ಗರ್ಭಿಣಿ ಮಗಳಿಗಿಂತಾ ಜಾತಿಯೇ ಹೆಚ್ಚಾ?- ಮರ್ಯಾದೆ ಸೇಡು.. ಹೆತ್ತಪ್ಪನೇ ಕಟುಕ..!

ಗರ್ಭಿಣಿ ಮಗಳಿಗಿಂತಾ ಜಾತಿಯೇ ಹೆಚ್ಚಾ?- ಮರ್ಯಾದೆ ಸೇಡು.. ಹೆತ್ತಪ್ಪನೇ ಕಟುಕ..!

ಅಪ್ಪನೇ ಮಗಳ ಮೊದಲ ಹೀರೋ..  ಹೆಣ್ಮಗಳು ತಾಯಿಗಿಂತ ಹೆಚ್ಚು ಪ್ರೀತಿಸುವುದು ತಂದೆಯನ್ನೇ. ಕನಸಿಗೆ ಏಣಿಯಾಗಿ ಪ್ರತಿ ಹೆಜ್ಜೆಯಲ್ಲೂ ಅಪ್ಪನೇ ಮಗಳ ಮೆಟ್ಟಿಲಾಗಿ ಇರ್ತಾನೆ.. ತಾಯಿ 9 ತಿಂಗಳು ಹೊತ್ತು ಸಾಕಿದ್ರೆ, ಅಪ್ಪ ಆ ಮಗು ಮದುವೆಯಾಗೋ ವಯಸ್ಸಿಗೆ ಬರೋ ತನಕ ಹಗಲು ರಾತ್ರಿ ಕಷ್ಟಪಟ್ಟು ದುಡಿದು ಸಾಕುತ್ತಾನೆ. ತನಗೆ ತಿನ್ನೋಕೆ ಏನೂ ಇಲ್ಲದಿದ್ದರೂ ಆ ಮಗಳಿಗಾಗಿ ಎಲ್ಲವನ್ನೂ ಕೊಡಿಸುತ್ತಾನೆ ಅಪ್ಪ. ಮಗಳು ಕೇಳಿದ್ದನ್ನೇಲ್ಲಾ  ಕೊಡಿಸುವ ಅಪ್ಪ, ಮಗಳ ಪ್ರೀತಿ ವಿಷ್ಯದಲ್ಲಿ, ಜಾತಿ ವಿಷ್ಯದಲ್ಲಿ ಯಾಕೆ ಕಟುಕನಾಗಿ ಬಿಡ್ತಾನೆ ಅನ್ನೋದೆ ಗೊತ್ತಾಗಲ್ಲ. ನಿಜಕ್ಕೂ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರತಿಯೊಬ್ಬರ ಕಣ್ಣಲ್ಲಿ ನೀರು ತರಿಸುತ್ತೆ..

ಅಪ್ಪನೇ ಮಗಳ ಮೊದಲ ಹೀರೋ ಅನ್ನೋ ಮಾತು ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಈ ಘಟನೆ ಸುಳ್ಳಾಗಿದೆ. ಹೆತ್ತ ಮಗಳ ಸಂಭ್ರಮವನ್ನು ಕಂಡು, ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನ ಎತ್ತಿ ಆಡಿಸಬೇಕಿದ್ದ ತಂದೆಯೇ, ಅವಳ ಉಸಿರು ನಿಲ್ಲಿಸುವ ಮೂಲಕ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದ್ದಾರೆ. ನಾವು ಭಾರತೀಯರು, ನಾವು ಚಂದ್ರಯಾನ ಮಾಡುತ್ತಿದ್ದೇವೆ.. AI, ಅದು, ಇದು ಅಂತ ತಂತ್ರಜ್ಞಾನದಲ್ಲಿ ಬೆಳೆಯುತ್ತಿದ್ದೇವೆ. ಎಲ್ಲೋ ಕೂತು ಎಲ್ಲೋ ನಡೆಯೋ ಘಟನೆಯನ್ನ ಕೈ ಬೆರಳಿನಲ್ಲಿ ನೋಡುತ್ತೇವೆ. ತಂತ್ರಜ್ಞಾನ ಎಷ್ಟೇ ಬದಲಾದ್ರೂ, ನಮ್ಮ ಮನಸ್ಥಿತಿ ಬದಲಾಗಿಲ್ಲ. ನಾವು ಜಾತಿ ಸಂಕೋಲೆಯಿಂದ ಇನ್ನೂ ಹೊರ ಬಂದಿಲ್ಲ. ಅದೆಷ್ಟೋ ಕಾನೂನು ಬಂದ್ರೂ ಇಂದಿಗೂ, ಈ ಕ್ಷಣದ ತನಕ ಜಾತಿ ಅನ್ನೋ ಭೂತ ನಮ್ಮ ಮನುಷ್ಯತ್ವವೇ ಇಲ್ಲದಂತೆ ಮಾಡಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಹುಲಿ ಕಾಟ – ಎರಡು ದಿನ ಶಾಲೆ, ಅಂಗಡಿ, ಜನರ ಓಡಾಟ ಬಂದ್

​ಸ್ನೇಹಿತರೇ..  ಮಾನ್ಯ.. ಈ ಚೆಲುವೆ ತನ್ನ ಮನಮೆಚ್ಚಿದ ಹುಡುಗನಾದ ವಿವೇಕಾನಂದನನ್ನ ಕೈಹಿಡಿದು ಬದುಕಬೇಕೆಂದು ಕನಸು ಕಂಡಿದ್ದಳು. ಆದರೆ ಈ ವಿವೇಕಾನಂದ ಬೇರೆ ಜಾತಿಯವನು.. ಹುಡುಗ ಕಳ ಜಾತಿಯವನು ಅನ್ನೋ ಕಾರಣಕ್ಕೆ ಈ ಪ್ರೀತಿಗೆ ಮಾನ್ಯ ಮನೆಯವರ ತೀವ್ರ ವಿರೋಧವಿತ್ತು. ಮನೆಯವರ ವಿರೋಧದ ನಡುವೆಯೂ ಹಸೆಮಣೆ ಏರಿ ಹೊಸ ಬದುಕು ಕಟ್ಟಿಕೊಳ್ಳಲು ಮಾನ್ಯಾ ನಿರ್ಧಾರ ಮಾಡಿ ರಿಜೆಸ್ಟರ್ ಮ್ಯಾರೇಜ್ ಆಗಿದ್ಲು. ಈ ನಿರ್ಧಾರ ಮಾನ್ಯಾಳ ತಂದೆಯಾ  ಪ್ರಕಾಶಗೌಡ ಗೌರವಕ್ಕೆ ಧಕ್ಕೆ ತಂದಿದೆ. ನನ್ನ ಮಗಳು  ಕಳ ಜಾತಿಯವನನ್ನ ಮದುವೆಯಾಗಿ ನನ್ನ ಗೌರವಕ್ಕೆ ಧಕ್ಕೆ ತಂದ್ಲು ಅನ್ನೋ ಕೋಪ ತಂದೆಯನ್ನ ಕ್ರೂರಿ ಮಾಡಿತ್ತು. ಮದುವೆಯಾದ ದಿನವೇ ಕರುಳಕುಡಿಯನ್ನ ಮುಗಿಸೋಕೆ ಪ್ರಕಾಶಗೌಡ ಸ್ಕೆೇಚ್ ಹಾಕಿದ್ದ. ಈ ನಡುವೆ ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬಗಳ ನಡುವೆ ಸಂಧಾನ ನಡೆದಿತ್ತು. ಎಲ್ಲವೂ ಸುಸೂತ್ರವಾಗಿದೆ ಎಂದು ನಂಬಿದ್ದ ಮಾನ್ಯಾ ಮತ್ತು ವಿವೇಕನಂದಾ ಮದುವೆಯಾದ 7 ತಿಂಗಳ ಬಳಿಕ ಡಿಸೆಂಬರ್ 8 ರಂದು ಗ್ರಾಮಕ್ಕೆ ವಾಪಸ್ ಆಗಿದ್ರು. 6 ತಿಂಗಳ ಗರ್ಭಿಣಿಯಾದ ಮಾನ್ಯಾ ಮುಂದೆ ಒಂದು ದಿನ ಮಗುವಿನ ಜೊತೆ ಗಂಡನ ಜೊತೆ ತವರು ಮನೆಗೆ ಹೋಗೋಕೆ ಕನಸು ಕೂಡ ಕಾಣುತ್ತಿದ್ದಳು. ಆದ್ರೆ ಮಗಳು ಕಳ ಜಾತಿಯವರನ್ನ ಕೈಹಿಡಿದಿದ್ದನ್ನು ಮರ್ಯಾದೆ ಪ್ರಶ್ನೆಯನ್ನಾಗಿಸಿಕೊಂಡಿದ್ದ ತಂದೆ ಪ್ರಕಾಶಗೌಡ ಪಾಟೀಲ್ ಸರಿಯಾದ ಸಮಯಕ್ಕೆ ಕಾಯುತ್ತಿದ್ದ. ಇದೇ ಭಾನುವಾರ ಸಂಜೆ ತನ್ನ ಸಂಬಂಧಿಕರಾದ ವೀರನಗೌಡ ಮತ್ತು ಅರುಣ್ ಗೌಡ ಅವರೊಂದಿಗೆ ವಿವೇಕಾನಂದನ ಮನೆಗೆ ನುಗ್ಗಿದ ಮಾನ್ಯ ತಂದೆ ಪ್ರಕಾಶಕೌಡ,  ಮಗಳ ಉಸಿರು ನಿಲ್ಲಿಸುವಂತೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಾನ್ಯಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ತನ್ನ ಕರುಳಿನಲ್ಲಿರೋ ಪ್ರಪಂಚವೇ ನೋಡದ ಮಗುವಿನ ಜೊತೆ ಶಿವನ ಪಾದ ಸೇರಿದ್ದಾಳೆ.

