ಗೆಳತಿ ಮೇಲೆ ಕಾರು ಹರಿಸಿ ಕೈ, ಕಾಲು ಮುರಿದ ಐಎಎಸ್ ಅಧಿಕಾರಿ ಮಗ – ಹೋಟೆಲ್ ಮುಂದೆಯೇ ನಡೆದಿತ್ತು ಅಮಾನುಷ ಕೃತ್ಯ
ಸ್ನೇಹ ಎಂದರೆ ನಿನಗೆ ನಾನು, ನನಗೆ ನೀನು ಎಂದು ಬದುಕುವುದು. ಯಾವುದೇ ನಿಸ್ವಾರ್ಥ ಇರಬಾರದು ಎನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾರ್ಥವೇ ತುಂಬಿ ಹೋಗಿದೆ. ಸಣ್ಣ ಪುಟ್ಟ ವಿಚಾರಗಳಿಗೂ ಮನಸ್ತಾಪ ಮಾಡಿಕೊಂಡು ದೂರಾಗುತ್ತಾರೆ. ಹೀಗೆ ದೂರಾದರೆ ಪರವಾಗಿಲ್ಲ. ಆದರೆ ಆ ದ್ವೇಷದಿಂದ ಮಾಡುವ ಅನಾಹುತಗಳು ಮಾತ್ರ ಆತಂಕಕ್ಕೀಡು ಮಾಡುತ್ತವೆ. ಸದ್ಯ ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣದಿಂದ ಗೆಳೆಯನೇ ತನ್ನ ಗೆಳತಿಯ ಮೇಲೆ ಕಾರು ಹರಿಸಿ ಆಕೆಯ ಕೈ, ಕಾಲು ಮುರಿದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಪ್ರಿಯಾ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಿಯಾ ಸಿಂಗ್ ಮೇಲೆ ಕಾರು ಹರಿಸಿದ ಬಾಯ್ ಫ್ರೆಂಡ್ ಅನ್ನು ಅಶ್ವಜಿತ್ ಗಾಯಕವಾಡ್ ಎನ್ನಲಾಗಿದೆ. ಥಾಣೆಯ ಕಾಸರವಾಡವಲ್ಲಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಿಯಾ ಸಿಂಗ್ FIR ದಾಖಲಿಸಿದ್ದಾರೆ. ಗಾಯಾಳು ಪ್ರಿಯಾ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದರು. ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಆಗಿರುವ ಪ್ರಿಯಾ ಸಿಂಗ್ ಪರಿಚಯ ಮಾಡಿಕೊಂಡಿದ್ದ ಅಶ್ವಜಿತ್ ಗಾಯಕವಾಡ್ ಸ್ನೇಹಿತನಾಗಿದ್ದ. ಅಶ್ವಜಿತ್ ಗಾಯಕವಾಡ್ ಅವರ ತಂದೆ ಅನಿಲ್ ಗಾಯಕವಾಡ್ IAS ಆಫೀಸರ್ ಆಗಿದ್ದು, ಮಹಾರಾಷ್ಟ್ರದ ಸಾರಿಗೆ ನಿಗಮದಲ್ಲಿ ಜಂಟಿ ಎಂಡಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ : ಕೆಜಿಎಫ್‌ಗಿಂತ ಐದು ಪಟ್ಟು ದೊಡ್ಡದು ಸಲಾರ್! – ಏನಿದು ಸಿನಿಮಾ ಹೊಸ ಸಮಾಚಾರ!
ಡಿಸೆಂಬರ್ 11ರಂದು ಈ ಘಟನೆ ನಡೆದಿದೆ. ಹೋಟೆಲ್ ತೆರಳಿದ್ದ ಇಬ್ಬರು ಹೊರ ಬಂದಿದ್ದಾರೆ. ಈ ವೇಳೆ ಅಶ್ವಜಿತ್ ಗಾಯಕವಾಡ್ ಹಾಗೂ ಪ್ರಿಯಾ ಸಿಂಗ್ ನಡುವೆ ಗಲಾಟೆ ನಡೆದಿದೆ. ಆಗ ಪ್ರಿಯಾ ಸಿಂಗ್ ಮೇಲೆ ಅಶ್ವಜಿತ್ ಗಾಯಕವಾಡ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಆರೋಪಿಯ ಕಾರಿನಿಂದ ಪ್ರಿಯಾ ಸಿಂಗ್ ತನ್ನ ಬ್ಯಾಗ್ ತರಲು ಹೋಗಿದ್ದಾರೆ. ಈ ವೇಳೆ ಪ್ರಿಯಾ ಸಿಂಗ್ ಮೇಲೆ ಅಶ್ವಜಿತ್ ಸ್ನೇಹಿತ ಕಾರ್ ಹರಿಸಿದ್ದಾನಂತೆ. ಅಶ್ವಜಿತ್ ಗಾಯಕ್‌ವಾಡ್ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಪ್ರಿಯಾ ಸಿಂಗ್ ಮೇಲೆ ಕಾರು ಹರಿಸಿ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಿಯಾ ಸಿಂಗ್ ಮೇಲೆ ಕಾರು ಹರಿಸಿದ್ದರಿಂದ ಅವರ ಹೊಟ್ಟೆ, ಕೈ, ಕಾಲುಗೆ ಗಂಭೀರ ಗಾಯಗಳಾಗಿದೆ. ಬಲಗಾಲು ಮುರಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾನು ಕಂಪ್ಲೇಂಟ್ ಕೊಟ್ಟರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದ ಪ್ರಿಯಾ ಸಿಂಗ್ ಅವರು ಆರೋಪಿಸಿದ್ದಾರೆ. ಈ ಆರೋಪವನ್ನು ಅಶ್ವಜಿತ್ ಗಾಯಕವಾಡ್ ನಿರಾಕರಿಸಿದ್ದಾರೆ. ಪ್ರಿಯಾ ಸಿಂಗ್ ನನ್ನ ಸ್ನೇಹಿತೆ ಮಾತ್ರ, ಆಕೆ ಗರ್ಲ್ ಫ್ರೆಂಡ್ ಅಲ್ಲ. ಆಕೆಯೇ ನನ್ನೊಂದಿಗೆ ಬಲವಂತವಾಗಿ ಮಾತನಾಡಲು ಯತ್ನಿಸಿದ್ದಳು. ನನ್ನ ಸ್ನೇಹಿತರ ಮೇಲೆ ಆಕೆಯೇ ಹಲ್ಲೆ ಮಾಡಿದ್ದಾಳೆ. ಈ ಅಪಘಾತ ಆಕಸ್ಮಿಕವಾಗಿದ್ದು ಉದ್ದೇಶಪೂರ್ವಕವಲ್ಲ ಎಂದಿದ್ದಾರೆ. ಆದ್ರೆ ಆರೋಪಿ ಐಎಎಸ್ ಅಧಿಕಾರಿಯ ಮಗ ಅನ್ನೋ ಕಾರಣಕ್ಕೆ ಪೊಲೀಸರು ಆತನನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.