ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ! – ಆರೋಗ್ಯ ಸಚಿವರು ಹೀಗೇಕೆ ಹೇಳಿದ್ದು? 

ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ! – ಆರೋಗ್ಯ ಸಚಿವರು ಹೀಗೇಕೆ ಹೇಳಿದ್ದು? 

ಟೆಹ್ರಾನ್: ಹಿಜಾಬ್ ವಿರೋಧಿಸಿ ವ್ಯಾಪಕ ಪ್ರತಿಭಟನೆಯಿಂದ ಇರಾನ್ ತತ್ತರಿಸಿ ಹೋಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ವಿವಾದ ಭುಗಿಲೆದ್ದಿದೆ. ಇರಾನ್ ನ ಕೋಮ್ ನಗರದಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗದಂತೆ ತಡೆಯಲು ವಿಷವುಣಿಸಿದ ಘಟನೆ ವರದಿಯಾಗಿದೆ.

2022ರ ನವೆಂಬರ್ ಅಂತ್ಯದ ವೇಳೆಗೆ ಟೆಹ್ರಾನ್‌ನ ದಕ್ಷಿಣದ ಕೋಮ್‌ನಲ್ಲಿ ಶಾಲಾ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದೆ. ಮಕ್ಕಳ ಉಸಿರಾಟದಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾಗಿದೆ. ಇದೀಗ ಈ ಘಟನೆ ಬಗ್ಗೆ ಇರಾನ್ ಆರೋಗ್ಯ ಸಚಿವ ಯುನೆಸ್ ಪನಾಹಿ ಗಂಭೀರ ಆರೋಪ ಮಾಡಿದ್ದಾರೆ. ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ತಡೆಯಲು ಕಿಡಿಗೇಡಿಗಳು ವಿಷವುಣಿಸುತ್ತಿದ್ದಾರೆ. ಅಲ್ಲದೇ ಈ ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗಿಗಳು ಮಾತ್ರವಲ್ಲದೇ ರೋಬೋಟ್ ಗಳನ್ನೂ ಕೆಲಸದಿಂದ ತೆಗೆದುಹಾಕಿದ ಗೂಗಲ್!

ಕೋಮ್ ನಗರದ ಶಾಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷಪ್ರಾಶನ ಮಾಡಿಸಿರುವುದು ಕಂಡುಬಂದ ನಂತರ ಎಲ್ಲಾ ಶಾಲೆಗಳನ್ನು ಮುಚ್ಚಬೇಕೆಂಬ ಒತ್ತಾಯ ಕೇಳಿಬಂದಿದೆ. ಅದರಲ್ಲೂ ಬಾಲಕಿಯರ ಶಾಲೆಗಳನ್ನು ಮುಚ್ಚಲೇಬೇಕೆಂದು ಕೆಲವರು ಪಟ್ಟುಹಿಡಿದಿದ್ದಾರೆ ಈ ಬಗ್ಗೆ ತನಿಖೆ ಆರಂಭಗೊಂಡಿದ್ದರೂ ಇಲ್ಲಿಯವರೆಗೆ ಯಾರೊಬ್ಬರ ಬಂಧನವಾಗಿಲ್ಲ ಎಂದು ಸಚಿವರು ಹೇಳಿದ್ದಾರೆ.

ಇದೇ ಫೆಬ್ರವರಿ 14ರಂದು ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಗಳ ಪೋಷಕರು ರಾಜ್ಯಪಾಲರ ಮನೆ ಹೊರಗೆ ಜಮಾಯಿಸಿ ಅಧಿಕಾರಿಗಳಿಂದ ವಿವರಣೆ ಕೊಡುವಂತೆ ಆಗ್ರಹಿಸಿದ್ದರು. ಇದಾದ ಮರುದಿನ ಸರ್ಕಾರದ ವಕ್ತಾರ ಅಲಿ ಬಹದೋರಿ ಜಹ್ರೋಮಿ, ಗುಪ್ತಚರ ಮತ್ತು ಶಿಕ್ಷಣ ಸಚಿವಾಲಯಗಳು ವಿಷ ಪ್ರಾಶನದ ಕಾರಣವನ್ನು ಪತ್ತೆಮಾಡಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದರು. ಈ ಸಂಬಂಧ ಕಳೆದ ವಾರ, ಪ್ರಾಸಿಕ್ಯೂಟರ್ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು.

suddiyaana