ಸಮುದ್ರದಲ್ಲಿ ಮುಳುಗಿದ ದ್ವಾರಕಾ! ASI ಇಲಾಖೆಗೆ ಸಿಗ್ತಾನಾ ಭಗವಂತ?
ಕೃಷ್ಣನ ಕರ್ಮಭೂಮಿಗೆ ಹುಡುಕಾಟ

ಕಳೆದ ವರ್ಷ ಇದೆ ಸಮಯದಲ್ಲಿ ಪ್ರಧಾನಿ ಮೋದಿ ಆಳವಾದ ನೀರಿನಲ್ಲಿ ಸ್ಕೂಬಾ ಡೈವ್ ಮಾಡಿ ದ್ವಾರಕಾಧೀಶ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಿದರು. ನಂತರ ದೈವಿಕ ಅನುಭವ ಎಂದು ಕೂಡ ಬಣ್ಣಿಸಿದ್ರು.. ಈ ಜಾಗದಲ್ಲಿ ಸುಮಾರು ಎರಡು ದಶಕಗಳ ಹಿಂದೆ ಈ ರೀತಿಯ ಮೈಜುಮ್ಮೆನ್ನುವ ಸಾಹಸಕ್ಕೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದಾಗಿತ್ತು. ಇಲಾಖೆಯ ಆಳ ಸಮುದ್ರದ ಮುಳುಗು/ಈಜು ತಜ್ಞರ ತಂಡ ಮತ್ತೊಮ್ಮೆ, ಅರಬ್ಬೀ ಸಮುದ್ರದ ಗುಜರಾತ್ ಕರಾವಳಿಯ ಸಮುದ್ರಕ್ಕೆ ಧುಮುಕಿದೆ.
ಈ ಸಾಹಸದ ಹಿಂದಿನ ಉದ್ದೇಶ 4ಸಾವಿರ ವರ್ಷಗಳ ಹಳೆಯ ನಗರವೆಂದೇ ಪುರಾಣದಲ್ಲಿ ಉಲ್ಲೇಖವಾಗಿರುವ ದ್ವಾರಕಾ ನಗರದ ಶ್ರೀಮಂತಿಕೆ ಮತ್ತು ನೀರೊಳಗೆ ಇತಿಹಾಸವಾಗಿರುವ ಭಾರತದ ಭವ್ಯ ಪುರಾಣದ ಪರಂಪರೆಯನ್ನು ಸಂರಕ್ಷಿಸುವುದಕ್ಕಾಗಿ. 1979- 80ರ ಇಸವಿಯಲ್ಲಿ ಒಂದು ತಂಡ ಈ ಪ್ರಯತ್ನವನ್ನು ಮಾಡಿತ್ತು.
ಶ್ರೀಕೃಷ್ಣನ ಪ್ರಾಚೀನ ನಗರ ದ್ವಾರಕಾದ ಸಮುದ್ರದ ಗರ್ಭದಲ್ಲಿ ಏನೇನು ಅಚ್ಚರಿ ಕಾದಿದೆ, ಏನೇನು ರಹಸ್ಯಗಳನ್ನು ತುಂಬಿಕೊಂಡಿದೆ ಎನ್ನುವ ಮಹಾನ್ ಶೋಧ ಕಾರ್ಯಕ್ಕೆ ಎಎಸ್ಐ ಇಲಾಖೆ ಮುಂದಾಗಿದೆ. ಎರಡು ದಶಕಗಳ ಹಿಂದೆ, ಸಮುದ್ರದ ಆಳಕ್ಕೆ ಇಳಿದಾಗ 560 ಮೀಟರ್ ಉದ್ದದ ಗೋಡೆ ಪತ್ತೆಯಾಗಿತ್ತು.
ಶ್ರೀಕೃಷ್ಣನ ಕರ್ಮಭೂಮಿ ಎಂದೇ ಬಿಂಬಿತವಾಗಿರುವ ದ್ವಾರಕಾದ ಹಿಂದಿನ ಆಕರ್ಷಣೆ, ರಹಸ್ಯ ಏನು ಎನ್ನುವುದನ್ನು ತಿಳಿಯುವ ಉದ್ದೇಶದಿಂದ ಎಂ.ಆರ್.ರಾವ್ ಅವರ ತಂಡ ಸಮುದ್ರಾದಳದಲ್ಲಿ ಶೋಧ ನಡೆಸಿತ್ತು. ಪತ್ತೆಯಾದ ಗೋಡೆಗಳು ಕ್ರಿ.ಪೂ. 1528 ರಿಂದ 3000ದವರೆಗಿನ ಅವಧಿಯದ್ದು ಎಂದು ಅಧಿಕಾರಿಗಳು ಹೇಳಿದ್ದರು.
ಈಗ ಮತ್ತೆ ದ್ವಾರಕಾ ಕರಾವಳಿಯ ಮತ್ತು ಓಖಾ ಕರಾವಳಿ ದ್ವೀಪದಿಂದ ಶೋಧ ಕಾರ್ಯ ಆರಂಭಗೊಂಡಿದೆ. ಈ ಭಾಗದ ಉತ್ಖನನ ಮತ್ತು ಅಧ್ಯಯನವನ್ನು 2005 ಮತ್ತು 2007ರ ನಡುವೆ ನಡೆಸಲಾಗಿತ್ತು. ಗುಜರಾತಿನ ಕಛ್ ಭಾಗದ ಪಂಚಕುಯಿ ಕರಾವಳಿ ಭಾಗದಲ್ಲಿ ದ್ವಾರಕಾ ನಗರ ಮುಳುಗಿದೆ ಎಂದು ನಂಬಲಾಗಿದೆ. ಹಾಗಾಗಿ, ದ್ವಾರಕೆಯ ಬೆನ್ನತ್ತಿ, ಪುರಾತತ್ವ ಇಲಾಖೆಯವರು ಉತ್ಖನನ ಮಾಡಿದ್ದರು.
