ಪ್ರಚಂಡ ಕುಳ್ಳನ ಏಳುಬೀಳಿನ ಬದುಕು ಹೇಗಿತ್ತು? – 18 ವರ್ಷ ಚಿತ್ರರಂಗ ಬಿಟ್ಟಿದ್ದೇಕೆ? – ದ್ವಾರಕೀಶ್ ಕೈಬಿಡಲಿಲ್ಲ ಆಪ್ತಮಿತ್ರ ವಿಷ್ಣುವರ್ದನ್

ಸ್ಯಾಂಡಲ್ವುಡ್ ಪ್ರಚಂಡ ಕುಳ್ಳ ದ್ವಾರಕೀಶ್ ಇನ್ನಿಲ್ಲ. ಕನ್ನಡ ಚಿತ್ರರಂಗದ ಲೆಜೆಂಡರಿ ನಟ ದ್ವಾರಕೀಶ್ ಚಂದನವನದಿಂದ ಮರೆಯಾಗಿದ್ದಾರೆ. 81 ವರ್ಷದ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇವತ್ತು ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹಿರಿಯ ನಟ ದ್ವಾರಕೀಶ್ ಸ್ಯಾಂಡಲ್ವುಡ್ನ ಅತ್ಯಮೂಲ್ಯ ಆಸ್ತಿಯಾಗಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ದ್ವಾರಕೀಶ್ ಅವರ ಜೀವನ, ಸಿನಿಪಯಣದ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮರೆಯಾಯ್ತು ಸ್ಯಾಂಡಲ್ವುಡ್ನ ಮತ್ತೊಂದು ರತ್ನ – ಪ್ರಚಂಡ ಕುಳ್ಳ ದ್ವಾರಕೀಶ್ ಇನ್ನಿಲ್ಲ!
ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ ಎಂಬ ಹಾಡು ಆ ಕಾಲದಿಂದ ಈ ಕಾಲದವರೆಗೂ ದೊಡ್ಡವರಿಂದ ಹಿಡಿದು ಮಕ್ಕಳಿಗೂ ಇಷ್ಟವಾದ ಹಾಡು. ಇದರಲ್ಲಿ ಪ್ರಚಂಡ ಕುಳ್ಳ ದ್ವಾರಕೀಶ್ ನಟನೆಯಂತೂ ಮರೆಯೋಕೆ ಸಾಧ್ಯವೇ ಇಲ್ಲ. ಕಳ್ಳ ಕುಳ್ಳ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ದನ್ ಅವರಿಗೆ ಜೋಡಿಯಾಗಿ ನಟಿಸಿದ ದ್ವಾರಕೀಶ್ ಅಭಿಮಾನಿಗಳ ಹೃದಯದಲ್ಲಿ ಸದಾ ಅಜರಾಮರ. ಕನ್ನಡದ ಮತ್ತೊಂದು ಸೂಪರ್ ಹಿಟ್ ಸಿನಿಮಾ ಅದೃಷ್ಟವಂತ. ಈ ಸಿನಿಮಾದಲ್ಲಿ ದ್ವಾರಕೀಶ್ ಅವರ ಮನಮುಟ್ಟುವ ನಟನೆಗೆ ಕಣ್ಣೀರು ಹಾಕಿದ್ದೂ ಇದೆ. ನಕ್ಕು ನಕ್ಕು ಸುಸ್ತಾಗಿದ್ದೂ ಇದೆ. ಪೆದ್ದ ಗೆದ್ದ ಸಿನಿಮಾ ಕನ್ನಡಿಗರು ಎಂದೆಂದಿಗೂ ಮರೆಯದ ಸಿನಿಮಾ, ಸಿಂಗಾಪುರದಲ್ಲಿ ರಾಜಾಕುಳ್ಳನಾಗಿ ಮೆರೆದಿದ್ದರು ದ್ವಾರಕೀಶ್. ಚಂದನವನದ ಈ ತಾರೆ ಬರೀ ನಟನೆಗಾಗಿ ಚಿತ್ರರಂಗದಲ್ಲಿ ನೆಲೆಯೂರಿಲ್ಲ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಬೆಟ್ಟದಷ್ಟು ಕೊಡುಗೆ ನೀಡಿದ್ದಾರೆ ದ್ವಾರಕೀಶ್.
