ಇಂಡಿಯಾ ಮೈತ್ರಿಕೂಟ ಖೇಲ್ ಖತಂ? – ಲೋಕಸಭೆಯಲ್ಲಿ ಏನಾಗುತ್ತೆ?

ಇಂಡಿಯಾ ಮೈತ್ರಿಕೂಟ ಖೇಲ್ ಖತಂ? – ಲೋಕಸಭೆಯಲ್ಲಿ ಏನಾಗುತ್ತೆ?

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಭುತ್ವ ಸಾಧಿಸಿ. ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ –ಅಧಿಕಾರಕ್ಕೇರಿದೆ. ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ನ್ನ ಕೆಡವಿ ಅಲ್ಲೂ ಆಡಳಿತದ ಚುಕ್ಕಾಣಿ ಹೊರ್ತಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​​ ಅನ್ನು ಹೀನಾಯವಾಗಿ ಬಿಜೆಪಿ ಸೋಲಿಸಿದೆ. ಉತ್ತರ ಭಾರತದಲ್ಲಿ ಈಗ ಅಕ್ಷರಶ: ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ಸದ್ಯ ಇಡೀ ದೇಶದಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ಹಿಮಾಲಚಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ. ಇನ್ನು ಜಾರ್ಖಂಡ್ ಮತ್ತು ಬಿಹಾರದಲ್ಲಿ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಪಾತ್ರಧಾರಿಯಾಗಿದೆ. ಇತ್ತ ಬಿಜೆಪಿ ದೇಶಾದ್ಯಂತ ಒಟ್ಟು 12 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಈಗ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕೀಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಅನ್ನೋದು ಈಗಿರುವ ಪ್ರಶ್ನೆ. ಯಾಕಂದ್ರೆ ಮುಂದಿನ ಐದು ತಿಂಗಳಲ್ಲಿ ನಡೆಯೋ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಡ ಮೋದಿಯನ್ನು ಎದುರಿಸೋಕೆ ಮುಂದಾಗಿದೆ. ಈಗ ವಿಧಾನಸಭೆ ಚುನಾವಣೆ ರಿಸಲ್ಟ್​ನಿಂದ ಇಂಡಿಯಾ ಮೈತ್ರಿಕೂಟದ ಕಥೆ ಏನಾಗಬಹುದು. ಅದ್ರಲ್ಲೂ ಮೈತ್ರಿಕೂಟದಲ್ಲಿ ಲೀಡರ್​​ನಂತೆ ಕಾಣಿಸಿಕೊಂಡಿದ್ದ ಕಾಂಗ್ರೆಸ್​ ಈಗ ಮೂರು ರಾಜ್ಯಗಳಲ್ಲಿ ಸೋತಿರೋದ್ರಿಂದ ಇದು ಪಕ್ಷದ ಯಾವ ರೀತಿ ಎಫೆಕ್ಟ್ ಆಗಬಹುದು? ಈ ರಿಸಲ್ಟ್ ಬಿಜೆಪಿಗೆ ಯಾವ ರೀತಿ ಅಡ್ವಾಂಟೇಜ್ ಆಗಬಹುದು? ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಜನತಾ ಜನಾರ್ದನರಿಗೆ ನಮಿಸುತ್ತೇವೆ, ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು – ಮೋದಿ

ಇಂಡಿಯಾ ಮೈತ್ರಿಕೂಟ ಖೇಲ್ ಖತಂ?

