ಮಗಳ ಸಾವಿಗೆ ನ್ಯಾಯ ಸಿಗೋವರೆಗೂ ಹೋರಾಟಗಳಲ್ಲಿ ಭಾಗಿಯಾಗುತ್ತೇನೆ – ಸೌಜನ್ಯ ತಾಯಿ ಕುಸುಮಾವತಿ
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯಕ್ಕಾಗಿ ಹೋರಾಟಗಳು ಮುಂದುವರಿದಿವೆ. ಪ್ರಕರಣವನ್ನು ಮರುತನಿಖೆ ನಡೆಸಬೇಕು ಎಂದು ಬೆಳ್ತಂಗಡಿಯ ಗಡಿ ದಾಟಿ ಈಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲೂ ಬೃಹತ್ ಹೋರಾಟ ನಡೆದಿದೆ. ವಾಹನ ಜಾಥಾ, ಕಾಲ್ನಡಿಗೆ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಸಾಮಾನ್ಯ ಜನ ಒಂದಾಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡಬಾರದು ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ನಿಂತಿಕಲ್ಲಿನಿಂದ ಸುಳ್ಯದವರೆಗೆ ಸುಮಾರು 22 ಕಿಲೋಮೀಟರ್ ಬೃಹತ್ ವಾಹನ ಜಾಥಾ ನಡೆಸಿದ್ದಾರೆ. ಬಳಿಕ ಸುಳ್ಯದಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ಬೃಹತ್ ಸಭೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಕುಸುಮಾವತಿ ನನ್ನ ಮಗಳ ಸಾವಿಗೆ ನ್ಯಾಯ ಸಿಗೋವರೆಗೂ ಎಲ್ಲಾ ಹೋರಾಟಗಳಲ್ಲೂ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಲಂಚದ ಪತ್ರ ಆರೋಪ – ಸಿಐಡಿ ತನಿಖೆ ನಡೆಸಲು ಸರ್ಕಾರ ತೀರ್ಮಾನ
ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ 11 ವರ್ಷಗಳಿಂದ ನಾವು ನ್ಯಾಯದ ಭಿಕ್ಷೆಯನ್ನ ಕೇಳುತ್ತಿದ್ದೇವೆ. ನಾವು ಮಹಿಳೆಯರನ್ನು ಮಾತೇ ಮಾತೇ ಅಂತೇವೆ. ಈ ದೇಶ ಭಾರತಮಾತೆ ಹೆಸರಲ್ಲಿದೆ. ಆ ಮಾತೆಯ ರಕ್ಷಣೆ ನಮ್ಮಿಂದ ಆಗಲ್ಲ ಅಂತಾ ಹೇಳಿದ್ರೆ ನಾವು ಯಾರತ್ರ ನ್ಯಾಯ ಕೇಳ್ಬೇಕು ಎಂದು ಪ್ರಶ್ನಿಸಿದ್ದಾರೆ.
ಇನ್ನು ಹೋರಾಟದ ಬಳಿಕ ಸೌಜನ್ಯ ಸಾವಿನ ನ್ಯಾಯಕ್ಕೆ ಆಗ್ರಹಿಸಿ ಉಪತಹಶೀಲ್ದಾರ್ಗೆ ಮಹೇಶ್ ಶೆಟ್ಟಿ ಹಾಗೂ ಕುಸುಮಾವತಿ ಮನವಿ ಪತ್ರ ಸಲ್ಲಿಸಿದ್ದಾರೆ. ಸೌಜನ್ಯ ಪ್ರಕರಣವನ್ನ ಮರುದಾಖಲಿಸಿಕೊಂಡು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.