IND ಜೆರ್ಸಿಗೆ PAK ಹೆಸರು ಕಡ್ಡಾಯ – ಚಾಂಪಿಯನ್ಸ್ ಟ್ರೋಫಿಗೆ ICC ಕಟ್ಟಪ್ಪಣೆ
ಫೆಬ್ರವರಿ 19ರಿಂದ ಶುರುವಾಗಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನವನ್ನ ಹೊರತುಪಡಿಸಿ ಉಳಿದೆಲ್ಲಾ ತಂಡಗಳು ತಮ್ಮ ತಮ್ಮ ಸ್ವಾಡ್ ಅನೌನ್ಸ್ ಮಾಡಿವೆ. ಟೀಂ ಇಂಡಿಯಾ ಕೂಡ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ 15 ಜನರ ತಂಡವನ್ನ ಪ್ರಕಟಿಸಿದೆ. ಬಟ್ ಚಾಂಪಿಯನ್ಸ್ ಟ್ರೋಫಿಗಾಗಿ ಬಳಸುವ ಭಾರತದ ಜೆರ್ಸಿ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದೆ. ಅದೇನಪ್ಪಾ ಅಂದ್ರೆ ಚಾಂಪಿಯನ್ಸ್ ಟ್ರೋಫಿ ನಿಮ್ಗೆಲ್ಲಾ ಗೊತ್ತಿರೋ ಹಾಗೇ ಹೈಬ್ರಿಡ್ ಮಾದರಿಯಲ್ಲಿ ನಡೀತಾ ಇದೆ. ಭಾರತದ ಪಂದ್ಯಗಳೆಲ್ಲಾ ದುಬೈನಲ್ಲಿ ನಡೆಯಲಿವೆ. ಹೀಗಾಗಿ ಬಿಸಿಸಿಐ, ಭಾರತದ ಆಟಗಾರರು ಹಾಕುವ ಜೆರ್ಸಿಗಳಲ್ಲಿ ಪಾಕಿಸ್ತಾನದ ಹೆಸರನ್ನ ಪ್ರಿಂಟ್ ಮಾಡಿಸಲ್ಲ ಎಂದಿದೆ. ಇದಕ್ಕೆ ಪಿಸಿಸಿ ಕ್ಯಾತೆ ತೆಗೆದಿದೆ. ಇದೇ ಈಗ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಇಶ್ಯೂ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೂಡ ಎಂಟ್ರಿ ಕೊಟ್ಟಿದೆ.
ಇದನ್ನೂ ಓದಿ : ಇಂಗ್ಲೆಂಡ್ ಚೆಂಡಾಡಲು ಶಮಿ ರೆಡಿ – 14 ತಿಂಗಳ ಜಿದ್ದು ಸ್ಫೋಟವಾಗುತ್ತಾ?
ಚಾಂಪಿಯನ್ಸ್ ಟ್ರೋಫಿ ಆತಿಥ್ಯವನ್ನ ಪಾಕಿಸ್ತಾನ ವಹಿಸಿಕೊಂಡಾಗ್ಲೇ ವಿವಾದಗಳ ಸರಮಾಲೆ ಸೃಷ್ಟಿಯಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ತಿಂಗಳುಗಟ್ಟಲೆ ಮುಂದುವರಿದಿತ್ತು. ಬಿಸಿಸಿಐ ನಾವು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ತೆರಳಿ ಪಂದ್ಯಗಳನ್ನ ಆಡಲ್ಲ ಅಂತಾ ಹಠ ಹಿಡಿದ್ರೆ ಇತ್ತ ಪಾಕಿಸ್ತಾನ ಕೂಡ ಎಲ್ಲಾ ಪಂದ್ಯಗಳೂ ನಮ್ಮಲ್ಲೇ ನಡೆಯಬೇಕು. ಅದೆಂಥಾ ಭದ್ರತೆ ಬೇಕಿದ್ರೂ ಕೊಡ್ತೇವೆ. ಭಾರತವೂ ಪಾಕ್ಗೆ ಬರ್ಬೇಕು ಅಂತಾ ಪಟ್ಟು ಹಿಡಿದಿತ್ತು. ತಿಂಗಳುಗಟ್ಟಲೆ ನಡೆದ ಈ ಹಗ್ಗಜಗ್ಗಾಟಕ್ಕೆ ಕೊನೆಗೂ ಐಸಿಸಿ ಬ್ರೇಕ್ ಹಾಕಿತ್ತು. ಹೈಬ್ರಿಡ್ ಮಾದರಿಯ ರಾಜಿಯೊಂದಿಗೆ ತಗಾದೆಗೆ ತೆರೆ ಬಿದ್ದು, ಪಿಸಿಬಿ ಕೆಲವು ಷರತ್ತುಗಳೊಂದಿಗೆ ಹೈಬ್ರಿಡ್ ಮಾದರಿಯನ್ನ ಒಪ್ಪಿಕೊಳ್ತು. ಅಲ್ಲಿಗೆ ಭಾರತದ ಪಂದ್ಯಗಳೆಲ್ಲಾ ದುಬೈಗೆ ಶಿಫ್ಟ್ ಆಗಿವೆ.
ಸದ್ಯ ಭಾರತ ಮತ್ತು ಪಾಕ್ ನಡುವಿನ ಫ್ರೆಶ್ ಕಾಂಟ್ರವರ್ಸಿ ಅಂದ್ರೆ ಜೆರ್ಸಿ ವಿವಾದ. ನಾರ್ಮಲಿ ಯಾವುದೇ ಐಸಿಸಿ ಟೂರ್ನಿ ನಡೆದಾಗ್ಲೂ ಯಾವ ದೇಶ ಆ ಟೂರ್ನಿಯನ್ನ ಆಯೋಜನೆ ಮಾಡುತ್ತೋ ಆ ದೇಶದ ಹೆಸರನ್ನ ಆ ಟೂರ್ನಿಯಲ್ಲಿ ಭಾಗಿಯಾಗುವ ಪ್ರತಿಯೊಂದು ತಂಡವೂ ತಮ್ಮ ಜೆರ್ಸಿಗಳ ಮೇಲೆ ಮುದ್ರಿಸಬೇಕು. ಯಾವ ಮಾದರಿಯ ಟೂರ್ನಿ, ಯಾವ ವರ್ಷ ಹಾಗೇ ಟೂರ್ನಿ ನಡೆಯುತ್ತಿರೋ ದೇಶದ ಹೆಸರನ್ನ ಪ್ರಿಂಟ್ ಮಾಡಿಸಬೇಕು. ಸೋ ಈಗ ಚಾಂಪಿಯನ್ಸ್ ಟ್ರೋಫಿ ಪಾಕ್ನಲ್ಲಿ ನಡೆಯುತ್ತಿರೋದ್ರಿಂದ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ತಂಡಗಳ ಜೆರ್ಸಿ ಮೇಲೆ ಪಾಕ್ ಹೆಸರನ್ನ ಹಾಕಿಸಿವೆ. ಬಟ್ ಭಾರತ ಇದಕ್ಕೆ ಒಪ್ಪಿಲ್ಲ. ಕಾರಣ ಏನಂದ್ರೆ ಪಾಕಿಸ್ತಾನವೇ ಟೂರ್ನಿ ಆಯೋಜಿಸಿದ್ರೂ ಭಾರತದ ಪಂದ್ಯಗಳೆಲ್ಲಾ ನಡೆಯುತ್ತಿರೋದು ದುಬೈನಲ್ಲಿ. ಹೀಗಾಗಿ ಪಾಕ್ ಹೆಸರನ್ನ ಹಾಕಿಸಲ್ಲ ಎಂದಿದೆ. ಆದ್ರೆ ಇದಕ್ಕೆ ಪಾಕಿಸ್ತಾನ ಒಪ್ತಾ ಇಲ್ಲ. ಟೂರ್ನಿ ಆಯೋಜನೆ ಹಕ್ಕು ನಮ್ಮದೇ ಇದೆ. ಭಾರತ ಪಾಕ್ಗೆ ಬರಲ್ಲ ಎಂದ ಕಾರಣಕ್ಕೆ ಮಾತ್ರ ನಾವು ಹೈಬ್ರಿಡ್ ಮಾದರಿ ಒಪ್ಪಿದ್ದೇವೆ. ಹೀಗಾಗಿ ಅವ್ರ ಜೆರ್ಸಿ ಮೇಲೆ ನಮ್ಮ ರಾಷ್ಟ್ರದ ಹೆಸರು ಇರಲೇಬೇಕು ಎಂದು ಹಠ ಹಿಡಿದಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದು ಇದೀಗ ಐಸಿಸಿ ಮಧ್ಯಪ್ರವೇಶಿಸಿದೆ.