ಇಂಡಿಯಾ ಮೈತ್ರಿಕೂಟ ರಚನೆಯಾಗಿ ಕೆಲ ತಿಂಗಳುಗಳು ಕಳೆದಿದೆಯಷ್ಟೇ. ಮೂರು ಮೀಟಿಂಗ್​​ಗಳನ್ನ ಮಾಡಿದ್ದಾರಷ್ಟೇ. ಅಷ್ಟರಲ್ಲೂ ಮೈತ್ರಿ ಮನೆಯಲ್ಲಿ ಭಿನ್ನಮತ ಶುರುವಾಗಿದೆ. ಇಂಡಿಯಾ ಮೈತ್ರಿಕೂಟದವನ್ನ ಕಾಂಗ್ರೆಸ್​ ಲೀಡ್ ಮಾಡುತ್ತೆ. ಲೋಕಸಭೆ ಚುನಾವಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಕಾಂಗ್ರೆಸ್​​ ನೇತೃತ್ವದ ಮಹಾಮೈತ್ರಿಕೂಟ ಮೋದಿಯನ್ನ ಎದುರಿಸುತ್ತೆ ಅಂತಾನೆ ಅಂದುಕೊಳ್ಳಲಾಗಿತ್ತು. ಅದ್ರಲ್ಲೂ ಕರ್ನಾಟಕ ವಿಧಾನಸಭೆ ಚುನಾವಣೆಯನ್ನ ಗೆಲ್ಲುತ್ತಲೇ ಕಾಂಗ್ರೆಸ್​​ಗೆ ಭಾರಿ ಎನರ್ಜಿ ಸಿಕ್ಕಂತಾಗಿತ್ತು. ಕರ್ನಾಟಕದಲ್ಲಿ ಬಿಜೆಪಿಯನ್ನ ಸೋಲಿಸಿದಂತೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ಚುನಾವಣೆಯಲ್ಲೂ ಕೂಡ ಬಿಜೆಪಿಯನ್ನ ಮಣಿಸಬಹುದು. ಲೋಕಸಭೆ ಚುನಾವಣೆಲ್ಲೂ ಬಿಜೆಪಿಗೆ ಟಕ್ಕರ್ ಕೊಡಬಹುದು ಅಂತಾ ಕೈ ನಾಯಕರು ಲೆಕ್ಕಾಚಾರ ಹಾಕಿದ್ರು. ಕಾಂಗ್ರೆಸ್​ ಕಮ್​ಬ್ಯಾಕ್ ಮಾಡುತ್ತೆ, ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪವರ್ ಹೌಸ್ ಆಗುತ್ತೆ ಅಂತಾನೂ ವಿಶ್ಲೇಷಣೆಗಳು ನಡೀತಿದ್ವು. ಆದ್ರೀಗ ಮೂರು ರಾಜ್ಯಗಳನ್ನ ಬಿದ್ದಿರೋ ಹೊಡೆತ ಕೇವಲ ಕಾಂಗ್ರೆಸ್​​ಗೆ ಮಾತ್ರವಲ್ಲ ಇಂಡಿಯಾ ಮೈತ್ರಿಕೂಟವನ್ನೂ ಕಂಗಾಲಾಗಿಸಿದೆ. ಮೊದಲೇ ಇಂಡಿಯಾ ಮೈತ್ರಿಕೂಟ ನಾವಿಕನಿಲ್ಲದ ಹಡಗಿನಂತಾಗಿದೆ. ಹೀಗಾಗಿ ಮೈತ್ರಿಕೂಟದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಟೈಟಾನಿಕ್ ಹಡಗಿನಂತಾಗುತ್ತಾ ಅನ್ನೋ ಅನುಮಾನ ಮೂಡ್ತಾ ಇದೆ. ಯಾಕಂದ್ರೆ, ಈಗಾಗ್ಲೇ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಬಿದ್ದಾಗಿದೆ. ಅಖಿಲೇಶ್ ಯಾದವ್ ಓಪನ್ ಆಗಿಯೇ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್​ ಅಂತೂ ಮೈತ್ರಿಕೂಟ ಹಡಗಿನಿಂದ ತಮ್ಮ ಬೋಟ್​​ನ್ನ ನೀರಿಗಿಳಿಸಿ ಲೈಫ್ ಜಾಕೆಟ್ ಹಾಕ್ಕೊಂಡು ರೆಡಿಯಾಗಿದ್ದಾರೆ. ಇಂಡಿಯಾ ಮೈತ್ರಿಕೂಟವೆಂಬ ಹಡಗಿನಿಂದ ಬೋಟ್​​ಗೆ ಜಂಪ್​ ಮಾಡೋದಕ್ಕಷ್ಟೇ ಬಾಕಿ. ಇನ್ನು ಮಮತಾ ಬ್ಯಾನರ್ಜಿಗಂತೂ ಕಾಂಗ್ರೆಸ್​ನ್ನ ಕಂಡ್ರೆ ಅಷ್ಟಕ್ಕಷ್ಟೇ. ರಾಹುಲ್​​ ಗಾಂಧಿ ಲೀಡರ್​ಶಿಪ್​ನ್ನಂತೂ ಸುತಾರಾಂ ಒಪ್ಪಿಕೊಳ್ಳೋದಿಲ್ಲ. ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಬಗ್ಗೆಯಂತೂ ಕೇಳೋದೆ ಬೇಡ. ಮೊದಲೇ ಜಂಪಿಂಗ್ ಮಾಸ್ಟರ್.. ಅತೀ ದೊಡ್ಡ ಅವಕಾಶವಾದಿ ರಾಜಕಾರಣಿ. ಹೀಗಾಗಿ ಇಂಡಿಯಾ ಮೈತ್ರಿಕೂಟದಲ್ಲಿರುವ ಬಹುತೇಕ ಪಕ್ಷಗಳು ಕಾಂಗ್ರೆಸ್​​ ನೇತೃತ್ವವನ್ನ ಅಥವಾ ಕಾಂಗ್ರೆಸ್ ನಾಯಕರ ಕೈಗೆ ಮೈತ್ರಿಕೂಟದ ಲಗಾಮು ನೀಡೋಕೆ ಒಪ್ಪೋದು ಇನ್ಮುಂದೆ ಸಾಧ್ಯವೇ ಇಲ್ಲ. ಕಾಂಗ್ರೆಸ್​​ನಿಂದ ಬಿಜೆಪಿಯನ್ನು ಸೋಲಿಸೋಕೆ ಸಾಧ್ಯವಿಲ್ಲ. ಅದ್ರಲ್ಲೂ ಉತ್ತರ ಭಾರತದಲ್ಲಂತೂ ಚಾನ್ಸೇ ಇಲ್ಲ ಅನ್ನೋ ನಿರ್ಧಾರಕ್ಕೆ ಈಗಾಗ್ಲೇ ಮೈತ್ರಿಕೂಟದ ಪಕ್ಷಗಳು ಈಗಾಗ್ಲೇ ಬಂದಿರುತ್ತೆ. ಹೀಗಾಗಿ ಇಂಡಿಯಾ ಮೈತ್ರಿಕೂಟ ಲೋಕಸಭೆವರೆಗೂ ಉಳಿದಿದ್ದೇ ಆದಲ್ಲಿ, ಸೀಟು ಹಂಚಿಕೆ ವಿಚಾರದಲ್ಲಿ ಯಾವ ರೀತಿ ಸಮನ್ವಯ ಸಾಧಿಸುತ್ತೆ ಅನ್ನೋದು ಈಗಿರುವ ಪ್ರಶ್ನೆ. ಮೈತ್ರಿಕಕೂಟಕ್ಕೆ ಈಗ ಚಾಲೆಂಜ್ ಆಗಿರೋದು ಸೀಟು ಹಂಚಿಕೆ. ವಿಧಾನಸಭೆ ಚುನಾವಣೆಗಳಲ್ಲಿ ಈಗ ಆಗಿರೋ ಸೋಲಿನಿಂದ ಕಾಂಗ್ರೆಸ್​ ತಾನು ಅಂದುಕೊಂಡಷ್ಟು ಸೀಟುಗಳನ್ನ ಪಡೆಯುವ ಸ್ಥಿತಿಯಲ್ಲೂ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್​ಗೆ ಹೆಚ್ಚಿನ ಸೀಟು ಬಿಟ್ಟುಕೊಡೋಕೆ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳು ಒಪ್ಪಿಕೊಳ್ಳೋದು ಅನುಮಾನವೇ. ಈ ಹಿಂದೆ ಸುಮಾರು 200 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಬೆಂಬಲ ನೀಡೋಕೆ ನಾವು ಸಿದ್ಧ ಅಂತಾ ನಿತೀಶ್ ಕುಮಾರ್ ಹೇಳಿದ್ರು. ಆದ್ರೆ, ನಿತೀಶ್ ಕುಮಾರ್ ಪ್ಲೇಟ್ ಬದಲಾಯಿಸುವ ಸಾಧ್ಯತೆ ಹೆಚ್ಚಾಗಿದೆ. 200 ಇದ್ದಿದ್ದು ಈಗ ಎಷ್ಟು ನಂಬರ್​ಗೆ ಇಳಿಯುತ್ತೋ ಗೊತ್ತಿಲ್ಲ.  ಹೀಗಾಗಿ ಸೀಟು ಹಂಚಿಕೆ ವಿಚಾರ ಬಂದಾಗ ಮೈತ್ರಿಕೂಟದಲ್ಲಿ ಭಾರಿ ಭಿನ್ನಮತ ಉಂಟಾಗುವ ಸಾಧ್ಯತೆ ಇದೆ.

ಇನ್ನು 2024ರಲ್ಲಿ ಮೋದಿಯನ್ನ ಮಣಿಸಬೇಕು ಅನ್ನೋದಾದ್ರೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳನ್ನ ವಿಪಕ್ಷಗಳು ಗೆಲ್ಲಲೇಬೇಕು. ಉತ್ತರ ಭಾರತದಲ್ಲಿ ಗೆಲ್ಲದೆ ದೆಹಲಿ ಗದ್ದುಗೆ ಏರೋಕೆ ಸಾಧ್ಯವೇ ಇಲ್ಲ. ಆದ್ರೆ, ಸದ್ಯ ಉತ್ತರಭಾರತದಲ್ಲಿ ಬಿಜೆಪಿಯೇ ಪ್ರಬಲವಾಗಿದೆ. ಈಗ ವಿಧಾನಸಭೆ ಚುನಾವಣೆಗಳನ್ನ ಬೇರೆ ಗೆದ್ದಿರೋದು ಬಿಜೆಪಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ಈಗಿನ ಟ್ರೆಂಡ್ ನೋಡಿದ್ರೆ ಸೆಂಟರ್​​ನಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರೋದು ಗ್ಯಾರಂಟಿ ಎಂಬಂತೆ ಕಾಣ್ತಿದೆ. ಯಾಕಂದ್ರೆ ಪ್ರಬಲ ವಿಪಕ್ಷ ಅಂತಾ ಯಾವುದು ಕೂಟ ಗೋಚರವಾಗ್ತಿಲ್ಲ. ಇರೋ ಏಕೈಕ ಪ್ರಭಾವಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್​​ನ ಕಥೆ ಏನಾಗಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಇನ್ನು ಇಂಡಿಯಾ ಮೈತ್ರಿಕೂಟದಿಂದ ಇವರು ಪ್ರಧಾನಿಯಾಗಬಹುದು ಅಂತಾ ಯಾರನ್ನ ಕೂಡ ಪ್ರಾಜೆಕ್ಟ್ ಮಾಡಿಲ್ಲ. ಹೈಲೈಟ್ ಆಗ್ತಿಲ್ಲ. ವಿಪಕ್ಷಗಳ ವೈಫಲ್ಯವೇ ಬಿಜೆಪಿಗೆ ಲಾಭವಾಗ್ತಾ ಇರೋದಂತೂ ಸ್ಪಷ್ಟ.

