗ್ ಇರ್ಬೆಕ್” ಎಂಬ ದರ್ಶನ್ ಅವರ ಜನಪ್ರಿಯ ಸಾಲು ಈಗ ಅಭಿಮಾನಿಗಳ ನೆಚ್ಚಿನ ಗೀತೆಯಾಗಿದೆ. ಕೇವಲ ಒಂದೇ ದಿನದಲ್ಲಿ 10 ಮಿಲಿಯನ್ಗಿಂತ ಅಧಿಕ ವೀವ್ಸ್ನ್ನು ಈ ಹಾಡು ಕಂಡ ಹಿನ್ನೆಲೆ ದರ್ಶನ್ ಅವರ ಭಕ್ತಗಣ ಹುಚ್ಚೆದ್ದು ಕುಣಿಯುತ್ತಿದೆ. ಆದರೆ ಇದೇ ಹಾಡು ಕದ್ದ ಮಾಲು ಎನ್ನುವ ವಾದವನ್ನು ಹಲವರು ಸದ್ಯ ಮಾಡುತ್ತಿದ್ದಾರೆ. ಅದಕ್ಕೆ ಬೇಕಾದ ಸಾಕ್ಷಿಯನ್ನು ಕೂಡ ಒದಗಿಸುತ್ತಿದ್ದಾರೆ.
ಹೌದು, 2015ರಲ್ಲಿ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ”ನಾನು ಅವನಲ್ಲ ಅವಳು” ಚಿತ್ರ ತೆರೆಗೆ ಬಂದಿತ್ತು. ಕನ್ನಡದ ಹೆಮ್ಮೆಯ ನಟ ಸಂಚಾರಿ ವಿಜಯ್ ಅಭಿನಯದ ಚಿತ್ರ ಇದು. ಸಂಚಾರಿ ವಿಜಯ್ ಅವರ ಅಭಿನಯಕ್ಕೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. ಅನೂಪ್ ಸೀಳಿನ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಮೂರು ಹಾಡುಗಳು ಮೂಡಿ ಬಂದಿದ್ದವು. ಈ ಮೂರು ಹಾಡುಗಳಿಗೆ ಅರಸು ಅಂತಾರೆ ಅವರ ಸಾಹಿತ್ಯ ಇತ್ತು.
ಹೀಗೆ ಮೂಡಿ ಬಂದ ಮೂರು ಹಾಡುಗಳ ಪೈಕಿ ”ವಾರೆ ವಾರೆ” ಹಾಡು ಕೂಡ ಒಂದು. ಸದ್ಯ ಇದೇ ಹಾಡಿನ ಯಥಾವತ್ತು ನಕಲು ಈ ಇದ್ರೆ ನೆಮ್ದಿಯಾಗ್ ಇರ್ಬೇಕ್ ಹಾಡು ಎನ್ನುವುದು ಹಲವರ ವಾದ. ಈ ಕುರಿತು ಸೋಶೀಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಮಾಡುತ್ತಿರುವ ಅನೇಕರು ”ನಾನು ಅವನಲ್ಲ ಅವಳು” ಚಿತ್ರದ ”ವಾರೆ ವಾರೆ” ಮತ್ತು ”ಇದ್ರೆ ನೆಮ್ದಿಯಾಗ್ ಇರ್ಬೇಕ್” ಹಾಡನ್ನು ಹೋಲಿಕೆ ಮಾಡುತ್ತಿದ್ದಾರೆ. ಎರಡು ಹಾಡುಗಳ ಟ್ಯೂನ್ ಕೇಳಿ ಒಂದೇ ತರ ಇದೆ ಅಂತಿದ್ದಾರೆ.
ಆದರೆ ಎಂದಿನಂತೆ ದರ್ಶನ್ ಅವರ ಅಭಿಮಾನಿಗಳು ಈ ಮಾತನ್ನು ಒಪ್ಪುತ್ತಿಲ್ಲ. ”ವಾರೆ ವಾರೆ” ಹಾಡಿಗೂ ಈ ಹಾಡಿಗೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಹೇಳುತ್ತಿದ್ದಾರೆ. ಒಟ್ನಲ್ಲಿ ಸದ್ಯ ಅಜನೀಶ್ ಲೋಕನಾಥ್ ಅವರ ಸಂಗೀತವನ್ನು ಕಾಂತಾರದ ವರಾಹ ರೂಪಂ ನಂತರ ಮತ್ತೊಮ್ಮೆ ಹಲವರು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಎರಡು ಹಾಡುಗಳನ್ನ ನೀವು ಒಮ್ಮೆ ಕೇಳಿ ಇದ್ರೆ ನೆಮ್ದಿಯಾಗ್ ಇರ್ಬೇಕ್” ಹಾಡು ”ವಾರೆ ವಾರೆ” ಹಾಡು ಒಂದೇನಾ ಅನ್ನೋದ್ದನ್ನ ನೀವೇ ನಿರ್ಧಾರ ಮಾಡಿ.

ನೋಡಿರಿ

