ಬಿಲ್ಡಪ್ ಬಾಂಗ್ಲಾಗೆ ಬ್ಯಾನ್ ಭೀತಿ – T-20 ವಿಶ್ವಕಪ್ ಬಹಿಷ್ಕಾರಕ್ಕೆ ಶಿಕ್ಷೆ?
ಚುನಾವಣೆ ಅಕ್ರಮದ ಘಾಟು ಎದ್ದಿದ್ದೇಕೆ?

ಟಿ-20 ವಿಶ್ವಕಪ್ ಬಹಿಷ್ಕಾರ ಮಾಡಿ ಪಾಕಿಸ್ತಾನ ವಿರುದ್ಧ ಏಕದಿನ ಸರಣಿ ಗೆದ್ದು ಹಿರಿ ಹಿರಿ ಹಿಗ್ಗಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಈಗ ಬ್ಯಾನ್ ಭೀತಿ ಶುರುವಾಗಿದೆ. ಯಾಕಾದ್ರೂ ಟಿ-20 ವಿಶ್ವಕಪ್ ಆಡಲ್ಲ ಅಂದ್ವೋ ಅಂತಾ ಕೈಕೈ ಹಿಸುಕಿಕೊಳ್ತಿದ್ದಾರೆ. ಯಾಕಂದ್ರೆ ಬಿಸಿಬಿ ವಿರುದ್ಧ ಅಲ್ಲಿನ ಕ್ರೀಡಾಸಚಿವರೇ ತಿರುಗಿ ಬಿದ್ದಿದ್ದಾರೆ. ಟಿ-20 ವಿಶ್ವಕಪ್ ಆರಂಭದಲ್ಲಿ ಬಾಂಗ್ಲಾದೇಶ ನಾವು ಭಾರತಕ್ಕೆ ಬಂದು ಪಂದ್ಯಗಳನ್ನ ಆಡಲ್ಲ ಎಂದಿದ್ರು. ಐಪಿಎಲ್ನಿಂದ ಮುಸ್ತಫಿಜುರ್ ರೆಹಮಾನ್ರನ್ನ ಕೈಬಿಟ್ಟಿದ್ದಕ್ಕೆ ಈ ನಿರ್ಧಾರಕ್ಕೆ ಬಂದಿದ್ರು. ಬಾಂಗ್ಲಾ ಹೊರಬಂದ್ಮೇಲೆ ಸ್ಕಾಟ್ಲ್ಯಾಂಡ್ ತಂಡಕ್ಕೆ ಚಾನ್ಸ್ ಸಿಕ್ಕಿತ್ತು. ಆರಂಭದಲ್ಲಿ ನಾವು ಬಾಂಗ್ಲಾ ಜೊತೆಗೇ ಇರ್ತೇವೆ ಅಂದಿದ್ದ ಪಾಕಿಸ್ತಾನ ಕೂಡ ಆಮೇಲೆ ಸೈಲೆಂಟಾಗಿ ಟೂರ್ನಿ ಆಡಿ ಸೂಪರ್ 8 ಸುತ್ತಲ್ಲೇ ಟಾಟಾ ಬೈ ಬೈ ಹೇಳಿ ಹೋಗಿದ್ರು. ಆಮೇಲೆ ಪವರ್ಫುಲ್ ಪ್ರದರ್ಶನ ನೀಡಿ ಭಾರತ ಮತ್ತೆ ಚಾಂಪಿಯನ್ ಪಟ್ಟಕ್ಕೂ ಏರಿದೆ. ಸೋ ಇದೆಲ್ಲಾ ಸದ್ಯಕ್ಕೆ ಮುಗಿದೋದ ಅಧ್ಯಾಯ. ಆದ್ರೆ ಬಾಂಗ್ಲಾ ಪಾಲಿಗೆ ಎಂದೂ ಮುಗಿಯದ ಅಧ್ಯಾಯ ಆಗೋಗಿದೆ.
ಇದನ್ನೂ ಓದಿ : HITಮ್ಯಾನ್ ಇದ್ರಷ್ಟೇ MIಗೆ ಲಕ್ – ಮೈದಾನದಲ್ಲಿದ್ರೆ ಗೆಲ್ಲುತ್ತಾ ಮುಂಬೈ?
ವಿಶ್ವಕಪ್ ನಿಂದ ಹಿಂದೆ ಸರಿದಿದ್ದು ರಾಜತಾಂತ್ರಿಕ ದೋಷ ಎಂದ ಸಚಿವರು!
