ಬುಮ್ರಾಗೆ ಆಡಿದ್ರೂ ಕಷ್ಟ.. ಆಡದಿದ್ರೂ ಕಷ್ಟ – ವಾರ್ನಿಂಗ್ ಕೊಟ್ಟಿದ್ದೇಕೆ ಫಿಸಿಯೋ ತಜ್ಞ?
ಬೌಲಿಂಗ್ ಬ್ರಹ್ಮಾಸ್ತ್ರ.. ಗಂಭೀರ್ ಗಲಿಬಿಲಿ!

ಬುಮ್ರಾಗೆ ಆಡಿದ್ರೂ ಕಷ್ಟ.. ಆಡದಿದ್ರೂ ಕಷ್ಟ – ವಾರ್ನಿಂಗ್ ಕೊಟ್ಟಿದ್ದೇಕೆ ಫಿಸಿಯೋ ತಜ್ಞ?ಬೌಲಿಂಗ್ ಬ್ರಹ್ಮಾಸ್ತ್ರ.. ಗಂಭೀರ್ ಗಲಿಬಿಲಿ!

ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಇಂಜುರಿಗೊಂಡಿದ್ದ ಜಸ್ಪ್ರೀತ್ ಬುಮ್ರಾ ಆ ನಂತ್ರ ಸಾಕಷ್ಟು ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ರು. ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ರು. ಅಷ್ಟೇ ಯಾಕೆ ಐಪಿಎಲ್​ನಲ್ಲೂ ಆರಂಭದ ಕೆಲ ಪಂದ್ಯಗಳನ್ನ ಆಡಿರಲಿಲ್ಲ. ಆ ಬಳಿಕ ಕಮ್​ಬ್ಯಾಕ್ ಮಾಡಿದ್ದ ಬುಮ್ರಾ ಈಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸೆಲೆಕ್ಟ್ ಆಗಿದ್ದಾರೆ. ಆದ್ರೆ ಈ ಸಿರೀಸ್​ನಲ್ಲಿ ಐದೂ ಪಂದ್ಯಗಳಲ್ಲಿ ಬುಮ್ರಾ ಆಡೋದಿಲ್ಲ. ಇದಕ್ಕೆ ಮುಖ್ಯ ಕಾರಣ ತಜ್ಞರು ಕೊಟ್ಟಿರೋ ಎಚ್ಚರಿಕೆ.

ಇದನ್ನೂ ಓದಿ : 7 ಪ್ಲೇಯರ್ಸ್ ಗೆ RCB ಗೇಟ್ ಪಾಸ್ – ಲಿಯಾಮ್, ರಸಿಕ್, ಮಯಾಂಕ್ ಔಟ್?

ಭಾರತ ಕ್ರಿಕೆಟ್ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ವಿಚಾರದಲ್ಲಿ NCA ಮಾಜಿ ಮುಖ್ಯ ಫಿಸಿಯೋ ಆಶೀಶ್ ಕೌಶಿಕ್ ಅವರು ಕೋಚ್ ಗೌತಮ್ ಗಂಭೀರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬುಮ್ರಾ ಅವರನ್ನು ಅತಿಯಾಗಿ ಬೌಲಿಂಗ್ ಮಾಡಿಸುವಂತೆಯೂ ಇಲ್ಲ ಹಾಗೇ ಕಡಿಮೆ ಬೌಲಿಂಗ್ ಮಾಡಿಸೋದ್ರಿಂದಲೂ ಗಾಯದ ಅಪಾಯ ಜಾಸ್ತಿ ಎಂದಿದ್ದಾರೆ. ಅತಿಯಾಗಿ ಬೌಲಿಂಗ್ ಮಾಡುವುದರಿಂದ ಎಷ್ಟು ತೊಂದರೆಯಾಗುತ್ತದೆಯೋ, ಕಡಿಮೆ ಬೌಲಿಂಗ್ ಮಾಡುವುದರಿಂದಲೂ ಅಷ್ಟೇ ತೊಂದರೆಯಾಗುತ್ತದೆ. ಕೆಲಸದ ಹೊರೆ ಎಂದರೆ ಬೌಲಿಂಗ್ ಮಾತ್ರವಲ್ಲ, ತರಬೇತಿಯೂ ಸೇರುತ್ತದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ಮತ್ತು ಕಂಡೀಷನಿಂಗ್ ಕೆಲಸದಂತಹ ಎಲ್ಲಾ ಕಠಿಣ ಚಟುವಟಿಕೆಗಳಲ್ಲೂ ಏರಿಳಿತವಾಗಬಾರದು ಎಂದಿದ್ದಾರೆ. ಹೀಗಾಗೇ ಗೌತಮ್ ಗಂಭೀರ್ ಕೂಡ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಆಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸೋ ಬುಮ್ರಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3 ಪಂದ್ಯಗಳನ್ನ ಮಾತ್ರ ಆಡ್ತಾರೆ ಇನ್ನೆರಡು ಪಂದ್ಯಗಳಿಂದ ಹೊರಗೆ ಉಳಿಯಲಿದ್ದಾರೆ.

