ತಾನು ಭಾರತೀಯ ರಾಜಕೀಯದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ – ಬ್ರೆಜಿಲ್ ಮಾಡೆಲ್ ಲಾರಿಸ್ಸಾ

ತಾನು ಭಾರತೀಯ ರಾಜಕೀಯದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ – ಬ್ರೆಜಿಲ್ ಮಾಡೆಲ್ ಲಾರಿಸ್ಸಾ

 ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ‘ವೋಟ್ ಚೋರಿ’ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಗಂಭೀರ ಆರೋಪ ಮಾಡಿದ್ದರು. ಚುನಾವಣೆಯಲ್ಲಿ ಬ್ರೆಜಿಲ್ ಮಾಡೆಲ್ ಲಾರಿಸ್ಸಾ ಅವರ ಫೋಟೋವನ್ನು 22 ಬಾರಿ ಅಕ್ರಮವಾಗಿ ಬಳಸಲಾಗಿದೆ ಎಂದು ಅವರು ಹೇಳಿದ್ದರು. ಆದರೆ, ಈ ಬೆಳವಣಿಗೆಯಿಂದ ಆಶ್ಚರ್ಯಗೊಂಡಿರುವ ಮಾಡೆಲ್ ಲಾರಿಸ್ಸಾ, ತಮ್ಮ ಫೋಟೋವನ್ನು ಸ್ಟಾಕ್ ಇಮೇಜ್ ಪ್ಲಾಟ್‌ಫಾರ್ಮ್‌ನಿಂದ ಖರೀದಿಸಲಾಗಿದೆ ಮತ್ತು ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಭಾರತಕ್ಕೆ ಎಂದಿಗೂ ಭೇಟಿ ನೀಡಿಲ್ಲ ಮತ್ತು ತಮ್ಮನ್ನು ಭಾರತೀಯ ರಾಜಕೀಯದಲ್ಲಿ ಅನಗತ್ಯವಾಗಿ ಎಳೆಯಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಮದುವೆಗೆ ಮುಹೂರ್ತ ಫಿಕ್ಸ್!‌ – ಈ ಪ್ಯಾಲೇಸ್‌ನಲ್ಲಿ ಕಿರಿಕ್‌ ಬ್ಯೂಟಿ ಅದ್ದೂರಿ ವಿವಾಹ!

ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯ ನಂತರ ತಮ್ಮ ಫೋಟೋ ವೈರಲ್ ಆಗಿದ್ದಕ್ಕೆ ಬ್ರೆಜಿಲಿಯನ್ ಮಾಡೆಲ್ ಲಾರಿಸ್ಸಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಾನು ಈಗ ಮಾಡೆಲ್ ಅಲ್ಲ, ಬದಲಿಗೆ ಬ್ರೆಜಿಲ್‌ನಲ್ಲಿ ಡಿಜಿಟಲ್ ಪ್ರಭಾವಿ ಮತ್ತು ಕೇಶ ವಿನ್ಯಾಸಗಾರ್ತಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನನಗೂ ಭಾರತೀಯ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಫೋಟೋವನ್ನು ಸ್ಟಾಕ್ ಇಮೇಜ್ ಪ್ಲಾಟ್‌ಫಾರ್ಮ್‌ನಿಂದ ಖರೀದಿಸಲಾಗಿದೆ. ನಾನು ಭಾರತಕ್ಕೆ ಎಂದಿಗೂ ಬಂದಿಲ್ಲ” ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂಗೆ ಭಾರತೀಯರಿಂದ ಸಂದೇಶಗಳ ಮಹಾಪೂರವೇ ಹರಿದುಬಂದಿದೆ ಎಂದು ಹೇಳಿದ ಲಾರಿಸ್ಸಾ, ನನ್ನನ್ನು ಆಯ್ಕೆ ಮಾಡಿದಂತೆ ಜನರು ಕಾಮೆಂಟ್ ಮಾಡುತ್ತಿದ್ದಾರೆ. ದಯವಿಟ್ಟು ಅರ್ಥಮಾಡಿಕೊಳ್ಳಿ, ಅದು ನಾನಲ್ಲ, ನನ್ನ ಫೋಟೋ ಮಾತ್ರ” ಎಂದು ಹೇಳಿದ್ದಾರೆ. ಭಾರತೀಯ ಮಾಧ್ಯಮಗಳು ತಮ್ಮನ್ನು ಸಂದರ್ಶನಕ್ಕಾಗಿ ಸಂಪರ್ಕಿಸುತ್ತಿವೆ ಎಂದು ಅವರು ಬಹಿರಂಗಪಡಿಸಿದ್ದಾರೆ. ತಮಾಷೆಯಾಗಿ, “ನನಗೆ ಕೇವಲ ‘ನಮಸ್ತೆ’ ಮಾತ್ರ ಗೊತ್ತು. ಶೀಘ್ರದಲ್ಲೇ ಕೆಲವು ಭಾರತೀಯ ಪದಗಳನ್ನು ಕಲಿಯುತ್ತೇನೆ” ಎಂದು ಅವರು ಹೇಳಿಕೊಂಡಿದ್ದಾರೆ.

Kishor KV