ರಾಜ್ಯದಲ್ಲಿ ಸಾಧುಗಳ ವೇಷದಲ್ಲಿ ಕಳ್ಳರ ಕೈಚಳಕ! – ಆಶೀರ್ವಾದ ಪಡೆಯಲು ಹೋದ್ರೆ ಮಾಯವಾಗುತ್ತೆ ಮೈಮೇಲಿದ್ದ ಚಿನ್ನ!

ರಾಜ್ಯದಲ್ಲಿ ಸಾಧುಗಳ ವೇಷದಲ್ಲಿ ಕಳ್ಳರ ಕೈಚಳಕ! – ಆಶೀರ್ವಾದ ಪಡೆಯಲು ಹೋದ್ರೆ ಮಾಯವಾಗುತ್ತೆ ಮೈಮೇಲಿದ್ದ ಚಿನ್ನ!

ಈಗಿನ ಕಾಲದಲ್ಲಿ ಯಾರನ್ನೂ ನಂಬುವಂತಿಲ್ಲ. ನಾನಾ ವೇಷದಲ್ಲಿ ಬಂದು ಹಣ, ಚಿನ್ನ ದೋಚುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇದೀಗ ರಾಯಚೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಸಾಧು ವೇಷಧಾರಿಯೋರ್ವ ಹೂವು ಕೊಟ್ಟು ಮಂಪರು ಬರಿಸಿ ಹಣ, ಚಿನ್ನ ದೋಚಿರುವ ಘಟನೆ ನಡೆದಿದೆ.

ಇದನ್ನೂ ಓದಿ: 14 ವರ್ಷಗಳಿಗೆ ಒಮ್ಮೆ ಬರುವ ಶನಿ ಅಮಾವಾಸ್ಯೆ ವಿಶೇಷ – ಶನೇಶ್ವರ ಹಾಗೂ ಆಂಜನೇಯ ದೇಗುಲಗಳಲ್ಲಿ ಭಕ್ತರ ದಂಡು!

ಈ ಬೆಚ್ಚಿ ಬೀಳಿಸುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಶ್ರೀ ಸಾಯಿ ಮೆಡಿಕಲ್ ಶಾಪ್ ಮಾಲೀಕ ವಿಷ್ಣು ದತ್ತ ಎಂಬವರಿಂದ ಸಾಧು ವೇಷಧಾರಿ ಹಣ, ಚಿನ್ನ ದೋಚಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಸಾಧು ವೇಷಧಾರಿಯೋರ್ವ ಮೆಡಿಕಲ್ ಶಾಪ್‌ ಮುಂದೆ ಇರಿಸಲಾಗಿದ್ದ ನೀರು ಕುಡಿಯಲು ಬರುತ್ತಾನೆ. ಇದನ್ನು ನೋಡಿದ ವಿಷ್ಣು ದತ್ತ ಅವರು ಕನಿಕರದಿಂದ ಸಾಧುಗೆ ಕುಡಿಯಲು ಫ್ರಿಡ್ಕ್‌ನಲ್ಲಿದ್ದ ತಣ್ಣೀರು ಕೊಡುತ್ತಾರೆ. ನೀರು ಕುಡಿದ ಬಳಿಕ ಸಾಧು, ಆಶೀರ್ವಾದ ರೂಪದಲ್ಲಿ ಎರಡು ಹೂಗಳನ್ನು ನೀಡುತ್ತಾರೆ.

ಹೂವಿನ ವಾಸನೆಯಿಂದ ವಿಷ್ಣು ದತ್ತಾ ಮಂಪರು ಬಂದಂತಾಗಿದೆ. ಈ ವೇಳೆ ಸಾಧು ವೇಷಧಾರಿ ಕಳ್ಳ, ಅಂಗಡಿಯಲ್ಲಿದ್ದ 10,500 ರೂಪಾಯಿ ನಗದು, ವಿಷ್ಣು ದತ್ತ್ ಕೈಯಲ್ಲಿದ್ದ 5 ಗ್ರಾಂ ಚಿನ್ನದುಂಗರ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಸಾಧು ಹೋದ ಕೆಲ ನಿಮಿಷಗಳ ಬಳಿಕ ವಿಷ್ಣು ದತ್ತ ಎಚ್ಚರಗೊಂಡಿದ್ದಾರೆ.

ಕೈಯಲ್ಲಿದ್ದ ಗೋಲ್ಡ್ ರಿಂಗ್ ಮತ್ತು ಅಂಗಡಿಯಲ್ಲಿದ್ದ ಹಣ ಇಲ್ಲದಿರೋದನ್ನು ನೋಡಿ ಸಿಂಧನೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೆಡಿಕಲ್ ಶಾಪ್‌ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಸಾಧು ವೇಷಧಾರಿಯಾಗಿ ಸಿಂಧನೂರು ಪಟ್ಟಣದಲ್ಲಿ ಮೂವರು ಸುತ್ತಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸ್ಥಳೀಯವಾಗಿ ಸಾಧುಗಳ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Shwetha M