ಫ್ರಿಡ್ಜ್‌ನಲ್ಲಿ ಹಸಿ ಮಾಂಸ ಇಡಬಹುದಾ? – ಫ್ರಿಡ್ಜ್​ ನಲ್ಲಿ ಎಷ್ಟು ದಿನ ಮಾಂಸ ಇಡಬಹುದು?

ಫ್ರಿಡ್ಜ್‌ನಲ್ಲಿ ಹಸಿ ಮಾಂಸ ಇಡಬಹುದಾ? – ಫ್ರಿಡ್ಜ್​ ನಲ್ಲಿ ಎಷ್ಟು ದಿನ ಮಾಂಸ ಇಡಬಹುದು?

ನಾನ್​ವೆಜ್ ತಿನ್ನೋರಿಗೆ ಚಿಕನ್, ಮಟನ್, ಮೀನಿನ ರೆಸಿಪಿಗಳಂದ್ರೆ ಅಚ್ಚುಮೆಚ್ಚು. ಎಷ್ಟೇ ವೆರೈಟಿ ಸ್ವೀಟ್ಸ್ ತಿಂದು ಹಬ್ಬದೂಟ ಮಾಡಿದ್ರೂ ಬಾಡೂಟ ತಿಂದಂಗೆ ಆಗಲ್ಲ. ಅದ್ರಲ್ಲೂ ಫ್ರಿಡ್ಜ್ ಬಂದಮೇಲಂತೂ ಮಾಂಸವನ್ನ ಫ್ರಿಡ್ಜ್​ನಲ್ಲಿಟ್ಟು ವಾರವಿಡೀ ತಿಂತಾರೆ. ಆದ್ರೆ ಹಸಿ ಮಾಂಸವನ್ನ ಹಾಗೂ ಬೇಯಿಸಿದ ಮಾಂಸವನ್ನ ಫ್ರಿಡ್ಜ್​ ನಲ್ಲಿ ಎಷ್ಟು ದಿನ ಇಡಬಹುದು..? ಅದಕ್ಕಿಂತ ಜಾಸ್ತಿ ಇಟ್ಟರೆ ಏನೆಲ್ಲಾ ಸಮಸ್ಯೆ ಆಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.

ನಾನ್​ವೆಜ್​ ಪ್ರಿಯರಿಗೆ ಚಿಕನ್ ಅಂದ್ರೆ ತುಂಬಾನೇ ಇಷ್ಟ. ಆದ್ರೆ ಅದೇ ಕೋಳಿ ಲಕ್ಷಾಂತರ ಬ್ಯಾಕ್ಟೀರಿಯಾಗಳಿಂದ ಕೂಡಿದೆ. ಹಾಗಾಗಿ, ಚಿಕನ್ ಅನ್ನು ಹೇಗೆ ಸಂಗ್ರಹಿಸಿ ಇಡುತ್ತೇವೆ ಅನ್ನೋದು ಬಹಳನೇ ಮುಖ್ಯ. ತುಂಬಾ ಜನ ಚಿಕನ್ ಖರೀದಿಸಿಕೊಂಡು ಬಂದು ಫ್ರಿಡ್ಜ್​ನಲ್ಲಿಡುತ್ತಾರೆ. ಆದರೆ ಚಿಕನ್ ಅನ್ನು ಎಷ್ಟು ದಿನದವರೆಗೂ ಫ್ರಿಡ್ಜ್ ನಲ್ಲಿಟ್ಟು ಬಳಸಬಹುದು ಅನ್ನೋದನ್ನ ನಾವು ತಿಳಿದುಕೊಳ್ಳಬೇಕು.

ಇದನ್ನೂ ಓದಿ: ಬಿಲಿಯನೇರ್‌ಗಳು ತಮಗೆ ಬೇಕಾಗಿ ಬಂಕರ್‌ಗಳನ್ನು ನಿರ್ಮಿಸ್ತಾ ಇರೋದ್ಯಾಕೆ? – ಅನಾಹುತದ ಮುನ್ಸೂಚನೆ ಸಿಕ್ಕಿದೆಯಾ?

ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ಸಂಶೋಧನೆ ಪ್ರಕಾರ ಕಚ್ಚಾ ಕೋಳಿಯನ್ನು ಒಂದರಿಂದ ಎರಡು ದಿನಗಳವರೆಗೆ ಸಂಗ್ರಹಿಸಲು ಮಾತ್ರ ಅವಕಾಶವಿದೆ. ಅಂದ್ರೆ ಬೇಯಿಸದೇ ಇರುವ ಹಸಿ ಮಾಂಸವನ್ನ 2 ದಿನ ಫ್ರಿಡ್ಜ್ ನಲ್ಲಿ ಇಡಬಹುದು. ಅದಕ್ಕಿಂತ ಜಾಸ್ತಿ ಇಡುವಂತಿಲ್ಲ. ಆದರೆ ಬೇಯಿಸಿದ ಚಿಕನ್ ಅನ್ನು 3 ರಿಂದ 4 ದಿನಗಳವರೆಗೆ ಫ್ರಿಜ್ನಲ್ಲಿ ಇಡಬಹುದು. ಅದಕ್ಕಿಂತಲೂ ಹೆಚ್ಚು ದಿನಗಳವರೆಗೂ ಇಟ್ಟು ತಿಂತೀವಿ ಅಂದ್ರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ರೆಫ್ರಿಜರೇಟರ್​ನಲ್ಲಿ ಕೋಳಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

ಫ್ರಿಜ್ ತಾಪಮಾನವು 4 ಡಿಗ್ರಿಗಿಂತ ಕಡಿಮೆಯಿದ್ದರೆ, ಬ್ಯಾಕ್ಟೀರಿಯಾದ ಬೆಳವಣಿಗೆ ಕಡಿಮೆಯಾಗುತ್ತದೆ. ಆದ್ದರಿಂದ, ನೀವು ಚಿಕನ್ ಅನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ, ಅದನ್ನು ಗಾಳಿಯಾಡದ ಕಂಟೇನರ್​ನಲ್ಲಿ ಫ್ರೀಜ್ ಮಾಡಬೇಕು. ಚಿಕನ್ ಅನ್ನು ಫ್ರಿಡ್ಜ್​ನಲ್ಲಿ ಹೆಚ್ಚು ದಿನ ಇಟ್ಟರೆ ಅದು ಹಾಳಾಗುತ್ತೆ.

ಇನ್ನು ಮಾಂಸ ಚೆನ್ನಾಗಿದ್ಯಾ ಅಥವಾ ಹಾಳಾಗಿದ್ಯ ಅನ್ನೋದನ್ನ ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಅನೇಕರಿಗೆ ಇದೆ. ಚಿಕನ್ ಬಣ್ಣ ಬದಲಾಗಿದ್ದರೆ, ವಾಸನೆ ಬರಲು ಆರಂಭಿಸಿದ್ದರೆ ಅದು ಹಾಳಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ನೀವೇನಾದ್ರೂ ಪರ್ವಾಗಿಲ್ಲ ಬೇಯಿಸಿದ್ರೆ ಸರಿ ಹೋಗುತ್ತೆ ಅನ್ಕೊಂಡು ಹಾಳಾದ ಕೋಳಿಯನ್ನು ತಿಂದರೆ ವಾಂತಿ, ನಿರ್ಜಲೀಕರಣದಂತಹ ಹಲವಾರು ರೋಗಗಳು ಬರುತ್ತವೆ. ಹೀಗಾಗಿ ಮಾಂಸವನ್ನ ಆದಷ್ಟು ಫ್ರೆಶ್ ಆಗಿಯೇ ಬಳಸಿ. ಕೋಳಿಯಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿರೋದ್ರಿಂದ ಚೆನ್ನಾಗಿ ಕ್ಲೀನ್ ಮಾಡಿ. ಅರ್ಧಂಬರ್ಧ ಬೇಯಿಸಿ ತಿನ್ನುವ ದುಸ್ಸಾಹಸಕ್ಕೆ ಮಾತ್ರ ಕೈಹಾಕಬೇಡಿ. ಹಾಗೇನಾದ್ರೂ ಮಾಡಿದ್ರೆ ಸೋಂಕುಗಳು ದೇಹವನ್ನ ಪ್ರವೇಶಿಸಿ ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ. ಹೀಗಾಗಿ ಚಿಕನ್ ನಿಮಗೆ ಎಷ್ಟೇ ಫೇವರೆಟ್ ಆಗಿದ್ರೂ ಅದನ್ನ ಬಳಸುವಾಗ ಕೇರ್​ಫುಲ್ ಆಗಿರಿ.

Shwetha M