ತಂದೆಯಿಂದಲೇ ಲೈಂಗಿಕ ಕಿರುಕುಳ.. ತಾಯಿಯೂ ನಂಬುತ್ತಿರಲಿಲ್ಲ! – ಕರಾಳ ಕಥೆ ಬಿಚ್ಚಿಟ್ಟ ನಟಿ ಖುಷ್ಬೂ
ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆಯಾಗಿ ನಾಮನಿರ್ದೇಶನಗೊಂಡಿರುವ ನಟಿ-ರಾಜಕಾರಣಿ ಖುಷ್ಬೂ ಸುಂದರ್ ಅವರು ತಮ್ಮ ಲೈಂಗಿಕ ದೌರ್ಜನ್ಯದ ಕಥೆಯನ್ನು ಹಂಚಿಕೊಂಡಿದ್ದಾರೆ. ತನ್ನ ಎಂಟನೇ ವಯಸ್ಸಿನಿಂದ ತನ್ನ ತಂದೆಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಮತ್ತು ತನಗೆ 15 ವರ್ಷವಾಗುತ್ತಿದ್ದಂತೆ ಆತನ ವಿರುದ್ಧ ಧ್ವನಿಯೆತ್ತಲು ಆರಂಭಿಸಿದೆ ಅಂತಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ ನೋಡಿ ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ! – ಆಮೇಲೆ ನಡೆದಿದ್ದು ಭಯಾನಕ
ಇತ್ತೀಚೆಗೆ ನಡೆದಿರುವ ಸಂದರ್ಶನವೊಂದರಲ್ಲಿ ಖುಷ್ಬೂ ತಮಗಾದ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. ಬಾಲ್ಯದಲ್ಲಿ ಏನಾದರೂ ದೌರ್ಜನ್ಯ ನಡೆದರೆ ಮಕ್ಕಳು ಅದನ್ನು ಜೀವನಪರ್ಯಂತ ನೆನಪಿಟ್ಟುಕೊಳ್ಳುತ್ತಾರೆ. ಅದು ಹುಡುಗ ಆಗಿರಬಹುದು ಅಥವಾ ಹುಡುಗಿ ಆಗಿರಬಹುದು. ನನ್ನ ತಾಯಿಯ ಸಾಂಸಾರಿಕ ಜೀವನ ತುಂಬ ಕೆಟ್ಟದಾಗಿತ್ತು. ಬಹುಶಃ ಪುರುಷ ತನ್ನ ಪತ್ನಿ, ಮಗಳಿಗೆ ಹೊಡೆಯೋದು ಜನ್ಮಸಿದ್ಧ ಹಕ್ಕು ಎಂದುಕೊಂಡಿರಬಹುದು. ನನಗೆ 8ನೇ ವಯಸ್ಸಿದ್ದಾಗ ದೌರ್ಜನ್ಯ ಶುರುವಾಗಿದ್ದು, ನಾನು 15ನೇ ವಯಸ್ಸಿಗೆ ಅದರ ವಿರುದ್ಧ ಮಾತನಾಡಲು ಆರಂಭಿಸಿದೆ ಎಂದು ಖುಷ್ಬೂ ಸುಂದರ್ ಹೇಳಿದ್ದಾರೆ.
ನಾನು ನನ್ನ ಮೇಲೆ, ತಾಯಿ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಆರಂಭಿಸಿದ್ದೆ. ಆದರೆ ಇದರಿಂದ ಇನ್ನೊಂದಿಷ್ಟು ಸಮಸ್ಯೆ ಆಗುತ್ತೆ ಅಂತ ಕುಟುಂಬಸ್ಥರು ನನ್ನ ಬಾಯಿ ಮುಚ್ಚಿಸಿದರು ಎಂದು ಹೇಳಿದ್ದಾರೆ.
ನನ್ನ ಮೇಲೆ ಏನಾಗುತ್ತಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಲು ನನ್ನ ತಾಯಿಗೂ ಸಾಧ್ಯವಾಗಿಲ್ಲ. ಏಕೆಂದರೆ ನನ್ನ ಪತಿಯೇ ದೇವರು ಎಂದು ನಂಬಿಕೊಂಡಿದ್ದಳು. ನನಗೆ 15 ವರ್ಷವಾಗುತ್ತಿದ್ದಂತೆ ನನ್ನ ತಂದೆ ವಿರುದ್ಧ ಧ್ವನಿ ಎತ್ತಲು ಶುರುಮಾಡಿದೆ. ನನಗೆ 16 ತುಂಬಿರಲಿಲ್ಲ, ಆಗಲೇ ನನ್ನ ತಂದೆ ನಮ್ಮ ಬಳಿ ಇರೋದನ್ನೆಲ್ಲ ತೆಗೆದುಕೊಂಡು ಮನೆ ಬಿಟ್ಟು ಹೋದರು. ನಮ್ಮ ಮುಂದಿನ ಊಟ ಎಲ್ಲಿಂದ ಬರುತ್ತದೆ ಅಂತಾ ಕೂಡ ಗೊತ್ತಿರಲಿಲ್ಲ. ನಂತರದ ದಿನಗಳಲ್ಲಿ ಹೆಚ್ಚು ಧೈರ್ಯ ಬಂತು. ತಪ್ಪಿನ ವಿರುದ್ಧ ಮಾತನಾಡಲು ಆರಂಭಿಸಿದೆ ಅಂತಾ ಖುಷ್ಬೂ ತಮ್ಮ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ.