ಅಯೋಧ್ಯೆ ಬಗ್ಗೆ ನಿಮಗೆಷ್ಟು ಗೊತ್ತು?- ರಾಮಮಂದಿರ ಮೇಲೆ ಎಷ್ಟು ಬಾರಿ ದಾಳಿ ನಡೆದಿತ್ತು? ತಡೆದವರು ಯಾರು?

ಅಯೋಧ್ಯೆ ಬಗ್ಗೆ ನಿಮಗೆಷ್ಟು ಗೊತ್ತು?- ರಾಮಮಂದಿರ ಮೇಲೆ ಎಷ್ಟು ಬಾರಿ ದಾಳಿ ನಡೆದಿತ್ತು? ತಡೆದವರು ಯಾರು?

ಅಯೋಧ್ಯೆ.. ಈ ಹೆಸರಲ್ಲೇ ಏನೋ ಒಂದು ಝಲಕ್ ಇದೆ. ಅಯೋಧ್ಯೆ ಅನ್ನೋ ಹೆಸರಲ್ಲೇ ಧಾರ್ಮಿಕತೆ ಅಡಗಿದೆ. ಅಯೋಧ್ಯೆ ಅಂದಕೂಡಲೆ ಪುರಾಣ, ರಾಮಾಯಣ, ಭಾರತದ ಇತಿಹಾಸ, ಸಂಸ್ಕೃತಿ ಎಲ್ಲವೂ ಒಮ್ಮೆ ಮನಸ್ಸಲ್ಲಿ ಹಾದು ಹೋಗುತ್ತೆ. ಸಂಸ್ಕೃತದ ಯುದ್ಧ್ ಅನ್ನೋ ಪದದಿಂದ ಅಯೋಧ್ಯೆ ಅನ್ನೋ ಹೆಸರು ಬಂತು. ಯುದ್ಧ್ ಅಂದ್ರೆ ನಿಮಗೆ ಗೊತ್ತಿರೋ ಹಾಗೆ ಯುದ್ಧ, ವಾರ್..ಯೋಧ್ಯಾ ಅಂದ್ರೆ ಹೋರಾಡಬೇಕು ಅನ್ನೋ ಅರ್ಥ.  ಅದೇ ಅಯೋಧ್ಯಾ ಅಂದ್ರೆ ಅಜೇಯ ಅರ್ಥಾತ್ ಯಾರಿಗೂ ಗೆಲ್ಲಲಾಗದ ನಗರ. ಅಥರ್ವವೇದದ ಪ್ರಕಾರ ಜಯಿಸಲಾಗದ ದೇವತೆಗಳ ನಗರ ಅನ್ನೋ ಅರ್ಥ ಇದೆ. ಇದು ದೇವತೆಗಳೇ ನಿರ್ಮಿಸಿದ ನಗರ. ಹೀಗಾಗಿ ಯುದ್ಧದಿಂದ ಯಾರಿಗೂ ಅಯೊಧ್ಯೆಯನ್ನ ಗೆಲ್ಲೋಕೆ ಸಾಧ್ಯವೇ ಇಲ್ಲ ಅನ್ನೋ ನಂಬಿಕೆ ಇದೆ. ಹೀಗೆ ಅಯೋಧ್ಯೆಯನ್ನ ಬೇರೆ ಬೇರೆ ರೀತಿಯಲ್ಲಿ ಬಣ್ಣಿಸಲಾಗುತ್ತೆ..ವಿಶ್ಲೇಷಿಸಲಾಗುತ್ತೆ.

ಇದನ್ನೂ ಓದಿ: 14 ವರ್ಷಗಳ ಕಾಲ ರಾಮ ವನವಾಸಕ್ಕೆ ತೆರಳಿದ್ಯಾಕೆ? – ಈ 14ರ ಗುಟ್ಟೇನು?

