ಶಶಿ ತರೂರ್ ಕೇರಳ ಪ್ರವಾಸ – ಕಾಂಗ್ರೆಸ್ ನಲ್ಲಿ ಭಿನ್ನಮತ ಉಲ್ಬಣ

ಶಶಿ ತರೂರ್ ಕೇರಳ ಪ್ರವಾಸ – ಕಾಂಗ್ರೆಸ್ ನಲ್ಲಿ ಭಿನ್ನಮತ ಉಲ್ಬಣ

ನವದೆಹಲಿ: ಶಶಿ ತರೂರ್ ತಮ್ಮ ತವರು ರಾಜ್ಯ ಕೇರಳಕ್ಕೆ ಕೈಗೊಂಡಿರುವ ಪ್ರವಾಸ ಬಗ್ಗೆ ಕಾಂಗ್ರೆಸ್​​ನಲ್ಲೇ ಟೀಕೆಗಳು ಕೇಳಿಬಂದಿವೆ. ಕೇರಳದ ನಾಯಕರು ಸಂಸದರ ಕಾರ್ಯಕ್ರಮಗಳು ಮತ್ತು ಸಭೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಕೇರಳದ ಕಾಂಗ್ರೆಸ್ ರಾಜ್ಯ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಕೇರಳದಲ್ಲಿ ತಮ್ಮ ಪ್ರವಾಸದಿಂದ ಯಾರು ಭಯಪಟ್ಟಿದ್ದಾರೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಶಿ ತರೂರ್, “ನಾನು ಯಾರಿಗೂ ಭಯಪಡುವುದಿಲ್ಲ. ನನ್ನಿಂದಲೂ ಯಾರಿಗೂ ಭಯವಿಲ್ಲ” ಎಂದಿದ್ದಾರೆ. ಕೇರಳ ಕಾಂಗ್ರೆಸ್ ನಲ್ಲಿ ಶಶಿ ತರೂರ್ ಅವರ ಬೆಂಬಲಿಗರು ಹೆಚ್ಚಾಗುತ್ತಿದ್ದು, ತರೂರ್ ಗುಂಪು ಎಂದೇ ಗುರುತಿಸಿಕೊಂಡಿರುವುದು ರಾಜ್ಯಮಟ್ಟದ ನಾಯಕತ್ವದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂಬ ವಿಶ್ಲೇಷಣೆಗಳ ನಡುವೆ ಶಶಿ ತರೂರ್ ನಡೆ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಗುಜರಾತ್ ಚುನಾವಣೆ – ಸ್ಟಾರ್ ಪ್ರಚಾರಕ ಪಟ್ಟಿಯಿಂದ ಶಶಿ ತರೂರ್ ಔಟ್

ಐಯುಎಂಎಲ್ ನಾಯಕರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್, ಇದೊಂದು ಸೌಹಾರ್ದಯುತ ಭೇಟಿಯಷ್ಟೇ ಎಂದು ಹೇಳಿದ್ದಾರೆ. ತಿರುವನಂತಪುರಂ ನ ಸಂಸದರಾಗಿರುವ ಶಶಿ ತರೂರ್ ಗೆ ಅವರ ಕಟ್ಟಾ ಬೆಂಬಲಿಗ ಎಂಪಿ ಎಂಕೆ ರಾಘವನ್ ಅವರು ಸಾಥ್ ನೀಡಿದ್ದರು. ತಮಗೆ ಪಕ್ಷದ ಒಳಗೇ ಗುಂಪನ್ನು ಕಟ್ಟುವ ಉದ್ದೇಶ, ಆಸಕ್ತಿ ಇಲ್ಲ ಎಂದು ಶಶಿ ತರೂರ್ ಸ್ಪಷ್ಟನೆ ನೀಡಿದ್ದಾರೆ.

ಮಲಬಾರ್ ಪ್ರವಾಸ ಕೈಗೊಂಡಿರುವ ಶಶಿ ತರೂರ್ ಗೆ ಕೇರಳದ ವಿಪಕ್ಷ ನಾಯಕ ವಿ.ಡಿ ಸತೀಶನ್ ಎಚ್ಚರಿಕೆ ನೀಡಿದ್ದು, ಈ ರೀತಿಯ ಪ್ರತ್ಯೇಕ ಚಟುವಟಿಕೆಗಳಿಗೆ ಪಕ್ಷದಲ್ಲಿ ಜಾಗವಿಲ್ಲ, ಇಂತಹ ಯಾವುದೇ ನಡೆಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್‌ನ ಒಂದು ವಿಭಾಗ ತರೂರ್ ವಿರುದ್ಧ ಕೋಪಗೊಂಡಿದ್ದು, ಕೋಝಿಕ್ಕೋಡ್‌ನಲ್ಲಿ ತರೂರ್ ಭಾಗವಹಿಸಲಿದ್ದ ಯುವ ಕಾಂಗ್ರೆಸ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಬಳಿಕ ಕೋಝಿಕ್ಕೋಡ್ ಕಾಂಗ್ರೆಸ್ ಸಂಸದ ರಾಘವನ್ ಮತ್ತು ಇತರ ಯುವ ಕಾಂಗ್ರೆಸ್ ನಾಯಕರ ಮಧ್ಯಪ್ರವೇಶದ ಬಳಿಕ ಕಾಂಗ್ರೆಸ್ ಪರ ಸಂಘಟನೆ ಈ ಕಾರ್ಯಕ್ರಮ ಆಯೋಜಿಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ತರೂರ್, ಯುವ ಕಾಂಗ್ರೆಸ್‌ನ ಭಾಗವಹಿಸುವಿಕೆಯ ಚಿತ್ರ ಎಂದು ಫೋಟೊ ಟ್ವೀಟ್ ಮಾಡಿದ್ದು, ನನಗೆ ವೇದಿಕೆಯನ್ನು ನೀಡದಂತೆ ಕೆಲವರು ಒತ್ತಡಕ್ಕೆ ಒಳಗಾದ ನಂತರ ಕೋಝಿಕ್ಕೋಡ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅದ್ಭುತವಾದ ಸ್ವಾಗತವನ್ನು ನೀಡಿದ್ದಾರೆ ಎಂದು ಬರೆದಿದ್ದಾರೆ.

suddiyaana