ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಭಾರಿ ಇಳಿಕೆ – ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರು?

ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಭಾರಿ ಇಳಿಕೆ – ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರು?

ಈ ಬಾರಿ ಬಿಸಿಲು ಬೆಂಕಿಯಾಗಿದೆ. ನೆಲ ಸುಡುತ್ತಿದೆ. ನೀರಿನ ಪ್ರಮಾಣ ಕೂಡಾ ಬಿಸಿಲಧಗೆಗೆ ಕಡಿಮೆಯಾಗುತ್ತಿದೆ. ನೆತ್ತಿ ಸುಡುವ ರಣಬಿಸಿಲು ಒಂದೆಡೆ, ಸೊರಗಿ ಹೋದ ನದಿಗಳು ಮತ್ತೊಂದೆಡೆ. ಇದರ ಜೊತೆಗೆ ಅಣೆಕಟ್ಟುಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ.

ಇದನ್ನೂ ಓದಿ: ಬಿಸಿಲಿನ ಹೊಡೆತಕ್ಕೆ ಇಬ್ಬರು ಶಾಲಾ ಶಿಕ್ಷಕರು ಬಲಿ – ಜನಗಣತಿಗೆ ಹೋದಾಗಲೇ ಹೋಯ್ತು ಪ್ರಾಣ

ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಈ ಬಾರಿ ತಾಪಮಾನ ಅಧಿಕವಾಗಿದೆ. ಬೆಂಕಿ ಬಿಸಿಲಿನ ಹೊಡೆತಕ್ಕೆ ರಾಜ್ಯದ ಅಣೆಕಟ್ಟುಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಕಳೆದ ಬಾರಿಯ ಬೇಸಿಗೆಗೆ ಹೋಲಿಸಿಕೊಡರೆ ಈ ಬಾರಿ ಅಣೆಕಟ್ಟುಗಳಲ್ಲಿ ನೀರು ಶೇಖರಣೆ ಪ್ರಮಾಣ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅಲ್ಲದೇ ಈ ಭಾರಿ ಭಾರತಕ್ಕೆ ಎಲ್​ ನಿನೋ ಬಾಧಿಸಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಇದೆಲ್ಲದರ ಮಧ್ಯೆ ನೀರಿಗಾಗಿ ಹಾಹಾಕಾರ ಶುರುವಾಗಲಿದೆಯಾ ಎಂಬ ಆತಂಕ ಎದುರಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ಕೊಟ್ಟಿದೆ. ಬೀದರ್, ವಿಜಯಪುರ, ಬಾಗಲಕೋಟೆ ಹೊರತುಪಡಿಸಿ ಎಲ್ಲಾ ಕಡೆಗಳಲ್ಲಿ ‌ಮಳೆ ಎಚ್ಚರಿಕೆ ನೀಡಲಾಗಿದೆ.  ಅಲ್ಲದೇ ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಉತ್ತರ ಒಳನಾಡು, ಮಲೆನಾಡು, ಕರಾವಳಿಯಲ್ಲಿ ಸಾಧಾರಣ ಮಳೆಯಾಗಲಿದ್ದು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆ ಅಲರ್ಟ್ ಇದೆ. ಹೀಗಾಗಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಒಂದು ಕಡೆ ಮಳೆ ಅಲರ್ಟ್, ಮತ್ತೊಂದು ಕಡೆ ರಣಬಿಸಿಲಿನ ಹೊಡೆತ. ಇದರ ನಡುವೆ ದಿನೇ ದಿನೇ ಕಡಿಮೆಯಾಗುತ್ತಿರುವ ನೀರಿನ ಪ್ರಮಾಣ. ಈ ಬಾರಿಯ ಬೇಸಿಗೆಗೆ ಜನ ಹೈರಾಣಾಗಿ ಹೋಗಿದ್ದಂತೂ ಸುಳ್ಳಲ್ಲ.

Sulekha