ಮೋದಿ ಟೀಮ್ 400 ಕ್ರಾಸ್ ಮಾಡುತ್ತಾ? – ಕರ್ನಾಟಕದ ಸಮೀಕ್ಷೆ ಹೇಗಿದೆ?, ಕಮಾಲ್ ಮಾಡುತ್ತಾ ಬಿಜೆಪಿ-ಜೆಡಿಎಸ್ ಕಮಾಲ್?
ಲೋಕಸಭೆ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಇಡೀ ದೇಶ ಈಗ ಎಲೆಕ್ಷನ್ ಮೋಡ್ಗೆ ಜಾರಿದೆ. ರಾಜಕೀಯ ಪಕ್ಷಗಳನ್ನಂತೂ ಕೇಳೋದೇ ಬೇಡ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯಂತೂ ಅಬ್ ಕೀ ಬಾರ್ ಚಾರ್ಸೋ ಪಾರ್ ಅನ್ನೋ ಘೋಷವಾಕ್ಯವನ್ನಿಟ್ಟುಕೊಂಡು ಅಖಾಡಕ್ಕಿಳಿದಿದೆ. ಅತ್ತ ಇಂಡಿಯಾ ಮೈತ್ರಿಕೂಟದ ಕಥೆಯೇನು ಅನ್ನೋದು ಯಾರಿಗೂ ಅರ್ಥವಾಗ್ತಾ ಇಲ್ಲ. ಸೀಟ್ ಶೇರಿಂಗ್ ಇನ್ನೂ ಆಗಿಲ್ಲ. ಮೈತ್ರಿ ಕೂಟದಲ್ಲಿರೋ ಒಂದೊಂದೇ ಸ್ಥಳೀಯ ಪಕ್ಷಗಳು ನಾವು ಕಾಂಗ್ರೆಸ್ ಜೊತೆ ಟಿಕೆಟ್ ಹಂಚಿಕೊಳ್ಳಲ್ಲ ಅಂತಾ ಒಬ್ಬೊಬ್ಬರಾಗಿಯೇ ಕಳಚಿಕೊಳ್ತಿದ್ದಾರೆ. ಮೈತ್ರಿಕೂಟದ ನೇತೃತ್ವ ವಹಿಸಿದ್ದ ನಿತೀಶ್ ಕುಮಾರ್ ಅಂತೂ ಮತ್ತೆ ಎನ್ಡಿಎ ಕೂಟ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತಬೇಟೆಗಾಗಿ ನ್ಯಾಯಯಾತ್ರೆ ನಡೆಸ್ತಾ ಇದ್ದಾರೆ. ಸದ್ಯ ರಾಷ್ಟ್ರ ರಾಜಕೀಯದಲ್ಲಿ ಬೀಸ್ತಾ ಇರೋ ಗಾಳಿಯಂತೂ ಬಿಜೆಪಿ ಪರವಾಗಿಯೇ ಇದೆ. ಪೊಲಿಟಿಕಲ್ ಪಂಡಿತರೆಲ್ಲ ಮೂರನೇ ಬಾರಿ ಮೋದಿ ಪ್ರಧಾನಿಯಾಗೋದು ಗ್ಯಾರಂಟಿ ಅಂತಾನೆ ಹೇಳ್ತಿದ್ದಾರೆ. ಇವೆಲ್ಲದರ ನಡುವೆಯೇ ಚುನಾವಣೆಗೂ ಮುನ್ನ ಲೇಟೆಸ್ಟ್ ಆಗಿ ನಡೆದ ಸರ್ವೆಯ ರಿಪೋರ್ಟ್ ಬಹಿರಂಗವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ 2024ರ ಲೋಕಸಭೆ ಚುನಾವಣೆ ಫಲಿತಾಂಶದ ಹಿಂಟ್ ಸಿಕ್ಕಿದೆ. ಇದ್ರ ಪ್ರಕಾರ ಬಿಜೆಪಿಗೆ ಗುಡ್ನ್ಯೂಸ್ ಜೊತೆಗೆ ಬ್ಯಾಡ್ನ್ಯೂಸ್ ಕೂಡ ಇದೆ. ಹಾಗಿದ್ರೆ ಸಮೀಕ್ಷೆ ನುಡಿದಿರೋ ಭವಿಷ್ಯ ಏನು? ಮೋದಿ ಟೀಮ್ 400 ಕ್ರಾಸ್ ಮಾಡುತ್ತಾ? ಇಲ್ವಾ? ಇಂಡಿಯಾ ಮೈತ್ರಿಕೂಟ ಎಷ್ಟು ಸ್ಥಾನ ಗೆಲ್ಲಬಹುದು? ಉತ್ತರ ಭಾರತದಲ್ಲಿ ಮೇಲುಗೈ ಯಾರದ್ದು? ದಕ್ಷಿಣ ಭಾರತದ ಪ್ರಭುತ್ವ ಸಾಧಿಸೋರು ಯಾರು? ನಮ್ಮ ಕರ್ನಾಕಟದಲ್ಲಿ ಕಾಂಗ್ರೆಸ್ಗೆ ಎಷ್ಟು? ಬಿಜೆಪಿಗೆ ಎಷ್ಟು? ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಂಸದೆ ಸುಮಲತಾಗೆ ಪ್ರಧಾನಿ ನೀಡಿದ್ರಾ ಅಭಯ? – ಮೋದಿ ಆಡಿದ ಭರವಸೆ ಮಾತುಗಳಿಂದ ಸುಮಲತಾ ಫುಲ್ ಖುಷ್
ದೇಶದ ಪ್ರತಿಷ್ಠ ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಹೆಸರಲ್ಲಿ 2024ರ ಲೋಕಸಭೆ ಚುನಾವಣೆ ಕುರಿತ ಸಮೀಕ್ಷಾ ವರದಿಯನ್ನ ರಿಲೀಸ್ ಮಾಡಿದೆ. ಸದ್ಯ ದೇಶದ ಜನರ ಒಲವು ಯಾರ ಕಡೆಗೆ ಇದೆ? ಯಾರಿಗೆ ಅಧಿಕಾರ ನೀಡೋಕೆ ಜನರು ಬಯಸ್ತಾ ಇದ್ದಾರೆ? ಯಾವ ರಾಜ್ಯದಲ್ಲಿ ಯಾವ ಪಕ್ಷ ಮುನ್ನಡೆಯಲ್ಲಿದೆ? ಇವೆಲ್ಲದರ ಬಗ್ಗೆಯೂ ಈ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ. ಮೊದಲಿಗೆ ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು ಅನ್ನೋದನ್ನ ಒಂದೊಂದಾಗಿಯೇ ತಿಳಿಸ್ತಾ ಹೋಗ್ತೀನಿ.
ಉತ್ತರಪ್ರದೇಶವನ್ನ ಮತ್ತೆ ಬಾಚಿಕೊಳ್ಳುತ್ತಾ ಬಿಜೆಪಿ?
ಲೋಕಸಭೆ ಚುನಾವಣೆ ಅಂತಾ ಬಂದಾಗ ಉತ್ತರಪ್ರದೇಶ ಅತ್ಯಂತ ನಿರ್ಣಾಯಕ ರಾಜ್ಯ. ದೇಶದಲ್ಲೇ ಅತೀ ಹೆಚ್ಚು ಜನಸಂಖ್ಯೆ, ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳಿರೋ ರಾಜ್ಯವಿದು. ಉತ್ತರಪ್ರದೇಶವನ್ನ ಗೆಲ್ಲದೆ ಕೇಂದ್ರದಲ್ಲಿ ಅಧಿಕಾರಕ್ಕೇರೋದು ಅಸಾಧ್ಯ ಅಂದ್ರೂ ತಪ್ಪಾಗೋದಿಲ್ಲ. ಸದ್ಯ ಉತ್ತರಪ್ರದೇಶದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಮೋದಿ ಮಾತ್ರವಲ್ಲ ಯೋಗಿ ಆದಿತ್ಯನಾಥ್ ಹವಾ ಕೂಡ ಇದೆ. ಇಲ್ಲಿ ಬಿಜೆಪಿ ಪಾಲಿಗೆ ಮೋದಿ-ಯೋಗಿ ಜುಗಲ್ಬಂಧಿಯೇ ದೊಡ್ಡ ಪ್ಲಸ್ ಪಾಯಿಂಟ್. ಅದ್ರ ಮೇಲಿಂದ ಅಯೋಧ್ಯೆಯಲ್ಲಿ ರಾಮಮಂದಿರ ಬೇರೆ ತಲೆ ಎತ್ತಿ ನಿಂತಿದೆ. ಹೀಗಾಗಿ ಉತ್ತರಪ್ರದೇಶದಲ್ಲಿ ಹಿಂದೂಗಳ ವೋಟ್ ಕೂಡ ಗಟ್ಟಿಯಾಗಿದೆ. ಇದು ಇಂಡಿಯಾ ಟುಡೇ ಸಮೀಕ್ಷೆಯಲ್ಲೂ ಸಮೀಕ್ಷೆಯಲ್ಲೂ ಕೂಡ ಸಾಬೀತಾಗಿದೆ. ಸಮೀಕ್ಷೆ ವರದಿ ಪ್ರಕಾರ ಉತ್ತರಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್ಡಿಎ 72 ಸ್ಥಾನಗಳನ್ನ ಗೆಲ್ಲಬಹುದಂತೆ. ಇತ್ತ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 8 ಕ್ಷೇತ್ರಗಳಲ್ಲಷ್ಟೇ ಗೆಲ್ಲಬಹುದಂತೆ.
ಬಿಹಾರದಲ್ಲಿ ಮೋದಿ-ನಿತೀಶ್ ಜಾದೂ?
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಹಾರ ಫಲಿತಾಂಶದ ಮೇಲೆ ಎಲ್ಲರ ಕಣ್ಣು ಇದ್ದೇ ಇರುತ್ತೆ. ಯಾಕಂದ್ರೆ ಇತ್ತೀಚೆಗಷ್ಟೇ ಪಲ್ಟುರಾಮ್ ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟದಿಂದ ಪಲ್ಟಿ ಹೊಡೆದು ಮೋದಿ ಬುಡಕ್ಕೆ ಉರುಳಿ ನನ್ನ ಕುರ್ಚಿ ನಿಮ್ಮ ಕೈಯಲ್ಲೇ ಇದೆ ಅಂತಾ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ನಿತೀಶ್ ಕುಮಾರ್ ನಡೆ ಲೋಕಸಭೆಯಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗೋ ಎಲ್ಲಾ ಸಾಧ್ಯತೆ ಇದೆ. ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ, ಈಗ ಚುನಾವಣೆ ನಡೆದ್ರೆ ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಜೆಡಿಯು ಸೇರಿದಂತೆ ಎನ್ಡಿಎ ಮೈತ್ರಿಕೂಟ 32 ಸ್ಥಾನಗಳನ್ನ ಗೆಲ್ಲಬಹುದಂತೆ. ಇಂಡಿಯಾ ಮೈತ್ರಿಕೂಟ ಕ್ಷೇತ್ರಗಳಲ್ಲಿ ಗೆಲ್ಲಬಹುದು ಅಂತಾ ಇಂಡಿಯಾ ಟುಡೇ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ.
ದೀದಿ VS ಮೋದಿ..ಬಂಗಾಳ ಮಹಾಕಾಳಗ ಫಿಕ್ಸ್?
