ಕೋಟಗೆ ಪ್ಲಸ್ ಏನು..? ಹೆಗ್ಡೆ ಮೈನಸ್ ಏನು?  – ಉಡುಪಿ ಚಿಕ್ಕಮಗಳೂರಲ್ಲಿ ಹೇಗಿದೆ ಲೆಕ್ಕಾಚಾರ?

ಕೋಟಗೆ ಪ್ಲಸ್ ಏನು..? ಹೆಗ್ಡೆ ಮೈನಸ್ ಏನು?  – ಉಡುಪಿ ಚಿಕ್ಕಮಗಳೂರಲ್ಲಿ ಹೇಗಿದೆ ಲೆಕ್ಕಾಚಾರ?

ಕರ್ನಾಟಕದಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ. ಎರಡು ಬಾರಿ ಕ್ಷೇತ್ರದಿಂದ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆಯವ್ರನ್ನ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಜ್ಜನ ಅಭ್ಯರ್ಥಿಗಳ ಘೋಷಣೆಯಾಗಿದೆ. ಸರಳತೆಗೆ ಹೆಸರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬದ್ಧತೆಗೆ ಹೆಸರಾದ ಜಯಪ್ರಕಾಶ್ ಹೆಗ್ಡೆ ನಡುವೆ ಈಗಾಗ್ಲೇ ಟಾಕ್ ವಾರ್ ಕೂಡ ಶುರುವಾಗಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಎರಡು ಜಿಲ್ಲಾ ವ್ಯಾಪ್ತಿ ಹೊಂದಿದ್ದರೂ, ಈ ಬಾರಿ ಕ್ಷೇತ್ರದ ಅಭ್ಯರ್ಥಿಗಳಿಬ್ಬರೂ ಕುಂದಾಪುರದವರು, ಒಂದೇ ಊರಿನವರು. ಹಳೆ ಒಡನಾಡಿಗಳ ಹೊಸ ಜಗಳ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಲು ಕಾರಣವಾಗಿದೆ. ಉಭಯ ಪಕ್ಷಗಳ ನಾಯಕರು ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು ಮತಬೇಟೆಗೆ ಇಳಿದಿದ್ದಾರೆ. ಸಂಸದರಾಗುವವರಿಗೆ ಹಿಂದಿ ಅಥವಾ ಇಂಗ್ಲಿಷ್ ಬರಬೇಕಲ್ವಾ ಅಂತ ಜಯಪ್ರಕಾಶ್ ಹೆಗ್ಡೆ ಹೇಳಿದ್ರೆ, ಸಂಸದನಾದ ನಂತರ ಆರೇ ತಿಂಗಳಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಕಿಚಾಯಿಸಿದ್ದಾರೆ.  ಹೀಗೆ ಇಬ್ಬರೂ ನಾಯಕರು ಚುನಾವಣೆ ಕಾದಾಟಕ್ಕೆ ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಹೊಸ ಅಧ್ಯಾಯ.. ಹಳೆ ಸಂಪ್ರದಾಯ – ಮೊದಲ ಪಂದ್ಯ ದೇವರಿಗೆ ಸಮರ್ಪಣೆ – ನಮ್ಮ RCB ಎಡವಿದ್ದೆಲ್ಲಿ?

ಅಭ್ಯರ್ಥಿಗಳ ಬಲಾಬಲ! 

