ಪಂಜಾಬ್ ವಿರುದ್ದ ಸೇಡು ತೀರಿಸಿಕೊಂಡ ಸನ್ರೈಸರ್ಸ್ ಹೈದ್ರಾಬಾದ್ – ಕೊನೇವರೆಗೂ ಹೋರಾಡಿ ಶತಕ ಸಿಡಿಸಿದ ಕೊನೊಲಿ

ಪಂಜಾಬ್ ಕಿಂಗ್ಸ್ ಪ್ರತೀಕಾರದ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋತಿದೆ. ಜೊತೆಗೆ ಪಾಯಿಂಟ್ಸ್ ಟೇಬಲ್ ಪಟ್ಟಿಯಲ್ಲಿರುವ ಅಗ್ರಸ್ಥಾನದಿಂದ ಜಾರಿಬಿದ್ದಿದೆ. ಇದೀಗ ಹೈದ್ರಾಬಾದ್ ತಂಡ ಮೊದಲ ಸ್ಥಾನ ಅಲಂಕರಿಸಿದೆ.
ಇದನ್ನೂ ಓದಿ:ಬೆಥೆಲ್ ಜಾಗಕ್ಕೆ ಬರ್ತಾರಾ ಕಾಕ್ಸ್? – RCBಗೆ ಬೇಕಿದೆ ಬ್ಯಾಟಿಂಗ್ ಖದರ್
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 33 ರನ್ಗಳಿಂದ ಗೆಲುವು ಸಾಧಿಸಿದೆ. ತವರಿನ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಭರ್ಜರಿ ಬ್ಯಾಟಿಂಗ್ ನಡೆಸಿ 235 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. 236 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 202 ರನ್ಗಳಿಸಿ ಸೋಲೊಪ್ಪಿಕೊಂಡಿದೆ. ಪಂಜಾಬ್ ಈ ಸೋಲಿನೊಂದಿಗೆ ಲೀಗ್ನಲ್ಲಿ ಬಹಳ ದಿನಗಳ ನಂತರ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಅಭಿಷೇಕ್ ಶರ್ಮಾ ಕೇವಲ 13 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 35 ರನ್ ಗಳಿಸಿ ಲಾಕಿ ಫರ್ಗ್ಯುಸನ್ ಬೌಲಿಂಗ್ನಲ್ಲಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಟ್ರಾವಿಸ್ ಜೊತೆಗೂಡಿದ ಇಶಾನ್ ಕಿಶನ್ 2ನೇ ವಿಕೆಟ್ ಜೊತೆಯಾಟದಲ್ಲಿ 30 ರನ್ ಸೇರಿಸಿದರು. ಹೆಡ್ 19 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ 38 ರನ್ಗಳಿಸಿ ಚಹಲ್ ಬೌಲಿಂಗ್ನಲ್ಲಿ ಮಾರ್ಕೊ ಯಾನ್ಸನ್ಗೆ ಕ್ಯಾಚ್ ನೀಡಿ ಔಟ್ ಆದರು. 4ನೇ ಕ್ರಮಾಂಕದಲ್ಲಿ ಬಂದ ವಿಧ್ವಂಸಕ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ 3ನೇ ವಿಕೆಟ್ಗೆ ಇಶಾನ್ ಕಿಶನ್ ಜೊತೆಗೂಡಿ 88 ರನ್ ಜೊತೆಯಾಟ ನಡೆಸಿದರು. ಇಶಾನ್ ಕಿಶನ್ ಕೇವಲ 32 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 55 ರನ್ಗಳಿಸಿದರು. ಇದು ಅವರ ಈ ವರ್ಷದ ನಾಲ್ಕನೇ ಅರ್ಧಶತಕವಾಗಿದೆ. ಕಿಶನ್ ಅರ್ಷದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಬ್ಬರಿಸಿದ ಹೆನ್ರಿಕ್ ಕ್ಲಾಸೆನ್ ಕೊನೆಯ ಎಸೆತದಲ್ಲಿ ಔಟ್ ಆಗುವ ಮುನ್ನ 43 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ಗಳ ಸಹಿತ 69 ರನ್ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 29 ರನ್ಗಳಿಸಿದರು.
236 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಕೇವಲ 4 ರನ್ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಪ್ರಭಸಿಮ್ರನ್ ಸಿಂಗ್ 3 ಹಾಗೂ ಪ್ರಿಯಾಂಶ್ ಆರ್ಯ ಕೇವಲ 1 ರನ್ಗಳಿಸಿ ಔಟ್ ಆದರು. ನಾಯಕ ಶ್ರೇಯಸ್ ಅಯ್ಯರ್ (5) ಕೂಡ ಪವರ್ ಪ್ಲೇನಲ್ಲೇ ವಿಕೆಟ್ ಒಪ್ಪಿಸಿ ಬೇಸರ ಮೂಡಿಸಿದರು. 23ಕ್ಕೆ3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಪಂಜಾಬ್ಗೆ ಕೊನೊಲಿ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಚೇತರಿಕೆ ನೀಡಿದರು. ಈ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 40 ರನ್ ಸೇರಿಸಿದರು. ಆದರೆ ಬೃಹತ್ ಮೊತ್ತದ ಚೇಸಿಂಗ್ ಒತ್ತಡಕ್ಕೆ ಸಿಲುಕಿದ ಸ್ಟೋಯ್ನಿಸ್ 14 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 28 ರನ್ಗಳಿಸಿ ಶಿವಾಂಗ್ ಕುಮಾರ್ ಬೌಲಿಂಗ್ನಲ್ಲಿ ಇಶಾನ್ ಕಿಶನ್ಗೆ ಕ್ಯಾಚ್ ನೀಡಿ ಔಟ್ ಆದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸುರ್ಯಾಂಶ್ ಶೆಡ್ಗೆ 17 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 25 ರನ್ಗಳಿಸಿ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ಶೆಡ್ಗೆ 5ನೇ ವಿಕೆಟ್ ಜೊತೆಯಾಟದಲ್ಲಿ 47 ರನ್ಗಳ ಜೊತೆಯಾಟ ನೀಡಿದರು. ನಂತರ ಬಂದ ಶಶಾಂಕ್ ಸಿಂಗ್ 4, ಮಾರ್ಕೊ ಯಾನ್ಸನ್ 19 ರನ್ಗಳಿಸಿ ನಿರ್ಗಮಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ್ದ ಕೂಪರ್ ಕೊನೊಲಿ 59 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ಗಳ ಸಹಿತ ಅಜೇಯ 107 ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು.

ನೋಡಿರಿ

