ಮನುಷ್ಯ ಸತ್ತ ನಂತರ ಇಲ್ಲಿ ದೇಹ ಗೊಬ್ಬರವಾಗುತ್ತೆ..! – “ಹಸಿರು ಅಂತ್ಯಕ್ರಿಯೆ”ಗೆ ಕೊನೆಗೂ ಸಿಕ್ತು ಗ್ರೀನ್‌ಸಿಗ್ನಲ್..!
ನ್ಯೂಯಾರ್ಕ್: ವ್ಯಕ್ತಿಯೊಬ್ಬ ಸಾವನ್ನಪ್ಪಿದಾಗ ಆತನ ಮೃತದೇಹವನ್ನು ಮಣ್ಣಿನಲ್ಲಿ ಹೂಳುತ್ತಾರೆ ಅಥವಾ ಬೆಂಕಿಯಲ್ಲಿ ಸುಡುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ ನ್ಯೂಯಾರ್ಕ್ ನಲ್ಲಿ ಇನ್ನು ಮುಂದೆ ಸತ್ತ ವ್ಯಕ್ತಿಯ ಮೃತದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಅಲ್ಲಿನ ಸರ್ಕಾರ ಒಪ್ಪಿಗೆ ನೀಡಿದೆ.
ವ್ಯಕ್ತಿಯೊಬ್ಬ ಮೃತಪಟ್ಟ ಬಳಿಕ ಆತನ ದೇಹವನ್ನು ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ಗೊಬ್ಬರವನ್ನಾಗಿಸಿ ಪರಿವರ್ತಿಸುವ ಕ್ರಿಯೆಯನ್ನು “ಹ್ಯೂಮನ್ ಕಾಂಪೋಸ್ಟಿಂಗ್” ಅಥವಾ “ಹಸಿರು ಅಂತ್ಯಕ್ರಿಯೆ” ಎಂದು ಕರೆಯುತ್ತಾರೆ. ಬಳಿಕ ಆ ಮಣ್ಣನ್ನು ಸಸಿಗಳಿಗೆ ಗೊಬ್ಬರವಾಗಿ ಬಳಕೆ ಮಾಡಲಾಗುತ್ತದೆ.
ಇದನ್ನೂ ಓದಿ: http://ಜನಸಂಖ್ಯೆ ಕಡಿಮೆಯಿರುವ ದೇಶಗಳಿಗೆ ವರವಾಗಲಿದೆಯಾ ‘ಕೃತಕ ಗರ್ಭಾಶಯದ ಸೌಲಭ್ಯ’..!
2019ರಲ್ಲಿ ವಾಷಿಂಗ್ಟನ್ ಈ “ಹಸಿರು ಅಂತ್ಯಕ್ರಿಯೆ”ಗೆ ಅನುಮತಿ ನೀಡಿದ ಮೊದಲ ರಾಜ್ಯವಾಗಿತ್ತು. ಬಳಿಕ ಕೊಲಾರಡೋ, ಒರಿಗನ್, ವೆರ್ಮೋಂಟ್ ಹಾಗೂ ಕ್ಯಾಲಿಫೋರ್ನಿಯಾ ಕೂಡ ಇದನ್ನು ಕಾನೂನುಬದ್ದಗೊಳಿಸಿದ್ದವು. ಇದೀಗ ನ್ಯೂಯಾರ್ಕ್, ಮಾನವನ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಿಕೊಟ್ಟ ಆರನೇ ರಾಜ್ಯ ಎನಿಸಿಕೊಂಡಿದೆ.
ಹ್ಯೂಮನ್ ಕಾಂಪೋಸ್ಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ?
ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದಾಗ ಆತನ ಮೃತದೇಹವನ್ನು ಕೆಲವರು ಹೂತರೆ, ಇನ್ನೂ ಕೆಲವರು ಸುಡುತ್ತಾರೆ. ಆದರೆ “ಹಸಿರು ಅಂತ್ಯಕ್ರಿಯೆ” ಯಲ್ಲಿ ಮೃತದೇಹವನ್ನು ಮುಚ್ಚಿದ ಪೆಟ್ಟಿಗೆಯಲ್ಲಿ ಇರಿಸಿ ಮರದ ತುಂಡುಗಳು, ಒಣಹುಲ್ಲು, ಹಾಗೂ ಇನ್ನಿತರ ವಸ್ತುಗಳನ್ನು ಹಾಕಲಾಗುತ್ತದೆ. ಸೂಕ್ಷ್ಮ ಜೀವಿಗಳ ಪ್ರಕ್ರಿಯೆಯಿಂದ ದೇಹವು ಮಣ್ಣಾಗಿ ಪರಿವರ್ತನೆಗೊಳ್ಳುತ್ತದೆ.
ಈ ದೇಹವು ಗೊಬ್ಬರವಾಗಿ ಪರಿವರ್ತನೆಯಾಗಲು ಕೆಲವು ತಿಂಗಳುಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಗೊಬ್ಬರವಾಗಿ ಪರಿವರ್ತನೆಯಾದ ನಂತರ ಅದರಲ್ಲಿ ಇರುವ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲಲು ಬಿಸಿ ಮಾಡಲಾಗುತ್ತದೆ. ಬಳಿಕ ಅದನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಇದನ್ನು ಗೊಬ್ಬರವನ್ನಾಗಿ ಬಳಸಲಾಗುತ್ತದೆ.
ಪರಿಸರ ಸ್ನೇಹಿ ಹ್ಯೂಮನ್ ಕಾಂಪೋಸ್ಟಿಂಗ್
ಮೃತದೇಹವನ್ನು ಸುಡುವುದರಿಂದ, ಹೂಳುವಂಥಹ ಸಾಂಪ್ರದಾಯಿಕ ಪ್ರಕ್ರಿಯೆಗಿಂತ ಕಾರ್ಬನ್ ಹೊರಸೂಸುವಿಕೆ ಹೆಚ್ಚಾಗಿರುತ್ತದೆ. ಆದರೆ ಹ್ಯೂಮನ್ ಕಾಂಪೋಸ್ಟಿಂಗ್ ಪ್ರಕ್ರಿಯೆ ಪರಿಸರ ಸ್ನೇಹಿಯಾಗಿದೆ. ಹ್ಯೂಮನ್ ಕಾಂಪೋಸ್ಟಿಂಗ್ ವಿಧಾನದಿಂದ ಕಾರ್ಬನ್ ಹೊರಸೂಸುವಿಕೆ ಶೂನ್ಯವಾಗಲಿದೆ.