ಅತ್ಯಂತ ಹೈವೋಲ್ಟೇಜ್ ಚುನಾವಣೆ ನಡೆಯೋ ಇನ್ನೊಂದು ರಾಜ್ಯ ಅಂದ್ರೆ ಅದು ಪಶ್ಚಿಮ ಬಂಗಾಳ. ಪಂಚಾಯಿತಿ ಚುನಾವಣೆಯೇ ಆಗಲಿ, ವಿಧಾನಸಭೆ ಚುನಾವಣೆಯೇ ಆಗಲಿ, ಲೋಕಸಭೆಯೇ ಇರ್ಲಿ. ಬಂಗಾಳದಲ್ಲಿ ಜಿದ್ದಾಜಿದ್ದಿನ ಫೈಟ್ ಇರುತ್ತೆ. ಈ ಹಿಂದೆಲ್ಲೆ ಟಿಎಂಸಿ ವರ್ಸಸ್ ಎಡಪಕ್ಷದ ನಡುವೆ ಕದನ ನಡೀತಾ ಇತ್ತು. ಆದ್ರೆ ಈಗ ದೀದಿ ಕೋಟೆಯೊಳಗೆ ಮೋದಿ ನುಗ್ಗೋಕೆ ಯತ್ನಿಸ್ತಾ ಇದ್ದಾರೆ. ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಪೈಕಿ ಆಡಳಿತಾರೂಢ ಟಿಎಂಸಿ 22 ಕ್ಷೇತ್ರಗಳನ್ನ ಗೆಲ್ಲಬಹುದಂತೆ. ಇತ್ತ ಬಿಜೆಪಿ 19 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಕಾಂಗ್ರೆಸ್ ಕೇವಲ 1 ಕ್ಷೇತ್ರವನ್ನಷ್ಟೇ ಗೆಲ್ಲಬಹುದು ಅಂತಾ ಸಮೀಕ್ಷೆ ವರದಿ ಮಾಡಿದೆ. ಅಂದ್ರೆ ಮಮತಾ ಬ್ಯಾನರ್ಜಿ ಲೋಕಸಭೆಯಲ್ಲಿ ಕೂಡ ಬಿಜೆಪಿಗೆ ಕಬ್ಬಿಣದ ಕಡೆಲೆಯಾದ್ರೂ 19 ಸ್ಥಾನಗಳಲ್ಲಿ ಗೆದ್ರೂ ಅದು ಬಿಜೆಪಿ ಪಾಲಿಗೆ ಗುಡ್ನ್ಯೂಸ್ ಅಂತಾನೆ ಹೇಳಬಹುದು. ಇನ್ನು ಇಂಡಿಯಾ ಮೈತ್ರಿಕೂಟದಲ್ಲಿದ್ದುಕೊಂಡು ಕಾಂಗ್ರೆಸ್ಗೆ ಸೀಟು ಬಿಟ್ಟು ಕೊಡದೇ ಇರೋ ಮಮತಾ ಬ್ಯಾನರ್ಜಿ ನಿರ್ಧಾರ ಸರಿಯಾಗಿಯೇ ಅಂತಾ ಕಾಣ್ಸುತ್ತೆ.
ರಾಜಸ್ಥಾನ, ಗುಜರಾತ್ ಕೇಸರಿ ಕ್ಲೀನ್ ಸ್ವೀಪ್?
ಕೆಲ ತಿಂಗಳ ಹಿಂದೆಯಷ್ಟೇ ರಾಜಸ್ಥಾನದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲ ಗೆದುಕೊಂಡಿದೆ. ಈಗ ಲೋಕಸಭೆಯ ಎಲ್ಲಾ 25 ಕ್ಷೇತ್ರಗಳನ್ನ ಕೂಡ ಮೋದಿಯೇ ಬಾಚಿಕೊಳ್ತಾರೆ ಅಂತಾ ಇಂಡಿಯಾ ಟುಡೇ ಸಮೀಕ್ಷೆ ವರದಿ ಮಾಡಿದೆ. ಗುಜರಾತ್ನಲ್ಲಂತೂ ಕೇಳೋದೆ ಬೇಡ. 2014ರಿಂದಲೂ ಬಿಜೆಪಿ ಕ್ಲೀನ್ಸ್ವೀಪ್ ಮಾಡ್ತಾನೆ ಇದೆ. ಈ ಬಾರಿಯೂ ಅದೇ ರಿಪೀಟ್ ಆಗಬಹುದಂತೆ. ಮಧ್ಯಪ್ರದೇಶದಲ್ಲೂ ವಿಧಾನಸಭೆಗೆ ಮಾಡಿದ್ದ ಪ್ರಚಾರವೇ ಸಾಕು. ಲೋಕಸಭೆಯಲ್ಲಿ 29 ಕ್ಷೇತ್ರಗಳ ಪೈಕಿ ಬಿಜೆಪಿ 27 ಕ್ಷೇತ್ರಗಳನ್ನ ಗೆಲ್ಲಬಹುದು. ಛತ್ತೀಸ್ಗಢದಲ್ಲಿ 11 ಕ್ಷೇತ್ರಗಳ ಪೈಕಿ 10 ಮೋದಿ ಬುಟ್ಟಿಗೆ ಬೀಳಬಹುದು ಅಂತಾ ಇಂಡಿಯಾ ಟುಡೇ ಸಮೀಕ್ಷೆ ಭವಿಷ್ಯ ನುಡಿದಿದೆ. ಅತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಎಲ್ಲಾ 7 ಕ್ಷೇತ್ರಗಳು ಬಿಜೆಪಿಗೆ. ಲೋಕಸಭೆಯಲ್ಲಿ ಕೇಜ್ರಿವಾಲ್ ಆಟ ನಡೆಯಲ್ಲ ಅಂತಾ ಇಂಡಿಯಾ ಟುಡೇ ಸಮೀಕ್ಷೆ ಹೇಳ್ತಿದೆ.