ಉತ್ತರಪ್ರದೇಶದ ಸರಯು ನದಿ ತೀರದಲ್ಲಿರುವ ಅಯೋಧ್ಯೆಗೆ ಈ ಹಿಂದೆ ಸಾಕೇತ ನಗರ ಅನ್ನೋ ಹೆಸರಿತ್ತು. ಗೌತಮ ಬುದ್ಧ, ಮಹಾವೀರನಿಗೂ ಅಯೋಧ್ಯೆ ಸಂಪರ್ಕವಿತ್ತು. ಬುದ್ಧರ ಜೊತೆಗೆ ಜೈನರಿಗೂ ಅಯೋಧ್ಯೆ ಅನ್ನೋದು ಪವಿತ್ರ ಕ್ಷೇತ್ರ. ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವಂತೆ 7 ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಅಯೋಧ್ಯೆ ಕೂಡ ಒಂದು. ಅಷ್ಟೇ ಅಲ್ಲ, ಹಿಂದೂಗಳ ಪಾಲಿನ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಅಯೋಧ್ಯೆಗೆ ಮೊದಲ ಸ್ಥಾನವಿದೆ ಅಂತಾನೂ ಹೇಳಲಾಗುತ್ತೆ. ರಾಮಾಯಣ ಮತ್ತು ಮಹಾಭಾರತದಲ್ಲೂ ಅಯೋಧ್ಯೆ ಉಲ್ಲೇಖವಾಗಿದ್ದು, ಅಯೋಧ್ಯೆಯನ್ನ ಶ್ರೀರಾಮನ ಜನ್ಮಸ್ಥಳ ಅಂತಾನೆ ಹೇಳಲಾಗುತ್ತೆ. ಹೀಗಾಗಿಯೇ ಅಯೋಧ್ಯೆ ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ.

ಅಯೋಧ್ಯೆ ನಗರಕ್ಕೆ ಕ್ರಿಸ್ತಪೂರ್ವ 5 ಮತ್ತು 6ನೇ ಶತಮಾನದಷ್ಟು ಇತಿಹಾಸ ಇದೆ. ಒಂದು ಕಾಲದಲ್ಲಿ ಅಯೋಧ್ಯೆ ಕೋಸಲ ರಾಜಮನೆತನದ ರಾಜಧಾನಿಯಾಗಿತ್ತು. ಬಳಿಕ ಅಯೋಧ್ಯೆಯನ್ನ ರಾಜ ದಶರಥ ಆಳ್ವಿಕೆ ಮಾಡಿದ್ದ. ಸೂರ್ಯವಂಶಿಗಳಾದ ದಶರಥ, ಶ್ರೀರಾಮಚಂದ್ರನ ಕಾಲದಲ್ಲಿ ಅಯೋಧ್ಯೆ ಅತ್ಯಂತ ಸಮೃದ್ಧ ಮತ್ತು ಸಾಮರಸ್ಯದ ರಾಜ್ಯವಾಗಿತ್ತು. ಮನು, ಇಕ್ಷವಕು, ಪ್ರಿಥು, ಹರಿಶ್ಚಂದ್ರ, ಸಾಗರ, ಭಗೀರಥ, ರಘು ಮತ್ತು ದಿಲೀಪ್ ಕೋಸಲದೇಶದ ರಾಜಧಾನಿಯಾಗಿದ್ದ ಈ ಅಯೋಧ್ಯೆಯನ್ನ ಆಳ್ವಿಕೆ ಮಾಡಿದ್ರು. ಹಾಗೆಯೇ ದಶರಥ ಮತ್ತು ರಾಮ ಕೂಡ ಅಯೋಧ್ಯೆಯನ್ನ ಆಳ್ತಾರೆ. ಒಟ್ಟು ಸುಮಾರು 35 ಮಂದಿ ರಾಜರುಗಳು ಅಯೋಧ್ಯೆಯನ್ನ ಆಳಿರ್ತಾರೆ.

