7 ಮ್ಯಾಚ್.. 4 ಗೆಲುವು.. 3 ಸೋಲು – RCB ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?
ರೆಡ್ ಆರ್ಮಿಗೆ ಚಿನ್ನಸ್ವಾಮಿಯೇ ವಿಲನ್?

2025ನೇ ಐಪಿಎಲ್ ಸೀಸನ್ನಲ್ಲಿ ಆರ್‌ಸಿಬಿ ಟೀಂ 7 ಪಂದ್ಯಗಳನ್ನಾಡಿದೆ. ಈ ಪೈಕಿ 4 ಮ್ಯಾಚ್ಗಳಲ್ಲಿ ಗೆಲುವು ಸಾಧಿಸಿದ್ರೆ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ವಿನ್ ಆಗಿರೋ ನಾಲ್ಕು ಪಂದ್ಯಗಳನ್ನು ಎದುರಾಳಿ ತಂಡಗಳ ತವರು ಮೈದಾನದಲ್ಲಿ ಗೆದ್ದಿರೋದೇ ಸ್ಪೆಷಾಲಿಟಿ. ಈ ಮೂಲಕ ಒಟ್ಟು 8 ಅಂಕಗಳನ್ನು ಪಡೆದಿರುವ ಆರ್‌ಸಿಬಿ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೋಂ ಗ್ರೌಂಡ್ನಲ್ಲಿ ಮೂರು ಮ್ಯಾಚ್ ಆಡಿರುವ ಆರ್ಸಿಬಿಗೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಇದನ್ನೂ ಓದಿ : RCBಗೆ ಬ್ಯಾಡ್ ಲಕ್ ಬೆಂಗಳೂರು – ಟೀಂ ಸೋತರೂ ಗೆದ್ದ ಟಿಮ್ ಡೇವಿಡ್
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಗೆದ್ದಿದ್ದ ಆರ್‌ಸಿಬಿ ಆ ಬಳಿಕ ಚೆನ್ನೈನ ಚೆಪಾಕ್ ಮೈದಾನದಲ್ಲೇ ಸಿಎಸ್ಕೆ ತಂಡವನ್ನ ಸೋಲಿಸಿತ್ತು. ಬಟ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಚಿನ್ನಸ್ವಾಮಿಗೆ ಕಾಲಿಟ್ಟಿದ್ದ ಆರ್ಸಿಬಿಗೆ ಗುಜರಾತ್ ಟೈಟಾನ್ಸ್ ಸೋಲಿನ ಶಾಕ್ ನೀಡಿತ್ತು. ಆ ಬಳಿಕ ಮುಂಬೈ ವಿರುದ್ಧ ವಾಂಖೆಡೆಯಲ್ಲಿ ನಡೆದ ನಾಲ್ಕನೇ ಪಂದ್ಯವನ್ನ ಗೆದ್ದು ಬೀಗಿತ್ತು. ಅಲ್ಲಿಂದ ಮತ್ತೆ ಹೋಂ ಗ್ರೌಂಡ್ಗೆ ಬಂದ ರೆಡ್ ಆರ್ಮಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲಬೇಕಾಯ್ತು. ಈ ಸೋಲಿನೊಂದಿಗೆ ರಾಜಸ್ಥಾನಕ್ಕೆ ಹಾರಿದ್ದ ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ರಾಜಸ್ಥಾನವನ್ನ ಸೋಲಿಸಿ ಮತ್ತೆ ಚಿನ್ನಸ್ವಾಮಿ ಮೈದಾನಕ್ಕೆ 7ನೇ ಪಂದ್ಯಕ್ಕಾಗಿ ಕಾಲಿಟ್ಟಿತ್ತು. ಬಟ್ ಬ್ಯಾಡ್ ಲಕ್ ಅಂದ್ರೆ ಮಳೆ ಆಟದ ನಡುವೆ ಟಾಸ್ ಸೋತು ಮ್ಯಾಚನ್ನೂ ಸೋಲ್ಬೇಕಾಯ್ತು. ಈ ಮೂಲಕ ಆಡಿರುವ 7 ಮ್ಯಾಚ್ಗಳಲ್ಲಿ 4ರಲ್ಲಿ ಗೆದ್ದಿದ್ದು ಮೂರರಲ್ಲಿ ಸೋಲು ಕಂಡಿದೆ.
