10 ಕೋಟಿ ಆಸೆಗೆ ಮುದ್ದಿನ ಮಡದಿಯನ್ನೇ ಕೊಂದ! – ಸಹಜ ಸಾವು ಅಂತಾ ನಾಟಕವಾಡುತ್ತಿದ್ದ ಪಾಪಿ ಪತಿ ಸಿಕ್ಕಿಬಿದ್ದಿದ್ದು ಹೇಗೆ?
ಅದೊಂದು ಮುದ್ದಾದ ಜೋಡಿ. ಕೆಲವು ವರ್ಷಗಳ ಹಿಂದೆ ಅವರಿಬ್ಬರು ಮದುವೆಯಾಗಿದ್ದರು. ಇಬ್ಬರು ಹೊಂದಿಕೊಂಡು ಸುಖವಾಗಿ ಬಾಳುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ವಿಧಿಯ ಆಟ ಬಲ್ಲವರಾರು. ಮುದ್ದಿನ ಮಡದಿ ಮಲಗಿದ್ದಲ್ಲೇ ಅಸುನೀಗಿದ್ದಳು. ಹೆಂಡತಿಯನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದ್ದ. ಆದರೆ ಇದೀಗ ಆತನ ದುಷ್ಕೃತ್ಯ ಬಯಲಾಗಿದೆ. ಸಹಜ ಸಾವೆಂದು ನಾಟಕವಾಡಿದ್ದಾತ ಕೊನೆಗೂ ಸಿಕ್ಕಿಬಿದ್ದಾನೆ.
ಏನಿದು ಘಟನೆ?
ಪ್ರೊಫೆಸರ್ ಒಬ್ಬ ಹಣದ ಆಸೆಗೆ ಬಿದ್ದು, ಮುದ್ದಿನ ಮಡದಿಯನ್ನೇ ಕೊಂದಿರುವ ಘಟನೆ ಮಂಡ್ಯ ಜಿಲ್ಲೆಯ ವಿವಿ ನಗರ ಬಡಾವಣೆಯಲ್ಲಿ ನಡೆದಿದೆ. ಇದೀಗ ಆತ ಕೃತ್ಯ ಬಯಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಲೆಗೈದ ಬಳಿಕ ಸಹಜ ಸಾವೆಂದು ನಾಟಕವಾಡಿದ್ದ. ಇದೀಗ ಆತನ ಕೃತ್ಯ ಮಯಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯನ್ನು ಎಸ್.ಶೃತಿ (32) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ – 5 ನಿಮಿಷದಲ್ಲಿ 30 ಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಪುಡಿ ಪುಡಿ!
ಸುಖವಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು ಹೇಗೆ?
ಟಿ.ಎನ್.ಸೋಮಶೇಖರ್ (41) ಎಂಬಾತ ಕೆಲವು ವರ್ಷಗಳ ಹಿಂದೆ ಶೃತಿ ಎಂಬಾಕೆಯನ್ನು ಮದುವೆಯಾಗಿದ್ದ. ಇಬ್ಬರು ಅನ್ಯೋನ್ಯವಾಗಿ ಜೀವಿಸುತ್ತಿದ್ದರು. ಶೃತಿಯ ತಂದೆ, ತಾಯಿ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತ ಪಟ್ಟಿದ್ದರು. ಆಕೆಯ ತಂಗಿ 2018 ರಲ್ಲಿ ಅಪಘಾತದಲ್ಲಿ ಸಾವಿಗೀಡಾಗಿದ್ದಳು. ಇದಾದ ಬಳಿಕ ಆಕೆಯ ಹೆಸರಿಗೆ 10 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಆಸ್ತಿ ಸೇರಿತ್ತು. ಮೈಸೂರಿನ ಪ್ರಮುಖ ನಗರಗಳಲ್ಲಿದ್ದ ಕಮರ್ಷಿಯಲ್ ಕಟ್ಟಡಗಳು, ಮನೆ ಹಾಗೂ ಸೈಟ್‍ಗಳು ಶೃತಿಯ ಹೆಸರಲ್ಲಿತ್ತು. ಆ ಆಸ್ತಿಯನ್ನು ಮಾರಿ ಬೇರೆಡೆ ಆಸ್ತಿ ಕೊಳ್ಳಲು ಶೃತಿಗೆ ಆರೋಪಿ ಪತಿ ಒತ್ತಾಯಿಸುತ್ತಿದ್ದ. ಪತಿಯ ಆಸ್ತಿ ಮಾರಾಟ ವಿಚಾರಕ್ಕೆ ಪತ್ನಿ ನಿರಾಕರಿಸಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಹಲವು ಬಾರಿ ಜಗಳ ಕೂಡ ಆಗಿತ್ತು. ಇದೇ ಕಾರಣಕ್ಕೆ ಕಳೆದ ಶನಿವಾರ ಮಲಗಿದ್ದ ಪತ್ನಿಯನ್ನು ದಿಂಬು ಹಾಗೂ ಬೆಡ್ ಶೀಟ್‍ನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.
ಸಹಜ ಸಾವು ಅಂತಾ ಕತೆ ಕಟ್ಟಿದ್ದ ಪಾಪಿ!
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪಲ್ಸ್ ರೇಟ್ ಕಮ್ಮಿಯಾಗಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾಳೆಂದು ನಾಟಕವಾಡಿದ್ದ. ಹೀಗಾಗಿ ಸೋಮಶೇಖರ್ ಭಾವ ಮೃತ ಶೃತಿ ಚಿಕ್ಕಪ್ಪನಿಗೆ ಕರೆ ಮಾಡಿ ಸಹಜ ಸಾವೆಂದು ತಿಳಿಸಿದ್ದರು. ಅವರ ಅನುಮಾನಗೊಂಡ ಶೃತಿಯ ಚಿಕ್ಕಪ್ಪ ಕುಮಾರಸ್ವಾಮಿ ಎಂಬವರು ಇದು ಅಸಹಜ ಸಾವು ಅಂತಾ ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಪತಿರಾಯನ ನಿಜ ಬಣ್ಣ ಬಯಲಾಗಿದೆ.
ದೂರು ದಾಖಲಾದ ಬೆನ್ನಲ್ಲೇ ಶೃತಿಯ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆಗೈದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸೋಮಶೇಖರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.