ರಾಜಕಾರಣ ಮನೆತನಕ್ಕೆ ಮಾತ್ರ ಸೀಮಿತವಲ್ಲ.. ಡಿ.6ರ ಬಳಿಕ ಎಲ್ಲ ವಿಚಾರ ತಿಳಿಸುತ್ತೇನೆ ಎಂದ ವಿ ಸೋಮಣ್ಣ

ರಾಜಕಾರಣ ಮನೆತನಕ್ಕೆ ಮಾತ್ರ ಸೀಮಿತವಲ್ಲ.. ಡಿ.6ರ ಬಳಿಕ ಎಲ್ಲ ವಿಚಾರ ತಿಳಿಸುತ್ತೇನೆ ಎಂದ ವಿ ಸೋಮಣ್ಣ

ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕೆಲ ನಾಯಕರು ಮುನಿಸಿಕೊಂಡಿದ್ದಾರೆ. ಈ ಪೈಕಿ ವಿ ಸೋಮಣ್ಣ ಒಬ್ಬರು. ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣಗೆ ಈ ಸ್ಥಾನ ತಪ್ಪಿದೆ. ಇತ್ತ ಸೋಮಣ್ಣ ವಿರೋಧಿಸುತ್ತಲೇ ಬಂದಿದ್ದ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿರುವುದು ಮತ್ತಷ್ಟು ಕಂಗಾಲು ಮಾಡಿದೆ. ಈ ಹಿನ್ನೆಲೆಯಲ್ಲಿ ವಿ ಸೋಮಣ್ಣ ಅವರು ಅಸಮಾಧಾನ ಹೊರ ಹಾಕುತ್ತಲೇ ಇದ್ದಾರೆ. ಇದೀಗ ನನಗೆ ಎಷ್ಟು ಹೊಡೆತ ಆಯ್ತು ಅನ್ನೋದನ್ನ ಡಿಸೆಂಬರ್ 6ರ ನಂತರ ಹೇಳ್ತೀನಿ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಜಮೀರ್‌ ಅಹ್ಮದ್‌ ವಾಸ್ತವ್ಯವಿದ್ದ ಹೋಟೆಲ್‌ ಮೇಲೆ ಪೊಲೀಸರಿಂದ ದಾಳಿ – ಸಿಕ್ಕಿದ್ದೇನು?  

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಹೈಕಮಾಂಡ್ ಸೂಚನೆಯನ್ನ ತಲೆ ಮೇಲೆ ಹೊತ್ತು ದುಡಿಮೆ ಮಾಡಿದ ಮೇಲೆ ಯಾವ ರೀತಿ ನನಗೆ ಎಷ್ಟು ಹೊಡೆತ ಆಯ್ತು ಅನ್ನೋದನ್ನ ಡಿಸೆಂಬರ್ 6ರ ನಂತರ ಹೇಳ್ತೀನಿ. ಬಿಡಿಬಿಡಿಯಾಗಿ ವಿವರಿಸ್ತೀನಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. ಡಿಸೆಂಬರ್ 6ನೇ ತಾರೀಖಿನ ನಂತರ ನನ್ನ ಮನಸ್ಸಿನ ಭಾವನೆಯನ್ನ ಹೇಳುತ್ತೇನೆ, ಬಿಡಿಬಿಡಿಯಾಗಿ ವಿವರಿಸ್ತೀನಿ. ರಾಜಕಾರಣ ದೊಂಬರಾಟ ಅಲ್ಲ. ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ರಾಜಕಾರಣ ನಾಟಕ ಕಂಪನಿಯೂ ಅಲ್ಲ. ಒಳ ಒಪ್ಪಂದಕ್ಕೆ ಸಿಮೀತವೂ ಅಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಇದೇ ವೇಳೆ ಯಡಿಯೂರಪ್ಪ ತಮ್ಮನ್ನು ಸಂಪರ್ಕಿಸಿದ್ದಾರಾ ಎಂಬ ಪ್ರಶ್ನೆಗೆ ಸೋಮಣ್ಣ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಯಾರನ್ನೂ ಸಂಪರ್ಕಿಸಿಲ್ಲ. ಆ ತರಹ ಯಾವ ಪ್ರಯತ್ನವೂ ನಡೆದಿಲ್ಲ ಎಂದು ವಿವರಿಸಿದ್ದಾರೆ.

ಇನ್ನು ಮಾಜಿ ಸಚಿವ ವಿ.ಸೋಮಣ್ಣ ಅವರಿಂದ ಮೈಸೂರು ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡರು. ಬಿಜೆಪಿಯ ಓರ್ವ ಶಾಸಕ, ಓರ್ವ ಸಂಸದ ಹಾಗೂ ಮಾಜಿ ಶಾಸಕರು ಸೇರಿದಂತೆ ಅನೇಕ ಮುಖಂಡರು ಸೋಮಣ್ಣ ಭೇಟಿಗೆ ಹಿಂದೇಟು ಹಾಕಿದರು. ಸೋಮಣ್ಣ ಕಟ್ಟಾ ಬೆಂಬಲಿಗರು ಬಿಟ್ಟರೆ ಉಳಿದ ಯಾರೂ ಅವರ ಭೇಟಿಗೆ ಮುಂದಾಗಲಿಲ್ಲ. ತಮ್ಮ ಆಪ್ತರೊಂದಿಗೆ ಉಪಾಹಾರ ಸೇವಿಸಿ, ಖಾಸಗಿ ಹೋಟೆಲ್‌ನಲ್ಲಿ ಗೌಪ್ಯ ಮಾತುಕತೆ ನಡೆಸಿದ್ದಾರೆ.

Shwetha M