ಜೀವನದಲ್ಲಿ, ಸಿನಿ ಜಗತ್ತಿನಲ್ಲಿ, ಸೋಲು, ಗೆಲುವು, ನಿರಾಶೆಯ ಪಯಣ ದ್ವಾರಕೀಶ್ ಅವರದ್ದು. ಹಾಸ್ಯನಟರಾಗಿ, ಕರ್ನಾಟಕದ ಮನಮೆಚ್ಚಿದ ಕುಳ್ಳನಾಗಿ, ಪೋಷಕ ನಟನಾಗಿ ಚಿತ್ರರಂಗ ಆಳಿದ ದ್ವಾರಕೀಶ್ ಅವರು 81ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ಅವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ . 1942 ಆಗಸ್ಟ್ 19ರಂದು ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ ದಂಪತಿಯ ಪುತ್ರನಾಗಿ ದ್ವಾರಕೀಶ್ ಜನಿಸಿದರು. ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದರು. 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್ ಚಂದನವನದಲ್ಲಿ ನೆಲೆಯೂರಿದರು.
ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ಬರೀ ರೀಲ್ನಷ್ಟೇ ಅಲ್ಲ, ಇವರಿಬ್ಬರು ರಿಯಲ್ ಲೈಫ್ನಲ್ಲೂ ಉತ್ತಮ ಸ್ನೇಹಿತರಾಗಿದ್ರು. ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಜೋಡಿ ಅನೇಕ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು.
1969ರಲ್ಲಿ ಡಾ.ರಾಜ್ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾ ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾದರು. ಈ ಚಿತ್ರ ಬಾಕ್ಸಾಫೀಸ್ನಲ್ಲಿ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಬಳಿಕ ಹಲವು ಸಿನಿಮಾಗಳನ್ನು ನಿರ್ಮಿಸಿ, ಅದರಲ್ಲಿ ಯಶಸ್ಸು ಗಳಿಸಿದರು. ದ್ವಾರಕೀಶ್ ಈವರೆಗೂ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ನಿರ್ಮಾಪಕರಾಗಿ ಹಲವು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. 1985ರಲ್ಲಿ ಸಿನಿಮಾ ನಿರ್ದೇಶನಕ್ಕಿಳಿದ ದ್ವಾರಕೀಶ್, ಮೊದಲ ಬಾರಿ ನೀ ಬರೆದ ಕಾದಂಬರಿ ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿತು. ನಂತರ ಡಾನ್ಸ್ ರಾಜ ಡಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಮಾತ್ರವಲ್ಲದೇ, ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಿಸಿದ್ದಾರೆ.
