ಸ್ನಾನ ಮುಗಿಸಿ ರೆಸ್ಟ್ ಮಾಡಲು ಸಾಧ್ಯವಾಗಿಲ್ಲ – ಅಂದು ಕಪಿಲ್ ದೇವ್, ಇಂದು ಕನ್ನಡಿಗ ಕೆ.ಎಲ್ ರಾಹುಲ್..!

ಸ್ನಾನ ಮುಗಿಸಿ ರೆಸ್ಟ್ ಮಾಡಲು ಸಾಧ್ಯವಾಗಿಲ್ಲ – ಅಂದು ಕಪಿಲ್ ದೇವ್, ಇಂದು ಕನ್ನಡಿಗ ಕೆ.ಎಲ್ ರಾಹುಲ್..!

ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತಕ್ಕೆ ಗೆಲುವಿನ ಸಿಹಿ ನೀಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಪಂದ್ಯದ ನಂತರ ಕೆಲವೊಂದು ವಿಷಯ ಹೇಳಿದರು. ಆಸ್ಟ್ರೇಲಿಯಾ ವಿರುದ್ಧ ವಿಕೆಟ್ ಕೀಪಿಂಗ್ ಮಾಡಿ ಕೆ.ಎಲ್ ರಾಹುಲ್ ಸ್ನಾನಕ್ಕೆ ಹೋಗಿದ್ದರು. ಸ್ನಾನ ಮಾಡಿ ಸ್ವಲ್ಪ ಹೊತ್ತು ರೆಸ್ಟ್ ಮಾಡುವ ಯೋಚನೆಯಲ್ಲಿದ್ದರು. ಆದರೆ, ಸ್ನಾನ ಮಾಡಿ ಬಂದ ತಕ್ಷಣವೇ ಫೀಲ್ಡಿಗೆ ಎಂಟಿ ಕೊಡಬೇಕಾಯ್ತು ಎಂಬ ಮಾತನ್ನು ಸ್ವತಃ ಕೆ.ಎಲ್ ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತ ಶುಭಾರಂಭ – ಕಿಂಗ್ ಕೊಹ್ಲಿ ಜೊತೆ ಕನ್ನಡಿಗ ಕೆ.ಎಲ್ ರಾಹುಲ್ ಜೊತೆಯಾಟದ ಮೆರುಗು

ಅಜೇಯ 97 ರನ್‌ ಹೊಡೆದ ಕೆ.ಎಲ್ ರಾಹುಲ್ ಮೊದಲ ವಿಶ್ವಕಪ್ ಮ್ಯಾಚ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಕನ್ನಡಿಗರಿಗೂ ಹೆಮ್ಮೆಯ ವಿಚಾರವೇ. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ರಾಹುಲ್, ತಮ್ಮ ಸ್ಮರಣೀಯ ಇನ್ನಿಂಗ್ಸ್ ಬಗ್ಗೆ ಹಾಗೂ ಆರಂಭಿಕ ಆಘಾತದ ಬಗ್ಗೆ ಮೌನ ಮುರಿದಿದ್ದಾರೆ. ‘ನಾನು ಆಸೀಸ್ ಇನ್ನಿಂಗ್ಸ್ ಮುಗಿದ ಬಳಿಕ ಸ್ನಾನ ಮುಗಿಸಿ ಆಗ ತಾನೇ ಹೊರಬಂದಿದ್ದೆ. ಈ ಬಾರಿ ಕನಿಷ್ಠ ಅರ್ಧ ಗಂಟೆಯಾದರೂ ವಿಶ್ರಾಂತಿ ಪಡೆಯೋಣ ಎಂದುಕೊಂಡಿದ್ದೆ. ಆದರೆ ಸಾಧ್ಯವಾಗಲಿಲ್ಲ’ ಎಂದು ರಾಹುಲ್ ಹೇಳಿದ್ದಾರೆ. ಮಾತು ಮುಂದುವರೆಸಿದ ರಾಹುಲ್, ಈ ವೇಳೆ ನನಗೆ ಸಲಹೆ ನೀಡಿದ ವಿರಾಟ್ ಸ್ವಲ್ಪ ಸಮಯದವರೆಗೆ ಟೆಸ್ಟ್ ಕ್ರಿಕೆಟ್ ಆಡುವಂತೆ ಹೇಳಿದರು. ನಾನು ಅದನ್ನು ಮಾಡಿದೆ. ತಂಡಕ್ಕಾಗಿ ಇಂತಹ ಇನಿಂಗ್ಸ್ ಆಡುವುದು ಸಂತಸ ತಂದಿದೆ. ಆರಂಭದಲ್ಲಿ ವೇಗಿಗಳಿಗೆ ಪಿಚ್‌ನಿಂದ ಸ್ವಲ್ಪ ಅನುಕೂಲ ಸಿಕ್ಕಿತು. ನಂತರ ಇಬ್ಬನಿಯಿಂದಾಗಿ ಪರಿಸ್ಥಿತಿಗಳು ಸ್ವಲ್ಪ ಸುಧಾರಿಸಿತು. ಆದರೆ ಪರಿಸ್ಥಿತಿಯು ಬ್ಯಾಟಿಂಗ್‌ಗೆ ಸಂಪೂರ್ಣವಾಗಿ ಪೂರಕವಾಗಿರಲಿಲ್ಲ. ಪಿಚ್ ಅಸಮ ಬೌನ್ಸ್ ಹೊಂದಿತ್ತು’ ಎಂದು ರಾಹುಲ್ ಹೇಳಿದ್ದಾರೆ.