ಇನ್ನು ಇಂಗ್ಲೆಂಡ್‌ ವಿರುದ್ಧ ಬುಮ್ರಾ ಮೂರು ಪಂದ್ಯಗಳ 6 ಇನ್ನಿಂಗ್ಸ್​ಗಳಲ್ಲಿ ಬೌಲ್ ಮಾಡಬಹುದು. ಈ ವೇಳೆ 13 ವಿಕೆಟ್​ಗಳನ್ನು ಪಡೆದರೆ, ಈ ತಂಡದ ವಿರುದ್ಧ 50 ವಿಕೆಟ್‌ಗಳನ್ನು ಪಡೆದ ದಾಖಲೆ ಬರೆಯಲಿದ್ದಾರೆ. ಇಂಗ್ಲೆಂಡ್‌ನಲ್ಲಿ 50 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಈ ಅದ್ಭುತ ದಾಖಲೆಯನ್ನು ಇನ್ನೂ ಯಾವುದೇ ಭಾರತೀಯ ಬೌಲರ್ ಮಾಡಲು ಸಾಧ್ಯವಾಗಿಲ್ಲ. ಇನ್ನು ಜಸ್ಪ್ರೀತ್ ಬುಮ್ರಾ ಇದುವರೆಗೆ ಇಂಗ್ಲೆಂಡ್ ವಿರುದ್ಧ ಒಟ್ಟು 14 ಟೆಸ್ಟ್ ಪಂದ್ಯಗಳನ್ನು ಆಡಿದ್ದು 60 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಕಪಿಲ್ ದೇವ್ ಅವರ 85 ವಿಕೆಟ್‌ಗಳ ದಾಖಲೆಯನ್ನು ಮುರಿಯಲು ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗಳಲ್ಲಿ ಭಾರತದ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಲು ಬುಮ್ರಾಗೆ ಈ ಸರಣಿಯಲ್ಲಿ ಕನಿಷ್ಠ 26 ವಿಕೆಟ್‌ಗಳು ಬೇಕಾಗುತ್ತವೆ. ಆದ್ರೆ ಆಂಗ್ಲರ ವಿರುದ್ಧ ಮೂರು ಪಂದ್ಯಗಳನ್ನಾದ್ರೂ ಆಡ್ತಾರಾ ಅನ್ನೋದೇ ಡೌಟಿದೆ.

ಜಸ್ಪ್ರೀತ್ ಬುಮ್ರಾ ಅವರ ಕರಿಯರ್​ನಲ್ಲಿ ಗಾಯದ ಭೂತ ಬೆಂಬಿಡದೇ ಕಾಡ್ತಿದೆ. ಅದ್ರಲ್ಲೂ ಪ್ರಮುಖ ಟೂರ್ನಮೆಂಟ್​ಗಳನ್ಣೇ ಮಿಸ್ ಮಾಡಿಕೊಂಡಿದ್ದಾರೆ. 2022ರ ಟಿ20 ವಿಶ್ವಕಪ್, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದಿರಲಿಲ್ಲ. ತಿಂಗಳುಗಟ್ಟಲೆ ರೆಸ್ಟ್ ಮಾಡಿ ಐಪಿಎಲ್​ಗೆ ಕಮ್ ಬ್ಯಾಕ್ ಮಾಡಿದ್ದ ಬುಮ್ರಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಬುಮ್ರಾ ಫಿಟ್ ಆಗಿದ್ದಾರೆ ಅಂದ್ರೆ ಅದು ಭಾರತ ತಂಡಕ್ಕೆ ಬ್ರಹ್ಮಾಸ್ತ್ರವಿದ್ದಂತೆ. ಆದ್ರೆ ಪದೇಪದೆ ಕಾಡುವ ಗಾಯದ ಭೂತ ಅವ್ರ ಕರಿಯರ್ ಮೇಲೆ ಕರಿನೆರಳಿನಂತೆ ಕಾಡ್ತಿದೆ.

Shantha Kumari

Leave a Reply

Your email address will not be published. Required fields are marked *