ಆದರೆ, ಬಣ್ಣದ ಬದುಕು ಯಾವ ರೀತಿ ಸಾಗುತ್ತದೆ ಎಂದು ಹೇಳೋಕೆ ಯಾರಿಂದಲೂ ಸಾಧ್ಯವಿಲ್ಲ. ದ್ವಾರಕೀಶ್ ಅವರ ಜೀವನದಲ್ಲೂ ಆಗಿದ್ದು ಇದೇ. ಕಾಲ ಮತ್ತೊಮ್ಮೆ ನಮಗಾಗಿ ಬಂತು ಅಂತಾ ಗೆಳೆಯ ವಿಷ್ಣುವರ್ದನ್ ಜೊತೆ ಹಾಡಿ ಕುಣಿದ ದ್ವಾರಕೀಶ್ ಅವರನ್ನ ಒಂದ್ ಟೈಮ್ಲ್ಲಿ ಸ್ಯಾಂಡಲ್ವುಡ್ ಕೂಡಾ ಸೈಡ್ಲೈನ್ ಮಾಡ್ತಾ ಅನ್ನೋ ಅನುಮಾನ ಶುರುವಾಗಿತ್ತು. ಯಾಕೆಂದರೆ, ಚಿತ್ರರಂಗಕ್ಕಾಗಿ ತನ್ನ ಜೀವ ಸವೆಸಿದ ದ್ವಾರಕೀಶ್ 18 ವರ್ಷ ಕಣ್ಣೀರಲ್ಲೇ ಕಳೆದಿದ್ದರು ಎಂಬಾ ವಿಚಾರ ನೀವು ನಂಬಲೇಬೇಕು. ಕನ್ನಡ ಚಿತ್ರರಂಗದಲ್ಲಿ ಹೆಸರು, ಹಣ, ಕೀರ್ತಿ ಎಲ್ಲವನ್ನೂ ಗಳಿಸಿದ್ದರು. ಆದರೆ ಬದುಕು ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂದು ಊಹಿಸುವುದು ಕಷ್ಟ. ಅದು ದ್ವಾರಕೀಶ್ ಅವರ ಜೀವನದಲ್ಲೂ ನಡೆದು ಹೋಗಿತ್ತು. ಸುಮಾರು ಹದಿನೆಂಟು ವರ್ಷಗಳ ಕಾಲ ಯಾವುದೇ ಸಿನಿಮಾ, ನಟನೆ ಇಲ್ಲದೆ ಎಲ್ಲವನ್ನೂ ಕಳೆದುಕೊಂಡು ಬಿಟ್ಟಿದ್ದರು. ಭಾರೀ ನಷ್ಟದಿಂದಾಗಿ ಸಾಲ ತೀರಿಸಲು ಚೆನ್ನೈ, ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲಾ ಮಾರಾಟ ಮಾಡಿದ್ದರು. ಜತೆಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯೂ ಆಗಿತ್ತು. ಇವೆಲ್ಲ ಕಷ್ಟ- ಕೋಟಲೆಯ ನಡುವೆಯೂ ದ್ವಾರಕೀಶ್ ಧೈರ್ಯಗೆಡದೆ ಮುನ್ನುಗ್ಗಿದ್ದರು…ಆಗ ಆಪ್ತಮಿತ್ರ ವಿಷ್ಣುವರ್ಧನ್ ಮತ್ತೆ ಈ ಕುಳ್ಳನ ಕೈ ಹಿಡಿದಿದ್ದರು.. ಆಗ ಬೆಳ್ಳಿ ಪರದೆ ಮೇಲೆ ಭರ್ಜರಿ ಯಶಸ್ಸು ಕಂಡ ಸಿನಿಮಾವೇ ಆಪ್ತಮಿತ್ರ. ಈ ಚಿತ್ರದ ಸಕ್ಸಸ್ನಿಂದಾಗಿ ದ್ವಾರಕೀಶ್ ಮತ್ತೆ ಚಿತ್ರ ನಿರ್ಮಾಣಕ್ಕೆ ಮರಳುವಂತಾಗಿತ್ತು…
ವಯೋಸಹಜ ಕಾಯಿಲೆ, ಮುದ್ದಿನ ಮಡದಿಯ ಮರಣ, ಇಳಿವಯಸ್ಸಿನಲ್ಲಿ ದ್ವಾರಕೀಶ್ ಅವರನ್ನು ಕುಗ್ಗಿಸಿತ್ತು. ಸ್ಯಾಂಡಲ್ವುಡ್ ಕಂಡ ಪ್ರಚಂಡ ಕುಳ್ಳ, ಕನ್ನಡ ಚಿತ್ರರಂಗದ ಆಸ್ತಿ ದ್ವಾರಕೀಶ್ ಅವರಿಗೆ ಅಭಿಮಾನಿಗಳ ಅಂತರಾಳದ ಅಂತಿಮ ನಮನ..