ಐಪಿಎಲ್ನಲ್ಲಿ ಲೀಗ್ ಹಂತದಲ್ಲಿ ಎಲ್ಲಾ ತಂಡಗಳಿಗೂ 14 ಮ್ಯಾಚಸ್ ಇರುತ್ತೆ. ಅದ್ರಲ್ಲಿ 7 ಪಂದ್ಯಗಳು ಹೋಂ ಗ್ರೌಂಡ್ಗಳಲ್ಲಿ ನಡೆದ್ರೆ ಉಳಿದ 7 ಮ್ಯಾಚಸ್ ಅವೇ ಪಿಚ್ಗಳಲ್ಲಿ ಇರುತ್ತೆ. ಇದೀಗ ಆಲ್ರೆಡಿ 7 ಪಂದ್ಯಗಳನ್ನ ಆಡಿರುವ ಆರ್‌ಸಿಬಿ ಲೀಗ್ ಹಂತದಲ್ಲಿ ಫಸ್ಟ್ ಆಫ್ ಕಂಪ್ಲೀಟ್ ಮಾಡಿದೆ. ಇದೀಗ ಏಪ್ರಿಲ್ 20 ರಂದು ಅಂದ್ರೆ ನಾಳೆ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಕೆಂಡ್ ಆಫ್ ಆರಂಭಿಸಲಿದೆ. ಸೋ ದ್ವಿತೀಯಾರ್ಧದಲ್ಲಿ ಉಳಿದಿರೋ 7 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಲೇಬೇಕಿದೆ. ಪ್ಲೇಆಫ್ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು 16 ಅಂಕಗಳ ಅವಶ್ಯಕತೆಯಿದೆ. ಸದ್ಯ 4 ಗೆಲುವುಗಳೊಂದಿಗೆ 8 ಅಂಕಗಳನ್ನು ಪಡೆದಿರುವ ಆರ್‌ಸಿಬಿ ತಂಡವು ಮುಂದಿನ 7 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿದರೆ ಪ್ಲೇಆಫ್ಗೇರುವುದು ಕನ್ಫರ್ಮ್ ಆಗುತ್ತೆ. ವಿಷ್ಯ ಅಂದ್ರೆ ಆರ್‌ಸಿಬಿ ತಂಡದ ಮುಂದಿನ 7 ಪಂದ್ಯಗಳಲ್ಲಿ 4 ಮ್ಯಾಚ್ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಬೇಕಿದೆ. ಹೀಗಾಗಿ ಆರ್‌ಸಿಬಿ ಪಾಲಿಗೆ ತವರು ಮೈದಾನದ ಪಂದ್ಯಗಳು ತುಂಬಾ ಮಹತ್ವದ್ದು. ಈ ಪಂದ್ಯಗಳಲ್ಲಿ ಗೆಲುವು ದಾಖಲಿಸಿ, ಒಟ್ಟು 8 ಅಂಕಗಳನ್ನು ಪಡೆದರೆ ಮಾತ್ರ ಆರ್‌ಸಿಬಿ ನೇರವಾಗಿ ಪ್ಲೇಆಫ್ಗೇರಬಹುದು. ಇಲ್ಲದಿದ್ದರೆ ಇತರೆ ತಂಡಗಳ ರಿಸಲ್ಟ್ನ ಕ್ಯಾಲ್ಕುಲೇಟ್ ಮಾಡ್ಬೇಕು. ನೆಟ್ ರನ್ ರೇಟ್ ನೋಡ್ಬೇಕಾಗುತ್ತೆ.
ಈಗ ಆಲ್ರೆಡಿ ಫಸ್ಟ್ ಆಫ್ ಕಂಪ್ಲೀಟ್ ಆಗಿದ್ದು ಮುಂದಿನ ಒಂದೊಂದು ಪಂದ್ಯಗಳೂ ಕ್ರೂಶಿಯಲ್ ಆಗಲಿವೆ. ಹೀಗಾಗಿ ಗೆಲ್ಲಲೇಬೇಕಾದ ಅನಿವಾರ್ಯತೆ ಇರೋದ್ರಿಂದ ಟೀಮ್ನಲ್ಲಿ ಒಂದಷ್ಟು ಸರ್ಜರಿಗಳನ್ನೂ ಮಾಡ್ಬೇಕಾಗುತ್ತೆ. ಮೆಗಾ ಹರಾಜಿನಲ್ಲಿ ಆರ್‌ಸಿಬಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್ಸ್ಟೊನ್ ಅವ್ರಿಗೆ 8.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಲಿಯಾಮ್ ಆಟ ಅಷ್ಟಕ್ಕಷ್ಟೇ ಇದೆ. ಗುಜರಾತ್ ವಿರುದ್ಧದ ಮ್ಯಾಚಲ್ಲಿ ಆಡಿದ್ದು ಬಿಟ್ರೆ ಮತ್ತೆ ಕಮ್ ಬ್ಯಾಕ್ ಮಾಡೇ ಇಲ್ಲ. ಈ ಚಿಂತೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೂ ಕಾಡ್ತಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಲಿಯಾಮ್‌ಗೆ ಇನ್ನು ಎಷ್ಟು ಅವಕಾಶ ಕೊಡ್ತೀರಾ ಅಂತಾ ಫ್ಯಾನ್ಸ್ ಕೂಡ ಪ್ರಶ್ನೆ ಕೇಳುತ್ತಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್‌ಗೆ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಲು ಉತ್ತಮ ಅವಕಾಶ ಇತ್ತು. ಆದರೆ ಈ ಅವಕಾಶವನ್ನು ಕೈ ಚೆಲ್ಲಿದ್ದಾರೆ. ಹೀಗಾಗಿ ಇವ್ರನ್ನ ಕೈಬಿಟ್ರೂ ಇವರ ಸ್ಥಾನವನ್ನು ತುಂಬಲು ಇವರದ್ದೇ ದೇಶದ ಜಾಕಬ್ ಬೆತೆಲ್ ಕಾಯ್ತಿದ್ದಾರೆ. ಇವರು ಸಹ ಆಫ್ ಸ್ಪಿನ್ ಬೌಲಿಂಗ್ ನಡೆಸಬಲ್ಲರು. ಹಾಗೇ ರೊಮಾರಿಯೋ ಶೆಫರ್ಡ್ಗೂ ಅವಕಾಶ ಕೊಡ್ಬೋದು.