ಇನ್ನು ಭಾರತದ ಮುಂದೆ ಸೋತು ಸೋತು ಸುಣ್ಣವಾಗಿದ್ದ ಪಿಸಿಬಿಗೆ ಜೆರ್ಸಿ ವಿವಾದ ನುಂಗಲಾರದ ತುತ್ತಾಗಿದೆ. ಹಾಗೇನಾದ್ರೂ ಟೀಂ ಇಂಡಿಯಾ ಜೆರ್ಸಿಗಳ ಮೇಲೆ ಪಾಕ್ ಹೆಸರಿಲ್ಲ ಅಂದ್ರೆ ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಮುಜುಗರ ಉಂಟಾಗಲಿದೆ ಅನ್ನೋದನ್ನ ಅರಿತಿದ್ದ ಪಿಸಿಬಿ ಐಸಿಸಿ ಕದ ತಟ್ಟಿದೆ. ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ಆತಿಥ್ಯವನ್ನು ವಹಿಸುವ ಅವಕಾಶವನ್ನು ಪಾಕಿಸ್ತಾನ ಹೊಂದಿದ್ರೂ ಕೂಡ ಪಂದ್ಯಗಳನ್ನ ಪಾಕಿಸ್ತಾನದಿಂದ ದುಬೈಗೆ ಸ್ಥಳಾಂತರಿಸುವಂತೆ ಬಿಸಿಸಿಐ ಐಸಿಸಿಯನ್ನು ಕೋರಿತ್ತು. ಪಾಕಿಸ್ತಾನದಲ್ಲಿ ಟೀಂ ಇಂಡಿಯಾಗೆ ಪಂದ್ಯಗಳನ್ನು ನಿಗದಿಪಡಿಸದಂತೆ ಭಾರತದ ಮನವಿಯನ್ನು ಐಸಿಸಿ ಈಗಾಗಲೇ ಒಪ್ಪಿಕೊಂಡಿದೆ. ಆದ್ರೀಗ ಜೆರ್ಸಿಗಳಲ್ಲೂ ಪಾಕಿಸ್ತಾನದ ಹೆಸರನ್ನ ಹಾಕಿಸದೆ ಬಿಸಿಸಿಐ ಇಲ್ಲೂ ಕೂಡ ರಾಜಕೀಯವನ್ನು ತರುತ್ತಿದೆ, ಇದು ಆಟಕ್ಕೆ ಒಳ್ಳೆಯದಲ್ಲ. ಅವರು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರು. ಉದ್ಘಾಟನಾ ಸಮಾರಂಭಕ್ಕೆ ಟೀಂ ಇಂಡಿಯಾ ನಾಯಕನನ್ನು ಕಳುಹಿಸಲು ಅವರು ಒಪ್ಪೋದಿಲ್ಲ. ಈಗ ತಮ್ಮ ಜೆರ್ಸಿಯ ಮೇಲೆ ಆತಿಥೇಯ ರಾಷ್ಟ್ರದ ಅಂದ್ರೆ ಪಾಕಿಸ್ತಾನ ಹೆಸರನ್ನು ಮುದ್ರಿಸಲು ಒಪ್ಪುತ್ತಿಲ್ಲ. ಬಿಸಿಸಿಐನ ಈ ವಾದಕ್ಕೆ ಐಸಿಸಿ ಅವಕಾಶ ಕೊಡಬಾರದು ಎಂದು ಪಿಸಿಬಿ ಪಟ್ಟು ಹಿಡಿದಿತ್ತು.
ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯಕ್ಕೂ ಮುನ್ನ, ರಾಜಕೀಯ ಕಾರಣಗಳಿಂದಾಗಿ ಭಾರತವು ಚಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರನ್ನು ಹಾಕುವ ಸಾಧ್ಯತೆಯಿಲ್ಲ ಎಂಬ ವರದಿಗಳು ಹೊರ ಬಿದ್ದಾಗಲೇ ವಿವಾದ ಭುಗಿಲೆದ್ದಿದೆ. ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರನ್ನು ಹಾಕಲು ಭಾರತ ಹಿಂದೇಟು ಹಾಕ್ತಿದೆ ಎಂಬ ಚರ್ಚೆಗಳ ಬೆನ್ನಲ್ಲೇ ಐಸಿಸಿ ಮಧ್ಯ ಪ್ರವೇಶಿಸಿದೆ. ಐಸಿಸಿ ಅಧಿಕಾರಿಯೊಬ್ಬರು, ಟೂರ್ನಮೆಂಟ್ ಜೆರ್ಸಿಗಳಲ್ಲಿ ಆತಿಥೇಯ ದೇಶದ ಹೆಸರನ್ನು ಹಾಕುವುದು ಕಡ್ಡಾಯವಾಗಿರುವುದರಿಂದ ಎಲ್ಲಾ ತಂಡಗಳು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಮಾಣಿತ ಬ್ರ್ಯಾಂಡಿಂಗ್ ನಿಯಮಗಳ ಪ್ರಕಾರ, ಭಾರತದಂತಹ ಭಾಗವಹಿಸುವ ತಂಡಗಳು ಟೂರ್ನಮೆಂಟ್ ಲೋಗೋ ಮತ್ತು ಆತಿಥೇಯ ರಾಷ್ಟ್ರದ ಹೆಸರನ್ನು ಮುದ್ರಿಸಲೇಬೇಕು. ಟೂರ್ನಮೆಂಟ್ ಲೋಗೋವನ್ನು ತಮ್ಮ ಜೆರ್ಸಿಗಳಿಗೆ ಸೇರಿಸುವುದು ಪ್ರತಿಯೊಂದು ತಂಡದ ಜವಾಬ್ದಾರಿಯಾಗಿದೆ. ಎಲ್ಲಾ ತಂಡಗಳು ಈ ನಿಯಮವನ್ನು ಪಾಲಿಸುವುದು ಕಂಪಲ್ಸರಿ ಎಂದಿದ್ದಾರೆ.