ಪಂಜಾಬಿಗರಿಂದ ಮುಂದುವರಿದ ಮೋದಿ ಬಹಿಷ್ಕಾರ?
ಅದೇನೇ ಸರ್ಕಸ್ ಮಾಡಿದ್ರೂ ಪಂಜಾಬ್ನಲ್ಲಿ ಬಿಜೆಪಿ ಆಟ ನಡೀತಾನೆ ಇಲ್ಲ. ಆದ್ರೆ ಕಾಂಗ್ರೆಸ್ ಕೂಟ ಪಂಜಾಬ್ನ್ನ ಕಳೆದುಕೊಳ್ತಿದೆ. ಈಗಾಗ್ಲೇ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರವನ್ನ ಆಪ್ಗೆ ಬಿಟ್ಟು ಕೊಟ್ಟಿದೆ. ಲೋಕಸಭೆಯಲ್ಲೂ ಪಂಜಾಬಿಗರು ಕಾಂಗ್ರೆಸ್ನತ್ತ ಸಂಪೂರ್ಣ ಒಲವು ತೋರಿಸ್ತಾ ಇಲ್ಲ ಅಂತಾ ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಗೊತ್ತಾಗಿದೆ. 13 ಲೋಕಸಭಾ ಕ್ಷೇತ್ರಗಳ ಪೈಕಿ ಎನ್ಡಿಎ-2 ಸ್ಥಾನಗಳನ್ನಷ್ಟೇ ಗೆದ್ರೆ, ಕಾಂಗ್ರೆಸ್ ಮೈತ್ರಿಕೂಟ 5 ಸ್ಥಾನಗಳನ್ನ ದಕ್ಕಿಸಿಕೊಳ್ಳಬಹುದಂತೆ. ಇನ್ನು 6 ಕ್ಷೇತ್ರಗಳಲ್ಲಿ ಇತರರು ಗೆಲ್ಲಬಹುದಂತೆ.
ಮಹಾರಾಷ್ಟ್ರದಲ್ಲಿ ನೆಕ್ ಟು ನೆಕ್ ಫೈಟ್?
ಮಹಾರಾಷ್ಟ್ರ ರಾಜಕೀಯ ಈಗಾಗ್ಲೇ ಅಡಿಮೇಲಾಗಿದೆ. ಶಿವಸೇನೆ-ಎನ್ಸಿಪಿ ಒಡೆದು ಅಘಾಡಿ ಲಗಾಡಿಯಾಗಿದೆ. ಆದ್ರೂ ಲೋಕಸಭೆಯ 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮೈತ್ರಿ ಕೂಟ ಅಂದ್ರೆ ಒಡೆದು ಹೋಗಿರೋ ಇದೇ ಅಘಾಡಿ 26 ಕ್ಷೇತ್ರಗಳನ್ನ ಗೆಲ್ಲಬಹುದಂತೆ. ಬಿಜೆಪಿ ಮೈತ್ರಿಕೂಟಕ್ಕೆ 22 ಸ್ಥಾನಗಳು ಸಿಗಬಹುದು ಅಂತಾ ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ವರದಿಯಾಗಿದೆ. ಅಂತೂ ಇಲ್ಲಿ, ಶಿವಸೇನೆ, ಎನ್ಸಿಪಿ ಮತಗಳು ಹರಿದು ಹಂಚಿ ಹೋಗುವಂತೆ ಕಾಣ್ತಾ ಇದೆ.
