ವರಮಹಾಲಕ್ಷ್ಮೀ ಹಬ್ಬದಲ್ಲಿ ಪೂಜೆ ಹೇಗಿರಬೇಕು? – ವ್ರತ ಮಾಡುವಾಗ ಯಾವ ನಿಯಮ ಪಾಲಿಸಬೇಕು?

ವರಮಹಾಲಕ್ಷ್ಮೀ ಹಬ್ಬದಲ್ಲಿ ಪೂಜೆ ಹೇಗಿರಬೇಕು?  – ವ್ರತ ಮಾಡುವಾಗ ಯಾವ ನಿಯಮ ಪಾಲಿಸಬೇಕು?

 

ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿದೆ. ವರಮಹಾಲಕ್ಷ್ಮೀಯನ್ನು ಮನೆಯಲ್ಲಿ ಕೂರಿಸಿ ಸಂಪತ್ತು, ಸಮೃದ್ಧಿಗಾಗಿ ಪೂಜಿಸುವುದು ಈ ದಿನದ ವಿಶೇಷ. ಈ ದಿನ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಿದರೆ ಲಕ್ಷ್ಮೀದೇವಿ   ಬೇಡಿದ ವರವನ್ನು ನೀಡುತ್ತಾಳೆ ಎನ್ನುವ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ. ಸುಮಂಗಲಿಯರು ವರಮಹಾಲಕ್ಷ್ಮೀಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಹಾಗಾದರೆ ವರಮಹಾಲಕ್ಷ್ಮೀ ಹಬ್ಬದಂದು ಯಾವ ರೀತಿ ಪೂಜೆಗೆ ತಯಾರಿ ಇರಬೇಕು? ವರಮಹಾಲಕ್ಷ್ಮೀ ಪೂಜೆಯನ್ನು ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಯಾಕೆ ಆಚರಿಸಲಾಗುತ್ತದೆ ಅನ್ನೋದ್ದನ್ನ ತಿಳಿಯೋಣ

ವರಮಹಾಲಕ್ಷ್ಮೀ ಈ ಹಬ್ಬ ಅಂದರೆ ಮಹಿಳೆಯರಿಗೆ ಸಂಭ್ರಮ. ವ್ಯಾಪರಿಗಳಿಗೂ ಭರ್ಜರಿ ಹಣ ತಂದು ಕೊಡುವ ಹಬ್ಬ.. ಮಾರುಕಟ್ಟೆಯಲ್ಲಿ ವಿಳ್ಯದೆಲೆ, ಹೂವು, ಬಾಳೆ ಎಲೆ, ಮಾವಿನ ಎಲೆ, ಹಣ್ಣು, ಅಲಂಕಾರ ವಸ್ತುಗಳ ಮಾರಾಟದ ಭರಾಟೆ ಜೋರಾಗಿರುತ್ತದೆ.

ಪೂಜಾ ಸಾಮಾಗ್ರಿ ಸ್ವಚ್ಚಗೊಳಿಸಿ ಪೂಜೆ ಮಾಡಿ

ಸಾಮಾನ್ಯವಾಗಿ ಹೊರಗಡೆಯಿಂದ ತಂದ ಪೂಜಾ ಸಾಮಾಗ್ರಿಗಳನ್ನು ಸ್ವಚ್ಚಗೊಳಿಸಿದ ಬಳಿಕ ಬಳಕೆ ಮಾಡಬೇಕು. ಇವನ್ನು ಬೇರೆ ವಸ್ತುಗಳೊಂದಿಗೆ ಸೇರಿಸಿದಾಗ ಅದರ ಪಾವಿತ್ರತೆಗೆ ಧಕ್ಕೆ ಉಂಟಾಗಬಹುದು. ಇದರಿಂದ ಪೂಜೆ ಫಲ ನೀಡುವುದಿಲ್ಲ. ಹೀಗಾಗಿ ಅಂಗಡಿಯಿಂದ ತಂದ ಯಾವುದೇ ವಸ್ತುವಾಗಲಿ ಅದನ್ನು ಶುದ್ಧಗೊಳಿಸಿದ ನಂತರವಷ್ಟೇ ಬಳಕೆ ಮಾಡಬೇಕು. ಆಗ ಮಾತ್ರ ಸಕರಾತ್ಮಕ ಶಕ್ತಿಯನ್ನು ಸುಲಭವಾಗಿ ಆಹ್ವಾನ ಮಾಡಬಹುದು. ಹೀಗಾಗಿ ಕೊಳಕಾದ ಎಲೆ, ಹಣ್ಣು ಸ್ವಚ್ಚಗೊಳಿಸದೆ ನೇರವಾಗಿ ಪೂಜೆಗೆ ಇಡುವುದು ಮಂಗಳಕರವಲ್ಲ. ಹೀಗಾದರೆ ಆರ್ಥಿಕ ನಷ್ಟ ಉಂಟಾಗುವುದು. ವೃತ್ತಿಯಲ್ಲಿ ತೊಂದರೆ, ಮನೆಯಲ್ಲಿ ಮನಶಾಂತಿ ಹಾಳಾಗಬಹುದು.