ಇಲಾಖೆಯ ಅಂಡರ್ ವಾಟರ್ ತಂಡ, 1980ರ ದಶಕದಿಂದಲೂ ಸಮುದ್ರದ ಪುರಾತತ್ವ ಸಂಶೋಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಐದು ಸದಸ್ಯರ ತಂಡ ಈಗಾಗಲೇ ಅಂದ್ರೆ ಫೆಬ್ರವರಿ 18 ರಂದು ಆಳ ಸಮುದ್ರಕ್ಕೆ ಇಳಿದಿತ್ತು. ಪ್ರೊ.ಅಲೋಕ್ ತ್ರಿಪಾಠಿ ಅವರ ನೇತೃತ್ವದಲ್ಲಿನ ಐವರ ತಂಡದಲ್ಲಿ ಮೂವರು ಮಹಿಳೆಯರು ಇದ್ದಾರೆ.
ಗುಜರಾತ್‌ನ ಜಾಮ್ ನಗರದ ಅರೇಬಿಯಾ ಮಹಾಸಮುದ್ರದಲ್ಲಿ ಸುಮಾರು 150 ಅಡಿ ಆಳದಲ್ಲಿ ಈ ದ್ವಾರಕಾ ನಗರವಿದೆ. ದ್ವಾರಕಾ ನಗರವನ್ನು ಹಿಂದೂಗಳ ಏಳು ಪವಿತ್ರ ನಗರ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಮಥುರಾ ತೊರೆದ ನಂತರ ಶ್ರೀಕೃಷ್ಣ, ದ್ವಾರಕಾ ನಗರವನ್ನು ನಿರ್ಮಿಸಿದ ಎನ್ನುವ ನಂಬಿಕೆಯಿದೆ. ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಿದ ನಂತರ, ಕಲಿಯುಗದ ಆರಂಭವಾಯಿತು ಎಂದೇ ಬಿಂಬಿತವಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಫೆಬ್ರವರಿ 25, 2024ರಂದು ಸ್ಕೂಬಾ ಡೈವ್ ಮೂಲಕ, ಸಮುದ್ರದಾಳಕ್ಕೆ ಹೋಗಿ, ದ್ವಾರಕಾ ನಗರದ ದರ್ಶನವನ್ನು ಮಾಡಿದ್ದರು. ” ಆಳ ಸಮುದ್ರದಲ್ಲಿ ದ್ವಾರಕೆಯನ್ನು ನೋಡಿ, ವಿಕಸಿತ ಭಾರತದ ನನ್ನ ಸಂಕಲ್ಪ ಇನ್ನಷ್ಟು ಸುದೃಢಗೊಂಡಿದೆ” ಎಂದು ಹೇಳಿದ್ದರು.
ಶ್ರೀಕೃಷ್ಣ ನಿರ್ಮಿಸಿದ ದ್ವಾರಕಾ ನಗರ, ಹಿಂದೂಗಳ ಪಾಲಿಗೆ ಬಹಳ ಪವಿತ್ರವಾದಂತಹ ಜಾಗ. ಇದರ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಾಕ್ಷಿಗಳನ್ನು ಸಂಗ್ರಹಿಸುವ ಎಎಸ್ಐ ಇಲಾಖೆಯ ಮಹಾನ್ ಶೋಧದ ಸಾಹಸಕ್ಕೆ ಶ್ರೀಕೃಷ್ಣನ ಅನುಗ್ರಹವಿರಲಿದೆಯೇ ಎನ್ನುವುದು ಕೆಲವು ದಿನಗಳಲ್ಲಿ ಗೊತ್ತಾಗಲಿದೆ.
ದ್ವಾರಕಾ ಎಂದರೆ ಅರ್ಥವೇನು?
ದ್ವಾರಕಾ ಎಂಬುವುದು ಸಂಸ್ಕೃತದ ದ್ವಾರ್ ಎಂಬ ಪದದಿಂದ ಬಂದಿದೆ. ದ್ವಾರ್ ಎಂದರೆ ಬಾಗಿಲು, ಇದು ಬ್ರಹ್ಮನ ಬಾಗಿಲು ಎಂದು ಕರೆಯಲಾಗುವುದು. ಈ ದ್ವಾರಕಾ ಶ್ರೀಕೃಷ್ಣನ ಸ್ಥಳವಾಗಿದ್ದು ಹಲವು ಅದ್ಭುತ ಧಾರ್ಮಿಕ ರಹಸ್ಯಗಳನ್ನು ಹೊಂದಿದ ಸ್ಥಳವಾಗಿದೆ. ದ್ವಾರಕಾದ ಶ್ರೀಕೃಷ್ಣನಲ್ಲಿ ಎರಡು ದ್ವಾರಗಳಿವೆ. ಗೋಮತಿ ನದಿಯ ಸಮುದ್ರದೆಡೆಗೆ ಹರಿದು ಸೇರುವ ಸಂಗಮವನ್ಉ ಈ ದೇವಾಲಯದಲ್ಲಿ ಕಾಣಬಹುದು. ಈ ದ್ವಾರಕಾದಲ್ಲಿ ವಸುದೇವ, ದೇವಕಿ, ಬಲರಾಮ, ರೇವತಿ ಸುಭದ್ರ, ರುಕ್ಮಿಣಿ, ಜಾಂಬಾವತಿ ಹಾಗೂ ಸತ್ಯಾಭಾಮರ ಮೂರ್ತಿಗಳು ಈ ದ್ವಾರಕಾದಲ್ಲಿದೆ.