ಇನ್ನು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢದ ಗೆಲುವಿನಿಂದಾಗಿ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಈಗ ಮಾರಲ್​ ವಿಕ್ಟರಿ ಸಿಕ್ಕಂತಾಗಿದೆ. ಅಖಾಡಕ್ಕಿಳಿಯಲು ಒಂದು ಟೋನ್ ಸೆಟ್ ಮಾಡಿಕೊಟ್ಟಿದೆ. ದೇಶದಲ್ಲಿ ಮೋದಿ ಹವಾ ಇನ್ನೂ ಹಾಗೆಯೇ ಇದೆ ಅನ್ನೋದು ಮತ್ತೆ ಸಾಬೀತಾಗಿದೆ. ವಿಧಾನಸಭೆ ಚುನಾವಣೆಗಳಲ್ಲೇ ಬಿಜೆಪಿ ಮೋದಿಯವರನ್ನ ಮುಂದಿಟ್ಟುಕೊಂಡೇ ಸ್ಪರ್ಧಿಸಿತ್ತು. ಇನ್ನು ಲೋಕಸಭೆ ಚುನಾವಣೆಗೆ ಬಂದ್ರೆ ಕೇಳೋದೆ ಬೇಡ. ಮೋದಿ ಹಾಗೆ ಬಂದು ಹೀಗೆ ಹೋದ್ರೂ ಮತಗಳು ಬರುತ್ತೆ ಅನ್ನೋ ಲೆವೆಲ್​ನ ಕಾನ್ಫಿಡೆನ್ಸ್ ಈಗ ಬಿಜೆಪಿಗರಿಗೆ ಬಂದಿರುತ್ತೆ. 3 ರಾಜ್ಯಗಳ ವಿಧಾನಸಭೆ ಚುನಾವಣೆಗಳ ಗೆಲುವು ಲೋಕಸಭೆ ಗೆಲ್ಲೋಕೆ ಬಿಜೆಪಿಗೆ ಮೂರು ಮೆಟ್ಟಿಲಾಗಬಹುದು. ವಿಧಾನಸಭೆಯಲ್ಲಿ ಗೆದ್ದಿದ್ದನ್ನೇ ಲೋಕಸಭೆ ಪ್ರಚಾರದ ವೇಳೆ ಪ್ರಾಜೆಕ್ಟ್ ಮಾಡಬಹುದು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢ ಈ ಮೂರೂ ರಾಜ್ಯಗಳಲ್ಲಿ ಒಟ್ಟು 65 ಲೋಕಸಭಾ ಕ್ಷೇತ್ರಗಳಿವೆ. ಈಗ ವಿಧಾನಸಭೆ ಚುನಾವಣೆ ಗೆದ್ದಿದ್ರಿಂದ ಈ ಮೂರೂ ರಾಜ್ಯಗಳಲ್ಲಿ ಲೋಕಸಭೆ ಎಲೆಕ್ಷನ್ ಗೆಲ್ಲೋದು ಬಿಜೆಪಿಗೆ ಸ್ವಲ್ಪ ಸುಲಭವಾಗಬಹುದೋ ಏನೊ.

ಆದ್ರೆ ಈ ಮೂರೂ ರಾಜ್ಯಗಳಲ್ಲಿ ಈಗ ಕಾಂಗ್ರೆಸ್​​ಗೆ ಸ್ಪರ್ಧಿಸೋದೆ ದೊಡ್ಡ ಸವಾಲಾಗಲಿದೆ. ವಿಧಾನಸಭೆಯನ್ನೇ ಸೋತಿರುವಾಗ, ಲೋಕಸಭೆ ಚುನಾವಣೆಯಲ್ಲಿ ಗೆಲ್ಲೋದು ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್​ಗೆ ಕಷ್ಟ. ಅದ್ರೆ ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ವಿಧಾನಸಭೆ ಚುನಾವಣೆ ಫಲಿತಾಂಶವೇ ಲೋಕಸಭೆಯಲ್ಲೂ ಬರ್ಬೇಕು ಅಂತೇನಿಲ್ಲ. ಯಾಕಂದ್ರೆ ವಿಧಾನಸಭೆಯಲ್ಲಿ ವೋಟ್​ ಮಾಡುವಾಗ ಮತದಾರ ಹಾಕೋ ಲೆಕ್ಕಾಚಾರವೇ ಬೇರೆ. ಲೋಕಸಭೆ ಚುನಾವಣೆ ವೇಳೆ ಮತದಾರನ ಮೈಂಡ್​ಸೆಟ್ಟೇ ಬೇರೆ ಇರುತ್ತೆ. 