ಕ್ರಿಸ್ತಪೂರ್ವ 5 ಮತ್ತು 6ನೇ ಶತಮಾನದಲ್ಲಿ ಬುದ್ಧ ಅಯೋಧ್ಯೆಯಲ್ಲಿ ಒಂದಷ್ಟು ಕಾಲ ವಾಸವಿದ್ದನಂತೆ. ಮೌರ್ಯ ಮತ್ತು ಗುಪ್ತರ ಆಡಳಿತದ ಸಂದರ್ಭದಲ್ಲಿ ಬುದ್ಧಿಸಂಗೆ ಅಯೋಧ್ಯೆ ಪ್ರಮುಖ ಕೇಂದ್ರವಾಗಿತ್ತು. ಈ ವೇಳೆ ಬೌದ್ಧ ಮಠಗಳು ಮತ್ತು ಸ್ತೂಪಗಳು ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿತ್ತು. ಇನ್ನು ಅಥರ್ವವೇದದಲ್ಲಿ ಉಲ್ಲೇಖವಾಗಿರುವಂತೆ ಅಯೋಧ್ಯೆಯಲ್ಲಿ ಜೈನರು ಕೂಡ ವಾಸವಿದ್ರು. ಜೈನ ಸಮುದಾಯದ ಐದು ಮಂದಿ ತೀರ್ಥಂಕರರು ಜನಸಿರೋದೆ ಅಯೋಧ್ಯೆಯಲ್ಲಿ. 11 ಮತ್ತು 12ನೇ ಯುಗದಲ್ಲಿ ಕನೌಜ್ ಸಾಮ್ರಾಜ್ಯ ಕೂಡ ಅಯೋಧ್ಯೆಯನ್ನ ಆಳಿತ್ತು. ಈ ವೇಳೆ ಅಯೋಧ್ಯೆಗೆ ಅವಧ್ ಅನ್ನೋ ಹೆಸರು ಕೂಡ ಬಂದಿತ್ತು.

ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ ಅಯೋಧ್ಯೆಯನ್ನ ಅಂದ್ರೆ ಆಗಿನ ಸಾಕೇತ ನಗರವನ್ನ ಗುಪ್ತಾ ರಾಜಮನೆತನ ಕೂಡ ಆಳಿತ್ತು. ಅಯೋಧ್ಯೆಯಲ್ಲಿ ಬ್ರಾಹ್ಮಣ್ಯವನ್ನ ಪುನರುಜ್ಜೀವನಗೊಳಿಸಿದ್ದೇ ಗುಪ್ತಾ ರಾಜಮನೆತನ. ಅಯೋಧ್ಯೆಯಲ್ಲಿ ಗುಪ್ತರ ಕಾಲದ ಸಾಕಷ್ಟು ನಾಣ್ಯಗಳು ಪತ್ತೆಯಾಗಿತ್ತು. ಗುಪ್ತರ ಕಾಲದಲ್ಲೇ ಸಾಕೇತ ನಗರವನ್ನ ಅಯೋಧ್ಯೆ ಅಂತಾ ಗುರುತಿಸಿಸಲಾಗಿತ್ತು. ಬಳಿಕ ರಾಜ ವಿಕ್ರಮಾದಿತ್ಯ ಕೂಡ ತನ್ನ ರಾಜಧಾನಿಯನ್ನ ಅಯೋಧ್ಯೆಗೆ ವರ್ಗಾವಣೆ ಮಾಡಿದ್ದ. ಗುಪ್ತಾ ರಾಜಮನೆತನದ ರಾಜಧಾನಿಯನ್ನ ಪಾಟಲೀಪುತ್ರದಿಂದ ಅಯೋಧ್ಯೆಗೆ ಶಿಫ್ಟ್​ ಆಗಿತ್ತು.

ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಕಾರ ಹಿಂದೂ ಪೌರಾಣಿಕ ದಂತಕಥೆ ಮನು ಅಯೋಧ್ಯೆಯನ್ನ ಕಂಡು ಹಿಡಿದನಂತೆ. ಆದ್ರೆ ಇಲ್ಲಿ ಪ್ರಶ್ನೆ ಇರೋದು ಅಯೋಧ್ಯೆಯಲ್ಲಿ ಮೊಟ್ಟ ಮೊದಲ ರಾಮಮಂದಿರವನ್ನ ಕಟ್ಟಿದ್ದು ಯಾರು ಅನ್ನೋದು. ಬಾಬರ್​ನ ಕಾಲದಲ್ಲಿ ರಾಮಮಂದಿರವನ್ನ ಕೆಡವಿ ಮಸೀದಿಯನ್ನ ಕಟ್ಟಲಾಯ್ತು ಅಂತಾ ಹೇಳಲಾಗುತ್ತೆ. ಹಾಗಿದ್ರೆ ಬಾಬರ್​​ನ ಆಡಳಿತದಲ್ಲಿ ನೆಲಸಮವಾದ ರಾಮಮಂದಿರವನ್ನ ಕಟ್ಟಿದ್ದು ಯಾರು ಅನ್ನೋ ಪ್ರಶ್ನೆ ಕೂಡ ಇಲ್ಲ. ಇತಿಹಾಸದ ಪುಸ್ತಕಗಳಲ್ಲಿ ಉಲ್ಲೇಖವಾಗಿರುವಂತೆ ರಾಜ ವಿಕ್ರಮಾದಿತ್ಯ ಮೊಟ್ಟ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮಮಂದಿರವನ್ನ ಕಟ್ಟಿಸುತ್ತಾನೆ. ವಿಕ್ರಮಾದಿತ್ಯನ ಕಾಲದಲ್ಲಿ 144 ಕಿಲೋ ಮೀಟರ್ ಉದ್ದ, 36 ಕಿಲೋ ಮೀಟರ್​ ಅಗಲದ ಇಡೀ ಅಯೋಧ್ಯೆ ನಗರವನ್ನ ಪುನರುಜ್ಜೀವನಗೊಳಿಸಲಾಗುತ್ತೆ. ಇದೇ ವೇಳೆ ಈಗ ರಾಮಮಂದಿರ ನಿರ್ಮಾಣವಾಗುತ್ತಿರೋ ಜಾಗದಲ್ಲೇ ಅಂದು ರಾಜ ವಿಕ್ರಮಾದಿತ್ಯ ಭವ್ಯ ರಾಮಮಂದಿರವನ್ನ ಕಟ್ಟಿಸಿರ್ತಾನೆ. 84 ಪಿಲ್ಲರ್​​ಗಳನ್ನ ಹೊಂದಿದ್ದ ಮಂದಿರ ಇದಾಗಿತ್ತಂತೆ. ಶ್ರೀರಾಮನ ನೆನಪಿಗಾಗಿ ರಾಮ ಹುಟ್ಟಿದ ಅಯೋಧ್ಯೆಯಲ್ಲೇ ಮಂದಿರದ ನಿರ್ಮಾಣವಾಗುತ್ತೆ. ಜೊತೆಗೆ ರಾಮಮಂದಿರದ ಸುತ್ತಲೂ ಸುಮಾರು 360 ವಿವಿಧ ದೇವಾಲಯಗಳನ್ನ ಕೂಡ ನಿರ್ಮಾಣ ಮಾಡಲಾಗುತ್ತೆ. ಸುಮಾರು 500ಕ್ಕೂ ಹೆಚ್ಚು ವರ್ಷಗಳ ಕಾಲ ಅಯೋಧ್ಯೆ ರಾಮಮಂದಿರ ಪ್ರಮುಖ ಯಾತ್ರಾ ಸ್ಥಳವಾಗಿರುತ್ತೆ. ಬಳಿಕ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣವಾದ ರಾಮಮಂದಿರವನ್ನ ರಾಜ ಸಮುದ್ರಗುಪ್ತ ಸಂಪೂರ್ಣವಾಗಿ ನವೀಕರಣ ಮಾಡಿಸುತ್ತಾನಂತೆ.