ಪೂಜೆ ಮಾಡುವಾಗ ಶುದ್ಧತೆಗೆ ಹೆಚ್ಚು ಗಮನ ಕೊಡಿ

ವಾಸ್ತು ಶಾಸ್ತ್ರದ ಪ್ರಕಾರ ವರಮಹಾಲಕ್ಷ್ಮೀ ಪೂಜೆ ಮಾಡುವಾಗ ಶುದ್ಧತೆಗೆ ಹೆಚ್ಚು ಗಮನ ಕೊಡಬೇಕು.   ಪೂಜಾ ಸಾಮಾಗ್ರಿಗಳನ್ನು ಶುದ್ಧವಾದ ನಂತರವಷ್ಟೇ ಮುಟ್ಟಬೇಕು. ಆದರೆ ಪೂಜೆಗೆ ಸಕಲ ಸಿದ್ಧತೆ ಮಾಡಿಕೊಂಡ ನಂತರ ಸ್ನಾನ ಮಾಡುವುದು ಶುಭವಲ್ಲ. ಕೊಳಕು ಬಟ್ಟೆ ಧರಿಸುವುದು, ಚಪ್ಪಲಿ ಹಾಕಿಕೊಂಡು ಪೂಜಾ ಸ್ಥಳದಲ್ಲಿ ಓಡಾಡುವುದು, ಮಾಂಸ ಹಾಗೂ ಮೊಟ್ಟೆ ಪೂಜೆಗೂ ಮುನ್ನ ಮನೆಗೆ ತರುವುದು ಅಮಂಗಳಕರವಾಗಿದೆ. ಹೀಗಾದರೆ ಅಂತಹ ಮನೆಯಲ್ಲಿ ದಾರಿದ್ರ್ಯ ಹೊಕ್ಕುತ್ತದೆ. ಜೊತೆಗೆ ವಾಸ್ತು ದೋಷ ಉಂಟಾಗಲಿದೆ.

ಹಬ್ಬದಂದು ಮನೆಯಲ್ಲೇ ಸಿಹಿ ತಯಾರಿಸಿ

ಸಿಹಿತಿಂಡಿಗಳನ್ನು ಗುರು ಗ್ರಹ ಪ್ರತಿನಿಧಿಸುತ್ತದೆ. ಹೀಗಾಗಿ ವರಮಹಾಲಕ್ಷ್ಮೀ ಹಬ್ಬದಂದು ಮನೆಯಲ್ಲಿಯೇ ಸಿಹಿ ತಿಂಡಿ, ಪ್ರಸಾದ, ನೈವೇದ್ಯಕ್ಕಿಡುವ ಆಹಾರ ತಯಾರಿಸಬೇಕು. ಇದನ್ನು ಅಂಗಡಿಯಿಂದ ತರುವುದು ಅಶುಭ. ಯಾಕೆಂದರೆ ಪೂಜೆಗೆ ತಯಾರಿಸುವ ಪ್ರಸಾದ ಅತ್ಯಂತ ಶುದ್ಧವಾಗಿರುವುದು ಮುಖ್ಯ. ಅಂಗಡಿಗಳಿಂದ ತರುವ ಸಿಹಿ ಪದಾರ್ಥಗಳಲ್ಲಿ ಕೆಲವೊಮ್ಮೆ ಮೊಟ್ಟೆಯನ್ನು ಬಳಸಲಾಗಿರುತ್ತದೆ. ಇದನ್ನು ಪೂಜೆಗೆ ಇಡಬಾರದು. ಮನೆಯಲ್ಲಿ ಪೂಜೆಯ ದಿನ ತಯಾರಿಸುವ ಅಡುಗೆ ಕೂಡ ಮನೆಯಲ್ಲೇ ತಯಾರಿಸುವುದು ಒಳ್ಳೆಯದು. ಮನೆಯಲ್ಲಿ ತಯಾರಿಸುವ ಆಹಾರ ಶುದ್ಧವಾಗಿರುತ್ತದೆ. ಜೊತೆಗೆ ರುಚಿ ಶುಚಿಯಾಗಿರುತ್ತದೆ. ಇದನ್ನು ಪೂಜೆಗೆ ಇಟ್ಟರೆ ನಿಮ್ಮ ಪೂಜಾ ಫಲಗಳು ಹೆಚ್ಚಾಗುತ್ತವೆ. ಅಂಗಡಿಯಿಂದ ತಂದ ಆಹಾರದಿಂದ ಪೂಜೆ ಫಲಕಾರಿಯಾಗದೇ ಇರಬಹುದು.