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಿಂದುಳಿದ ವರ್ಗಗಳ ಬಿಲ್ಲವ ಸಮುದಾಯಕ್ಕೆ ಸೇರಿದವರು. ಕೆ.ಜಯಪ್ರಕಾಶ್ ಹೆಗ್ಡೆ ಕರಾವಳಿಯ ಪ್ರಬಲ ಬಂಟ ಸಮುದಾಯದವರು. ಬಿಲ್ಲವ ಹಾಗೂ ಬಂಟ ಸಮುದಾಯಗಳು ಕರಾವಳಿಯ ಪ್ರಬಲ ಜಾತಿಗಳಾಗಿರುವುದರಿಂದ ಸ್ಪರ್ಧೆಯು ತೀವ್ರ ಕುತೂಹಲ ಕೆರಳಿಸಿದೆ. ಎರಡೂ ಪಕ್ಷಗಳು ಅಳೆದು ತೂಗಿ, ಜಾತಿ ಸಮೀಕರಣ ಮಾಡಿ ಟಿಕೆಟ್ ನೀಡಿವೆ. ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್‌ ಗೆ ಟಿಕೆಟ್ ಕೈತಪ್ಪಿರುವುದು ಬಿಜೆಪಿಗೆ ಒಳಪೆಟ್ಟು ಕೊಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಪ್ರಮೋದ್ ಮಧ್ವರಾಜ್ ಬಹಿರಂಗವಾಗಿ ಎಲ್ಲಿಯೂ ಬಂಡಾಯ ಪ್ರದರ್ಶಿಸದಿದ್ದರೂ ಅಸಮಾಧಾನದ ಹೊಗೆಯಂತೂ ಆಡುತ್ತಿದೆ. ಮೊಗವೀರ ಸಮುದಾಯದ ಬಲ, ವೈಯಕ್ತಿಕ ವರ್ಚಸ್ಸು ಹಾಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪ್ರಮೋದ್ ಮಧ್ವರಾಜ್ ಬಂಡಾಯ ಪ್ರದರ್ಶಿಸಿದರೆ ಬಿಜೆಪಿಗೆ ಹಿನ್ನಡೆ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ದಶಕಗಳ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಉಡುಪಿ ಜಿಲ್ಲೆ ಪ್ರಸ್ತುತ ಬಿಜೆಪಿ ತೆಕ್ಕೆಯಲ್ಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಜಿಲ್ಲೆಯ ಉಡುಪಿ, ಕುಂದಾಪುರ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರು ಇದ್ದಾರೆ. ವಿಧಾನಸಭಾ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ಮತದಾರರು ಬಿಜೆಪಿ ಪರವಾಗಿ ಮತ ಹಾಕಿದರೆ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚು. ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳೂ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು, ಪ್ರತ್ಯೇಕ ಅಭಿಮಾನಿಗಳ ಬಳಗ ಹೊಂದಿದ್ದಾರೆ. ರಾಜಕೀಯವಾಗಿಯೂ ಅನುಭವ ಹೊಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು ನಾಲ್ಕು ಕ್ಷೇತ್ರ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೆ. ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೆ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಪೂಜಾರಿ Vs ಹೆಗ್ಡೆ! 

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 2009, 2010, 2016 ಹಾಗೂ 2022ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ರು. 2019ರಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾಗಿ ಬಳಿಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿಯೂ ಕೋಟ ಕಾರ್ಯ ನಿರ್ವಹಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಕೂಡ ಅನುಭವಿ ರಾಜಕಾರಣಿ. 1994ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಜೆ.ಪಿ.ಹೆಗ್ಡೆ ನಂತರ 1999 ಹಾಗೂ 2004ರ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲೂ ಗೆಲುವು ಸಾಧಿಸಿರುವ ಜಯಪ್ರಕಾಶ್ ಹೆಗ್ಡೆ ಅವರಿಗೆ ಸಂಸತ್ ಪ್ರವೇಶಿಸಿದ ಅನುಭವ ಇದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬಲಾಬಲ ಏನೇ ಇದ್ರೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಇರಲಿ ಕರಾವಳಿಯಲ್ಲಿ ಪ್ರಬಲವಾಗಿರುವ ಮೀನುಗಾರರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮೀನುಗಾರರು ಯಾವ ಪಕ್ಷದ ಕಡೆಗೆ ವಾಲುತ್ತಾರೋ ಆ ಪಕ್ಷದ ಅಭ್ಯರ್ಥಿಯ ಗೆಲುವು ಸುಲಭ ಎಂದೇ ವಿಶ್ಲೇಷಣೆ ಮಾಡಲಾಗುತ್ತೆ. ಪ್ರಮೋದ್ ಮಧ್ವರಾಜ್‌ ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಮೀನುಗಾರರು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಇದೆ. ಆದ್ರೆ ಬಿಜೆಪಿಗೆ ಪ್ಲಸ್ ಪಾಯಿಂಟ್ ಕೂಡ ಇದೆ.

Shwetha M