ಬುದ್ದನ ಅವತಾರದ ಹಣ್ಣುಗಳಿಗೆ ಭರ್ಜರಿ ಬೇಡಿಕೆ – ಪಿಯರ್ ಹಣ್ಣುಗಳು ಬುದ್ದನ ಆಕಾರದಲ್ಲಿಯೇ ಸೃಷ್ಟಿಯಾಗುವುದು ಹೇಗೆ?

ಕೃಷಿ ಎಂದರೆ ಖುಷಿ. ಕೆಲವರಿಗೆ ಕೃಷಿಯೇ ಬದುಕಿನ ಆಧಾರ.. ಇನ್ನು ಅನೇಕರಿಗೆ ಕೃಷಿ ಭೂಮಿಯೇ ಪ್ರಯೋಗ ಶಾಲೆ.. ಕೃಷಿಯಿಲ್ಲದ ಜೀವನ ಎಂದೆಂದಿಗೂ ನೀರಸವೇ.. ದಿನೇ ದಿನೇ ಕೃಷಿಯಲ್ಲಿ ಅದೆಷ್ಟೋ ಪ್ರಯೋಗ ನಡೆಯುತ್ತಲೇ ಇರುತ್ತದೆ. ಗೊಬ್ಬರದಿಂದ ಹಿಡಿದು ಬೆಳೆಗಳವರೆಗೂ ಕೃಷಿತಜ್ಞರು ನಾನಾ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಆದರೆ ಫ್ಯಾಕ್ಟರಿಯಲ್ಲಿ ಆರ್ಡರ್ ಕೊಟ್ಟು ಮಾಡಿಸಿದಂತೆ ಹಣ್ಣಿಗೂ ಬೇಕಾದ ಆಕಾರ ಕೊಟ್ಟು ಬೆಳೆಯಲೂ ಸಾಧ್ಯಾನಾ?. ಅದರಲ್ಲೂ ಜಗತ್ತಿಗೆ ಶಾಂತಿ ಮಂತ್ರ ಬೋಧಿಸಿದ ಬುದ್ಧನ ಅವತಾರದಲ್ಲಿ ಹಣ್ಣೊಂದನ್ನ ಸೃಷ್ಟಿ ಮಾಡುತ್ತಾರೆ ಅಂದರೆ ಅಚ್ಚರಿಯೇ ಸರಿ. ಅದುವೇ ಬುದ್ದನ ಆಕಾರದ ಪಿಯರ್ ಹಣ್ಣುಗಳು. ಬಾಲ ಬುದ್ದನ ಆಕಾರದ ಪಿಯರ್ ಹಣ್ಣುಗಳು ಇತ್ತೀಚೆಗೆ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿವೆ.
ಇದನ್ನೂ ಓದಿ: ದುಬಾರಿ ಬೆಲೆಗೆ ಮಾರಾಟವಾಯ್ತು ಮಾವಿನ ಹಣ್ಣು! – ಒಂದು ಹಣ್ಣಿನ ರೇಟ್ ಎಷ್ಟು ಗೊತ್ತಾ?
ಚೀನಾದ ಹಾವ್ ಕ್ಸಿನ್ಜಾಂಗ್ ಎಂಬ ಕೃಷಿಕ ಈ ಬುದ್ದನ ಆಕಾರದ ಹಣ್ಣುಗಳನ್ನ ಬೆಳೆದು ಅಚ್ಚರಿ ಮೂಡಿಸಿದ್ದಾನೆ. ಈತ ತನ್ನ ಅರ್ಧ ಎಕರೆಯಷ್ಟು ಜಮೀನಿನಲ್ಲಿ ಹತ್ತು ಸಾವಿರ ಬುದ್ದನಾಕಾರದ ಪಿಯರ್ ಹಣ್ಣುಗಳನ್ನ ಬೆಳೆಸಿದ್ದಾನೆ. ಒಂದು ಹಣ್ಣಿಗೆ 8 ಅಮೇರಿಕನ್ ಡಾಲರ್ ಗೆ ಮಾರಾಟ ಮಾಡಿದ್ದಾನೆ. ಅಂದರೆ, ಒಂದು ಹಣ್ಣು 598 ರೂಪಾಯಿಗೆ ಮಾರಾಟವಾಗಿತ್ತು. ಈತ ಈ ಪ್ರಯೋಗದಿಂದ ಭರ್ಜರಿ ಲಾಭಗಳಿಸಿದ್ದಾನೆ. ಈ ಬುದ್ದನಾಕಾರದ ಪಿಯರ್ ಹಣ್ಣುಗಳನ್ನ ಬೆಳೆಸಲು ರೈತ ಹಾವ್ ಕ್ಸಿನ್ಜಾಂಗ್ ಸತತ ಆರು ವರ್ಷಗಳ ಕಾಲ ಎಡಬಿಡದೇ ಶ್ರಮಿಸಿದ್ದ. ಹಣ್ಣುಗಳಿಗೆ ವಿಶೇಷ ಆಕಾರ ಕೊಡುವದೇ ಈ ರೈತನಿಗೆ ದೊಡ್ಡ ಸವಾಲಾಗಿತ್ತು. ಹಣ್ಣುಗಳಿಗೆ ಬುದ್ದನ ಆಕಾರ ಕೊಡಲು ಹೋದಾಗ ಮೊದಲಿಗೆ ಬರೀ ಗೊಂಬೆಗಳ ಆಕೃತಿಯಲ್ಲೇ ಹಣ್ಣುಗಳು ಬರುತ್ತಿತ್ತಂತೆ. ಕಣ್ಣು ಮತ್ತಿತ್ತರ ಭಾಗಗಳು ಹೋಲಿಕೆಯೇ ಆಗುತ್ತಿರಲಿಲ್ಲ. ಆದರೂ ಕಂಗೆಡದ ರೈತ ತನ್ನ ಪ್ರಯತ್ನ ಬಿಟ್ಟಿರಲಿಲ್ಲ. ಕೊನೆಗೂ ಸತತ ಆರು ವರ್ಷಗಳ ನಂತರ ಪಿಯರ್ ಹಣ್ಣುಗಳು ಬಾಲ ಬುದ್ದನ ಹೋಲಿಕೆಯಲ್ಲಿ ಮೂಡಿಬಂದವು. ಅದ್ರಲ್ಲೂ ಹಣ್ಣುಗಳಿಗೆ ಬಾಲ ಬುದ್ದನ ಆಕೃತಿ ಕೊಡುವುದು ಸವಾಲಿನ ಕೆಲಸವಾದರೂ ಕೂಡಾ ಸತತ ಆರುವರ್ಷಗಳ ಪರಿಶ್ರಮದ ಫಲವಾಗಿ ಈ ಪ್ರಯೋಗದಲ್ಲಿ ಹಾವ್ ಕ್ಸಿನ್ಜಾಂಗ್ ಯಶಸ್ವೀಯಾಗಿದ್ದ. ಅದೃಷ್ಟದ ಸಂಕೇತ ಎಂಬ ಕಾರಣದಿಂದದಲೋ ಏನೋ ಈ ಪಿಯರ್ ಹಣ್ಣುಗಳು ಚೀನಾದಲ್ಲಂತೂ ಜನಪ್ರಿಯವಾಗಿದ್ದವು.
ಹಣ್ಣುಗಳ ಆಕಾರ ಬದಲಿಸಲು ಮೋಲ್ಡ್ ಗಳನ್ನ ಬಳಲಾಗುತ್ತೆ. ಸಾಮಾನ್ಯವಾಗಿ ಈ ತಂತ್ರಜ್ಞಾನದ ಬಳಕೆಯಲ್ಲಿ ಚೀನಾ ರೈತರು ಯಾವಾಗಲೂ ಮುಂದು. ಪಿಯರ್ ಹಣ್ಣಿನ ಗಿಡಗಳು ಹೂವಿನ ಹಂತ ದಾಡಿ ಕಾಯಿ ಕಟ್ಟೋ ಸಮಯ ಬಂದಾಗ ಚಿಕ್ಕ ಚಿಕ್ಕ ಗಾತ್ರದಲ್ಲಿರುವಾಗಲೇ ಅವುಗಳನ್ನ ಮೋಲ್ಡ್ ಗಳ ಒಳಗೆ ಇರಿಸಲಾಗುತ್ತೆ. ಕಾಯಿಗಳು ಬೆಳೆಯುತ್ತಾ ಹೋದಂತೆ ಮೋಲ್ಡ್ ಆಕಾರಕ್ಕೆ ತಕ್ಕಂತೆ ರೂಪುಗೊಳ್ಳುತ್ತವೆ. ಕಾಯಿ ಪೂರ್ತಿ ಬೆಳೆದು ಮಾಗಿ ಹಣ್ಣಾಗುವ ಸಮಯ ಬರೋದ್ರಲ್ಲಿ ಅಂದುಕೊಂಡ ಆಕಾರಕ್ಕೆ ಬದಲಾಗಿರುತ್ತವೆ.
ಚೀನಾದಲ್ಲಿ ವಿವಿಧ ಆಕಾರದ ಹಣ್ಣು, ಬೆಳೆಗಳ ಮೇಲಿನ ಪ್ರಯೋಗ ಪದೇ ಪದೇ ನಡೆಯುತ್ತಲೇ ಇದೆ. ಹೀಗಾಗಿಯೇ ಏನೋ ಇಂಥಾ ಘಟಕಗಳು ಚೀನಾದಲ್ಲಿವೆ. ಪಿಯರ್ ಹಣ್ಣುಗಳಿಗೆ ಬುದ್ದನಾಕೃತಿ ಕೊಟ್ಟಿದ್ದು ಮಾತ್ರವಲ್ಲ, ಇಲ್ಲಿ ಚೌಕಾಕಾರದ ಕಲ್ಲಂಗಡಿಗಳನ್ನ ಬೆಳೆಯಲಾಗ್ತಿದೆ. ಜೊತೆಗೆ ಟೋಮ್ಯಾಟೋ ಬೆಳೆಗಳಲ್ಲೂ ವಿಧ ವಿಧ ಆಕಾರಗಳನ್ನ ಸೃಷ್ಟಿಸಿ ಅಲ್ಲಿನ ರೈತರು ಸೈ ಅನ್ನಿಸಿಕೊಂಡಿದ್ದಾರೆ. ತರಕಾರಿಗಳಲ್ಲೂ ಬೇರೆ ಬೇರೆ ಪ್ರಯೋಗ ಮಾಡೋದ್ರಲ್ಲೂ ಇಲ್ಲಿನ ರೈತರು ಯಶಸ್ವಿಯಾಗಿದ್ದಾರೆ. ಇದ್ರಿಂದ ಕೃಷಿ ಮಾರುಕಟ್ಟೆಯಲ್ಲೂ ಒಳ್ಳೇ ವಹಿವಾಟು ಕೂಡಾ ನಡೆಯುತ್ತಲೇ ಇದೆ.