ಗಂಡು ಕುಲಕ್ಕೆ ಒಂದೊಳ್ಳೆ ಮೆಸೇಜ್ ನೀಡಿದ ‘ಕೌಸಲ್ಯ ಸುಪ್ರಜಾ ರಾಮ’ – ಡಾರ್ಲಿಂಗ್ ಕೃಷ್ಣ ಪೊಗರಿಗೆ ಮನಸೋತ ಅಭಿಮಾನಿಗಳು
ಡಾರ್ಲಿಂಗ್ ಕೃಷ್ಣ ಅಭಿನಯದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಸಂಸಾರದಲ್ಲಿ ಗಂಡಸು ಒಂದು ಕೈ ಮೇಲೆ ಅನ್ನೋ ಪೊಗರನ್ನು ವಿಭಿನ್ನವಾಗಿ ತೋರಿಸಲಾಗಿದೆ. ಹೀಗಾಗಿಯೇ ಈ ಸಿನಿಮಾ ಗಂಡಸರಿಗೆ ಮೆಸೇಜ್ ಕೊಡುವ ಸಿನಿಮಾ ಅಂತಾನೇ ಹೇಳಲಾಗುತ್ತಿದೆ. ಜೊತೆಗೆ ಪ್ರೇಕ್ಷಕರು ಕೂಡಾ ಈ ವಿಭಿನ್ನ ಕಥೆಯನ್ನು ಸಖತ್ತಾಗಿಯೇ ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಾಸ್ ಆ್ಯಂಡ್ ಕ್ಲಾಸ್ ಲುಕ್ನಲ್ಲಿ ಮೆಗಾಸ್ಟಾರ್ ಜಿರಂಜೀವಿ – ‘ಭೋಲಾ ಶಂಕರ್’ ಸಿನಿಮಾದ ಟ್ರೇಲರ್ಗೆ ಫ್ಯಾನ್ಸ್ ಫಿದಾ
ಸ್ಯಾಂಡಲ್ವುಡ್ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಅಂದರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಇವರಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಅಂದರೆ ಅಭಿಮಾನಿಗಳಿಗೆ ಅದೇನೋ ಖುಷಿ. ಹೀಗಾಗಿಯೇ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲೂ ಈ ಜೋಡಿಯ ಮೋಡಿ ಇದೆ. ಜೊತೆಗೆ ಬೃಂದಾ ಆಚಾರ್ಯ ಅನ್ನೋ ಚೆಂದುಳ್ಳಿ ಚೆಲುವೆ ಕೂಡಾ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದಾಳೆ. ನಿರ್ದೇಶಕ ಶಶಾಂಕ್ ಕೂಡ ಕೌಟುಂಬಿಕ ಪ್ರೇಕ್ಷಕರನ್ನು ಸೆಳೆಯುವಂತಹ ಸಿನಿಮಾ ಮಾಡುವಲ್ಲಿ ಎತ್ತಿದ ಕೈ. ಇದೀಗ ಶಶಾಂಕ್ ಮತ್ತು ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ನಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಪಕ್ಕಾ ಫ್ಯಾಮಿಲಿ ಆಡಿಯನ್ಗೆ ಇಷ್ಟ ಆಗುವಂತೆ ತೆರೆಮೇಲೆ ಬಂದಿದೆ. ಈ ಚಿತ್ರದ ಮೂಲಕ ಒಂದೊಳ್ಳೆಯ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದ್ದಾರೆ. ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್ ಅವರಂತಹ ಅನುಭವ ಕಲಾವಿದರಿಂದಾಗಿ ಚಿತ್ರದ ಮೆರುಗು ಹೆಚ್ಚಿದೆ.
ಹೆಣ್ಮಕ್ಕಳ ಮುಂದೆ ತಲೆ ಬಾಗಬಾರದು ಎಂಬ ಹಠ ಹೊಂದಿರುವ ರಾಮ್ (ಡಾರ್ಲಿಂಗ್ ಕೃಷ್ಣ) ಅಲಿಯಾಸ್ ರಾಮೇಗೌಡನ ಕಥೆ ಇದು. ತಾನು ಗಂಡಸು ಎಂಬ ಪೊಗರು ಆತನ ಮೈಯೆಲ್ಲಾ ತುಂಬಿಕೊಂಡಿರುತ್ತದೆ. ಅಂಥವನ ಬಾಳಲ್ಲಿ ಶಿವಾನಿ (ಬೃಂದಾ ಆಚಾರ್ಯ) ಎಂಬ ಸುಂದರಿ ಎಂಟ್ರಿ ನೀಡುತ್ತಾಳೆ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆದರೆ ಗಂಡಸುತನದ ಅಂಹಕಾರದಿಂದ ರಾಮ್ ಜೀವನದಲ್ಲಿ ಆ ಪ್ರೀತಿ ಉಳಿಯುವುದಿಲ್ಲ. ಆಗ ಅವನ ಜೀವನದಲ್ಲಿ ಬಿರುಗಾಳಿಯಂತೆ ಎಂಟ್ರಿ ಕೊಡುವವಳು ಮುತ್ತುಲಕ್ಷ್ಮಿ (ಮಿಲನಾ ನಾಗರಾಜ್). ಕಥೆಯ ಕೊನೆಯಲ್ಲಿ ರಾಮ್ ನಿಜವಾದ ಗಂಡಸು ಹೌದೋ ಅಲ್ಲವೋ ಎಂಬುದು ಗೊತ್ತಾಗುತ್ತದೆ. ಅದೇ ಈ ಸಿನಿಮಾದ ತಿರುಳು. ನಿಜವಾದ ಗಂಡಸು ಎಂದರೆ ಯಾರು ಎಂಬ ವ್ಯಾಖ್ಯಾನವೂ ಈ ಸಿನಿಮಾದಲ್ಲಿದೆ. ಒಂದು ಕುಟುಂಬ ನಡೆಯಬೇಕು ಅಂದರೆ ಗಂಡ ಮತ್ತು ಹೆಂಡತಿಯ ಪಾತ್ರ ಬಹಳ ಮುಖ್ಯ. ಇಬ್ಬರಿಗೂ ಜವಾಬ್ದಾರಿ ಇರುತ್ತದೆ. ಆದರೆ ಗಂಡು ತಾನೇ ಮೇಲು ಎಂದು ಗರ್ವ ತೋರಿಸಿದಾಗ ಸಮಸ್ಯೆಗಳು ಉದ್ಭವ ಆಗುತ್ತವೆ. ಅದರಿಂದ ಎಷ್ಟೋ ಹೆಣ್ಣುಮಕ್ಕಳ ಬಾಳು ಹಾಳಾಗಿದೆ. ಇಂಥ ಸೀರಿಯಸ್ ವಿಷಯವನ್ನು ಬಹಳ ಲವಲವಿಕೆಯಿಂದ ಹಾಸ್ಯದ ಮೂಲಕ ವಿವರಿಸಿದ್ದಾರೆ ನಿರ್ದೇಶಕ ಶಶಾಂಕ್. ವಯಸ್ಸಿನ ಮಿತಿ ಇಲ್ಲದೇ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ನೋಡುವಂತಹ ಸಿನಿಮಾ ಇದಾಗಿದೆ.