ಸರ್ವರ್‌ ಸಮಸ್ಯೆ ಮಧ್ಯೆಯೂ ಗೃಹಲಕ್ಷ್ಮೀ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ –  2ನೇ ದಿನ ಬರೋಬ್ಬರಿ 7.7 ಲಕ್ಷ ನೋಂದಣಿ

ಸರ್ವರ್‌ ಸಮಸ್ಯೆ ಮಧ್ಯೆಯೂ ಗೃಹಲಕ್ಷ್ಮೀ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ –  2ನೇ ದಿನ ಬರೋಬ್ಬರಿ 7.7 ಲಕ್ಷ ನೋಂದಣಿ

ಬೆಂಗಳೂರು: ಮನೆ ಯಜಮಾನಿಗೆ 2,000 ರೂಪಾಯಿ ಹಣ ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಎರಡನೇ ದಿನ ಕೂಡ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಶುಕ್ರವಾರ ಬರೊಬ್ಬರಿ 7.7 ಲಕ್ಷ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಶುಕ್ರವಾರ ಒಂದೇ ದಿನ ಲಕ್ಷಾಂತರ ಮಂದಿ ನೋಂದಣಿಗೆ ಮುಗಿಬಿದ್ದಿದ್ದರಿಂದ ರಾಜ್ಯದ ಹಲವೆಡೆ ಸರ್ವರ್‌ ಸಮಸ್ಯೆ ಉಂಟಾಗಿತ್ತು. ಮಹಿಳೆಯರು ಅರ್ಜಿ ಸಲ್ಲಿಕೆಗೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಪರದಾಡುವಂತಾಯಿತು. ತಾಂತ್ರಿಕ ದೋಷಗಳ ಮಧ್ಯೆ ಕೂಡ ಬರೋಬ್ಬರಿ 7.7 ಲಕ್ಷ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ್ದಾರೆ.

ಇದನ್ನೂ ಓದಿ:ರಸ್ತೆಯಲ್ಲಿ ಜಾನುವಾರುಗಳು ಓಡಾಡಿದ್ರೆ ಮಾಲೀಕನಿಗೆ ಬೀಳುತ್ತೆ ಚಪ್ಪಲಿ ಏಟು! 

ಇನ್ನು ಶುಕ್ರವಾರ ಮೊದಲ ದಿನಕ್ಕಿಂತ ಹತ್ತು ಪಟ್ಟು ಹೆಚ್ಚು ಮಂದಿ ನೋಂದಣಿ ಮಾಡಿದ್ದಾರೆ. ನೋಂದಣಿ ಮಾಡಬೇಕಿರುವ ಸಂಖ್ಯೆ ಇನ್ನೂ ಹೆಚ್ಚಿರುವ ಕಾರಣ ಶನಿವಾರ ಹಾಗೂ ಭಾನುವಾರವೂ ಎಲ್ಲಾ ಸೇವಾ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

ಯೋಜನೆಗೆ ಬುಧವಾರ ಸಂಜೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ವೇಳೆ ಇ-ಆಡಳಿತ ಇಲಾಖೆಯಿಂದ ಯಾರ ಮೊಬೈಲ್‌ಗಳಿಗೆ ನೋಂದಣಿ ಸಮಯ ಹಾಗೂ ಸ್ಥಳದ ಸಂದೇಶ ಬಂದಿರುತ್ತದೆಯೋ ಅವರು ಸಂಬಂಧಪಟ್ಟಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಸಂದೇಶ ಬಾರದಿದ್ದರೆ 1902ಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯ ಸಂದೇಶ ಕಳುಹಿಸುವ ಮೂಲಕ ಸೇವಾ ಕೇಂದ್ರ ಹಾಗೂ ನೋಂದಣಿ ಸಮಯದ ಸಂದೇಶ ಪಡೆಯಲು ಸ್ಪಷ್ಟವಾಗಿ ಸೂಚನೆ ನೀಡಿತ್ತು. ಹೀಗಾಗಿ ಜನಸಂದಣಿ ಉಂಟಾಯಿತು. ಆದರೆ, ಈ ಮಾಹಿತಿ ಬಹುತೇಕರಿಗೆ ತಲುಪದ ಹಿನ್ನೆಲೆಯಲ್ಲಿ ಶುಕ್ರವಾರವೂ ಬೆಳಗ್ಗೆಯಿಂದ ಸೇವಾ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿಗೆ ಹಾಜರಾದರು. ಹೀಗಾಗಿ ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌, ಬಾಪೂಜಿ ಸೇವಾ ಕೇಂದ್ರ ಸೇರಿ 11,000 ಸೇವಾ ಕೇಂದ್ರಗಳಲ್ಲಿ ದಿನಕ್ಕೆ 60 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದ್ದರೂ, ನಿಗದಿತ ಸಂಖ್ಯೆಗಿಂತ ಹೆಚ್ಚು ಜನದಟ್ಟಣೆ ಉಂಟಾಯಿತು. ಅನಿವಾರ್ಯವಾಗಿ ಮೆಸೇಜು ಬಾರದವರಿಗೂ ನೋಂದಣಿ ಮಾಡಿಕೊಟ್ಟಹಿನ್ನೆಲೆಯಲ್ಲಿ ಸರ್ವರ್‌ ಸಮಸ್ಯೆ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana