ಅಪ್ಪನ ಸಾವು, ಅಣ್ಣನಿಗೆ ಕೊಟ್ಟ ಮಾತು- ಕ್ರಿಕೆಟ್ ಲೋಕದಲ್ಲಿ ಈಗ ವಿರಾಟ್ ಕೊಹ್ಲಿ ಕಿಂಗ್
ಜೆರ್ಸಿ ನಂ 18ರ ಹೀರೋ ವಿರಾಟ್ ಕೊಹ್ಲಿ ಜರ್ನಿ ಬಗ್ಗೆ ನಿಮಗೆಷ್ಟು ಗೊತ್ತು?

ಅಪ್ಪನ ಸಾವು, ಅಣ್ಣನಿಗೆ ಕೊಟ್ಟ ಮಾತು- ಕ್ರಿಕೆಟ್ ಲೋಕದಲ್ಲಿ ಈಗ ವಿರಾಟ್ ಕೊಹ್ಲಿ ಕಿಂಗ್ಜೆರ್ಸಿ ನಂ 18ರ ಹೀರೋ ವಿರಾಟ್ ಕೊಹ್ಲಿ ಜರ್ನಿ ಬಗ್ಗೆ ನಿಮಗೆಷ್ಟು ಗೊತ್ತು?

ವಿರಾಟ್ ಕೊಹ್ಲಿ. ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ಆಟಗಾರ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಹಾರಾಜ. ಅಭಿಮಾನಿಗಳ ಆರಾಧ್ಯ ದೈವ. ಟೀಂ ಇಂಡಿಯಾ ಕ್ರಿಕೆಟ್ ನಲ್ಲಿ ಎಂದೂ ಅಳಿಸಲಾಗದ ಹೆಜ್ಜೆಗುರುತು ಮೂಡಿಸಿರೋ ಕೊಹ್ಲಿ ಐಪಿಎಲ್​ನಲ್ಲಿ ದಾಖಲೆಗಳ ಶೂರನಾಗಿ ಮೆರೆದಿದ್ದಾರೆ. ಮೆರೆಯುತ್ತಿದ್ದಾರೆ. ರನ್ ಮಷಿನ್, ಕಿಂಗ್ ಅಂತಾನೇ ಕರೆಸಿಕೊಳ್ಳೋ ವಿರಾಟ್ ಕೊಹ್ಲಿ ಈಗ ಕೋಟ್ಯಂತರ ಜನರ ಪಾಲಿನ ರೋಲ್ ಮಾಡೆಲ್. ಕ್ರಿಕೆಟ್ ಲೋಕದಲ್ಲಿ ಅಸಾಧ್ಯ ಎಂಬುದನ್ನೆಲ್ಲಾ ಸಾಧಿಸಿ ತೋರಿಸಿರೋ ಅದೇ ಕೊಹ್ಲಿಯವರ ಈ ಪಯಣದ ಹಿಂದೆ ನೋವಿನ ಕಥೆ ಇದೆ. ಪ್ರತಿಯೊಂದು ಹೆಜ್ಜೆಯಲ್ಲೂ ಕಲ್ಲು ಮುಳ್ಳಿನ ಕಥೆ ಇದೆ. ಅವ್ರ ಜೆರ್ಸಿ ನಂಬರ್ 18ರ ಹಿಂದೆ ಯಾರೂ ಊಹೆ ಮಾಡಿಕೊಳ್ಳಲಾಗದಂತ ನೆನಪುಗಳಿವೆ.

ಇದನ್ನೂ ಓದಿ: RCBಗೆ ಸವಾಲಾಗುತ್ತಾ KKR? – SRH ವೀಕ್ನೆಸ್ EXPOSSED!- ಕೊಲ್ಕೊತ್ತಾಗೆ ಅಯ್ಯರ್ ಬಲ!

ಜಗತ್ತಿನ ಅತ್ಯಂತ ಶ್ರೀಮಂತ ಲೀಗ್ ಆಗಿರೋ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗತ್ತೇ ಬೇರೆ. ಇದೇ ತಂಡಕ್ಕಾಗಿ ಡೇ ಒನ್​ನಿಂದಲೂ ಲಾಯಲ್ ಆಗಿ ಆಡ್ತಿರೋದು ವಿರಾಟ್ ಕೊಹ್ಲಿ ಒಬ್ಬರೇ. ಪಂದ್ಯದಿಂದ ಪಂದ್ಯಕ್ಕೆ ದಾಖಲೆಗಳನ್ನೇ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಿರುವ ವಿರಾಟ್ ಈಗ ದೈತ್ಯ ಸಾಧಕನಾಗಿ ನಿಂತಿದ್ದಾರೆ. ನವೆಂಬರ್ 5, 1988 ರಂದು ದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ ಅವರು 2008 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದ್ರು. ಇಲ್ಲಿವರೆಗೆ 113 ಟೆಸ್ಟ್, 292 ಏಕದಿನ ಮತ್ತು 117 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ಮ್ಯಾಚ್​ಗಳಲ್ಲಿ 29 ಸೆಂಚುರಿ 30 ಅರ್ಧಶತಕಗಳೊಂದಿಗೆ 8,848 ರನ್‌, ODIಗಳಲ್ಲಿ 50 ಶತಕಗಳು ಮತ್ತು 72 ಅರ್ಧ ಶತಕಗಳೊಂದಿಗೆ 14,797 ರನ್‌ಗಳನ್ನು ಗಳಿಸಿದ್ದಾರೆ. ಹಾಗೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಶತಕ ಮತ್ತು 37 ಅರ್ಧಶತಕಗಳೊಂದಿಗೆ 4,037 ರನ್ ಗಳಿಸಿದ್ದಾರೆ. ಆದ್ರೆ ಈ ರನ್ ಮಷಿನ್ ವಿರಾಟ್ ಯಶಸ್ಸಿನ ಹಿಂದೆ ಎಂದೂ ಮರೆಯಲಾಗದ ಕಣ್ಣೀರಿನ ಸಾಗರವಿದೆ. ತಂದೆಯ ಸಾವಿನ ನೋವು ಕಲಿಸಿದ ಜೀವನದ ಪಾಠವಿದೆ. ಅಂದು ಅಣ್ಣನಿಗೆ ಕೊಟ್ಟಿದ್ದ ಮಾತಿನ ನೆನಪಿದೆ.

ಅದು 2006ರ ಡಿಸೆಂಬರ್ ತಿಂಗಳು. ಆ ಟೈಮಲ್ಲಿ ವಿರಾಟ್ ಕೊಹ್ಲಿ ದೆಹಲಿ ರಣಜಿ ತಂಡದ ಸದಸ್ಯರಾಗಿದ್ದರು. ನಾಲ್ಕು ದಿನಗಳ ಪಂದ್ಯಕ್ಕಾಗಿ ಸಿದ್ಧತೆ ಮಾಡಿಕೊಳ್ತಿದ್ರು. ಆದ್ರೆ ಅಷ್ಟರಲ್ಲೇ ಕೊಹ್ಲಿಯವರ ತಂದೆ ಪ್ರೇಮ್ ಕೊಹ್ಲಿ ಅವರು ತೀವ್ರ ಅಸ್ವಸ್ಥರಾಗಿರೋದಾಗಿ ಮಾಹಿತಿ ಬಂದಿತ್ತು. ಮನೆಯವರೆಲ್ಲ ಸೇರಿ ಪ್ರೇಮ್ ಕೊಹ್ಲಿ ಅವ್ರನ್ನ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಆದ್ರೆ ವಿಧಿಯಾಟವೇ ಬೇರೆ ಇತ್ತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ತಂದೆಯನ್ನು ಉಳಿಸಲಾಗಲಿಲ್ಲ. ಜೀವಕ್ಕೆ ಜೀವವಾಗಿದ್ದ ಅಪ್ಪನ ಮೃತದೇಹವನ್ನ ನೋಡಿದ ವಿರಾಟ್ ಎದೆಯಲ್ಲಿ ದುಃಖ ಮಡುಗಟ್ಟಿತ್ತು. ಮನೆಯವ್ರೆಲ್ಲಾ ಅಳ್ತಾ ಇದ್ರು. ಆದ್ರೆ ಇಂಥಾ ಟೈಮಲ್ಲಿ ವಿರಾಟ್ ಧೃಡ ನಿರ್ಧಾರಕ್ಕೆ ಬಂದಿದ್ರು. ತಮ್ಮ ತಂದೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ರಣಜಿ ಟೂರ್ನಿಯಲ್ಲಿ ದೆಹಲಿ ತಂಡದ ಪರ ಕೊಹ್ಲಿ ಕಣಕ್ಕಿಳಿದ್ದರು. ಯಾಕಂದ್ರೆ ಕೊಹ್ಲಿ ಭವಿಷ್ಯವನ್ನು ನಿರ್ಧರಿಸುವ ಪಂದ್ಯವೂ ಅದಾಗಿತ್ತು. ಕರ್ನಾಟಕ ವಿರುದ್ಧದ ಪಂದ್ಯ ಅದು. ತಂದೆ ನಿಧನದ ನಡುವೆಯೂ ವೃತ್ತಿ ಧರ್ಮ ತೋರಿದ ವಿರಾಟ್​, ಮುಂದಿನ ದಿನವೂ ರಣಜಿ ಪಂದ್ಯ ಆಡಲು ನಿರ್ಧರಿಸಿದ್ದರು. ತನ್ನ ಕುಟುಂಬ ಸದಸ್ಯರು ಮತ್ತು ತಂಡದ ಕೋಚ್ ಜೊತೆ ಚರ್ಚೆ ನಡೆಸಿದ ಕೊಹ್ಲಿ, ಆ ಪಂದ್ಯದಲ್ಲಿ 90 ರನ್ ಸಿಡಿಸಿದ್ದರು. ಇದು ಡೆಲ್ಲಿ ತಂಡಕ್ಕೆ ನೆರವಾಯಿತು. ಒಂದೆಡೆ ಅಪ್ಪನ ಸಾವಿನ ನೋವಿದ್ದರೂ ಪಂದ್ಯವನ್ನು ಆಡಿದ್ರು. ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಸಹ ಆಟಗಾರರು ಕೊಹ್ಲಿಗೆ ಸಾಂತ್ವನ ಹೇಳುವ ವೇಳೆ ನೋವು ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದರು.

