ಕೊಲೆ ಕೇಸ್ನಲ್ಲಿ ಪತಿ, ಮಗ ಜೈಲು.. ಪತ್ನಿ ನೇಣಿಗೆ ಶರಣು – ಸಾವಿನ ಸುದ್ದಿ ಕೇಳಿ ಜೈಲಿನಲ್ಲೇ ಗಂಡನಿಗೆ ಹೃದಯಾಘಾತ

ಜೀವನ ಅನ್ನೋದು ನೀರಿನ ಮೇಲಿನ ಗುಳ್ಳೆ ಅನ್ನೋ ಮಾತಿದೆ. ಯಾಕಂದ್ರೆ ಯಾವಾಗ ಯಾವ ದಿಕ್ಕಿಗೆ ಹರಿಯುತ್ತೋ, ಯಾವಾಗ ಒಡೆದು ಹೋಗುತ್ತೋ ಹೇಳೋಕೆ ಆಗಲ್ಲ. ಬದುಕಿನಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಜೀವನದ ಜೊತೆಗೆ ಜೀವವನ್ನೂ ಹಿಂಡಿ ಬಿಡುತ್ತೆ. ಇದೀಗ ಇಂಥದ್ದೇ ಘಟನೆ ಮೈಸೂರಿನಲ್ಲಿ ನಡೆದಿದೆ. ಒಂದು ಸಣ್ಣ ತಪ್ಪಿಗೆ ಇಡೀ ಮನೆಯೇ ನಾಶವಾಗಿದೆ.
ಇದನ್ನೂ ಓದಿ : ಮುದ್ದಿನ ಮಡದಿಯ ಅಗಲಿಕೆ ನೋವಲ್ಲಿ ರಾಘು – ವಿಜಯ ರಾಘವೇಂದ್ರ ಅಭಿನಯದ ‘ಕದ್ದಚಿತ್ರ’ ರಿಲೀಸ್ ಮುಂದಕ್ಕೆ
ಕೋಪದ ಕೈಗೆ ಬುದ್ಧಿ ಕೊಟ್ಟರೆ ಏನಾಗುತ್ತದೆ ಅನ್ನೋದಕ್ಕೆ ಈ ಕುಟುಂಬ ಸ್ಪಷ್ಟ ಉದಾಹರಣೆಯಾಗಿದೆ. ಕೊಲೆ ಪ್ರಕರಣದಲ್ಲಿ ತಂದೆ ಮತ್ತು ಮಗ ಜೈಲು ಸೇರಿದರೆ, ಇತ್ತ ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು (Mysuru) ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ತೇಜಸ್ ತಾಯಿ ಇಂದ್ರಾಣಿ (35) ನೇಣಿಗೆ ಶರಣಾದವರು. ಪತ್ನಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ಜೈಲಿನಲ್ಲೇ ಇಂದ್ರಾಣಿ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೈಸೂರಿನ ವಿದ್ಯಾನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾಲರಾಜ್ ಜೊತೆ ಸ್ನೇಹಿತ ತೇಜಸ್, ಈತನ ತಂದೆ, ಮತ್ತಿಬ್ಬರು ಸೇರಿ ಜಗಳ ಮಾಡಿಕೊಂಡು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಆರೋಪಿಗಳಾದ ತೇಜಸ್, ಈತನ ತಂದೆ ಸಾಮ್ರಾಟ್, ಕಿರಣ್, ಸಂಜಯ್ ಎಂಬವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ತನ್ನ ಪತಿ ಮತ್ತು ಮಗ ಈ ರೀತಿ ಕೃತ್ಯ ಎಸಗಿ ಜೈಲು ಸೇರಿದರಲ್ಲಾ ಎಂದು ಆಘಾತಕ್ಕೆ ಒಳಗಾದ ಇಂದ್ರಾಣಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಸುದ್ದಿ ತಿಳಿದು ಆರೋಪಿಯೂ ಆಗಿರುವ ಇಂದ್ರಾಣಿ ಪತಿ ಸಾಮ್ರಾಟ್ಗೆ ಜೈಲಿನಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.