ಒಂದೇ ಕ್ಷಣದಲ್ಲಿ ಯುದ್ಧವೇ ಮುಗಿಸುವ ಸಾಮರ್ಥ್ಯ ಹೊಂದಿದವನ್ನು ತಡೆದಿದ್ಯಾಕೆ ಶ್ರೀಕೃಷ್ಣ – ಶಿವಭಕ್ತ ಬಾರ್ಬರಿಕನ ಬಗ್ಗೆ ನಿಮಗೆಷ್ಟು ಗೊತ್ತು?

ಅಧರ್ಮದ ವಿರುದ್ಧ ಧರ್ಮದ ಸೆಣಸಾಟವೇ ಮಹಾಭಾರತ. ಕೌರವರ ವಿರುದ್ಧ ಪಾಂಡವರು ಹೋರಾಡುವಾಗ ಅನೇಕ ವೀರಪುರುಷರು ರಣರಂಗಕ್ಕೆ ಧುಮುಕುತ್ತಾರೆ. ಅವರಲ್ಲಿ ಒಬ್ಬ ವೀರಪುರುಷನ ಬಗ್ಗೆ ನಾವು ಇವತ್ತು ವಿವರವಾಗಿ ಹೇಳುತ್ತೇವೆ. ಆತ ಮಹಾಭಾರತದಲ್ಲಿ ನೇರವಾಗಿ ಭಾಗವಹಿಸಿದ್ರೆ ಒಂದೇ ದಿನ.. ಅಲ್ಲಲ್ಲ.. ಒಂದೇ ಕ್ಷಣದಲ್ಲಿ ಯುದ್ಧವೇ ಮುಗಿದುಹೋಗುತ್ತಿತ್ತು. ಆವನೇನಾದ್ರೂ ಬಿಲ್ಲು ಎತ್ತಿ ಬಾಣ ಹೊಡೆದಿದ್ರೆ ಒಂದೇ ಬಾಣಕ್ಕೆ ಶತ್ರುಗಳು ಕ್ಷಣ ಮಾತ್ರದಲ್ಲಿ ನಿರ್ನಾಮವಾಗ್ತಿದ್ರು. ಆದ್ರೆ, ಅವನನ್ನ ತಡೆದು ನಿಲ್ಲಿಸಿದ್ದು ಶ್ರೀಕೃಷ್ಣ. ಅಂಥಾ ಸಾಮರ್ಥ್ಯವಿರುವ ವೀರ, ಅಪ್ಪಟ ಶಿವಭಕ್ತನಾಗಿದ್ದ ಬಾರ್ಬರಿಕ.
ಇದನ್ನೂ ಓದಿ: ರಾಮಾಯಣದಲ್ಲಿ ಯಶ್ ರಾವಣ.. – ಹನುಮಾನ್, ಸೂರ್ಪನಕಿ, ಲಕ್ಷ್ಮಣ ಪಾತ್ರ ಯಾರಿಗೆ?