ದಕ್ಷಿಣದ 4 ರಾಜ್ಯಗಳಲ್ಲಿ BJP ಢಮಾರ್? ‘ಕೈ’ ಕೇಕೆ?
ಕೇರಳ..ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ. ಈ ನಾಲ್ಕು ರಾಜ್ಯಗಳಲ್ಲಿ ಜಪ್ಪಯ್ಯ ಅಂದ್ರೂ ಮೋದಿಗೆ ಉಸಿರೆತ್ತೋಕೆ ಆಗ್ತಾ ಇಲ್ಲ. ಇಲ್ಲಿನ ಜನ ತಮ್ಮ ಸ್ಥಳೀಯ ಪಕ್ಷಗಳನ್ನ ಯಾವುದೇ ಕಾರಣಕ್ಕೂ ಬಿಟ್ಟು ಕೊಡೋದಿಲ್ಲ ಅನ್ಸುತ್ತೆ. ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ, ಕೇರಳದ 20 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಒಂದೇ ಒಂದು ಕ್ಷೇತ್ರಗಳನ್ನ ಕೂಡ ಗೆಲ್ಲೋದಿಲ್ಲ. ಆಂದ್ರೆ ಆದ್ರೆ ಅಧಿಕಾರದಲ್ಲಿರೋ ಎಲ್ಡಿಎಫ್, ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟ ಎಲ್ಲಾ 20 ಕ್ಷೇತ್ರಗಳನ್ನ ಕೂಡ ಕ್ಲೀನ್ ಸ್ವೀಪ್ ಮಾಡಲಿದೆ ಅಂತಾ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ. ಅದೇನೇ ಸರ್ಕಸ್ ಮಾಡಿದ್ರೂ ಕೇರಳದ ರಾಜಕೀಯ ರಹಸ್ಯವನ್ನ ಮೋದಿಗೆ ಭೇದಿಸೋಕೆ ಆಗ್ತಾ ಇಲ್ಲ.
ಇನ್ನು ತಮಿಳುನಾಡಿನಲ್ಲೂ ಅಷ್ಟೇ, 39 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಒಂದು ಕ್ಷೇತ್ರ ಕುಡ ಗೆಲ್ಲೋದಿಲ್ವಂತೆ. ಡಿಎಂಕೆ ಸೇರಿದಂತೆ ಕಾಂಗ್ರೆಸ್ ಮೈತ್ರಿಕೂಟ ತಮಿಳುನಾಡನ್ನ ಕ್ಲೀನ್ಸ್ವೀಪ್ ಮಾಡಲಿದೆ ಅಂತಾ ಸಮೀಕ್ಷೆ ಭವಿಷ್ಯ ನುಡಿದಿದೆ. ಹೀಗಾಗಿ ಮೋದಿ ಮತ್ತು ಅಣ್ಣಾಮಲೈ ಗೇಮ್ಪ್ಲ್ಯಾನ್ ತಮಿಳುನಾಡಿನಲ್ಲಿ ವರ್ಕೌಟ್ ಆಗುವಂತೆ ಕಾಣ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮೋದಿ ತಮಿಳುನಾಡಿಗೆ ಹಲವು ಬಾರಿ ಭೇಟಿ ನೀಡಿದ್ರು. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೂ ಮುನ್ನ ರಾಮೇಶ್ವರಂಗೆ ತೆರಳಿದ್ರು. ತಮಿಳುನಾಡಿನಲ್ಲಿ ಬೇರೂರೋಕೆ ಬಿಜೆಪಿ ಶತಪ್ರಯತ್ನ ಮಾಡ್ತಿದೆ. ಸನಾತನ ಅಸ್ತ್ರವನ್ನ ಕೂಡ ಪ್ರಯೋಗಿಸ್ತಿದೆ. ಆದ್ರೆ ಬಿಜೆಪಿಯ ಅಜೆಂಡಾ ತಮಿಳುನಾಡಿನಲ್ಲಿ ರಿಸಲ್ಟ್ ತರುವಲ್ಲಿ ಮತ್ತೆ ಫೇಲ್ ಆಗುವಂತೆ ಕಾಣ್ತಿದೆ. ಇದ್ರ ಜೊತೆಗೆ ಸ್ಥಳೀಯ ಪ್ರಬಲ ಪಕ್ಷವಾಗಿದ್ದ ಎಐಎಡಿಎಂಕೆ ಈಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ತಾ ಇದ್ಯಾ ಅನ್ನೋ ಅನುಮಾನ ಇನ್ನಷ್ಟು ಬಲವಾಗ್ತಾ ಇದೆ.