ಇಷ್ಟು ದಿನ ಪಾಕಿಸ್ತಾನದೊಂದಿಗಿನ ವಿವಾದದಲ್ಲಿ ಬಿಸಿಸಿಐ ಮೇಲುಗೈ ಸಾಧಿಸುತ್ತಲೇ ಬಂದಿದೆ. ಪಿಸಿಬಿ ಎಷ್ಟೇ ಮೊಂಡಾಟ ಮಾಡಿದ್ರೂ ಕೊನೆಗೂ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆ ಮಾಡುವಂತೆ ಮಾಡಿದೆ. ಆದ್ರೀಗ ಜೆರ್ಸಿ ವಿವಾದದಲ್ಲಿ ಹಿನ್ನಡೆಯಾಗುತ್ತಾ ಎನ್ನುವ ಪ್ರಶ್ನೆಗಳು ಮೂಡಿವೆ. ಯಾಕಂದ್ರೆ ಜೆರ್ಸಿ ಮೇಲೆ ಲೋಗೋಗಳ ಜೊತೆ ಆತಿಥೇಯ ರಾಷ್ಟ್ರದ ಹೆಸರನ್ನ ಹಾಕಿಸೋದು ಕಡ್ಡಾಯ ಎಂದು ಐಸಿಸಿ ಹೇಳಿದೆ. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಆದೇಶದಂತೆ ಪಾಕಿಸ್ತಾನ ಹೆಸರನ್ನ ಮುದ್ರಿಸಬೇಕೋ ಅಥವಾ ಐಸಿಸಿ ಮನವೊಲಿಸಬೇಕೋ ಎಂಬ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಮುಂದೆ ಭಾರತ ಏನ್ ಮಾಡುತ್ತೆ ಎನ್ನುವ ಕುತೂಹಲ ಕೂಡ ಜೋರಾಗಿದೆ.
ಹೀಗೆ ಚಾಂಪಿಯನ್ಸ್ ಟ್ರೋಫಿ ಗದ್ದಲ ನಿಲ್ಲುವ ಲಕ್ಷಣಗಳೇ ಕಾಣ್ತಿಲ್ಲ. ಇದೆಲ್ಲದ್ರ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಟೂರ್ನಿ ಉದ್ಘಾಟನಾ ಸಮಾರಂಭಕ್ಕೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬ ಸುದ್ದಿ ಹೊರ ಬಿದ್ದಿದೆ. ಟೂರ್ನಿ ಆರಂಭಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿಯ ಫೋಟೋಶೂಟ್‌ಗಾಗಿ ಎಲ್ಲಾ ತಂಡದ ನಾಯಕರು ಪಾಕಿಸ್ತಾನಕ್ಕೆ ಹೋಗಲಿದ್ದಾರೆ. ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾಹೋಗುವ ಬಗ್ಗೆ ಪಾಕಿಸ್ತಾನ ಮಾಧ್ಯಮಗಳಲ್ಲಿ ವರದಿಗಳಾಗಿದ್ದವು. ಆದ್ರೆ ಎರಡು ರಾಷ್ಟ್ರಗಳ ನಡುವೆ ವಿವಾದಗಳು ಹೆಚ್ಚುತ್ತಿರುವ ಕಾರಣದಿಂದಾಗಿ ರೋಹಿತ್ ಶರ್ಮಾರನ್ನ ಪಾಕಿಸ್ತಾನಕ್ಕೆ ಕಳಿಸಲು ಬಿಸಿಸಿಐ ನಿರಾಕರಿಸಿದೆ ಎನ್ನಲಾಗಿದೆ.