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ ಹಿಂದೆ ಸರಿದಿದ್ದು ಒಂದು ದೊಡ್ಡ ರಾಜತಾಂತ್ರಿಕ ಪ್ರಮಾದ ಎಂದು ಅಲ್ಲಿನ ಕ್ರೀಡಾ ಸಚಿವ ಅಮಿನುಲ್ ಹಖ್ ಹೇಳಿದ್ದಾರೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ಎರಡನೇ ಸಮಿತಿಯೊಂದನ್ನು ರಚಿಸುವುದಾಗಿ ಘೋಷಿಸಿದ್ದಾರೆ. ವಿಶ್ವಕಪ್ ಬಹಿಷ್ಕಾರ ಮಾಡೋ ನಿರ್ಧಾರಗಳನ್ನ ಹೇಗೆ ತೆಗೆದುಕೊಂಡ್ರು. ಇದು ದೇಶದ ಕ್ರೀಡಾ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಈ ಸಮಿತಿ ಪರಿಶೀಲಿಸಲಿದೆ. ಈ ಬಗ್ಗೆ ಮಾತ್ನಾಡಿರೋ ಅಮಿನುಲ್ ಹಖ್, ನಮ್ಮ ಕ್ರೀಡಾ ರಾಜತಾಂತ್ರಿಕತೆಯಲ್ಲಿ ಎಲ್ಲಿ ತಪ್ಪಾಗಿದೆ ಅನ್ನೋದು ಗೊತ್ತಾಗ್ಬೇಕು. ಭವಿಷ್ಯದಲ್ಲಿ ಇನ್ಮುಂದೆ ಇಂಥಾ ದೊಡ್ಡ ತಪ್ಪುಗಳು ಆಗದಂತೆ ನೋಡಿಕೊಳ್ಬೇಕು. ಇದು ನಮ್ಮ ಜವಾಬ್ದಾರಿ. ವಿಶ್ವಕಪ್ ವಿವಾದದ ಜೊತೆಗೆ, ಕಳೆದ ವರ್ಷ ನಡೆದ ಬಿಸಿಬಿ ಚುನಾವಣೆಯಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ಸಚಿವಾಲಯ ತನಿಖೆ ನಡೆಸುತ್ತಿದೆ ಅನ್ನೋ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಚುನಾವಣೆ ಹಸ್ತಕ್ಷೇಪ ಸಾಬೀತಾದ್ರೆ ಬಿಸಿಬಿ ಬ್ಯಾನ್ ಆಗುತ್ತಾ?
ಬಾಂಗ್ಲಾದೇಶದ ಮಾಜಿ ಕ್ಯಾಪ್ಟನ್ ತಮೀಮ್ ಇಕ್ಬಾಲ್ ಮತ್ತು ಕೆಲವು ಕ್ಲಬ್ ಪದಾಧಿಕಾರಿಗಳು ಸೇರಿ ಕಳೆದ ಬಾರಿ ಬಿಸಿಬಿ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪವಿದೆ. ನಾಮಪತ್ರ ಸಲ್ಲಿಸುವ ವೇಳೆ ಹಲವು ಬಾರಿ ಬದಲಾಯಿಸಿದ್ದು ಅನುಮಾನಗಳಿಗೆ ಕಾರಣವಾಗಿದೆ. ತನಿಖಾ ಸಮಿತಿಯು 15 ಕೆಲಸದ ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. ಈ ವರದಿ ಬಂದ ನಂತರ, ಕ್ರೀಡಾ ಸಚಿವರು ಐಸಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಕ್ರಿಕೆಟ್ ಮಂಡಳಿಗಳಲ್ಲಿ ಸರ್ಕಾರದ ಹಸ್ತಕ್ಷೇಪ ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ. ಹಾಗೇನಾದ್ರೂ ಇದು ಸಾಬೀತಾದ್ರೆ ಬ್ಯಾನ್ ಮಾಡುವಂಥ ರೈಟ್ಸ್ ಐಸಿಸಿಗೆ ಇದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡ್ತಿರೋ ಸಮಿತಿಯು ಬೋರ್ಡ್ ಪದಾಧಿಕಾರಿಗಳು, ಸಿಇಒ ಮತ್ತು ಜಿಲ್ಲಾ ಆಡಳಿತಾಧಿಕಾರಿಗಳಿಂದ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಒಟ್ನಲ್ಲಿ ವಿಶ್ವಕಪ್ ಮುಗ್ದು ವಾರ ಕಳೆದು ಎಲ್ಲಾ ತಂಡಗಳು ಸರಣಿ, ಲೀಗ್ಸ್ ಅಂತಾ ಬ್ಯುಸಿಯಾಗಿದ್ರೆ ವಿಶ್ವಕಪ್ನೇ ಆಡದ ಬಾಂಗ್ಲಾ ಬುಡಕ್ಕೆ ಬೆಂಕಿ ಬಿದ್ದಿದೆ.

ನೋಡಿರಿ