ಇನ್ನು ತೆಲಂಗಾಣದಲ್ಲಿ ಒಟ್ಟು 17 ಲೋಕಸಭಾ ಕ್ಷೇತ್ರಗಳಿದ್ದು, ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 10 ಕ್ಷೇತ್ರಗಳನ್ನ ಗೆಲ್ಲಬಹುದು. ಬಿಜೆಪಿ ಮೂರು ಸ್ಥಾನಗಳನ್ನಷ್ಟೇ ದಕ್ಕಿಸಿಕೊಳ್ಳಬಹುದು. ಹಾಗೆಯೇ ಆಂಧ್ರಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ 17 ಕ್ಷೇತ್ರಗಳನ್ನ ಗೆಲ್ಲಬಹುದು. ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ 8 ಸ್ಥಾನಗಳನ್ನ ಗೆಲ್ಲಬಹುದು ಅಂತಾ ಸಮೀಕ್ಷೆ ವರದಿಯಲ್ಲಿ ಉಲ್ಲೇಖವಾಗಿದೆ. ಈ ಪೈಕಿ ಚಂದ್ರಬಾಬು ನಾಯ್ಡು ಮತ್ತೆ ಎನ್ಡಿಎ ಜೊತೆ ಟೈ ಅಪ್ ಆಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಕಮಾಲ್?
ಇಷ್ಟೊತ್ತು ನೀವು ಕಾಯ್ತಾ ಇದ್ದಂತಾ ಕರ್ನಾಟಕ ಸಮೀಕ್ಷಾ ಫಲಿತಾಂಶದತ್ತ ಬರೋಣ. ಇಂಡಿಯಾ ಟುಡೇ ಸರ್ವೆ ಪ್ರಕಾರ ವಿಧಾನಸಭೆ ಚುನಾವಣೆ ಸೋತಿದ್ದ ಬಿಜೆಪಿ ಲೋಕಸಭೆಯಲ್ಲಿ ಮಾತ್ರ ಬಿಟ್ಟು ಕೊಡ್ತಾ ಇಲ್ಲ. ಮೋದಿ ಮೇನಿಯಾದಿಂದಾಗಿ ರಾಜ್ಯದಲ್ಲಿ ಬಿಜೆಪಿಯೇ ಅತೀ ಹೆಚ್ಚು ಸ್ಥಾನ ಗೆಲ್ಲುತ್ತೆ ಅಂತಾ ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ವರದಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ ರಾಜ್ಯದಲ್ಲಿ ಒಟ್ಟು 24 ಕ್ಷೇತ್ರಗಳನ್ನ ಗೆಲ್ಲಬಹುದಂತೆ. ಕಳೆದ ಬಾರಿ ಕೇವಲ ಒಂದು ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 4 ಸ್ಥಾನಗಳನ್ನ ಪಡೆಯಬಹುದು ಅಂತಾ ಸರ್ವೆ ರಿಪೋರ್ಟ್ನಲ್ಲಿದೆ. ಕಳೆದ ಬಾರಿ ಬಿಜೆಪಿ ಏಕಾಂಗಿಯಾಗಿ 25 ಕ್ಷೇತ್ರ ಗೆದ್ದಿತ್ತು. ಆದ್ರೆ ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಸುಮಲತಾ ಅಂಬರೀಷ್ ಗೆಲ್ತಾರಾ ಇಲ್ವಾ ಅನ್ನೋದು. ಕಳೆದ ಬಾರಿ ಪಕ್ಷೇತರರಾಗಿ ಗೆದ್ದಿದ್ರು. ಈ ಬಾರಿ ಸುಮಲತಾ ರಾಜಕೀಯ ಭವಿಷ್ಯ ಏನಾಗುತ್ತೆ ಅನ್ನೋದನ್ನ ಎಲ್ಲರೂ ಎದುರು ನೋಡ್ತಾ ಇದ್ದಾರೆ..