ಬಿರಿಯಾನಿ ಜೊತೆ ಮೊಸರು ಕೇಳಿದ್ದಕ್ಕೆ ಮಾರಾಮಾರಿ.. – ಹೋಟೆಲ್ ಸಿಬ್ಬಂದಿಯ ರೌಡಿಸಂಗೆ ಅಮಾಯಕ ಬಲಿ!
ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಹೋದಾಗ ಬಿರಿಯಾನಿಯನ್ನೇ ಅನೇಕರು ಆಯ್ಕೆ ಮಾಡುತ್ತಾರೆ. ಬಿರಿಯಾನಿಯೊಂದಿಗೆ ಕೊಟ್ಟ ಮೊಸರು ಕಡಿಮೆಯಾದ್ರೆ ಹೆಚ್ಚು ಕೊಡುವಂತೆ ಹೋಟೆಲ್ ಸಿಬ್ಬಂದಿ ಬಳಿ ಅನೇಕ ಕೇಳುತ್ತಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಗ್ರಾಹಕರಿಗೆ ಹೆಚ್ಚುವರಿ ಮೊಸರು ಕೊಡುತ್ತಾರೆ. ಇಲ್ಲೊಬ್ಬ ಗ್ರಾಹಕ ಬಿರಿಯಾನಿ ತಿನ್ನುವ ವೇಳೆ ಮೊಸರು ಕಡಿಮೆಯಾಯ್ತು ಅಂತಾ ಸಿಬ್ಬಂದಿ ಬಳಿ ಹೆಚ್ಚುವರಿ ಮೊಸರು ಕೇಳಿದ್ದಾನೆ. ಬಳಿಕ ದೊಡ್ಡ ಮಾರಾಮಾರಿಯೇ ನಡೆದುಹೋಗಿದೆ.
ಏನಿದು ಘಟನೆ?
ಈ ಘಟನೆ ಹೈದರಬಾದ್‌ನ ಚದ್ರಾಯನಗುಟ್ಟ ಎಂಬಲ್ಲಿ ನಡೆದಿದೆ. ಚದ್ರಾಯಗುಟ್ಟದ ನಿವಾಸಿ ಲಿಯಾಕತ್ ಎಂಬಾತ ಬಿರಿಯಾನಿ ತಿನ್ನಲು ಹೋಟೆಲ್‌ಗೆ ತೆರಳಿದ್ದ. ಅಲ್ಲಿ ಬಿರಿಯಾನಿ ಆರ್ಡರ್ ಮಾಡಿ ತಿನ್ನಲು ಶುರು ಮಾಡಿದ್ದಾನೆ. ಬಿರಿಯಾನಿ ತಿನ್ನುವ ವೇಳೆ ಮೊಸರು ಕಡಿಮೆಯಾಯ್ತು ಅಂತಾ ಹೆಚ್ಚುವರಿ ಮೊಸರು ನೀಡುವಂತೆ ಸಿಬ್ಬಂದಿಗೆ ಕೇಳಿದ್ದಾನೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದು, ಪರಸ್ಪರ ಹಲ್ಲೆ ನಡೆಸಿದ್ದಾರೆ. ಆದರೆ, ಸ್ಥಳೀಯರ ನೆರವಿನಿಂದ ಪೊಲೀಸರು ಮಾರಾಮಾರಿ ನಡೆಯುತ್ತಿರುವುದನ್ನು ತಿಳಿದು ಹೋಟೆಲ್‌ಗೆ ತಲುಪಿದ್ದಾರೆ.
ಇದನ್ನೂ ಓದಿ: ಬ್ರಹ್ಮಚಾರಿಗಳಾಗಿಯೇ ಉಳಿಯಬೇಕಾದ ಅನಿವಾರ್ಯತೆಯಲ್ಲಿ ಯುವಕರು – ವಿದ್ಯಾವಂತರಾದರೂ ಹೆಣ್ಣು ಸಿಗುತ್ತಿಲ್ಲವೇಕೆ?
ಪೊಲೀಸರು ಹೋಟೆಲ್‌ಗೆ ಬಂದು ಜಗಳವನ್ನು ನಿಲ್ಲಿಸಿ, ಲಿಯಾಖತ್ ಜತೆಗೆ ಹೋಟೆಲ್ ಸಿಬ್ಬಂದಿಯನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಲಿಯಾಕತ್ ಮೂರ್ಛೆ ಹೋಗಿದ್ದಾನೆ. ತಕ್ಷಣ ಪೊಲೀಸರು ಲಿಯಾಖತ್‌ನನ್ನು ಸ್ಥಳೀಯ ಡೆಕ್ಕನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಲಿಯಾಖತ್ ಮೃತಪಟ್ಟಿದ್ದಾನೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಿಯಾಖತ್ ಶವವನ್ನು ಗಾಂಧಿ ಶವಾಗಾರಕ್ಕೆ ರವಾನಿಸಿ, ಲಿಯಾಖತ್ ಕುಟುಂಬ ಸದಸ್ಯರಿಗೆ ಹಾಗೂ ಆತನ ಸ್ನೇಹಿತರಿಗೆ ಮಾಹಿತಿ ನೀಡಿದ್ದಾರೆ.
ಲಿಯಾಖತ್ ಸ್ನೇಹಿತರು, ಹಲ್ಲೆ ನಡೆಸಿದ ಬಳಿಕ ಲಿಯಾಖತ್ ನನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಬೇಕಿತ್ತು. ಆದರೆ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಹಾಗೂ ಹೋಟೆಲ್ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಲಿಯಾಖತ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ಈ ವಿಷಯ ತಿಳಿದ ಎಂಐಎಂ ಎಂಎಲ್ಸಿ ಮಿರ್ಜಾ ರೆಹಮತ್ ಬೇಗ್ ಅವರು ಪಂಜಗುಟ್ಟ ಪೊಲೀಸ್ ಠಾಣೆಗೆ ಬಂದು ಘಟನೆಯ ವಿವರ ಪಡೆದ್ದಾರೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಲಿಯಾಖತ್ ಮೇಲೆ ಹಲ್ಲೆ ನಡೆಸಿದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.