ಆಸ್ಟ್ರೇಲಿಯಾ ನೀಡಿದ 200 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಮೂವರು ಬ್ಯಾಟರ್‌ಗಳು ಖಾತೆಯನ್ನೇ ತೆರೆಯದೆ ಪೆವಲಿಯನ್ ಸೇರಿಕೊಂಡರು. ಆರಂಭಿಕರಿಬ್ಬರಾದ ರೋಹಿತ್ ಶರ್ಮಾ, ಇಶಾನ್ ಕಿಶನ್ ಹಾಗೂ 4ನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್‌ಗೆ ಒಂದೇ ಒಂದು ರನ್ ಬಾರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತದ ಇನ್ನಿಂಗ್ಸ್ ಜವಬ್ದಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ವಿರಾಟ್ ಕೊಹ್ಲಿ ಹಾಗೂ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕೆಎಲ್ ರಾಹುಲ್ ಹೆಗಲ ಮೇಲೆ ಬಿತ್ತು. ಈ ಇಬ್ಬರೂ ಸಹ ಜವಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಆಸೀಸ್ ಇನ್ನಿಂಗ್ಸ್ ವೇಳೆ ಸಂಪೂರ್ಣ 50 ಓವರ್ ವಿಕೆಟ್ ಕೀಪಿಂಗ್ ಮಾಡಿದ ಕೆಎಲ್ ರಾಹುಲ್‌ಗೆ ಕೊಹ್ಲಿ ಜೊತೆ ಇನ್ನಿಂಗ್ಸ್ ಕಟ್ಟುವುದು ಕೊಂಚ ತ್ರಾಸದಾಯಕ ಕೆಲಸವಾಯಿತು. ಏಕೆಂದರೆ ಕೊಹ್ಲಿ ಕ್ರೀಸ್‌ನಲ್ಲಿದ್ದರೆ, ಅವರು ಬೌಂಡರಿ ಹಾಗೂ ಸಿಕ್ಸರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡದೆ, ಸಿಂಗಲ್ಸ್ ಹಾಗೂ ಡಬಲ್ಸ್ ಕಡೆ ಹೆಚ್ಚು ಗಮನ ನೀಡುತ್ತಾರೆ. ಇದಲ್ಲದೆ ಕೊಹ್ಲಿ ಸಿಂಗಲ್ಸ್‌ಗಳನ್ನು ಡಬಲ್ ಆಗಿ ಪರಿವರ್ತಿಸುವಲ್ಲಿ ನಿಸ್ಸೀಮರು. ಹೀಗಾಗಿ ಕೊಹ್ಲಿಯೊಂದಿಗೆ ಕ್ರೀಸ್‌ನಲ್ಲಿ ಇನ್ನಿಂಗ್ಸ್ ಕಟ್ಟುವುದು ಭಾರತದ ಇತರೆ ಬ್ಯಾಟರ್‌ಗಳಿಗೆ ಭಾರಿ ಕಷ್ಟ. ಅದರಲ್ಲೂ ಸಂಪೂರ್ಣ 50 ಓವರ್ ಕೀಪಿಂಗ್ ಮಾಡಿ, ಆ ಬಳಿಕ 3ನೇ ಓವರ್ನಲ್ಲೇ ಬ್ಯಾಟಿಂಗ್‌ಗೆ ಬಂದ ರಾಹುಲ್‌ಗೆ ಆಯಾಸವಾಗಿತ್ತು. ಸಾಕಷ್ಟು ಆಯಾಸದ ನಡುವೆಯೂ 97 ರನ್‌ಹಳ ಅಜೇಯ ಇನ್ನಿಂಗ್ಸ್ ಆಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಕೆ.ಎಲ್ ರಾಹುಲ್ ಪರಿಸ್ಥಿತಿ ಅಂದು ಕ್ರಿಕೆಟ್ ದಂತಕತೆ ಕಪಿಲ್ ದೇವ್‌ ಅವರಿಗೂ ಎದುರಾಗಿತ್ತು.