2018ರಲ್ಲಿ ಇದೇ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಇದಾಗಿ ಕೆಲವೇ ತಿಂಗಳುಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಈ ಮೂರು ರಾಜ್ಯಗಳ 65 ಲೋಕಸಭಾ ಕ್ಷೇತ್ರಗಳ ಪೈಕಿ 61 ಸ್ಥಾನಗಳನ್ನ ಬಿಜೆಪಿ ಬಾಚಿಕೊಂಡಿತ್ತು. ವಿಧಾನಸಭೆಯಲ್ಲಿ ಕಾಂಗ್ರೆಸ್​​ನ್ನ ಗೆಲ್ಲಿಸಿದ್ದ ಅದೇ ಮತದಾರ ಲೋಕಸಭೆಯಲ್ಲಿ ಬಿಜೆಪಿಯನ್ನ ಗದ್ದುಗೆಯಲ್ಲಿ ಕೂರಿಸಿದ್ದ. ಹೀಗಾಗಿ ಲೋಕಸಭೆ ಚುನಾವಣೆ ವೇಳೆ ಏನೂ ಬೇಕಾದ್ರೂ ಆಗಬಹುದು. ಆದ್ರೆ, ಸದ್ಯದ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆ ಮಟ್ಟದಲ್ಲಿ ನೋಡೋವಾಗ ಕಾಂಗ್ರೆಸ್​ ಏಕಾಂಗಿಯಾಗಿ ಗೆಲ್ಲೋದು ಸಾಧ್ಯವೇ ಇಲ್ಲ. ಹೀಗಾಗಿ ಈ ಮೂರು ರಾಜ್ಯ ಸೇರಿ, ಉತ್ತರ ಭಾರತದಲ್ಲಿ ಇಂಡಿಯಾ ಮೈತ್ರಿಕೂಟದ ಜೊತೆಗೂಡಿ ಕಾಂಗ್ರೆಸ್​ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಇಲ್ಲಿ ಒಂದಂತೂ ಸ್ಪಷ್ಟ.. ಇಂಡಿಯಾ ಮೈತ್ರಿಕೂಟ ಮೋದಿ ಮುಂದೆ ತನ್ನ ಪ್ರಬಲ ನಾಯಕನನ್ನ ಪ್ರಾಜೆಕ್ಟ್ ಮಾಡದೇ ಇದ್ದಲ್ಲಿ. ಬಿಜೆಪಿ ವಿರುದ್ಧ ಸರಿಯಾದ ಸ್ಟ್ರ್ಯಾಟಜಿ ನಡೆಸದೇ ಇದ್ದಲ್ಲಿ, ಮುಂಬರುವ ಲೋಕಸಭೆ ಚುನಾವಣೆಯನ್ನ ಗೆಲ್ಲೋಕೆ ಸಾಧ್ಯವೇ ಇಲ್ಲ. ಈಗಿನ ಪರಿಸ್ಥಿತಿಯಲ್ಲಂತೂ ಇಂಡಿಯಾ ಮೈತ್ರಿಕೂಟದ ಆಟ ಮೋದಿ ಮುಂದೆ ನಡೆಯೋದು ಡೌಟೇ. ಶೀಘ್ರವೇ ಮಹಾಮೈತ್ರಿ ನಾಯಕರು ಮತ್ತೊಂದು ಸಭೆ ಸೇರುವ ಸಾಧ್ಯತೆ ಇದ್ದು, ಅಲ್ಲೇನಾದ್ರೂ ಭಿನ್ನಾಭಿಪ್ರಾಯಗಳು ಹೆಚ್ಚಾಯ್ತು ಅಂದ್ರೆ ಇಂಡಿಯಾ ಮೈತ್ರಿಕೂಟದ ಖೇಲ್ ಖತಂ ಆಗೋದು ಗ್ಯಾರಂಟಿ.

Shwetha M