ಬಾರ್ಬರಿಕ ಮಹಾಬಲಶಾಲಿ ಭೀಮನ ಮೊಮ್ಮಗ. ಘಟೋತ್ಕಚ ಮತ್ತು ಮೌರವಿಯ ಮಗ. ಘಟೋತ್ಕಚ ಭೀಮ ಮತ್ತು ರಾಕ್ಷಸಿ ಹಿಡಿಂಬಿಯ ಮಗ. ಮೌರವಿ ಯಾದವ ರಾಜನ ಮಗಳು. ಶಿವನ ಪರಮ ಭಕ್ತನಾದ ಬಾರ್ಬರಿಕ ತನ್ನ ತಾಯಿಯಿಂದಲೂ ಉತ್ತಮ ವಿದ್ಯೆಯನ್ನೂ ಕಲಿತಿದ್ದ. ಶಿವನ ಧ್ಯಾನ ಮಾಡಿ ಅತ್ಯಂತ ಶಕ್ತಿಶಾಲಿಯಾಗುವ ವರವನ್ನ ಪಡೆದಿದ್ದ. ಇವನು ತನ್ನ ಭಕ್ತಿ ಹಾಗೂ ಧ್ಯಾನದ ಮೂಲಕ ಅಷ್ಟದೇವತೆಗಳಿಂದ ಮೂರು ವಿಶೇಷ ಶಕ್ತಿಯ ಬಾಣಗಳನ್ನ ಪಡೆದಿದ್ದ. ಒಂದು ಬಾಣವು ಯಾವ ವಸ್ತುಗಳನ್ನ ಗುರಿಯಾಗಿಡಲು ಬಯಸುತ್ತದೆಯೋ ಅವುಗಳೆಲ್ಲವನ್ನೂ ಗುರುತಿಸುವ ಸಾಮರ್ಥ್ಯವನ್ನ ಹೊಂದಿತ್ತು. ಎರಡನೇ ಬಾಣವು ಬಾರ್ಬರಿಕನು ಯಾವುದನ್ನ ಉಳಿಸಲು ಬಯಸುತ್ತಾನೋ ಅವುಗಳನ್ನ ಗುರುತಿಸುವ ಶಕ್ತಿಯನ್ನ ಪಡೆದುಕೊಂಡಿತ್ತು. ಮೂರನೇ ಬಾಣವು ಬೇಡ ಎಂದು ಗುರುತಿಸಿದ ಎಲ್ಲಾ ವಸ್ತು ಮತ್ತು ವ್ಯಕ್ತಿಯನ್ನ ನಾಶಮಾಡುವ ಸಾಮರ್ಥ್ಯವನ್ನ ಪಡೆದುಕೊಂಡಿತ್ತು. ಅಂದ್ರೆ ಬಾರ್ಬರಿಕನು ಮನಸ್ಸು ಮಾಡಿ ಯಾವುದನ್ನ ಬೇಡ ಎಂದು ಗುರುತಿಸುತ್ತಿದ್ದನೋ ಅವುಗಳನ್ನ ಒಂದೇ ಸಮಯದಲ್ಲಿ ನಾಶ ಮಾಡುವ ಸಾಮರ್ಥ್ಯ ಹೊಂದಿದ್ದನು. ಬಾರ್ಬರಿಕನು ಮೂರು ಬಾಣಗಳನ್ನ ಒಮ್ಮೆ ಬಿಡುಗಡೆ ಮಾಡಿದರೆ ಎಲ್ಲವನ್ನೂ ಒಮ್ಮೆಲೇ ನಾಶ ಮಾಡುವ ಸಾಮರ್ಥ್ಯ ಹೊಂದಿದ್ದನು.
ಮಹಾಭಾರತ ಯುದ್ಧದಲ್ಲಿ ಪಾಂಡವರ ಪರವಾಗಿ ನಿಂತ ಶ್ರೀಕೃಷ್ಣ ಯುದ್ಧ ನಡೆಯೋ ಮೊದಲು ಕೌರವರು ಮತ್ತು ಪಾಂಡವರು ಹಾಗೂ ಸಭೆಯಲ್ಲಿ ನೆರೆದಿದ್ದವರಲ್ಲಿ ಕೆಲ ಪ್ರಶ್ನೆಗಳನ್ನ ಕೇಳ್ತಾನೆ. ಅದ್ರಲ್ಲೊಂದು ಮಹಾಭಾರತ ಯುದ್ಧ ಮುಗಿಯಲು ಎಷ್ಟು ದಿನ ಬೇಕಾಗುತ್ತದೆ ಎಂದು ಶ್ರೀಕೃಷ್ಣ ಕೇಳ್ತಾನೆ. ಆಗ ಭೀಷ್ಮನು ಯುದ್ಧ ಮುಗಿಯಲು 20 ದಿನಗಳು ಬೇಕಾಗುತ್ತೆ ಅಂದರೆ, ದ್ರೋಣಾಚಾರ್ಯರು 25 ದಿನಗಳು, ಕರ್ಣನು 24 ದಿನಗಳು ಹಾಗೂ ಅರ್ಜುನನು 28 ದಿನಗಳು ಬೇಕಾಗುತ್ತೆ ಅಂತಾ ಹೇಳ್ತಾರೆ. ಆದ್ರೆ ಬಾರ್ಬರಿಕ ಮಾತ್ರ ಕೇವಲ ಒಂದು ನಿಮಿಷದಲ್ಲಿ ಯುದ್ಧವನ್ನ ಮುಗಿಸಬಹುದು ಎನ್ನುತ್ತಾನೆ. ಬಾರ್ಬರಿಕನ ಮಾತನ್ನ ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗ್ತಾರೆ. ಆದ್ರೆ, ಶ್ರೀಕೃಷ್ಣನಿಗೆ ಮಾತ್ರ ಬಾರ್ಬರಿಕನ ಸಾಮರ್ಥ್ಯದ ಅರಿವಾಗುತ್ತದೆ. ಹೀಗಾಗಿ ಬಾರ್ಬರಿಕನ ಶಕ್ತಿ ಪರೀಕ್ಷೆ ಮಾಡಲು ಮುಂದಾಗುತ್ತಾನೆ ಶ್ರೀಕೃಷ್ಣ.
