ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಕೇಸ್‌ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಕೇಸ್‌ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ

ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಕ್ಯಾಂಪಸ್​​ನಲ್ಲಿ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದಿದೆ. ಯುವಕ ಯುವತಿ ಪ್ರೀತಿ ಮಾಡ್ತಿದ್ದರು ಎಂದು ಗೃಹಸಚಿವರ ಡಾ.ಜಿ ಪರಮೇಶ್ವರ್ ಹೇಳಿರೋದು ವಿವಾದಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ. ಇದೀಗ ನೇಹಾ ಹತ್ಯೆ ಪ್ರಕರಣ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಶನಿವಾರ ಪ್ರತಿಭಟನೆಗೆ ಮುಂದಾಗಿದ್ದು, ಬೆಂಗಳೂರಿನಲ್ಲಿರುವ ಗೃಹಸಚಿವ ಜಿ.ಪರಮೇಶ್ವರ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗ ಕೆ.ಎಲ್​​ ರಾಹುಲ್​ ಮುಂದೆ ಮಂಡಿಯೂರಿದ ಸಿಎಸ್‌ಕೆ – ಗೆದ್ದು ಬೀಗಿದ ಲಕ್ನೋ ಸೂಪರ್​ ಜೈಂಟ್ಸ್​

ವಿದ್ಯಾರ್ಥಿನಿ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಎಬಿವಿಪಿ ಕಾರ್ಯಕರ್ತರು ನೇಹಾ ಹತ್ಯೆ ಮಾಡಿದ ಆರೋಪಿ ಫಯಾಜ್‌‌ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಜಸ್ಟೀಸ್ ಫಾರ್ ನೇಹಾ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಶನಿವಾರ ಬೆಳಗ್ಗೆ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಎಬಿವಿಪಿ ಮುಂದಾಗಿದೆ. ಭಾನುವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಎಬಿವಿಪಿ ಕರೆ ಕೊಟ್ಟಿದೆ. ಬೆಂಗಳೂರಿನಲ್ಲೂ ಹತ್ಯೆ ಖಂಡಿಸಿ ಎಬಿವಿಪಿ ಹೋರಾಟ ನಡೆಸಲಿದೆ.

ಇನ್ನು ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಸದ್ಯ ಗೃಹಸಚಿವ ಪರಮೇಶ್ವರ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

Shwetha M