ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಲಂಚ – ಲೋಕಾ ಬಲೆಗೆ ಬಿದ್ದ ಹುಬ್ಬಳ್ಳಿ–ಧಾರವಾಡ ಪಾಲಿಕೆ ಅಧಿಕಾರಿ

ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಲಂಚ ಪಡೆಯುತ್ತಿದ್ದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮಹಿಳಾ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾನಗರ ಪಾಲಿಕೆಯ ವಲಯ–1 ಕಚೇರಿಯ ಅಧಿಕಾರಿ ಹೀನಾ ಕೌಸರ್ ಎಂಬವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಸತ್ತ ವ್ಯಕ್ತಿಗೆ ಮತ್ತೆ ಜೀವ ನೀಡಿದ ರೋಡ್ ಹಂಪ್! – ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ನಡೆದಿದ್ದೇನು?
ಮಾಳೆಪ್ಪ ತಳವಾರ ಎಂಬುವರು ರೊಟ್ಟಿ ಅಂಗಡಿ ಆರಂಭಿಸಲು ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಲೈಸೆನ್ಸ್ ನೀಡಲು ಹೀನಾ ಕೌಸರ್ 4,500 ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಮೊದಲು ಅವರು ಮಾಳೆಪ್ಪರಿಂದ ಮುಂಗಡವಾಗಿ 1,000 ರೂ. ಸ್ವೀಕರಿಸಿದ್ದಾಗಿ ತಿಳಿದುಬಂದಿದೆ. ಇಂದು (ಮಾರ್ಚ್ 7) ಉಳಿದ 3,500 ರೂ. ಹಣವನ್ನು ಮಾಳೆಪ್ಪ ತಳವಾರರಿಂದ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹೀನಾ ಕೌಸರ್ ಅವರನ್ನು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಈ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿದ್ದು, ಅಧಿಕಾರಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮದಂತೆ ಲೈಸನ್ಸ್ ನೀಡಬೇಕಾದ ಹೆಲ್ತ್ ಇನ್ಸ್‌ಪೆಕ್ಟರ್ ಹೀನಾ ಕೌಸರ್, ಕೆಲಸ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದರು. ಕಷ್ಟಪಟ್ಟು ಜೀವನ ಸಾಗಿಸಲು ರೊಟ್ಟಿ ಮಷಿನ್ ಹಾಕಿಕೊಳ್ಳುತ್ತಿದ್ದ ವ್ಯಕ್ತಿಯಿಂದ ಬರೋಬ್ಬರಿ 4,500 ರೂಪಾಯಿ ಲಂಚ ನೀಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಹಣ ನೀಡದ ಹೊರತು ಲೈಸನ್ಸ್ ಪ್ರಕ್ರಿಯೆ ಮುಂದೆ ಹೋಗುವುದಿಲ್ಲ ಎಂಬ ಧಾಟಿಯಲ್ಲಿ ಅಧಿಕಾರಿ ವರ್ತಿಸಿದ್ದರು.

ನೋಡಿರಿ