ಬಾರ್ಬರಿಕನ ವಿಶೇಷ ಶಕ್ತಿಯನ್ನ ಅರಿತ ಶ್ರೀಕೃಷ್ಣನು ಒಬ್ಬ ಸಂತನ ವೇಷ ಧರಿಸಿ ಕಾಡಿನೊಳಗೆ ಬರುತ್ತಾನೆ. ಆ ಸಮಯದಲ್ಲಿ ಯಾವುದೋ ಯುದ್ಧಕ್ಕೆ ಹೊರಟ ಬಾರ್ಬರಿಕ ಶ್ರೀಕೃಷ್ಣನಿಗೆ ಎದುರಾಗುತ್ತಾನೆ. ಆಗ ಮಾರುವೇಷದಲ್ಲಿದ್ದ ಕೃಷ್ಣ ಬಾರ್ಬರಿಕನ ಬಳಿ ಎಲ್ಲಾ ಎಲೆಗಳನ್ನ ಗುರುತಿಸು, ನಿನ್ನ ಸಾಮರ್ಥ್ಯ ನನಗೆ ತೋರಿಸು ಎನ್ನುತ್ತಾನೆ. ಸಂತನ ಮಾತಿಗೆ ಬೆಲೆ ನೀಡಿದ ಬಾರ್ಬರಿಕ ಬಾಣವನ್ನ ಬಿಡಲು ಕಣ್ಮುಚ್ಚುತ್ತಾನೆ. ಆ ಸಮಯದಲ್ಲಿ ಶ್ರೀಕೃಷ್ಣ ಒಂದು ಎಲೆಯನ್ನ ತೆಗೆದು ತನ್ನ ಪಾದಗಳ ಅಡಿಯಲ್ಲಿ ಮರೆ ಮಾಡುತ್ತಾನೆ. ಬಾರ್ಬರಿಕ ಬಾಣ ಬಿಡುತ್ತಿದ್ದಂತೆ ಕಾಡಿನಲ್ಲಿರುವ ಎಲ್ಲಾ ಎಲೆಗಳನ್ನ ಬಾಣ ಗುರುತಿಸಿ ಶ್ರೀಕೃಷ್ಣನ ಪಾದದ ಸುತ್ತ ಸುತ್ತುತ್ತಿತ್ತು. ಆಗ ಕೃಷ್ಣ ಈ ಬಾಣವೇಕೆ ನನ್ನ ಪಾದದ ಸುತ್ತ ಸುತ್ತುತ್ತಿದೆ ಅಂತಾ ಕೇಳ್ತಾನೆ. ನಿಮ್ಮ ಪಾದದಡಿ ಎಲೆ ಇರಬಹುದು ಅಂತಾನೆ ಬಾರ್ಬರಿಕ. ಆಗ ಕೃಷ್ಣನಿಗೆ ಬಾರ್ಬರಿಕನ ಸಾಮರ್ಥ್ಯದ ಬಗ್ಗೆ ಮತ್ತಷ್ಟು ನಂಬಿಕೆ ಬಂತು. ಆಗ ಕೃಷ್ಣ ಮಹಾಭಾರತ ಯುದ್ಧದಲ್ಲಿ ನೀನು ಯಾರ ಪರ ಯುದ್ಧ ಮಾಡ್ತೀಯಾ ಅಂತಾ ಕೇಳ್ತಾನೆ. ಆಗ ಬಾರ್ಬರಿಕ ನಾನು ನನ್ನ ತಾಯಿಗೆ ಯಾರು ದುರ್ಬಲರಾಗಿರುತ್ತಾರೋ ಅವರ ಪರ ಯುದ್ಧ ಮಾಡೋದಾಗಿ ಮಾತು ಕೊಟ್ಟಿದ್ದೇನೆ. ಹೀಗಾಗಿ ನಾನು ಪಾಂಡವರ ಪರ ಯುದ್ಧ ಮಾಡ್ತೀನಿ ಅನ್ನುತ್ತಾನೆ. ಆಗ ಕೃಷ್ಣ, ಪಾಂಡವರ ಶಕ್ತಿಯಿಂದ ಕೌರವರು ದುರ್ಬಲರಾದರೆ ಏನು ಮಾಡ್ತೀಯಾ ಅಂತಾ ಕೇಳ್ತಾನೆ. ಹೌದು ಅಂತಾನೆ ಬಾರ್ಬರಿಕ. ಆಗ ಕೂಡಲೇ ಶ್ರೀಕೃಷ್ಣ ಒಂದು ಉಪಾಯ ಮಾಡ್ತಾನೆ. ನನಗೇನಾದರೂ ನೀ ಈಗ ನೀಡುವೆಯಾ ಅಂತಾ ಕೇಳ್ತಾನೆ. ಬಾರ್ಬರಿಕ ಹಿಂದೆ ಮುಂದೆ ನೀಡದೇ ಮಾತು ನೀಡುತ್ತಾನೆ. ಆಗ ಸಂತನ ವೇಷದಲ್ಲಿದ್ದ ಶ್ರೀಕೃಷ್ಣ ನಿನ್ನ ಶಿರವನ್ನ ನೀಡು ಎಂದು ಕೇಳುತ್ತಾನೆ. ಇದರಿಂದ ವಿಚಲಿತನಾದ ಬಾರ್ಬರಿಕ ನೀನ್ಯಾರು ಅಂತಾ ಕೇಳ್ತಾನೆ. ಆಗ ಶ್ರೀಕೃಷ್ಣ ತಾನು ವಿಷ್ಣುವಿನ ಅವತಾರ ಅನ್ನೋದನ್ನ ಬಾರ್ಬರಿಕನಿಗೆ ತೋರಿಸುತ್ತಾನೆ. ವಿಷ್ಣುವಿನ ಭವ್ಯರೂಪ ನೋಡಿ ಧನ್ಯನಾದ ಬಾರ್ಬರಿಕ , ನಾನು ನನ್ನ ಶಿರವನ್ನ ಕೊಡುತ್ತೇನೆ. ಆದ್ರೆ, ಮಹಾಬಾರತ ಯುದ್ಧದಲ್ಲಿ ಪಾಲ್ಗೊಳ್ಳದೇ ಇದ್ದರೂ ನೋಡುವ ಭಾಗ್ಯ ನೀಡಬೇಕು ಅಂತಾ ಕೇಳಿಕೊಳ್ಳುತ್ತಾನೆ. ಇದಕ್ಕೆ ಶ್ರೀಕೃಷ್ಣ ಸಮ್ಮತಿಸುತ್ತಾನೆ. ಕೊಟ್ಟ ಮಾತಿನಂತೆ ಬಾರ್ಬರಿಕ ತನ್ನ ತಲೆಯನ್ನ ಕತ್ತರಿಸಿ ಕೃಷ್ಣನಿಗೆ ನೀಡುತ್ತಾನೆ. ಕೃಷ್ಣನು ಬಾರ್ಬರಿಕನ ತಲೆಯನ್ನ ಬೆಟ್ಟದ ತುದಿಯಲ್ಲಿ ಇರಿಸಿ ಮಹಾಭಾರತ ಯುದ್ಧಕ್ಕೆ ಸಾಕ್ಷಿಯಾಗುವಂತೆ ಯುದ್ಧ ನೋಡುವಂತೆ ಅನುಗ್ರಹಿಸುತ್ತಾನೆ.