ಅಪ್ಪನ ಸಾವು ವಿರಾಟ್ ಅವ್ರನ್ನ ಯಾವಾಗ್ಲೂ ಕಾಡುತ್ತಲೇ ಇರುತ್ತೆ. ಹಾಗೇ ಕ್ರಿಕೆಟ್​ನಲ್ಲಿ ಪಾರಮ್ಯ ಮೆರೆಯೋದಕ್ಕೆ ಕಾರಣವೂ ಅವ್ರ ತಂದೆಯೇ. ಈ ಬಗ್ಗೆ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ ಕೂಡ. ನಾನು ಭಾರತಕ್ಕಾಗಿ ಆಡಬೇಕೆಂಬುದು ನನ್ನ ತಂದೆಯ ಕನಸು. ನನ್ನ ತಂದೆಯ ಸಾವು ನನಗೆ ಆಘಾತವನ್ನುಂಟು ಮಾಡಿದೆ. ಆ ಕಷ್ಟದ ಸಮಯ ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ಅಂದು ನಾನು ಭಾರತಕ್ಕಾಗಿ ಆಡುತ್ತೇನೆ ಎಂದು ನನ್ನ ಸಹೋದರನಿಗೆ ಭರವಸೆ ನೀಡಿದ್ದೆ. ಅಂದಿನಿಂದ ನನ್ನ ಜೀವನದಲ್ಲಿ ಕ್ರಿಕೆಟ್ ಸರ್ವಸ್ವವಾಗಿದೆ. ಯಾವುದೇ ಕಾರಣಕ್ಕೂ ನಾನು  ಕ್ರಿಕೆಟ್ ತ್ಯಜಿಸಲು ಬಯಸುವುದಿಲ್ಲ. ನನ್ನ ತಂದೆಯ ಸಾವು ನನಗೆ ಕಷ್ಟದ ಸಮಯದಲ್ಲಿ ಹೋರಾಡುವುದನ್ನು ಕಲಿಸಿತು ಎಂದು ಕೊಹ್ಲಿ ಹೇಳಿಕೊಂಡಿದ್ದರು. ಇನ್ನು ವಿರಾಟ್ ಕೊಹ್ಲಿ ಧರಿಸುವ ಜೆರ್ಸಿ ಸಂಖ್ಯೆ 18. ಇದು ಇಡೀ ಜಗತ್ತಿಗೇ ಗೊತ್ತಿರೋ ವಿಚಾರ. ಭಾರತ ತಂಡ, ಇಂಡಿಯನ್​ ಪ್ರೀಮಿಯರ್​ ಲೀಗ್​ ಆಡಿದಾಗಲೂ ಇದೇ ಜೆರ್ಸಿ ನಂಬರ್​ ಇರುತ್ತೆ. ಆದರೆ ಈ ಸಂಖ್ಯೆಯ ಹಿಂದಿರುವ ನೋವು ತುಂಬಾ ಜನರಿಗೆ ಗೊತ್ತಿಲ್ಲ.