ಈ ನಿಜಕ್ಕೂ ಈ ಸುದ್ದಿ ನಮ್ಮ ಕಣ್ಣಲ್ಲಿ ನೀರು ತರಿಸುತ್ತಿದೆ. ಜಾತಿಯ ಮಡಿವಂತಿಕೆಯ ಮುಂದೆ  ಮಗಳ ಪ್ರೀತಿ ತಂದೆಯನ್ನ ಕ್ರೂರಿ ಮಾಡಿದೆ. ನಿಜಕ್ಕೂ ಜಾತಿ ಸಂಕೋಲೆಯಿಂದ ನಮ್ಮ ಸಮಾಜ ಇನ್ನೂ ಹೊರ ಬಂದಿಲ್ಲ. ಎಷ್ಟೇ ಕಾನೂನುಗಳು ಬಂದ್ರೂ ಜಾತಿ ವ್ಯವಸ್ಥೆಯನ್ನ ಸರಿ ಮಾಡೋಕೆ ಆಗುತ್ತಿಲ್ಲ. ಇಲ್ಲಿ ಮಗಳ ಪ್ರೀತಿಗಿಂತ ತಂದೆಯೆ ದ್ವೇಷವೇ ಗೆದ್ದು ರಣಕೇಕೆ ಹಾಕಿದೆ. ಇನಾಂ ವೀರಾಪುರ ಗ್ರಾಮ ಇಂದು ಮೌನವಾಗಿದೆ. ಆದರೆ ಆ ಮೌನದಲ್ಲಿ ಮಾನ್ಯಾಳ ಸುಟ್ಟು ಹೋದ ಕನಸುಗಳ, ಅರ್ಧಕ್ಕೆ ನಿಂತ ಬದುಕಿನ ಆಕ್ರಂದನ ಕೇಳಿಬರುತ್ತಿದೆ.

Kishor KV