ಯುದ್ಧ ಮುಗಿದ ನಂತರ ವಿಜಯಿಯಾದ ಪಾಂಡವರು ನಾವು ಜಯಶಾಲಿಯಾಗಲು ಯಾರು ಕಾರಣ ಅನ್ನೋದ್ರ ಬಗ್ಗೆ ವಾದ ಮಾಡ್ತಾ ಇರ್ತಾರೆ. ಆಗ ಶ್ರೀಕೃಷ್ಣ ಈ ಬಗ್ಗೆ ಬಾರ್ಬರಿಕನ ಕೇಳುವಂತೆ ಸಲಹೆ ನೀಡುತ್ತಾನೆ. ಯುದ್ಧದ ಆರಂಭದಿಂದ ಹಿಡಿದು ಕೊನೇವರೆಗೂ ಬಾರ್ಬರಿಕ ಯುದ್ಧ ನೋಡಿದ್ದನ್ನೂ ಹೇಳ್ತಾನೆ. ಅದರಂತೆಯೇ ಪಾಂಡವರು ಬಾರ್ಬರಿಕನ ಬಳಿ ಕೇಳ್ತಾರೆ. ಆಗ ಬಾರ್ಬರಿಕ ಶ್ರೀಕೃಷ್ಣನ ಸೂಕ್ತ ಸಲಹೆಯಿಂದಾಗಿ ನೀವು ಯುದ್ಧವನ್ನ ಗೆಲ್ಲಲು ಸಾಧ್ಯವಾಯ್ತು ಎಂದು ಹೇಳುತ್ತಾನೆ. ಯುದ್ಧವನ್ನ ಸಂಪೂರ್ಣವಾಗಿ ವೀಕ್ಷಿಸಿ ನ್ಯಾಯವಾದ ತೀರ್ಪನ್ನ ಪಾಂಡವರಿಗೆ ನೀಡಿದ ಬಾರ್ಬರಿಕನಿಗೆ ಶ್ರೀಕೃಷ್ಣನು ಆಶೀರ್ವಾದ ಮಾಡ್ತಾನೆ. ನಂತರ ರೂಪವತಿ ಎಂಬ ನದಿಯಲ್ಲಿ ಅವನ ತಲೆಯನ್ನ ಮುಳುಗಿಸುತ್ತಾನೆ. ಕಲಿಯುಗ ಆರಂಭವಾಗಿ ಹಲವು ವರ್ಷಗಳ ಬಳಿಕ ಬಾರ್ಬರಿಕನ ತಲೆಯನ್ನ ರಾಜಸ್ಥಾನಜ ಸಿಕಾರ್ ಜಿಲ್ಲೆಯ ರುತು ಗ್ರಾಮದಲ್ಲಿ ಸಮಾಧಿ ಮಾಡಲಾಯ್ತು. ರುತು ಗ್ರಾಮದ ರಾದ ರೂಪ್ ಸಿಂಗ್ ಚೌಹಾನ್ ಬಾರ್ಬರಿತನ ತಲೆಗೆ ದೇವಾಲಯ ನಿರ್ಮಿಸ್ತಾನೆ. ನಂತರ ಬಾರ್ಬರಿಕನ ತಲೆಯನ್ನ ದೇವಸ್ಥಾನದದಲ್ಲಿ ಇರಿಸಲಾಯ್ತು. ವಿಗ್ರಹವನ್ನ ಅಗೆದ ಜಾಗವನ್ನ ಶ್ಯಾಮ್ ಕುಂಡ್ ಎಂದು ಕರೀತಾರೆ.

ನೋಡಿರಿ