ಪೂಜೆಗೆ ಇಡುವ ಹಣದ ನೋಟು ಶುದ್ಧವಿರಲಿ

ವಾಸ್ತು ಶಾಸ್ತ್ರದ ಪ್ರಕಾರ ಪೂಜೆಗೆ ಇಡುವ ಹಣದ ನೋಟುಗಳು ಶುದ್ಧವಾಗಿರಬೇಕು. ಎಷ್ಟೋ ಜನ ಹರಿದ, ಕೊಳಕಾದ ನೋಟುಗಳನ್ನು ಪೂಜೆಗೆ ಇಡುತ್ತಾರೆ. ಹೀಗೆ ಮಾಡುವುದು ತಪ್ಪು. ಇಂತಹ ಹಣ ಪೂಜೆಗೆ ಇಟ್ಟರೆ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ನೋಟು ಶುದ್ಧವಾಗಿಲ್ಲದೇ ಇದ್ದರೆ ನಾಣ್ಯಗಳನ್ನು ಸ್ವಚ್ಚಗೊಳಿಸಿ ಇಡಬಹುದು. ಪೂಜೆಗೆ ಯಾವುದೇ ವಸ್ತುವನ್ನು ಬಳಸಿದರೂ ಅದನ್ನು ಸ್ವಚ್ಚಗೊಳಿಸಿದ ನಂತರ ಪೂಜೆಗೆ ಬಳಸಬೇಕು. ನೋಟುಗಳನ್ನು ಸ್ವಚ್ಚಗೊಳಿಸಲು ಆಗುವುದಿಲ್ಲ. ಹೀಗಾಗಿ ನಾಣ್ಯಗಳನ್ನು ಪೂಜೆಗೆ ಇಡಬಹುದು. ಅಶುದ್ಧವಾದ ಹಣ ಗ್ರಹದೋಷಕ್ಕೆ ಕಾರಣವಾಗುತ್ತದೆ. ಹೀಗಾಗಿ ಪೂಜೆಗೆ ಹಣ ಇಡುವಾಗಲೂ ಎಚ್ಚರಿಕೆಯಿಂದ ಇರಬೇಕು

ಕಪ್ಪು, ಕೆಂಪು ಬಟ್ಟೆಗಳನ್ನು ಧರಿಸಬೇಡಿ

ವಾಸ್ತು ಪ್ರಕಾರ ಪೂಜೆಯ ದಿನ ಕಪ್ಪು, ಕೆಂಪು ಬಟ್ಟೆಗಳನ್ನು ಧರಿಸಬಾರದು. ನೀವೇನಾದರೂ ವರಮಹಾಲಕ್ಷ್ಮೀ ಹಬ್ಬ ಮನೆಯಲ್ಲಿ ಆಚರಿಸುತ್ತಿದ್ದರೆ ಕಪ್ಪು, ಕೆಂಪು ಬಟ್ಟೆಗಳನ್ನು ಧರಿಸಲೇಬೇಡಿ. ಯಾಕೆಂದರೆ ಇದು ಶನಿ ದೇವನನ್ನು ಸಂಕೇತಿಸುವ ಬಣ್ಣವಾಗಿದೆ. ಈ ಬಣ್ಣ ಸಕರಾತ್ಮಕ ಶಕ್ತಿಯನ್ನು ಆಹ್ವಾನಿಸಲು ಅಡ್ಡಿಯನ್ನುಂಟು ಮಾಡಬಹುದು. ಹೀಗಾಗಿ ಈ ಬಣ್ಣದ ಬಟ್ಟೆ ಧರಿಸುವುದು ಶುಭ ಸಂಕೇತವಲ್ಲ. ಹೀಗೆ ಮಾಡುವುದರಿಂದ ನಿಮ್ಮ ಮನೆ ದುಷ್ಟ ಶಕ್ತಿಗಳ ವಾಸಸ್ಥಾನವಾಗಲಿದೆ ಎನ್ನುತ್ತದೆ ವಾಸ್ತುಶಾಸ್ತ್ರ.

ಶುಕ್ರವಾರ ದೇವಿಯರ ಪೂಜೆ ಯಾಕೆ?

ಲಕ್ಷ್ಮಿ ಪೂಜೆಯನ್ನು ಮನೆಯಲ್ಲಿ ನಿಯಮಿತವಾಗಿ ಮಾಡಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಎಲ್ಲಾ ದೇವಾನು ದೇವತೆಗಳಿಗೆ ಮೀಸಲಿರುವ ವಿಶೇಷ ದಿನ ಇದೆ. ಶುಕ್ರವಾರ ದೇವಿಯರ ಪೂಜೆಗೆ ಮೀಸಲಿಡಲಾಗಿದೆ. ಈ ಕಾರಣಕ್ಕಾಗಿಯೇ ಶುಕ್ರವಾರ ಲಕ್ಷ್ಮಿ ದೇವಿಯ ಆರಾಧನೆಗೆ ಮತ್ತು ಅವಳ ರೂಪಗಳಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ.

Kishor KV