1983 ಜೂನ್ 18ರಂದು ಜಿಂಬಾಬ್ವೆ ವಿರುದ್ಧದ ಮ್ಯಾಚ್​ನಲ್ಲಿ ಭಾರತ ಕೇವಲ 17 ರನ್​​ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಟೀಂ ಇಂಡಿಯಾ ನಾಯಕ ಕಪಿಲ್ ದೇವ್​ ಡ್ರೆಸ್ಸಿಂಗ್​ ರೂಮ್​ನಲ್ಲಿ​ ಸ್ನಾನಕ್ಕೆ ಹೋಗಿದ್ದರು. ಕಪಿಲ್​​ ಸ್ನಾನ ಮಾಡುತ್ತಿರುವಾಗ ಇತ್ತ ವಿಕೆಟ್​​ಗಳ ಮೇಲೆ ವಿಕೆಟ್​ಗಳು ಬಿದ್ದಿದ್ವು. 4ನೇ ವಿಕೆಟ್ ಬೀಳುತ್ತಲೇ ಸಹ ಆಟಗಾರರು ಬಾತ್​​ರೂಮ್ ಡೋರ್ ತಟ್ಟಿ ಕಪಿಲ್​ ದೇವ್​ರನ್ನ ಅಲರ್ಟ್ ಮಾಡಿದರು. ಸ್ನಾನ ಮುಗಿಸುವಷ್ಟರಲ್ಲಿ ಇನ್ನೊಂದು ವಿಕೆಟ್ ಕೂಡ ಪತನವಾಗಿತ್ತು. ಕೂಡಲೇ ಪ್ಯಾಡ್, ಗ್ಲೌಸ್ ಕಟ್ಟಿಕೊಂಡು ಕಪಿಲ್ ಕ್ರಿಸ್​ಗಿಳಿದರು. ಅಷ್ಟೇ ಅಲ್ಲ, ಏಕಾಂಗಿಯಾಗಿ 175 ರನ್​ ಸಿಡಿಸಿದರು. ಅಂಥದ್ದೇ ಒಂದು ಘಟನೆ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ವೇಳೆಯೂ ನಡೆದಿದೆ. ಟೀಂ ಇಂಡಿಯಾದ ವಿಕೆಟ್​ಗಳು ಬೀಳೋ ವೇಳೆಗೆ ಆಗಷ್ಟೇ ಕೆಎಲ್​ ರಾಹುಲ್ ಸ್ನಾನ ಮಾಡಿ ಬಂದು ಕೂತಿದ್ದರು. ಅರ್ಧ, ಒಂದು ಗಂಟೆಯಾದ್ರೂ ರೆಸ್ಟ್ ಸಿಗುತ್ತೆ ಅಂತಾ ರಿಲ್ಯಾಕ್ಸ್​ ಮೋಡ್​​ನಲ್ಲಿರೋವಾಗಲೇ ಮೂರು ವಿಕೆಟ್​ಗಳು ಬಿದ್ದಾಗಿತ್ತು. ಹೀಗಾಗಿ ಕೆಎಲ್ ರಾಹುಲ್​ ಕೂಡ ಕಪಿಲ್​ ದೇವ್ ಸ್ವಿಚ್ಯುವೇಷನ್ ಎದುರಿಸಿದ್ದಾರೆ.

 

Sulekha