ಏಳರಲ್ಲಿ ಎಷ್ಟು ಮಂದಿ ಗೆಲುವಿನ ನಗೆ ಬೀರಬಹುದು.?- ರಾಜ್ಯ ಕಾಂಗ್ರೆಸ್‌ನ ಲೆಕ್ಕಾಚಾರ ಹೇಗಿದೆ ?

ಏಳರಲ್ಲಿ ಎಷ್ಟು ಮಂದಿ ಗೆಲುವಿನ ನಗೆ ಬೀರಬಹುದು.?- ರಾಜ್ಯ ಕಾಂಗ್ರೆಸ್‌ನ ಲೆಕ್ಕಾಚಾರ ಹೇಗಿದೆ ?

ಲೋಕಸಭೆ ಚುನಾವಣೆಗಾಗಿ ಇಂಡಿಯಾ ಮೈತ್ರಿಕೂಟ ಕಟ್ಟಲು ಹೊರಟ ಕಾಂಗ್ರೆಸ್‌ ಸೀಟು ಹಂಚಿಕಗೂ ಮೊದಲೇ ಪ್ರಮುಖ ಸ್ನೇಹಿತರನ್ನು ಕಳೆದುಕೊಂಡಿತ್ತು.. ಇಂಡಿಯಾ ಕೂಟಕ್ಕೆ ಅಡಿಗಲ್ಲು ಹಾಕಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತೆ ಪಲ್ಟಿ ಹೊಡೆದು ಮೋದಿ ತೆಕ್ಕೆ ಸೇರಿಕೊಂಡಿದ್ದಾರೆ.. ದೋಸ್ತಿಗಳಿರಲಿ.. ಇಲ್ಲದಿರಲಿ.. ಚುನಾವಣೆಯನ್ನಂತೂ ಎದುರಿಸಬೇಕು ಎಂಬ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್‌ ಕೇವಲ 39 ಸೀಟುಗಳಿಗೆ ಮಾತ್ರ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ.. ಒಂದೆಡೆ ಬಿಜೆಪಿ 195 ಸೀಟುಗಳಿಗೆ ಅಭ್ಯರ್ಥಿ ಘೋಷಿಸಿ ಜೋಶ್‌ನಲ್ಲಿದ್ದರೆ, ಇತ್ತ ಕಾಂಗ್ರೆಸ್‌ ಪಾಳಯ ಕರ್ನಾಟಕದ 7 ಸೇರಿದಂತೆ ದೇಶದಲ್ಲಿ 39 ಸೀಟುಗಳಿಗೆ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ.. ಹಾಗಿದ್ದರೆ ಮೊದಲಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಏಳರಲ್ಲಿ ಎಷ್ಟು ಮಂದಿ ಗೆಲುವಿನ ನಗೆ ಬೀರಬಹುದು.? ರಾಜ್ಯ ಕಾಂಗ್ರೆಸ್‌ನ ಲೆಕ್ಕಾಚಾರ ಹೇಗಿದೆ ಎಂಬುದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಜೆಪಿಗೆ ಟಿಕೆಟ್ ಕಗ್ಗಂಟು – ಅಳೆದು ತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದೇ ಬಿಜೆಪಿಗೆ ಸವಾಲು

ಲೋಕಸಭೆಯಲ್ಲಿ ಹ್ಯಾಟ್ರಿಕ್‌ ಭಾರಿಸಿ ಸೋಲಿಲ್ಲದ ಸರದಾರನಂತೆ ಮತ್ತೆ ದೇಶದಲ್ಲಿ ಆಡಳಿತ ಮುಂದುವರಿಸುವ ಪೂರ್ಣ ವಿಶ್ವಾಸದಲ್ಲಿ ಪ್ರಧಾನ ಮಂತ್ರಿ ಮೋದಿಯಿದ್ದಾರೆ.. ಮೋದಿ -ಅಮಿತ್‌ ಶಾ ಜೋಡಿ, ದೇಶದ ಚುನಾವಣೆಯ ದಿಕ್ಕನ್ನೇ ತಮ್ಮ ಕಡೆಗೆ ತಿರುಗಿಸಿಕೊಳ್ಳುವ ಚಾತುರ್ಯವನ್ನು ಚುನಾವಣೆಗಳಲ್ಲಿ ತೋರಿಸುತ್ತಿರುವುದು ಅವರ ತಂತ್ರಗಾರಿಕೆ ಎಷ್ಟು ಸಮರ್ಥವಾಗಿದೆ ಎನ್ನುವುದಕ್ಕೆ ಸಾಕ್ಷಿ. ಇದನ್ನು ಅವರ ವಿರೋಧಿಗಳು ಒಪ್ಪಿಕೊಳ್ಳದಿದ್ದರೆ, ಅವರಿಗಿನ್ನೂ ಮೋದಿ-ಶಾ ಜೋಡಿಯ ಸಾಮರ್ಥ್ಯವೇ ಅರ್ಥವಾಗಿಲ್ಲ ಎಂದು ಅರ್ಥ.. ಹಾಗಂತ ರಾಜಕೀಯದಲ್ಲಿ ಪ್ರತಿ ಅವಕಾಶವನ್ನು ಗೆಲುವಾಗಿ ಪರಿವರ್ತಿಸಿಕೊಳ್ಳಲು ಜಾಣ್ಮೆ ಬೇಕು .. ಅದಕ್ಕೆ ಪೂರಕ ಪರಿಶ್ರಮ ಬೇಕು ಮತ್ತು ಅಷ್ಟೇ ಸಮರ್ಪಕ ತಂತ್ರಗಾರಿಕೆ ಬೇಕು. ಈಗ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿಯಲ್ಲಿ ಕೇವಲ ಎರಡಂಕಿಯ ಹೆಸರುಗಳನ್ನು ಮಾತ್ರ ಘೋಷಿಸಿ, ತಾನಿನ್ನೂ ಮೂರಂಕಿಗಿಂತ ಹೆಚ್ಚು ಸೀಟುಗಳಲ್ಲಿ ಗೆಲ್ಲುವಷ್ಟು ಸಾಮರ್ಥ್ಯ ಧಕ್ಕಿಸಿಕೊಂಡಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಿದೆ.. ಇದರಲ್ಲಿ ಯಾವುದೇ ಮುಚ್ಚುಮರೆ ಸದ್ಯಕ್ಕೆ ಬೇಕಿಲ್ಲ. ಯಾಕೆ ಇದನ್ನು ನೇರವಾಗಿ ಹೇಳ್ತಿದ್ದೀನಿ ಅಂದ್ರೆ ನಿಮಗೆ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಮೊದಲ ಪಟ್ಟಿಯನ್ನು ನೋಡಿದ್ರೆ, ಈ ಮಾತು ನಿಜ ಅಂತ ಗೊತ್ತಾಗುತ್ತದೆ.. ಯಾಕಂದ್ರೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ 124 ಸೀಟುಗಳನ್ನು ಘೋಷಿಸಿತ್ತು. ಅಂದ್ರೆ ಸ್ಪಷ್ಟ ಬಹುಮತದ ಕಡೆಗೆ ತಾನು ಹೋಗ್ತಿರುವ ರೀತಿಯಲ್ಲೇ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯಿತ್ತು.. ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿಯ 124 ಸೀಟುಗಳಲ್ಲಿ ಆಲ್‌ಮೋಸ್ಟ್‌ 80 ಸೀಟುಗಳಲ್ಲಿ ಗೆಲುವು ದಾಖಲಿಸಿಕೊಂಡಿರುವ ರಾಜ್ಯದ ಚುನಾವಣೆಯ ಇತಿಹಾಸ.. ಈಗ ಬಿಜೆಪಿ ಕೂಡ ತನ್ನ 195 ಸೀಟುಗಳಲ್ಲಿ ಆಲ್‌ಮೋಸ್ಟ್‌ 150 ಸೀಟುಗಳವರೆಗೆ ಗೆಲ್ಲುವ ವಿಶ್ವಾಸದಲ್ಲಿಯೇ ಮುನ್ನುಗ್ಗುತ್ತಿದೆ.. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್‌ನ 39 ಸೀಟುಗಳ ಪೈಕಿ, ಕರ್ನಾಟಕದ 7 ಸೀಟುಗಳ ಕತೆ ಏನಾಗಬಹುದು ಎಂಬ ವಿವರಣೆ ಹೀಗಿದೆ.

  • ಗೀತಾ ಶಿವರಾಜ್‌ ಕುಮಾರ್‌                   ಶಿವಮೊಗ್ಗ
  • ಶ್ರೇಯಸ್‌ ಪಟೇಲ್‌                                ಹಾಸನ
  • ರಾಜು ಅಲಗೂರು                                ವಿಜಯಪುರ
  • ಆನಂದಸ್ವಾಮಿ ಗಡ್ಡದೇವರಮಠ          ಹಾವೇರಿ
  • ಮುದ್ದಹನುಮೇಗೌಡ                           ತುಮಕೂರು
  • ಸ್ಟಾರ್‌ ಚಂದ್ರು                                     ಮಂಡ್ಯ
  • ಡಿ.ಕೆ.ಸುರೇಶ್‌                                        ಬೆಂ. ಗ್ರಾಮಾಂತರ

ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಶಿವಮೊಗ್ಗದಿಂದ ಕಣಕ್ಕಿಳಿಸಿರುವ ಕಾಂಗ್ರೆಸ್‌ ಶ್ರೇಯಸ್‌ ಪಟೇಲ್‌ ಗೆ  ಹಾಸನದಲ್ಲಿ ಟಿಕೆಟ್‌ ನೀಡಿದೆ.. ಇನ್ನು ವಿಜಯಪುರದಿಂದ ಮಾಜಿ ಶಾಸಕ ರಾಜು ಅಲಗೂರು ಅಖಾಡಕ್ಕಿಳಿದಿದ್ದಾರೆ.. ಹಾವೇರಿಯಿಂದ ಹೊಸ ಮುಖ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮಣೆ ಹಾಕಿರುವ ಕಾಂಗ್ರೆಸ್‌ ತುಮಕೂರಿನಿಂದ ಬಿಜೆಪಿ ತೊರೆದು ವಾಪಸ್‌ ಬಂದಿರುವ ಎಸ್‌.ಪಿ. ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿದೆ.. ಇನ್ನು ಮಂಡ್ಯದಲ್ಲಿ ಸ್ಟಾರ್‌ ಚಂದ್ರು ಅವರಿಗೆ ಟಿಕೆಟ್‌ ನೀಡಿರುವ ಕಾಂಗ್ರೆಸ್‌ ಬೆಂಗಳೂರು ಗ್ರಾಮಾಂತರದಿಂದ ಯಥಾಪ್ರಕಾರ ಡಿ.ಕೆ.ಸುರೇಶ್‌ಗೆ ಟಿಕೆಟ್‌ ನೀಡಿದೆ..

ಇಲ್ಲಿ ಡಿ.ಕೆ.ಸುರೇಶ್‌ ಮಾತ್ರ ಹಾಲಿ ಸಂಸದ.. 2019ರಲ್ಲಿ ಕಾಂಗ್ರೆಸ್‌ -ಜೆಡಿಎಸ್‌ನ ದೋಸ್ತಿ ಕೂಟದಿಂದ ಕಾಂಗ್ರೆಸ್‌ ಒಂದು ಸೀಟಿಗೆ ಕುಸಿದಿತ್ತು.. ಈಗಲೂ ಡಿ.ಕೆ.ಸುರೇಶ್‌ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತ್ಯಂತ ಪ್ರಬಲ ಅಭ್ಯರ್ಥಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಬೆಂಗಳೂರು ಗ್ರಾಮಾಂತರದ 8 ಸೀಟುಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ ಎರಡರಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ನ ಶಾಸಕರಾಗಿದ್ದಾರೆ.. ಅಂಕಿಅಂಶದ ಪ್ರಕಾರ ನೇರ ಅಡ್ವಾಂಟೇಜ್‌ ಹೊಂದಿರುವ ಡಿ.ಕೆ.ಸುರೇಶ್‌, ಕನಕಪುರ, ಆನೇಕಲ್‌ ಕುಣಿಗಲ್‌, ಮಾಗಡಿ ಮತ್ತು ರಾಮನಗರದ ಮೂಲಕವೇ ದೊಡ್ಡ ಅಂತರದ ಮುನ್ನಡೆ ಪಡೆಯಬಹುದು.. ಜೊತೆಗೆ ಚನ್ನಪಟ್ಟಣದಲ್ಲೂ ವಿಧಾನಸಭೆಯ ಚುನಾವಣೆಗಿಂತ ಹೆಚ್ಚು ಮತಗಳು ಕಾಂಗ್ರೆಸ್‌ ಕಡೆಗೆ ಹರಿಯುವ ನಿರೀಕ್ಷೆಯಿದೆ.. ಇದು ಸಹಜವಾಗಿಯೇ ಡಿಕೆ ಸುರೇಶ್‌ ಅವರ ಗೆಲುವಿನ ದಾರಿಯನ್ನು ಸುಗಮಗೊಳಿಸಬಹುದು.. ದೋಸ್ತಿ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಡೆ ಲೀಡ್‌ ತೆಗೆದುಕೊಳ್ಳಲು ಸಿಕ್ಕಾಪಟ್ಟೆ ಶ್ರಮ ಹಾಕಲೇಬೇಕಾದ ಅನಿವಾರ್ಯತೆಯಿದೆ.. ಈಗಿನ ಲೆಕ್ಕಾಚಾರದಲ್ಲಿ ಡಿಕೆ ಸುರೇಶ್‌ ಸೇಫ್‌ ಆಗಿ ದಡ ಸೇರುತ್ತಾರೆ ಎಂಬ ವಿಶ್ವಾಸ ಕಾಂಗ್ರೆಸ್‌ ಮಾತ್ರವಲ್ಲದೆ, ಬಿಜೆಪಿ ಹಾಗೂ ಜೆಡಿಎಸ್‌ನ ದೋಸ್ತಿ ನಾಯಕರಲ್ಲೂ ಇದೆ..

 

Sulekha