ಕಿಂಗ್​ ವಿರಾಟ್ ಕೊಹ್ಲಿ ಈ ನಂಬರ್​ ಜೆರ್ಸಿ ಧರಿಸುವುದರ ಹಿಂದೆ ಒಂದು ಮಹತ್ವದ ಕಾರಣವಿದೆ. ತುಂಬಾನೇ ಭಾವನಾತ್ಮಕವಾಗಿದೆ. 2008ರಿಂದಲೂ ಇದೇ ಕೊಹ್ಲಿ ಇದೇ ನಂಬರ್ ಜೆರ್ಸಿ ತೊಡುತ್ತಿದ್ದಾರೆ. 2008ರಲ್ಲಿ ಅಂಡರ್​​-19 ವಿಶ್ವಕಪ್​ ವಿಜೇತ ಕೊಹ್ಲಿ, ಅಂದಿನಿಂದಲೂ 18ನೇ ನಂಬರ್​ ಧರಿಸುತ್ತಾ ಬಂದಿದ್ದಾರೆ. ಅದೇ ವೇಳೆ ಟೀಮ್​ ಇಂಡಿಯಾಗೆ ಕೊಹ್ಲಿ ಹೆಜ್ಜೆ ಇಟ್ಟಾಗ 18ನೇ ಸಂಖ್ಯೆ ಜೆರ್ಸಿ ಖಾಲಿ ಇತ್ತು. ಅದನ್ನೇ ನೀಡಲಾಯ್ತು. ಇದು ಕೊಹ್ಲಿ ಪಾಲಿಗೆ ಅದೃಷ್ಟವೂ ಹೌದು. ಆದ್ರೆ ಈ ಸಂಖ್ಯೆಯನ್ನ ಕೊಹ್ಲಿ ಕೇಳಿಯೇ ಇರಲಿಲ್ಲ. ಈ ನಂಬರ್ ಹಿಂದೆ ಇನ್ನೊಂದು ವಿಶೇಷವಿದೆ. ಡಿಸೆಂಬರ್​​ 18, 2006.. ವಿರಾಟ್​ ಕೊಹ್ಲಿ ಪಾಲಿಗೆ ಕರಾಳ ದಿನ. ಯಾಕಂದ್ರೆ ಅದೇ ದಿನ ಕೊಹ್ಲಿಯವರ ತಂದೆ ನಿಧನರಾಗಿದ್ರು. ಆಗಿನ್ನೂ ಯಂಗ್ ಕ್ರಿಕೆಟರ್ ಆಗಿದ್ದ ಕೊಹ್ಲಿಗೆ 17 ವರ್ಷವಾಗಿತ್ತು. ಹಾಗಾಗಿ, ತಂದೆಯ ಸ್ಮರಣಾರ್ಥ ಮತ್ತು ನೆನಪಿಗಾಗಿ ಆ ದಿನಾಂಕದ ಸಂಖ್ಯೆಯ ಜೆರ್ಸಿ ತೊಟ್ಟು ಕಣಕ್ಕೆ ಇಳಿಯುತ್ತಾರೆ. ಟೀಮ್​ ಇಂಡಿಯಾದಲ್ಲೂ ಆ ಸಂಖ್ಯೆ ಖಾಲಿ ಇದ್ದದ್ದು, ಕೊಹ್ಲಿ ಪಾಲಿಗೆ ಜೆರ್ಸಿ ಪಡೆಯಲು ತೊಂದರೆ ತೆಗೆದುಕೊಳ್ಳಲಿಲ್ಲ. ಈ ಬಗ್ಗೆ ಮಾತನಾಡಿದ್ದ ಕೊಹ್ಲಿ, ತಂದೆ ತೀರಿಕೊಂಡ ದಿನ ನನಗಿನ್ನೂ ನೆನಪಿದೆ. ಅದು ಜೀವನದ ಅತ್ಯಂತ ಕಠಿಣ ಸಮಯ ಎಂದು ನೋವು ವ್ಯಕ್ತಪಡಿಸಿದ್ದಾರೆ.

ಸದ್ಯ ಈ ಬಾರಿಯ ಐಪಿಎಲ್​ನಲ್ಲೂ ರಣಾರ್ಭಟ ತೋರುತ್ತಿರೋ ವಿರಾಟ್ ಅತೀ ಹೆಚ್ಚು ರನ್ ಕಲೆ ಹಾಕಿದ್ದಾರೆ. ಹಾಗೇ ಮುಂದಿನ ಟಿ-20 ವಿಶ್ವಕಪ್​ನಲ್ಲೂ ಟೀಂ ಇಂಡಿಯಾ ಪರ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಕೋಟ್ಯಂತರ ಜನರಿಗೆ ಸ್ಪೂರ್ತಿಯ ಚಿಲುಮೆಯಾಗಿರೋ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಪಾಲಿಗೆ ದೇವರು ಕೊಟ್ಟಿರೋ ವರ. ಇಂಥಾ ಕ್ರಿಕೆಟರ್​ನ ಪಡೆದಿರೋ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಒಂದು ಹೆಮ್ಮೆ.

Sulekha