ಆದ್ರೆ ಭಾರತಕ್ಕೆ ದಂಡಯಾತ್ರೆ ಬಂದ ಮೊಹಮ್ಮದ್ ಘಜ್ನಿ 1033ರಲ್ಲಿ ಅಯೋಧ್ಯೆ ರಾಮಮಂದಿರದ ಮೇಲೆ ದಾಳಿ ನಡೆಸೋಕೆ ಯತ್ನಿಸ್ತಾನಂತೆ. ಆದ್ರೆ ಈ ವೇಳೆ ಹಿಂದೂಗಳೆಲ್ಲಾ ಸೇರಿ ದೇವಾಲಯವನ್ನ ರಕ್ಷಿಸ್ತಾರಂತೆ. 1325-1351ರ ಅವಧಿಯಲ್ಲಿ ಮೊಹಮ್ಮದ್ ಬಿನ್ ತುಘಲಕ್ ಎರಡು ಬಾರಿ ರಾಮಮಂದಿರದ ಮೇಲೆ ಅಟ್ಯಾಕ್ ಮಾಡೋಕೆ ಪ್ರಯತ್ನಿಸಿದ್ನಂತೆ. ಅವಾಗಲೂ ಅಷ್ಟೇ, ಹಿಂದೂ ದೇವಾಲಯವನ್ನ ಮತ್ತೊಮ್ಮೆ ರಕ್ಷಿಸ್ತಾರೆ. ನಂತರ 1351-1388ರ ಸಂದರ್ಭದಲ್ಲಿ ಶಾ ತುಘಲಕ್ ಕೂಡ ರಾಮಮಂದಿರವನ್ನ ಟಾರ್ಗೆಟ್ ಮಾಡ್ತಾನೆ. ಆಗಲೂ ಅಷ್ಟೇ ದಾಳಿಕೋರ ತುಘಲಕ್​ನನ್ನ ಹಿಂದೂಗಳು ತಡೀತಾರೆ. ಇಷ್ಟೇ ಅಲ್ಲ, 1393-1413ರ ಅವಧಿಯಲ್ಲಿ ನಸೀರುದ್ದೀನ್ ತುಘಲಕ್ ಎರಡು ಬಾರಿ ದೇವಾಲಯದ ಮೇಲೆ ದಾಳಿ ನಡೆಸೋಕೆ ಮುಂದಾಗ್ತಾನೆ. ಪುನ: ಹಿಂದೂಗಳ ರಾಮಮಂದಿರವನ್ನ ರಕ್ಷಿಸ್ತಾರೆ. ಇದಾದ್ಮೇಲೆ 1489-1517ರ ಸಂದರ್ಭದಲ್ಲಿ ಸಿಖಂದರ್ ಲೋಧಿ ರಾಮಮಂದಿರದ ಮೇಲೆ ದಾಳಿ ಮಾಡೋಕೆ ಮುಂದಾಗ್ತಾನೆ. ರಾಮಭಕ್ತರ ಮುಂದೆ ಆತನೂ ಸೋಲುತ್ತಾನೆ. ಬಳಿಕ ಸಿಖಂದರ್ ಲೋಧಿಯ ಸುಬೇದಾರ್ ಫಿರೋಜ್ ಖಾನ್ ರಾಮಮಂದಿರದ ಮೇಲೆ ಒಟ್ಟು 10 ಬಾರಿ ದಾಳಿ ನಡೆಸೋಕೆ ಪ್ರಯತ್ನಿಸ್ತಾನೆ. ಆದ್ರೂ ರಾಮಮಂದಿರವನ್ನ ಅಲುಗಾಡಿಸೋದು ಬಿಡಿ, ಮುಟ್ಟಲು ಕೂಡಾ ರಾಮಭಕ್ತರು ಬಿಡೋದಿಲ್ಲ. ಬಳಿಕ ಬರೋದೆ ಬಾಬರ್. ಬಾಬರ್​ ಬರೋಕೂ ಮುನ್ನ ಸುಮಾರು 17 ಬಾರಿ ಮಂದಿರದ ಮೇಲಿನ ದಾಳಿಯನ್ನ ತಡೆದಿದ್ದ ರಾಮಭಕ್ತರು ಅಂದು ಬಾಬರ್​ಎದುರು ವಿಫಲವಾಗಿದ್ದರು.

Sulekha